ಕ್ಯಾನ್ಸರ್ ಗೆದ್ದು, ಬದುಕುವ ಭರವಸೆ ಮೂಡಿಸೋಣ...

ಕ್ಯಾನ್ಸರ್ ಗೆದ್ದು, ಬದುಕುವ ಭರವಸೆ ಮೂಡಿಸೋಣ...

ಒಂದು ಸಮಯವಿತ್ತು, ರೋಗಿಯೊಬ್ಬನಿಗೆ ಕ್ಯಾನ್ಸರ್ ಕಾಯಿಲೆ ಬಂತು ಎಂದ ಕೂಡಲೇ, ವೈದ್ಯರೇ ಗುಟ್ಟಾಗಿ ರೋಗಿಗಳ ಮನೆಯವರಿಗೆ ವಿಷಯವನ್ನು ಹೇಳುತ್ತಿದ್ದರು. ಇದರಿಂದ ರೋಗಿ ರೋಗದಿಂದ, ಮನೆಯವರು ಗಾಭರಿಯಿಂದ ನರಳುತ್ತಾ ಇರುತ್ತಿದ್ದರು. ಆಗಿನ ಕಾಲದಲ್ಲಿ ಕ್ಯಾನ್ಸರ್ ನಿಖರ ಪತ್ತೆ, ರೋಗ ನಿವಾರಣೆಗೆ ಇದ್ದ ವೈದ್ಯಕೀಯ ಸೌಲಭ್ಯಗಳು ಕಡಿಮೆ. ಆದರೆ ಇಂದು ಕಾಲ ಬದಲಾಗಿದೆ. ಕ್ಯಾನ್ಸರ್ ನ ನಿಖರ ಪತ್ತೆಯಿಂದ ಹಿಡಿದು ಅದನ್ನು ಸಂಪೂರ್ಣ ನಿವಾರಣೆ ಮಾಡಿ ಆ ರೋಗಿ ತನ್ನ ಮುಂದಿನ ಜೀವನವನ್ನು ಆರಾಮವಾಗಿ ಬದುಕುವಂತೆ ಮಾಡುವ ತಂತ್ರಜ್ಞಾನ ಆವಿಷ್ಕಾರವಾಗಿದೆ.

ನವೆಂಬರ್ ೭ನ್ನು ಪ್ರತೀ ವರ್ಷ ‘ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ' ಎಂದು ಆಚರಿಸಲಾಗುತ್ತದೆ. ಈ ದಿನದಂದು ಕ್ಯಾನ್ಸರ್ ರೋಗ, ಅದರ ಪತ್ತೆ, ಗುಣಲಕ್ಷಣ, ನಿವಾರಣೆಗಳ ವಿಧಾನಗಳ ಬಗ್ಗೆ ಹಾಗೂ ಕ್ಯಾನ್ಸರ್ ಹೊಂದಿಯೂ ಆರೋಗ್ಯವಂತ ಜೀವನ ಸಾಗಿಸುವ ಬಗ್ಗೆ ಜನ ಜಾಗೃತಿಯನ್ನು ಮೂಡಿಸಲಾಗುತ್ತದೆ. ನಮ್ಮ ದೇಶದಲ್ಲಿ ಈ ರೋಗದ ನಿಯಂತ್ರಣಕ್ಕಾಗಿ ಕೈಗೊಂಡ ಕಾರ್ಯಕ್ರಮಗಳ ಅರಿವನ್ನು ಸಾಮಾನ್ಯ ಜನರಲ್ಲಿ ಮೂಡಿಸಲು ೧೯೭೫ರಿಂದ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. 

ಕ್ಯಾನ್ಸರ್ ರೋಗ ಬರಲು ಹಲವಾರು ಕಾರಣಗಳಿರುತ್ತವೆ. ಕೆಲವು ಅನುವಂಶಿಕವಾಗಿರುತ್ತವೆ, ಕೆಲವು ನಮ್ಮ ಆಹಾರ ವ್ಯವಸ್ಥೆ, ಬಿಡಲಾಗದ ಚಟಗಳು, ದುರಭ್ಯಾಸಗಳು, ಮಾನಸಿಕ ಒತ್ತಡಗಳ ಸಮಸ್ಯೆ ಈ ಎಲ್ಲವೂ ಅಥವಾ ಕೆಲವು  ಕಾರಣವಾಗಬಹುದು. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ವಾರ್ಷಿಕವಾಗಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ  ಹೊಸ ಪ್ರಕರಣಗಳು ದಾಖಲಾಗುತ್ತಿವೆ ಎಂದು ಹೇಳಲಾಗುತ್ತಿದೆ. ಪ್ರತೀ ೮ ನಿಮಿಷಕ್ಕೆ ಓರ್ವ ಮಹಿಳೆ ಗರ್ಭಕೋಶದ ಕ್ಯಾನ್ಸರ್ ನಿಂದ ಮೃತಪಡುತ್ತಾಳೆ ಎಂಬ ಅಂದಾಜು ದಾಖಲೆ ಇದೆ. ಇವೆಲ್ಲವೂ ಗಾಭರಿ ಹುಟ್ಟಿಸುವ ಅಂಕಿ ಅಂಶಗಳು. ಇದರ ಜೊತೆಗೆ ಧೂಮಪಾನ, ಮಧ್ಯಪಾನದಿಂದಲೂ ಲಕ್ಷಾಂತರ ಮಂದಿ ಕ್ಯಾನ್ಸರ್ ಪೀಡಿತರಾಗಿ ಸಾವನ್ನಪ್ಪುತ್ತಾರೆ. ಗುಟ್ಕಾ, ಸಿಗರೇಟು, ಬೀಡಿ, ಮದ್ಯಪಾನಗಳಿಂದ ಬಾಯಿ, ಗಂಟಲು, ಶ್ವಾಸಕೋಶ, ಜಠರ, ಕಿಡ್ನಿ, ಲಿವರ್ ಮೊದಲಾದ ಅಂಗಗಳ ಕ್ಯಾನ್ಸರ್ ಬರುವ ಸಾಧ್ಯತೆ ಇದ್ದೇ ಇರುತ್ತದೆ. ಬೇರೆಯವರು ಧೂಮಪಾನ ಮಾಡಿ ಅವರು ಹೊರಬಿಟ್ಟ ಹೊಗೆಯನ್ನು ಆರೋಗ್ಯವಂತ ವ್ಯಕ್ತಿ ಸೇವಿಸಿ ‘ಪರೋಕ್ಷ' ರೀತಿಯಲ್ಲಿ ಕ್ಯಾನ್ಸರ್ ಗೆ ಗುರಿಯಾಗುವ ಸಾಧ್ಯತೆಯೂ ಇದೆ. ಈ ಕಾರಣದಿಂದ ಸಾರ್ವಜನಿಕ ಸ್ಥಳದಲ್ಲಿ ಈಗ ಧೂಮಪಾನ ನಿಷೇಧ ಮಾಡಲಾಗಿದೆ. 

ಇದರ ಜೊತೆಗೆ ಹೆಚ್ಚಾಗಿ ಮಹಿಳೆಯರಲ್ಲಿ ಕಂಡು ಬರುವ ಸ್ತನ ಕ್ಯಾನ್ಸರ್ ಪ್ರಮಾಣವೂ ಈಗೀಗ ಅಧಿಕವಾಗುತ್ತಿದೆ. ಇದರ ಜೊತೆಗೆ ರಕ್ತ ಕ್ಯಾನ್ಸರ್, ಮೂಳೆ ಕ್ಯಾನ್ಸರ್, ಮಿದುಳು ಕ್ಯಾನ್ಸರ್, ಕರುಳು ಕ್ಯಾನ್ಸರ್ ಎಲ್ಲವೂ ಮಾನವನನ್ನು ಕಿತ್ತು ತಿನ್ನುತ್ತಾ ಇದೆ. ಎಲ್ಲಾ ಕ್ಯಾನ್ಸರ್ ಗಳು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಲ್ಪಟ್ಟರೆ ಗುಣವಾಗುವ ಸಂಭವ ಅಧಿಕ. ಆದರೆ ಈ ಕ್ಯಾನ್ಸರ್ ಎಂಬ ರೋಗವು ಪತ್ತೆಯಾಗುವುದೇ ಕೊನೆಯ ಹಂತ ಬರುವಾಗ. ಇದರಿಂದ ರೋಗಿಯು ಚಿಕಿತ್ಸೆಗೆ ಸ್ಪಂದಿಸದೇ ನರಳಿ ಸಾವನ್ನಪ್ಪಬೇಕಾಗುತ್ತದೆ.

ಶ್ವಾಸಕೋಶದ ಕ್ಯಾನ್ಸರ್ ಗೆ ಪ್ರಮುಖ ಕಾರಣ ನಾವು ಸೇವಿಸುವ ಕಲುಷಿತ ಗಾಳಿ, ರಾಸಾಯನಿಕ ಭರಿತ ಹೊಗೆ ಇತ್ಯಾದಿ. ಶುದ್ಧ ಗಾಳಿ ಎಂಬುವುದು ಈಗ ಕನಸಿನ ಮಾತೇ ಆಗಿದೆ. ಆಧುನೀಕರಣದ ಭರಾಟೆಯಿಂದ ಹಳ್ಳಿ ಹಳ್ಳಿಗಳಲ್ಲಿ ಕೈಗಾರಿಕೆಗಳು ಹೊಕ್ಕಿವೆ. ಅಲ್ಲಿಯ ಶುದ್ಧ ಗಾಳಿಯನ್ನು ಕಲುಶಿತಗೊಳಿಸಿವೆ. ಕಾರ್ಖಾನೆಗಳು ಹೊರಬಿಟ್ಟ ಹೊಗೆಯಲ್ಲಿರುವ ರಾಸಾಯನಿಕಗಳು ನಮ್ಮ ದೇಹವನ್ನು ಪ್ರವೇಶಿಸಿ ಶ್ವಾಸಕೋಶದ ಕ್ಯಾನ್ಸರ್ ತರುವ ಸಾಧ್ಯತೆ ಇದೆ. ಅದೇ ರೀತಿ ಮೊದಲೇ ತಿಳಿಸಿದಂತೆ ಧೂಮಪಾನದ ಚಟ. ಇದು ಬೀಡಿ ಸಿಗರೇಟು ಸೇದುವವರ ಜೊತೆಗೆ ಪರೋಕ್ಷವಾಗಿ ಸೇದದಿರುವವರಿಗೂ ಹಾನಿ ತರುತ್ತದೆ. ನಿಮ್ಮ ಮನೆಯಲ್ಲಿ ಯಾರಾದರೊಬ್ಬರು ಧೂಮಪಾನದ ಚಟ ಹೊಂದಿದ್ದರೆ ಅವರು ಸೇದಿ ಹೊರಬಿಟ್ಟ ಹೊಗೆಯಿಂದಾಗಿ ಮನೆಯ ಉಳಿದ ಸದಸ್ಯರು, ಅದರಲ್ಲೂ ಪುಟ್ಟ ಮಕ್ಕಳು ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ಅವರಿಗೆ ಧೂಮಪಾನದ ಚಟ ತ್ಯಜಿಸುವಂತೆ ಹೇಳಬೇಕು ಅಥವಾ ಮಕ್ಕಳಿಲ್ಲದೆಡೆ ಸೇದುವಂತೆ ಹೇಳುವುದು ಉತ್ತಮ. ಧೂಮಪಾನದ ಕಾರಣದಿಂದ ಬರುವ ಕ್ಯಾನ್ಸರ್ ನಿಂದಾಗಿ ವಾರ್ಷಿಕ ಸುಮಾರು ೬೦ ಲಕ್ಷ ಜನರು ಪ್ರಪಂಚದಾದ್ಯಂತ ಸಾವನ್ನಪ್ಪುತ್ತಾರೆ ಎನ್ನುತ್ತದೆ ಒಂದು ವರದಿ. 

ನಮ್ಮ ಬದುಕುವ ಶೈಲಿ, ಆಹಾರ ಪದ್ಧತಿಯೂ ಕೆಲವೊಂದು ಕ್ಯಾನ್ಸರ್ ಗೆ ಕಾರಣವಾಗುವ ಸಾಧ್ಯತೆ ಇದೆ. ನಗರದ ಸಮಯರಹಿತ, ಧಾವಂತದ ಜೀವನದಲ್ಲಿ ಮಾನಸಿಕ ಒತ್ತಡಗಳು ಬಹಳ ಇರುತ್ತವೆ. ಈ ಕಾರಣದಿಂದ ನಮ್ಮ ದೇಹದಲ್ಲಿ ಹಾರ್ಮೋನುಗಳ ಬದಲಾವಣೆಯಾಗಿ ಕ್ಯಾನ್ಸರ್ ಕಾಯಿಲೆಯ ಉತ್ಪತ್ತಿಯಾಗುವ ಸಾಧ್ಯತೆ ಇದೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಇದಕ್ಕಾಗಿ ಒತ್ತಡ ರಹಿತ ಬದುಕು ಸಾಗಿಸುವತ್ತ ಗಮನ ಹರಿಸಬೇಕು. ನಿಯಮಿತ ಲಘು ವ್ಯಾಯಾಮ, ನಡಿಗೆ, ಸಾಧ್ಯವಿದ್ದಲ್ಲಿ ಯೋಗ, ಧ್ಯಾನ ಮಾಡುವುದರಿಂದ ಒತ್ತಡ ನಿವಾರಣೆ ಸಾಧ್ಯ. ನಿದ್ರೆ ಮಾನವನಿಗೆ ಬಹು ಅಗತ್ಯ. ಆದುದರಿಂದ ಆದಷ್ಟು ಬೇಗ ಮಲಗಿ ಬೇಗನೇ ಏಳುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ.

ನಾವು ಈಗಿನ ಕಾಲದಲ್ಲಿ ಅನಿಯಮಿತವಾಗಿ ಅತ್ಯಧಿಕ ಪ್ರಮಾಣದಲ್ಲಿ ಬಳಕೆ ಮಾಡುವ ಪ್ಲಾಸ್ಟಿಕ್ ಉತ್ಪನ್ನಗಳಿಂದಲೂ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಟೀ-ಕಾಫಿ ಕುಡಿಯಲು ಬಳಸುವ ಪ್ಲಾಸ್ಟಿಕ್ ಗ್ಲಾಸ್ ಗಳು, ತಿಂಡಿಯನ್ನು ಪ್ಯಾಕ್ ಮಾಡಲು ಬಳಸುವ ಪ್ಲಾಸ್ಟಿಕ್ ಚೀಲಗಳು ಇವುಗಳ ನಿತಂತರ ಬಳಕೆಯಿಂದಾಗಿ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದುದರಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಣದಲ್ಲಿಟ್ಟು ಆಹಾರ ಸಂಗ್ರಹಕ್ಕೆ ಗಾಜಿನ ಜಾಡಿ ಅಥವಾ ಸ್ಟೀಲ್ ಪಾತ್ರೆಗಳ ಬಳಕೆ ಉತ್ತಮ.

ಸಕ್ಕರೆ ಕಾಯಿಲೆ (ಡಯಾಬಿಟೀಸ್), ಅಧಿಕ ರಕ್ತದೊತ್ತಡ (ಬಿ.ಪಿ.) ಮೊದಲಾದುವುಗಳ ಬಗ್ಗೆಯೂ ನಿಗಾ ಅಗತ್ಯ. ಕಾಲಕಾಲಕ್ಕೆ ಇವುಗಳ ತಪಾಸಣೆ ಮಾಡುತ್ತಿರಬೇಕು ಮತ್ತು ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಬೇಕು. ಕ್ಯಾನ್ಸರ್ ತಗುಲಿದ ಕೂಡಲೇ ನಮ್ಮ ಜೀವನದ ಅಂತ್ಯ ಎಂದು ತಿಳಿದುಕೊಳ್ಳಬಾರದು. ಕ್ಯಾನ್ಸರ್ ತಗುಲಿಯೂ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡು ನೆಮ್ಮದಿಯ ಆರೋಗ್ಯವಂತ ಜೀವನ ನಡೆಸುವವರು ಬಹಳಷ್ಟು ಜನ ನಮ್ಮ ನಡುವೆ ಇದ್ದಾರೆ. ಕ್ರಿಕೆಟಿಗ ಯುವರಾಜ್ ಸಿಂಗ್, ಸಿನೆಮಾ ತಾರೆ ಮನೀಷಾ ಕೊಯಿರಾಲಾ ಮುಂತಾದವರೆಲ್ಲಾ ಕ್ಯಾನ್ಸರ್ ಬಂದರೂ ಧೃತಿ ಗೆಡದೇ ಅದನ್ನು ಎದುರಿಸಿ ಗೆದ್ದವರು. 

ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುವ ಸಂಗತಿ ನಿಜವಾದರೂ ಹಲವಾರು ಸಂಘ ಸಂಸ್ಥೆಗಳು, ಸರಕಾರಿ ಆಸ್ಪತ್ರೆಗಳು, ಎನ್ ಜಿ ಓ ಗಳು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಿಕೆ ಹಾಗೂ ಚಿಕಿತ್ಸೆಗೆ ಸಹಕಾರ ನೀಡುತ್ತಿವೆ. ಇವುಗಳ ಸಹಕಾರದೊಂದಿಗೆ ಕ್ಯಾನ್ಸರ್ ಪೀಡಿತ ರೋಗಿಗಳು ಉತ್ತಮ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಬಹುದು. ನಮ್ಮ ಅರಿವಿಗೇ ಬಾರದ ಕ್ಯಾನ್ಸರ್ ಆದರೆ ಏನೂ ಮಾಡಲು ಸಾಧ್ಯವಿಲ್ಲ. ಆದರೆ ನಮ್ಮ ಆಹಾರ ಹಾಗೂ ಅಭ್ಯಾಸಗಳಿಂದ ಬರುವ ಕ್ಯಾನ್ಸರ್ ಅನ್ನು ಬಾರದಿರುವಂತೆ ತಡೆಯಲು ಸಾಧ್ಯವಿದೆ. ಕ್ಯಾನ್ಸರ್ ಬಂತು ಎಂದ ಕೂಡಲೇ ಸಾವು ಬರುವುದಿಲ್ಲ. ಇಂತಹ ರೋಗಿಗಳಲ್ಲಿ ಬದುಕುವ ಭರವಸೆ ತುಂಬಬೇಕು, ಅವರ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು. ಅವರ ಮುಂದಿನ ಬದುಕು ಅರ್ಥಪೂರ್ಣವಾಗುವ ರೀತಿ ನಮ್ಮ ನಡೆ ಇರಬೇಕು.

ಚಿತ್ರ ಕೃಪೆ: ಅಂತರ್ಜಾಲ ತಾಣ