ಕೌಶಲದ ಸದ್ಭಳಕೆ ಅಗತ್ಯ
ಹಿಮಾಲಯದ ಬದರಿಕಾಶ್ರಮದ ಹತ್ತಿರ ಒಂದು ಗುರುಕುಲವಿತ್ತು. ಅಲ್ಲಿನ ಗುರುಗಳು ತಮ್ಮ ಶಿಷ್ಯರಿಗೆ ಮತ್ತು ಅಲ್ಲಿಗೆ ಬರುವ ಯಾತ್ರಿಕರಿಗೆ ಹೇಳುತ್ತಿದ್ದ ಒಂದು ಕಥೆ ಕುತೂಹಲಕಾರಿಯಾಗಿದೆ. ಈ ಕಥೆಯು ಹಳೆಯದಾದರೂ, ಅದರಲ್ಲಿರುವ ಅರ್ಥ ಹಿರಿದು. 'ನಮ್ಮಲ್ಲಿ ಅಸಾಧಾರಣ ವಿದ್ಯೆ, ಕೌಶಲ ಇರಬಹುದು. ಆದರೆ ಅದನ್ನು ಉಪಯೋಗಿಸುವಾಗ ವಿವೇಚನೆ ಇಲ್ಲವಾದರೆ, ಅಂತಹ ವಿದ್ಯೆಯಿಂದ ಲಾಭಕ್ಕಿಂತ ನಷ್ಟವೇ ಅಧಿಕ ಇದೆ' ಎನ್ನುತ್ತಾ ಗುರುಗಳು ಈ ಕಥೆಯನ್ನು ಹೇಳುತ್ತಿದ್ದರು.
ಬಹು ಹಿಂದೆ ಜೋಷಿಮಠದ ಹತ್ತಿರದ ಒಂದು ಗುಹೆಯಲ್ಲಿ ಒಬ್ಬ ಸಾಧು ಇದ್ದರು. ಹಲವು ವರ್ಷಗಳ ಸಾಧನೆಯಿಂದ ಅವರು ನಾನಾ ರೀತಿಯ ವಿದ್ಯೆಗಳಲ್ಲಿ ಪರಿಣಿತರಾಗಿದ್ದರು. ಅಂತಹ ವಿದ್ಯೆಗಳಲ್ಲಿ ಒಂದೆಂದರೆ, ಪ್ರಾಣಿ ಪಕ್ಷಿಗಳ ಜೊತೆ ಸಂವಹನ ನಡೆಸುವುದು. ತಮ್ಮ ಆಶ್ರಮದ ಹತ್ತಿರ ಬರುವ ಎಲ್ಲಾ ಪ್ರಾಣಿಗಳೊಂದಿಗೆ ಅವರು ಸಂವಹನ ನಡೆಸುತ್ತಿದ್ದುದನ್ನು ನೋಡಿ ಇತರರು ಆಶ್ಚರ್ಯ ಪಡುತ್ತಿದ್ದರು.
ಅಲ್ಲಿಗೆ ಬರುತ್ತಿದ್ದ ಜೀವಿಗಳ ಪೈಕಿ ಒಂದು ಇಲಿ ಸಾಧು ಅವರನ್ನು ಬಹಳ ಹಚ್ಚಿಕೊಂಡಿತ್ತು. ಪ್ರತಿ ದಿನ ಪೂಜೆಯ ಸಮಯದಲ್ಲಿ ಬಂದು ವಿನೀತನಾಗಿ ಕುಳಿತುಕೊಳ್ಳುತ್ತಿದ್ದ ಆ ಇಲಿಯನ್ನು ಕಂಡರೆ ಆ ಸಾಧುಗಳಿಗೆ ವಿಶ್ವಾಸ. ಅದನ್ನು ಚೆನ್ನಾಗಿ ಮಾತನಾಡಿಸುತ್ತಿದ್ದರು. ಸಾಧು ಹೇಳುವ ಪ್ರವಚನವನ್ನು ಅದು ಆಸಕ್ತಿಯಿಂದ ಕೇಳುತ್ತಿತ್ತು. ಆ ನಂತರ ತನ್ನ ಪಾಡಿಗೆ ಕಾಡಿನಲ್ಲಿದ್ದ ಬಿಲದೊಳಗೆ ಹೋಗುತ್ತಿತ್ತು.
ಒಂದು ದಿನ ಇಲಿಯು ವೇಗವಾಗಿ ಓಡುತ್ತಾ ಸಾಧುಗಳ ಬಳಿ ಬಂದಿತು. 'ನನ್ನನ್ನು ಒಂದು ಕಾಡು ಬೆಕ್ಕು ಅಟ್ಟಿಸಿಕೊಂಡು ಬರುತ್ತಿದೆ. ಕಾಪಾಡಿ' ಎಂದು ಪ್ರಾರ್ಥಿಸಿತು. ಓಡಿ ಬಂದ ಇಲಿಯನ್ನು ಆ ಕ್ಷಣದಲ್ಲಿ ರಕ್ಷಿಸಿದರು. ಆದರೆ ಬೆಕ್ಕು ಬಂದು 'ಇದು ನನ್ನ ಬೇಟೆ. ಇಲಿಯನ್ನು ಹಿಡಿಯುವುದು ನನ್ನ ಧರ್ಮ' ಎಂದಿತು.
ಸಾಧುವಿಗೆ ಸಂದಿಗ್ಧ. ಬೆಕ್ಕು ಹೇಳಿದ್ದರಲ್ಲಿ ಅರ್ಥವಿದೆ. ಇಲಿಯನ್ನು ಹಿಡಿದು ತಿನ್ನುವುದೇ ಬೆಕ್ಕಿನ ಧರ್ಮ. ತಕ್ಷಣ ಒಂದು ಉಪಾಯ ಮಾಡಿ. ತಾವು ರಕ್ಷಿಸಿದ ಇಲಿಯನ್ನು ಇನ್ನೊಂದು ದೊಡ್ಡ ಬೆಕ್ಕನ್ನಾಗಿ ರೂಪಾಂತರಗೊಳಿಸಿದರು. ತನ್ನ ಎದುರು ದೊಡ್ಡ ಬೆಕ್ಕು ಪ್ರತ್ಯಕ್ಷವಾದುದನ್ನು ಕಂಡು, ಆ ಕಾಡು ಬೆಕ್ಕು ಹೆದರಿ ಓಡಿ ಹೋಯಿತು.
ದೊಡ್ದ ಗಾತ್ರದ ಬೆಕ್ಕಿನ ರೂಪ ಪಡೆದ ಇಲಿಯು, ಕಾಡಿನ ಅಂಚಿನಲ್ಲಿ ಓಡಾಡುತ್ತ, ಇತರ ಬೆಕ್ಕುಗಳನ್ನು ಬೆದರಿಸುತ್ತಾ ಕಾಲ ಕಳೆಯತೊಡಗಿತು. ಒಂದು ದಿನ ಕಾಡು ನಾಯಿಗಳು ಅದನ್ನು ಅಟ್ಟಿಸಿಕೊಂಡು ಬಂದವು. ಅದು ಓಡುತ್ತಾ ಸಾಧು ಆಶ್ರಮಕ್ಕೆ ಬಂದು, ಅವರ ಕಾಲಿಗೆ ನಮಸ್ಕರಿಸಿ ತನ್ನನ್ನು ರಕ್ಷಿಸಬೇಕು ಎಂದು ಕೇಳಿಕೊಂಡಿತು. ಆ ಇಲಿಯ ಮೇಲಿನ ಪ್ರೀತಿಯಿಂದ ಅದನ್ನು ದೊಡ್ಡ ಗಾತ್ರದ ಕಾಡುಕೋಣವನ್ನಾಗಿ ಪರಿವರ್ತಿಸಿದರು. ಕಾಡುಕೋಣ ರೂಪದಲ್ಲಿದ್ದ ಇಲಿಯು ಕಾಡುನಾಯಿಗಳನ್ನು ಬೆದರಿಸಿ ಓಡಿಸಿತು.
ಕೆಲವು ದಿನಗಳ ನಂತರ, ಕಾಡುಕೋಣದ ರೂಪದಲ್ಲಿದ್ದ ಇಲಿಯು ಕಾಡಿನಲ್ಲಿ ಸಂಚರಿಸುತ್ತಿದ್ದಾಗ, ಒಂದು ಹುಲಿ ಅದರ ಮೇಲೆ ಆಕ್ರಮಣ ಮಾಡಲು ನೋಡಿತು. ತಕ್ಷಣ ಬೆದರಿದ ಇಲಿಯು, ಸಾಧುಗಳ ಆಶ್ರಮಕ್ಕೆ ಬಂದು 'ಈ ಹುಲಿ ನನ್ನನ್ನು ಬೆದರಿಸುತ್ತಿದೆ, ಕಾಪಾಡಿ' ಎಂದು ಕೇಳಿಕೊಂಡಿತು.
ಸಾಧುವಿಗೆ ನಿಜವಾದ ಸಂದಿಗ್ಧ ಎದುರಾಯಿತು. ಅವರು ನಾನಾ ಶಾಸ್ತ್ರ ಗ್ರಂಥಗಳನ್ನು ಓದಿದ್ದರು. ಈ ರೀತಿ ರೂಪಾಂತರ ಮಾಡುತ್ತಾ ಹೋದರೆ ಇದಕ್ಕೆ ಕೊನೆಯೆಲ್ಲಿ, ಇದು ಸಹ ದುರಾಸೆಯ ಇನ್ನೊಂದು ವಿಧಾನವಲ್ಲವೇ ಎಂದು ಚಿಂತಿಸಿದರು. ಆದರೂ, ಆ ಇಲಿಯನ್ನು ಕಂಡರೆ ಅವರಿಗೆ ಅದೇನೋ ವಿಶ್ವಾಸ, ಕೊನೆಗೆ ಯೋಚಿಸಿ, ಇಲಿಯನ್ನು ಕರೆದು, 'ನೋಡು, ಇದೇ ಕೊನೆಯ ಬಾರಿ ನಿನಗೆ ಸಹಾಯ ಮಾಡುತ್ತಿದ್ದೇನೆ. ಇನ್ನು ಮುಂದೆ ಈ ರೀತಿಯ ಸಮಸ್ಯೆಯನ್ನು ನಮ್ಮ ಬಳಿ ತರಬಾರದು' ಎಂದು ಹೇಳಿ, ಅದನ್ನು ದೊಡ್ಡ ಗಾತ್ರದ ಹುಲಿಯನ್ನಾಗಿ ಪರಿವರ್ತಿಸಿದರು. ದೊಡ್ಡ ಹುಲಿಯನ್ನು ಕಂಡ ಕಾಡಿನ ಹುಲಿ ಹೆದರಿ ಓಡಿಹೋಯಿತು.
ಈಗ ಇಲಿಯು ಭಸ್ಮಾಸುರನಂತೆ ವರ್ತಿಸತೊಡಗಿತು. ಅದು ಕಾಡಿನ ಪ್ರಾಣಿಗಳನ್ನು ಬೆದರಿಸುತ್ತಾ ಅಡ್ಡಾಡತೊಡಗಿತು. ಅನವಶ್ಯಕವಾಗಿ ಇತರ ಪ್ರಾಣಿಗಳನ್ನು ಸಾಯಿಸಿತು. ಅದೇ ಕಾಡಿನ ರಾಜ ಎನಿಸಿತು. ಹೀಗೆಯೇ ಒಂದು ದಿನ ಯೋಚಿಸಿತು. 'ನನ್ನ ಸ್ವರೂಪವು ತಾತ್ಕಾಲಿಕ. ಎಷ್ಟೇ ದೊಡ್ದ ಹುಲಿಯಾಗಿದ್ದರೂ, ನಾನು ಇಲಿ. ಆ ಸಾಧುಗಳು ಎಂದಾದರೊಮ್ಮೆ ನನ್ನನ್ನು ಮೂಲ ಸ್ವರೂಪಕ್ಕೆ ಪರಿವರ್ತಿಸುತ್ತಾರೆ. ಇದಕ್ಕೆ ಒಂದು ಪರಿಹಾರ ಬೇಕಲ್ಲವೇ?'
ನಿಧಾನವಾಗಿ ಅದು ಆಶ್ರಮದ ಬಳಿ ಹೋಗಿ, ಸಾಧುಗಳು ಧ್ಯಾನ ಮಾಡುತ್ತಿದ್ದ ಸಮಯವನ್ನು ಕಾದು ಹೋಗಿ, ಅವರ ಮೇಲೆ ಎರಗಿ, ತಿನ್ನಲು ಸಿದ್ಧತೆ ಮಾಡಿಕೊಂಡಿತು. ತಕ್ಷಣ ಇದನ್ನು ಗ್ರಹಿಸಿದ ಸಾಧುಗಳು, ಕೋಪದಿಂದ ಹುಲಿಯ ರೂಪದಲ್ಲಿದ್ದ ಆ ಇಲಿಗೆ ಅದರ ಮೂಲ ರೂಪವನ್ನು ಕರುಣಿಸಿದರು. ಜತೆಗೆ, ಪುಟಾಣಿ ಇಲಿಯನ್ನು ಕೋಲಿನಿಂದ ಬೆದರಿಸಿ ಓಡಿಸಿದರು.
ತಾನು ಕಲಿತ ವಿದ್ಯೆ, ಕೌಶಲವನ್ನು ಅನವಶ್ಯಕವಾಗಿ ಆ ಇಲಿಯ ಸಹಾಯಕ್ಕೆ ಉಪಯೋಗಿಸಿದ್ದುದೇ ಇಂತಹ ಅನಾಹುತಕ್ಕೆ ಕಾರಣವಾಗಿದ್ದು ಅವರಿಗೆ ಅರಿವಾಯಿತು.
-ಶಶಾಂಕ್ ಮುದೂರಿ (ವಿಶ್ವವಾಣಿಯಿಂದ)
ಚಿತ್ರ ಕೃಪೆ: ಅಂತರ್ಜಾಲ ತಾಣ