ಕೋಸ್ಟಾ-ಕಾನ್ ಕಾರ್ಡಿಯಾ ದುರಂತ

ಮನುಷ್ಯ ಇತಿಹಾಸದಿಂದ ಪಾಠ ಕಲಿಯುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ಇತಿಹಾಸವಂತೂ ಮನುಷ್ಯನಿಗೆ ಪಾಠ ಕಲಿಸುತ್ತಲೇ ಇರುತ್ತದೆ. ಇದಕ್ಕೆ ಸಾಕ್ಷಿ ೨೦೧೨ರಲ್ಲಿ ಇಟಲಿಯ ಬಳಿ ನಡೆದ ಐಷಾರಾಮಿ ಹಡಗು “ಕೋಸ್ಟ್ ಕಾನ್ ಕಾರ್ಡಿಯಾ” ದುರಂತವೇ ಸಾಕ್ಷಿ. ಈ ದುರಂತವನ್ನು “ಎರಡನೇ ಟೈಟಾನಿಕ್ ದುರಂತ" ಎಂದೇ ಭಾವಿಸಲಾಗಿದೆ.
ಸುಮಾರು ೧೧೦ ವರ್ಷಗಳ ಹಿಂದೆ (೧೯೧೨) ಅಂದಿನ ಜಗತ್ತಿನ ಅತಿ ದೊಡ್ಡ ಐಷಾರಾಮಿ ‘ಎಂದೂ ಮುಳುಗದ ಹಡಗು' ಎಂದೇ ಖ್ಯಾತವಾಗಿದ್ದ ‘ಟೈಟಾನಿಕ್' ಹಡಗು ತನ್ನ ಪ್ರಥಮ ಯಾನದಲ್ಲೇ ದುರಂತ ಕಂಡು, ಸಾವಿರಾರು ಪ್ರಯಾಣಿಕರು ಮತ್ತು ಹಡಗಿನ ಸಿಬ್ಬಂದಿ ಜಲಸಮಾಧಿಯಾದದ್ದು ಒಂದು ಇತಿಹಾಸ. ಟೈಟಾನಿಕ್ ಮುಳುಗಿ ನೂರು ವರ್ಷವಾಗುತ್ತಿರುವಾಗಲೇ “ಕೋಸ್ಟ್ ಕಾನ್ ಕಾರ್ಡಿಯಾ” ಮುಳುಗಿದ್ದು ವಿಪರ್ಯಾಸ. ಸಮಾಧಾನಕರ ಸಂಗತಿ ಎಂದರೆ ಈ ದುರಂತದಲ್ಲಿ ಹೆಚ್ಚು ಸಾವು ಸಂಭವಿಸಲಿಲ್ಲ.
‘ಕಾನ್ ಕಾರ್ಡಿಯಾ’ ಹಡಗು ಅಂದಿನ ಎಲ್ಲಾ ಹಡಗುಗಳಿಗಿಂತ ಎರಡು ಪಟ್ಟು ದೊಡ್ಡದಿತ್ತು. ಅತ್ಯಂತ ಹೆಚ್ಚು ಉದ್ದವಾದ, ಎತ್ತರವಾದ ಹಡಗು ಅದಾಗಿತ್ತು. ಈ ಹಡಗಿನ ತಳಭಾಗ ಇತರೆ ಹಡಗುಗಳಿಗಿಂತಲೂ ಅಗಲವಾಗಿತ್ತು. ಈ ಹಡಗನ್ನು ನೋಡುವವರು ತಮ್ಮ ಕುತ್ತಿಗೆಗೆ ಅತೀ ಹೆಚ್ಚು ಶ್ರಮವನ್ನು ಕೊಡಬೇಕಾಗುತ್ತಿತ್ತು. ಆರು ಸಾವಿರ ಜನರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿತ್ತು. ಜತೆಗೆ ಅತ್ಯಂತ ವೈಭವೋಪೇತವಾಗಿತ್ತು. ಇಂಥ ಹಡಗು ಜನವರಿ ೧೪, ೨೦೧೨ರಂದು ಇಟಲಿ ಬಳಿ ಮುಳುಗಿ ದುರಂತ ಕಂಡದ್ದು ಆಧುನಿಕ ಹಡಗುಯಾನದ ಬಗ್ಗೆ ಜನರಲ್ಲಿ ಭಯ ಹುಟ್ಟಿಸಿದೆ.
ಕಾನ್ ಕಾರ್ಡಿಯಾ ಹಡಗಿನ ಭವ್ಯತೆ: ಈ ಹಡಗಿನ ಉದ್ದವೇ ೯೫೨ ಅಡಿಗಿಂತಲೂ ಹೆಚ್ಚು. ಅಗಲ ೧೧೬ ಅಡಿಗೂ ಜಾಸ್ತಿ. ಭಾರ ೧೧೪.೧೩೭ ಗಿಗಾ ಟನ್ ಗಳು (೧ ಗಿಗಾ ಟನ್ = ೧೦೦೦೦೦೦೦೦೦ ಕೆ.ಜಿ.) ಈ ಹಡಗಿನಲ್ಲಿ ಒಟ್ಟು ೧೭ ಅಂತಸ್ತುಗಳಿದ್ದವು. ಅವುಗಳಲ್ಲಿ ೧೩ ಅಂತಸ್ತುಗಳು ಮಾತ್ರ ಪ್ರಯಾಣಿಕರ ಬಳಕೆಗಿದ್ದು, ಉಳಿದ ೪ ಅಂತಸ್ತುಗಳು ಯಂತ್ರಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಮೀಸಲಾಗಿದ್ದವು. ಪ್ರಯಾಣಿಕರಿಗಾಗಿ ಈ ಹಡಗಿನಲ್ಲಿ ಒಟ್ಟು ೧೫೦೦ ವಿಶಾಲ ಕೊಠಡಿಗಳನ್ನು ನಿರ್ಮಿಸಲಾಗಿತ್ತು. ೫೦೫ ಖಾಸಗಿ ಬಾಲ್ಕನಿಗಳೂ ಇದ್ದವು. ಈ ಹಡಗಿನಲ್ಲಿ ಒಟ್ಟು ೩೭೮೦ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಬಹುದಿತ್ತು. ಇಂಥ ಹಡಗಿನ ಸಿಬ್ಬಂದಿಯ ಸಂಖ್ಯೆಯೇ ೧೧೦೦. ಇದರಲ್ಲಿ ಐದು ವೈಭವೋಪೇತ ರೆಸ್ಟೋರೆಂಟ್ ಗಳು, ೧೩ ಬಾರ್ ಗಳು, ೩ ಥಿಯೇಟರ್ ಗಳು, ೪ ಈಜು ಕೊಳಗಳು, ಮಕ್ಕಳಿಗಾಗಿ ಆಟದ ಮೈದಾನಗಳು, ಯುವಕ-ಯುವತಿಯರಿಗಾಗಿ ಕ್ಯಾಸಿನೊ ಮತ್ತು ಡಿಸ್ಕೋಥೆಕ್ ಗಳು ಒಟ್ಟಿನಲ್ಲಿ ಸ್ವರ್ಗಲೋಕವೇ ಧರೆಗಿಳಿದಿದೆಯೋ ಎನ್ನುವಂತೆ ಭವ್ಯವಾಗಿತ್ತು.
ಇದು ತನ್ನ ಯಾನವನ್ನು ಆರಂಭಿಸಿದ್ದು ಜುಲೈ ೨೦೦೬ರಲ್ಲಿ. ಈ ಬೃಹತ್ ಹಡಗನ್ನು ನಡೆಸಲು ೭೫,೬೦೦ ಕಿಲೋ ವ್ಯಾಟ್ ಸಾಮರ್ಥ್ಯವುಳ್ಳ ಆರು ಡೀಸೆಲ್ ಎಂಜಿನ್ ಗಳನ್ನು ಅಳವಡಿಸಲಾಗಿತ್ತು. ವಿದ್ಯುತ್ ಉತ್ಪಾದನೆಗಾಗಿ ೪೨ ಸಾವಿರ ಕಿಲೋ ವ್ಯಾಟ್ ಸಾಮಾರ್ಥ್ಯದ ಎರಡು ಎಲೆಕ್ಟ್ರಿಕ್ ಮೋಟಾರ್ ಗಳನ್ನು ಸ್ಥಾಪಿಸಲಾಗಿತ್ತು. ಈ ಹಡಗಿನ ವೇಗ ಗಂಟೆಗೆ ೩೯.೮ ಕಿ.ಮೀ. (ಗರಿಷ್ಟ ವೇಗ ಗಂಟೆಗೆ ೪೩ ಕಿ. ಮೀ.)
ಢಿಕ್ಕಿ ಹೊಡೆದದ್ದು ಹೇಗೆ?: ಅದು ಜನವರಿ ೧೩ರ ರಾತ್ರಿ ೯.೩೦ರ ಹೊತ್ತು. ಹಡಗು ‘ಸಿವಿಟವೇಕಿಯ' (Civitavecchia) ಬಂದರಿನಿಂದ ಹೊರಟು ಆಗಲೇ ಎರಡೂವರೆ ಗಂಟೆಯಾಗಿತ್ತು. ಅದು ಗಿಗ್ಲಿಯೋ ದ್ವೀಪವನ್ನು ಸಮೀಪಿಸುತ್ತಿತ್ತು. ಹಡಗಿನ ಕ್ಯಾಪ್ಟನ್ ನಿಯಮ ಮೀರಿ ದ್ವೀಪದ ಬಳಿ ಹಡಗನ್ನು ನಡೆಸುತ್ತಿದ್ದ. ಇದ್ದಕ್ಕಿದ್ದಂತೆಯೇ ಹಡಗು ಒಂದು ಬೃಹತ್ ನೀರ್ಗಲ್ಲಿನ ಬಂಡೆಗೆ ಅಪ್ಪಳಿಸಿಯೇ ಬಿಟ್ಟಿತು. ಪ್ರಯಾಣಿಕರಿಗೆ ಮತ್ತು ಸಿಬ್ಬಂದಿಗಳಿಗೆ ಹಡಗಿಗೆ ಎನೋ ಅಪಾಯ ಆಗಿದೆ ಎಂಬುದರ ಅರಿವಾಯಿತು. ತಕ್ಷಣವೇ ಕ್ಯಾಪ್ಟನ್ ನನ್ನು ಸಂಪರ್ಕಿಸಿದಾಗ ‘ಏನೂ ಭಯ ಪಡುವ ಅಗತ್ಯವಿಲ್ಲ. ವಿದ್ಯುತ್ ಸರ್ಕ್ಯೂಟ್ ನಲ್ಲಿ ಆದ ತೊಂದರೆ ಅಷ್ಟೇ. ಅದನ್ನು ಸರಿಪಡಿಸಲಾಗಿದೆ' ಎಂದು ಅವರನ್ನು ಸಮಾಧಾನ ಪಡಿಸಿ ವಾಪಾಸ್ ಕಳಿಸಿದ. ಆದರೆ ಅಪಾಯ ತೀವ್ರತೆ ಆತನಿಗೆ ಖಚಿತವಾಗಿ ಗೊತ್ತಿತ್ತು. ತಕ್ಷಣವೇ ಆತ ಹಡಗನ್ನು ಬಂದರಿಗೆ ವಾಪಾಸ್ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಿದ. ಆದರೆ ಹಡಗು ಚಲಿಸಿದರೆ ತಾನೇ? ಅಷ್ಟರಲ್ಲಾಗಲೇ ಹಡಗು ಓರೆಯಾಗಿ ಮುಳುಗತೊಡಗಿತ್ತು. ಆಗ ರಾತ್ರಿ ೧೦ ಗಂಟೆ.
೧೦ ಗಂಟೆ ೧೨ ನಿಮಿಷದ ಹೊತ್ತಿಗೆ ಏನೋ ಪ್ರಮಾದವಾಗಿದೆ ಎಂದು ಖಚಿತ ಪಡಿಸಿಕೊಂಡ ಪ್ರಯಾಣಿಕರು ಕೋಸ್ಟ್ ಗಾರ್ಡ್ ಗಳಿಗೆ ಹಡಗಿನಿಂದಲೇ ಫೋನ್ ಮಾಡಿ ಮಾಹಿತಿ ಕೊಟ್ಟರು. ಆಗ ಕೋಸ್ಟ್ ಗಾರ್ಡ್ ಗಳು ಹಡಗಿನ ಕ್ಯಾಪ್ಟನ್ ಮತ್ತು ಸಿಬ್ಬಂದಿಗೆ ಫೋನ್ ಮಾಡಿ ವಿಚಾರಿಸಿದರು. ಆಗಲೇ ದುರಂತದ ಮಾಹಿತಿ ಕ್ಯಾಪ್ಟನ್ ನಿಂದ ಹೊರಬಂದಿದ್ದು ! ಹಡಗು ವಾಲುವಿಕೆ ಹೆಚ್ಚಾದ ನಂತರವೇ ಪ್ರಯಾಣಿಕರ ನೆರವಿಗೆ ಪ್ರಯತ್ನಗಳು ಪ್ರಾರಂಭಗೊಂಡದ್ದು ! ಇದನ್ನು ಹಡಗಿನ ಸಿಬ್ಬಂದಿ ಪ್ರಯಾಣಿಕರಿಗೆ ತಿಳಿಸಿದ್ದು ೧೦.೪೮ಕ್ಕೆ. ಕೋಸ್ಟ್ ಗಾರ್ಡ್ ಗಳ ಸಮಯ ಪ್ರಜ್ಞೆಯಿಂದ ಹಡಗಿನಲ್ಲಿದ್ದ ಬಹಳಷ್ಟು ಜನರ ಪ್ರಾಣ ರಕ್ಷಣೆಯಾಯ್ತು. ಅವರು ಸಾಕಷ್ಟು ದೋಣಿಗಳನ್ನು ಹಾಗೂ ಹೆಲಿಕಾಪ್ಟರ್ ಗಳನ್ನು ತಕ್ಷಣವೇ ದುರಂತದ ಸ್ಥಳಕ್ಕೆ ಕಳಿಸಿಕೊಟ್ಟರು. ಬಹಳಷ್ಟು ಜನರನ್ನು ಜೀವರಕ್ಷಕ ದೋಣಿಗಳಲ್ಲಿ ಸಾಗಿಸಲಾಯ್ತು. ವಾಲುತ್ತಿರುವ ಹಡಗಿನಿಂದಾಗಿ ಈ ಕಾರ್ಯಕ್ಕೆ ಬಹಳ ತೊಡಕುಂಟಾಯಿತು, ಈ ದುರಂತದಲ್ಲಿ ೧೬ ಜನ ಸಾವನ್ನಪ್ಪಿದ್ದು ೧೭ ಜನ ಕಾಣೆಯಾದರು.
ಈ ದುರಂತದ ಇನ್ನೂ ದೊಡ್ಡ ದುರಂತವೆಂದರೆ ಎಲ್ಲ ಪ್ರಯಾಣಿಕರ ತೆರವಿಗೆ ಮುಂಚೆಯೇ ಹಡಗಿನ ಕ್ಯಾಪ್ಟನ್ ಜೀವರಕ್ಷಕ ದೋಣಿಯೊಂದಿಗೆ ಪರಾರಿಯಾಗಿದ್ದು ! ಕೋಸ್ಟ್ ಗಾರ್ಡ್ ಕಮಾಂಡರ್ ೧೨.೪೨ಕ್ಕೆ ಕ್ಯಾಪ್ಟನ್ ಹಡಗಿಗೆ ವಾಪಾಸ್ ಬರಲು ಕರೆ ನೀಡಿದಾಗ ಕ್ಯಾಪ್ಟನ್ ಅದಾಗಲೇ ದಡ ಸೇರಿ ಪರಾರಿಯಾಗಿದ್ದ. ೧೧೦ ವರ್ಷಗಳ ಹಿಂದೆ ಟೈಟಾನಿಕ್ ಹಡಗು ದುರಂತಕ್ಕೀಡಾದಾಗ ಆ ಹಡಗಿನ ಕ್ಯಾಪ್ಟನ್ ಸಾಧ್ಯವಿದ್ದಷ್ಟು ಜನರನ್ನು ರಕ್ಷಿಸಿ ಕೊನೆಯಲ್ಲಿ ಹಡಗಿನೊಂದಿಗೇ ಜೀವಂತ ಸಮಾಧಿಯಾಗಿದ್ದ.
ದುರಂತದ ನಂತರ: ಈ ತೆರವಿನ ಕಾರ್ಯ ಐದು ಗಂಟೆ ಕಾಲ ನಡೆಯಿತು. ವರದಿಗಳ ಪ್ರಕಾರ ಜೀವರಕ್ಷಕ ದೋಣಿಗಳೇ ಹಡಗಿನಲ್ಲಿ ತಲೆಕೆಳಗಾಗಿ ಇದ್ದು ಪರಿಹಾರ ಕಾರ್ಯಕ್ಕೆ ವಿಘ್ನವುಂಟಾಯಿತಂತೆ ! ಈ ಪರಿಹಾರ ಕಾರ್ಯದಲ್ಲಿ ಹಡಗಿನ ಸಿಬ್ಬಂದಿ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದ ರೀತಿ ಶ್ಲಾಘನೀಯ.
ಸಾಮಾನ್ಯವಾಗಿ ಸಮುದ್ರಯಾನ ಸುರಕ್ಷಿತ ಎನ್ನುವುದು ಬಹು ಜನರ ಅಭಿಪ್ರಾಯ. ಅದು ನಿಜ ಕೂಡ. ಇಂತಹ ದುರಂತಗಳು ವಿರಳವೆಂದೇ ಹೇಳಬೇಕು. ಅಂತರಾಷ್ಟ್ರೀಯ ಸಮುದ್ರಯಾನ ಸಂಸ್ಥೆ ಈ ದುರ್ಘಟನೆಯ ಬಗ್ಗೆ ತುಟಿ ಬಿಚ್ಚದಿರುವುದು ಆಶ್ಚರ್ಯ ತಂದಿದೆ. ಟೈಟಾನಿಕ್ ದುರಂತದ ಶತಮಾನದ ಹೊಸ್ತಿಲಲ್ಲಿ. ಸಮುದ್ರಯಾನ ಸುರಕ್ಷತೆಗಳ ಬಗ್ಗೆ ಅತ್ಯಂತ ಗಾಢವಾಗಿ ಚಿಂತಿಸುವ ಕಾಲ ಖಂಡಿತ ಬಂದಿದೆ.
-ಕೆ. ನಟರಾಜ್, ಬೆಂಗಳೂರು
ಚಿತ್ರ ಕೃಪೆ; ಇಂಟರ್ನೆಟ್ ತಾಣ.