ಕ್ಯಾಂಪಸ್ ಸಂದರ್ಶನ:ಯಾವ ಸೆಮಿಸ್ಟರಿನಲ್ಲಿ ನಡೆಯಬೇಕು?
ಕಾಲೇಜಿನ ಕ್ಯಾಂಪಸ್ಸಿಗೆ ಹೋಗಿ ವಿದ್ಯಾರ್ಥಿಗಳನ್ನು ಆಯ್ದುಕೊಳ್ಳುವ ಪ್ರಕ್ರಿಯೆಗೀಗ ಮತ್ತೆ ಚಾಲನೆ ದೊರಕಿದೆ.ಆರ್ಥಿಕ ಕುಸಿತದ ದಿನಗಳು ಮುಗಿದು,ಕಂಪೆನಿಗಳಿಗೆ ಕೈತುಂಬಾ ಹೊರಗುತ್ತಿಗೆ ಕೆಲಸಗಳು ಬರುತ್ತಿರುವುದು,ಇದಕ್ಕೆ ಕಾರಣ.ಜೂನಿಗೆ ಮುಗಿದ ಆರ್ಥಿಕ ತ್ರೈಮಾಸಿಕದಲ್ಲಿ ಟಿಸಿಎಸ್ ಅಂತಹ ಐಟಿ ಕಂಪೆನಿ ಉತ್ತಮ ಪ್ರದರ್ಶನ ನೀಡಿದೆ.ಇನ್ಫೋಸಿಸ್ ತುಸು ಹಿನ್ನಡೆ ಅನುಭವಿಸಿದರೂ,ಮುಂದಿನ ತ್ರೈಮಾಸಿಕದ ಬಗ್ಗೆ ಹೆಚ್ಚಿನ ಭರವಸೆ ಹೊಂದಿದೆ.ಬಹುಶ: ಇತರ ಐಟಿ ಕಂಪೆನಿಗಳೂ ಇದೇ ರೀತಿಯ ಆಶಾದಾಯಕ ಸ್ಥಿತಿಯಲ್ಲಿವೆ.ಹಾಗಾಗಿ ಕ್ಯಾಂಪಸ್ ಸಂದರ್ಶನಗಳು ಮತ್ತೆ ಚುರುಕು ಪಡೆದುಕೊಳ್ಳುವುದು ನಿಶ್ಚಿತ.ಇದೇ ವೇಳೆ ನ್ಯಾಸಾಕಾಂ ಕಂಪೆನಿಗಳಿಗೆ ಕ್ಯಾಂಪಸ್ ಸಂದರ್ಶನಗಳನ್ನು ಕೊನೆಯ ವರ್ಷದಲ್ಲಿರುವ ವಿದ್ಯಾರ್ಥಿಗಳಿಗೆ ನಡೆಸುವಂತೆ ಕೋರಿದೆ.ಕಂಪೆನಿಗಳೂ ಈ ನಿರ್ದೇಶನವನ್ನು ಪಾಲಿಸಿಕೊಂಡು ಬರುತ್ತಿವೆ.ಅಂತಿಮ ವರ್ಷದಲ್ಲಿ ಕಲಿಯುತ್ತಿರುವವರಿಗೆ ನೌಕರಿ ಖಾತರಿ ದೊರಕುವುದು ಕಾಲೇಜು,ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ಅನುಕೂಲಕರವೆನಿಸುತ್ತದೆ.ಎಕ್ಸೆಂಚುವೇಟ್ ಕಂಪೆನಿ ಮಾತ್ರಾ ಒಂದೆರಡು ಕಾಲೇಜುಗಳಲ್ಲಿ ಮೂರನೇ ವರ್ಷದ ವಿದ್ಯಾರ್ಥಿಗಳಿಗೇ ಕ್ಯಾಂಪಸ್ ಸಂದರ್ಶನ ನಡೆಸಿ,ಅವರುಗಳಿಗೆ ನೌಕರಿ ಭರವಸೆ ನೀಡಿರುವುದು ವರದಿಯಾಗಿದ್ದು,ಇದೀಗ ಚರ್ಚೆಗೆ ಗ್ರಾಸವಾಗಿದೆ.ಒಂದು ಕಂಪೆನಿ ಹೀಗೆ ಮಾಡಿದೊದನೆ,ಇತರ ಕಂಪೆನಿಗಳೂ ಹೀಗೆ ಮಾಡುವುದು ಸಾಮಾನ್ಯ.ತಮಗೆ ಕಾಲೇಜುಗಳ ಉತ್ತಮ ವಿದ್ಯಾರ್ಥಿಗಳು ಬೇಕು ಎನ್ನುವ ಕಂಪೆನಿಗಳ ಮೇಲಾಟ ಯಾವಾಗಲೂ ಇದ್ದದ್ದೇ.ತಾವು ತಡವಾಗಿ ಹೋದರೆ,ತಮಗೆ ಉಳಿದ ಕಂಪೆನಿಗಳಿಂದ ತಿರಸ್ಕೃತ ವಿದ್ಯಾರ್ಥಿಗಳು ಸಿಗುತ್ತಾರೆ ಎನ್ನುವುದು ಕಂಪೆನಿಗಳ ಅನಿಸಿಕೆ.ಹಾಗಾಗಿ ಕಂಪೆನಿಗಳು ತಾವೇ ಮೊದಲು ಸಂದರ್ಶನಕ್ಕೆ ಕಾಲೇಜಿಗೆ ಭೇಟಿ ಕೊಡಬಯಸುತ್ತಾರೆ.ಈಗ ಒಂದು ಕಂಪೆನಿ ಮೂರನೇ ವರ್ಷದವರಿಗೆ ಸಂದರ್ಶನ ನಡೆಸಿದರೆ,ಉಳಿದವರೂ ಅವರನ್ನನ್ನುಸರಿಸಿದರೆ,ಸಮಸ್ಯೆಯಾಗುತ್ತದೆ.ನೌಕರಿ ಖಾತರಿಯಾದ ವಿದ್ಯಾರ್ಥಿಗಳಲ್ಲಿ ಹಿಂದಿನ ಉತ್ಸಾಹ ಉಳಿದಿರುವುದಿಲ್ಲ.ಅವರು ಶೈಕ್ಷಣಿಕ ವಿಷಯಗಳನ್ನು ಕಡೆಗಣಿಸುವುದು ಕಂಡು ಬಂದಿತ್ತು.ಹಾಗಾಗಿ,ಈಗ ಮತ್ತೆ ಹಳೆಯ ಚಾಳಿ ಶುರುವಾಗುವುದು,ಯಾರಿಗೂ ಬೇಕಿಲ್ಲ.
--------------------------------------------------
ಕಾಂಚಾಣಕ್ಕೆ ಲಾಂಛನ
ರುಪಾಯಿಗೆ ಹೊಸ ಲಾಂಛನವನ್ನು ಅಂಗೀಕರಿಸಿರುವ ಸರಕಾರದ ಕ್ರಮದಿಂದಾಗಿ,ರುಪಾಯಿಗೆ ಹೊಸ ಖದರು ಬಂದಿದೆ.ಅದರ ಜತೆಗೆ,ಆ ಚಿಹ್ನೆಯನ್ನು ಕಂಪ್ಯೂಟರು ಮತ್ತು ಸೆಲ್‌ಪೋನುಗಳ ಕೀಲಿಮಣೆಯಲ್ಲಿ ಅಳವಡಿಸುವ ಬಗ್ಗೆಯೂ ಯೋಚಿಸಬೇಕಿದೆ.ಕೀಲಿಮಣೆಗಳ ತಯಾರಕರು ಹೊಸ ಕೀಲಿಮಣೆಗಳಲ್ಲಿ ಚಿಹ್ನೆಯನ್ನು ಅಳವಡಿಸಲು ತಯಾರಾಗಿದ್ದಾರೆ.ಆದರೆ,ಯಾವ ಕೀಲಿಯಲ್ಲಿ ಈ ಚಿಹ್ನೆ ಬರಬೇಕು ಎನ್ನುವುದನ್ನು ಭಾರತೀಯ ಮಾನಕಗಳ ಸಂಸ್ಥೆ ನಿಗದಿಪಡಿಸಬೇಕಿದೆ.ಜತೆಗೆ,ತಂತ್ರಾಂಶಗಳಲ್ಲೂ ತಕ್ಕ ಬದಲಾವಣೆ ಆಗಬೇಕಿದೆ.ಅದಕ್ಕೆ ಮುನ್ನ ರುಪಾಯಿ ಲಾಂಛನಕ್ಕೆ ಯಾವ ಯುನಿಕೋಡ್ ಮೌಲ್ಯ ಸಿಗುತ್ತದೆನ್ನುವುದೂ ನಿರ್ಧಾರವಾಗಬೇಕಿದೆ.ಇವೆಲ್ಲಾ ಆಗಲು ಇನ್ನೂ ಕಡಿಮೆ ಅಂದರೂ ಮೂರು-ನಾಲ್ಕು ತಿಂಗಳು ಬೇಕಾದೀತು.ರುಪಾಯಿ ಲಾಂಛನವು ನಮ್ಮ ವ್ಯವಸ್ಥೆಯಲ್ಲಿ ಚೆನ್ನಾಗಿ ಮಿಳಿತವಾಗಲು ವರ್ಷಗಳೇ ಬೇಕಾಗುವುದು ನಿಶ್ಚಿತ.
---------------------------------------------------
ಜಾಹೀರಾತುದಾರು ಮತ್ತು ಪತ್ರಿಕೋದ್ಯಮ
ಅಂತರ್ಜಾಲದಲ್ಲಿ ಸುದ್ದಿಯ ಲಭ್ಯತೆ ಮತ್ತು ಪತ್ರಿಕೆಗಳ ಅಂತರ್ಜಾಲ ತಾಣಗಳಿಂದ ಪತ್ರಿಕೆಗಳಿಗೆ ಕೊಡಲಿ ಪೆಟ್ಟು ಬೀಳಲಿದೆ ಎಂದು ವಿಶ್ಲೇಷಕರು ಒಪ್ಪುವುದಿಲ್ಲ.ಅಂತರ್ಜಾಲದಲ್ಲಿ ಇ-ಪೇಪರುಗಳಿದ್ದರೂ,ಕೈಲಿ ಪತ್ರಿಕೆ ಹಿಡಿದು ಓದುವುದೇ ಸಾಮಾನ್ಯ ಜನರಿಗಿನ್ನೂ ಆಪ್ಯಾಯಮಾನವೆನಿಸುತ್ತದೆ.ಆದರೆ ಜಾಹೀರಾತುದಾರರು ಪತ್ರಿಕೆಗಳಿಗೆ ಜಾಹೀರಾತು ಕೊಡುವುದನ್ನು ಬಿಟ್ಟು ಅಂತರ್ಜಾಲತಾಣಗಳಿಗೆ ತಮ್ಮ ಬಜೆಟ್ ಮೀಸಲಿರಿಸಿದರೆ,ಪತ್ರಿಕೆಗಳ ಜಾಹೀರಾತು ಆದಾಯ ಇಳಿದು,ಅವುಗಳ ಉಳಿವಿನ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡುವುದು ಸಹಜ.ಜಾಹೀರಾತುಗಳನ್ನು ಅಂತರ್ಜಾಲದಲ್ಲಿ ಬಳಕೆದಾರರ ಆಸಕ್ತಿ ನೋಡಿಕೊಂಡು,ನೀಡಲು ಸಾಧ್ಯವಾಗುವ ಸುಧಾರಿತ ತಂತ್ರಗಳು ಇವೆ.ಕಡಿಮೆ ಖರ್ಚಿನಲ್ಲಿ ಜಾಹೀರಾತುಗಳನ್ನು ಹೆಚ್ಚು ಫಲಪ್ರದವಾಗಿಸುವುದು ಸಾಧ್ಯವಾಗುವುದರಿಂದ ಜಾಹೀರಾತುದಾರರು,ಅಂತರ್ಜಾಲ ಮಾಧ್ಯಮದಲ್ಲೇ ಹೆಚ್ಚು ಜಾಹೀರಾತು ನೀಡಲು ಮನ ಮಾಡುತ್ತಿರುವುದು,ಪತ್ರಿಕೆಗಳಿಗೆ ಮಾರಕವಾಗಬಹುದು.
--------------------------------
ಹರಿಣಿಕ್ಯಾರಿಕೇಚರ್
ಹರಿಶ್ಚಂದ್ರ ಶೆಟ್ಟಿಯವರ ಬಗ್ಗೆ ಗೊತ್ತಿಲ್ಲದ ವ್ಯಂಗ್ಯಚಿತ್ರದ ಅಭಿಮಾನಿ ಕನ್ನಡದಲ್ಲಿ ಇರಲಿಕ್ಕಿಲ್ಲ.ಇವರ ವ್ಯಂಗ್ಯಚಿತ್ರಗಳು http://harinigallery.blogspot.comನಲ್ಲಿ ಕಾಣಿಸಿಕೊಳ್ಳುತ್ತಿವೆ.ಈಗಿವರ ವ್ಯಂಗ್ಯಭಾವಚಿತ್ರಗಳಿಗೇ ಮೀಸಲಾದ ಬ್ಲಾಗೊಂದು ಸಿದ್ಧವಾಗಿದೆ.http://harinicaricature.blogspot.comನಲ್ಲಿರುವ ಈ ಬ್ಲಾಗ್ ಅವರ ಹೊಸ ಕ್ಯಾರಿಕೇಚರುಗಳನ್ನು ನಿಮಗೆ ತಲುಪಿಸಲಿವೆ.ವ್ಯಂಗ್ಯಭಾವಚಿತ್ರ ಬೇಕಾದವರು,ಅವರಿಗೆ ಮಿಂಚಂಚೆ ಮಾಡಿ,ತಮ್ಮ ಚಿತ್ರ ಕಳುಹಿಸಿ,ಅದನ್ನು ವ್ಯಂಗ್ಯಭಾವಚಿತ್ರವಾಗಿಸಿ ಕಳುಹಿಸುವ ಸೇವೆಯನ್ನೂ ಹರಿಣಿ ಒದಗಿಸಲಿದ್ದಾರೆ.ಇದಕ್ಕೆ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ.ವಿವರಗಳಿಗೆ ಅವರ ಬ್ಲಾಗು ನೋಡಿ.
-----------------------------------------------
ಎಪಿಕ್ ಎನ್ನುವ ಸುಲಭ ಬ್ರೌಸರ್
ಬ್ರೌಸರ್ ಎನ್ನುವುದು ಒಂದು ಮುಖ್ಯ ತಂತ್ರಾಂಶ.ಅಂತರ್ಜಾಲ ಜಾಲಾಟಕ್ಕೆ ಬಳಾಕೆಯಾಗುವ ಬ್ರೌಸರ್ ತಂತ್ರಾಂಶದಲ್ಲಿ ಈಗ ಫೈರ್‌ಫಾಕ್ಸ್ ಬಹು ಜನಪ್ರಿಯ.ಹಿಂದೆ ಮೈಕ್ರೋಸಾಫ್ಟಿನ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬ್ರೌಸರ್ ಆಗಿ ಎಲ್ಲೆಲ್ಲೂ ಬಳಕೆಯಾಗುತ್ತಿತ್ತು.ಆದರೆ,ಅದರ ಜನಪ್ರಿಯತೆಯೇ,ಅದಕ್ಕೆ ಮುಳುವಾಯಿತು.ಅದರ ಭದ್ರತಾ ಕೊರತೆಗಳ ಕಾರಣ ಅದರ ಬಳಕೆ ಕಡಿಮೆಯಾಗತೊಡಗಿತು.ಈಗ ಎಪಿಕ್ ಎನ್ನುವ ಬ್ರೌಸರ್ ಬಂದಿದೆ,ಇದನ್ನು ಭಾರತದಲ್ಲೇ ತಯಾರಿಸಲಾಗಿದೆ.ಇದು ಭಾರತೀಯರ ಜಾಲಾಟಕ್ಕೆ ಸೂಕ್ತವಾಗಿ ತಯಾರಿಸಲಾಗಿದೆ.ಇದರಲ್ಲಿ ಆಂಟಿ-ವೈರಸ್ ತಂತ್ರಾಂಶವನ್ನೂ ಸೇರಿಸಿರುವುದು ವಿಶೇಷ.ಒಂದು ಅಂತರ್ಜಾಲ ತಂತ್ರಾಂಶವನ್ನು ಹೆಸರು ಮತ್ತು ನೋಟದಲ್ಲಿ ಹೋಲುವ ತಾಣಗಳ ಮೂಲಕ ಜನರನ್ನು ಮೋಸಗೊಳಿಸುವ ಫಿಶಿಂಗ್ ದಾಳಿಗಳನ್ನು ಪ್ರತಿರೋಧಿಸುವ ಸಾಮರ್ಥ್ಯವನ್ನಿದು ಹೊಂದಿರುವುದು ವಿಶೇಷ.ಫೈರ್‌ಫಾಕ್ಸ್ ಬ್ರೌಸರ್ ತಳಹದಿಯ ಮೇಲೇ ರಚಿತವಾದ ತಂತ್ರಾಂಶವಿದು.ಸುಮಾರು ಹನ್ನೊಂದು ಎಂಬಿಯಷ್ಟು ಗಾತ್ರದ ಕಡತವನ್ನು ಇಳಿಸಿಕೊಂಡು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಿಕೊಳ್ಳಬೇಕಾಗುತ್ತದೆ.ಭಾರತೀಯ ಭಾಷೆಗಳಿಗೆ ಇಲ್ಲಿ ಅಗತ್ಯವಾದ ಅನುಕೂಲತೆಯಿದೆ.ಚುರುಕಾಗಿ ಕಾರ್ಯನಿರ್ವಹಿಸುತ್ತದೆ ಎನ್ನುವುದು ಧನಾತ್ಮಕ ಅಂಶ.ಹಲವಾರು ಸಾಮಾಜಿಕ ಜಾಲತಾಣಗಳಿಗೆ ಕ್ಲಿಕ್ಕಿಸುವ ಮೂಲಕವೇ ತೆರೆಯುವ ಸವಲತ್ತು ಎಪಿಕನ್ನು ಹೆಚ್ಚು ಬಳಕೆದಾರಸ್ನೇಹಿಯಾಗಿಸುತ್ತದೆ.ಅಲಾರಂ ತರದ ವ್ಯವಸ್ಥೆ,ನೀವು ಮಾದಬೇಕಿರುವ ಕೆಲಸದ ಪಟ್ಟಿಯನ್ನಿಟ್ಟುಕೊಳ್ಳುವ ವ್ಯವಸ್ಥೆಗಳು,ಬೇಲೂರು-ಹಳೆಬೀಡು ಅಂತಹ ಪ್ರವಾಸಿ ಸ್ಥಳಗಳ ವಾಲ್‌ಪೇಪರ್ ಎವೆಲ್ಲವೂ ಇದರಲ್ಲಿದೆ.ಅಲ್ಲದೆ ಮೈಕಂಪ್ಯೂಟರಿಗೂ ಬ್ರೌಸರ್ ಮೂಲಕವೇ ಸಾಗುವ ಅನುಕೂಲ ಇಲ್ಲಿದೆ.http://www.epicbrowser.com/ ತಾಣದಿಂದ ಇಳಿಸಿಕೊಳ್ಳಿ.
----------------------------------
ಮೊನಾಲಿಸಾ ಚಿತ್ರದಲ್ಲಿ ವರ್ಣಪದರಗಳಿವೆ
ಮೊನಾಲಿಸಾ ಚಿತ್ರ ಲಿಯೋನಾರ್ಡೋ ವಿಂಚಿಯವರ ಹೆಸರಾಂತ ವರ್ಣಚಿತ್ರ.ಇದರ ಮೂರು ಆಯಾಮಗಳ ನೋಟ,ಮೊನಾಲಿಸಾ ಸೌಂದರ್ಯ ಇವೆಲ್ಲಾ ಬಹುಪ್ರಸಿದ್ಧ.ಈಗ ಈ ಚಿತ್ರವನ್ನು ಎಕ್ಸ್‌ರೇ ಪ್ಲೊರೆಸೆನ್ಸ್ ಸ್ಪೆಕ್ಟ್ರಾಗಫಿ ಎನ್ನುವ ತಂತ್ರ ಬಳಸಿ,ಬಹು ಎಚ್ಚರಿಕೆಯಿಂದ ವಿಶ್ಲೇಷಿಸಲಾಗಿದೆ.ಆಗ ಕಂಡುಬಂದ ಅಂಶವೆಂದರೆ,ಈ ವರ್ಣಚಿತ್ರವನ್ನು ರಚಿಸಲು ಕಲಾವಿದ ಹಲವಾರು ಪದರಗಳ ವರ್ಣ ಲೇಪನ ಉಪಯೋಗಿಸಿದ್ದಾರೆ ಎನ್ನುವ ಅಂಶ.ಮೂವತ್ತರಷ್ಟು ಪದರಗಳಿದ್ದರೂ,ಅದರ ಒಟ್ಟು ದಪ್ಪ ಮಾನವನ ಕೂದಲಿನ ಅರ್ಧದಷ್ಟಿರಬಹುದು.ಇಂತಹ ತಂತ್ರ ಪ್ರಚಲಿತದಲ್ಲಿದ್ದ ತಂತ್ರವೇ ಆಗಿತ್ತಂತೆ.ಸುಮ್ಯಾಟೋ ಎಂದನ್ನದನ್ನು ಕರೆಯುತ್ತಾರೆ.ಪ್ರೆಂಚ್ ಸಂಶೋಧಕನೋರ್ವನ ಅಧ್ಯಯನದಿಂದ ಈ ಅಂಶಗಳು ಬೆಳಕಿಗೆ ಬಂದಿವೆ.ವಿಂಚಿಯು ತನ್ನೆಲ್ಲಾ ಚಿತ್ರರಚನೆಗಳಲ್ಲೂ ವಿವಿಧ ಪ್ರಯೋಗಗಳನ್ನು ಮಾಡಿರುವುದು ಸಂಶೋಧನೆಯಿಂದ ವ್ಯಕ್ತವಾಗಿರುವ ಮತ್ತೊಂದು ಅಂಶ.
-------------------------------------------------- udayavani