ಕ್ಯಾನ್ಸರ್ ಪೀಡಿತರ ಕಾಳಜಿಗಾಗಿ 'ವಿಶ್ವ ಗುಲಾಬಿ ದಿನ'
ಕ್ಯಾನ್ಸರ್ ಎಂದ ಕೂಡಲೇ ಯಾರದ್ದೇ ಆದರೂ ಎದೆ ಝಲ್ ಎನ್ನುವುದು ಗ್ಯಾರಂಟಿ. ಏಕೆಂದರೆ ಈ ಕಾಯಿಲೆಯೇ ಅಂತಹದ್ದು. ಗೊತ್ತಾಗುವಾಗ ಬಹುತೇಕ ಅಂತಿಮ ಹಂತ ತಲುಪಿರುತ್ತದೆ. ಎಷ್ಟು ಚಿಕಿತ್ಸೆ ನೀಡಿದರೂ ಮತ್ತೆ ಮತ್ತೆ ಬರುವ ಬೇತಾಳನಂತೆ ಕಾಡುತ್ತೆ. ರೋಗಿಯ ಜೀವ ಹಿಂಡುತ್ತೆ, ರೋಗಿಯ ಮತ್ತು ಮನೆಯವರ ಆರ್ಥಿಕ ಹಾಗೂ ಮಾನಸಿಕ ಸ್ಥಿತಿಯನ್ನು ಅಧೋಗತಿಗೆ ತಳ್ಳುತ್ತದೆ. ಈ ಕಾರಣದಿಂದಾಗಿಯೇ ಕ್ಯಾನ್ಸರ್ ಎಂಬ ರೋಗದ ಹೆಸರನ್ನು ಹೇಳಲೂ ಜನ ಭಯಪಡುತ್ತಾರೆ. ಈಗಿನ ನೂತನ ವೈದ್ಯಕೀಯ ತಂತ್ರಜ್ಞಾನಗಳಿಂದ ಹಲವಾರು ಬಗೆಯ ಕ್ಯಾನ್ಸರ್ ಗಳು ಸಂಪೂರ್ಣ ಗುಣವಾಗುತ್ತವೆ. ಅದರೂ ಅದಕ್ಕೆ ತಗಲುವ ವೆಚ್ಚ, ಮಾನಸಿಕ ಹಾಗೂ ದೈಹಿಕ ಕಿರಿಕಿರಿಗಳು ಇವೆಲ್ಲವನ್ನೂ ಗಮನಿಸಿದಾಗ 'ಒಮ್ಮೆ ಸಾವು ಬರಬಾರದೇ...?' ಎಂದು ಅನಿಸುವುದು ಸಹಜ.
ಕ್ಯಾನ್ಸರ್ ರೋಗಿಗಳಲ್ಲಿ ಧೈರ್ಯ, ಪ್ರೀತಿಯನ್ನು ನಿರಂತರವಾಗಿ ತೋರುತ್ತಾ ಬಂದರೆ ಅವರು ಬೇಗನೇ ಚೇತರಿಸಿಕೊಳ್ಳುತ್ತಾರೆ. ರೋಗಿಗಳ ಬಗ್ಗೆ ಕಾಳಜಿಯನ್ನು ವಹಿಸಿ, ಮಾನಸಿಕವಾಗಿ ಧೈರ್ಯ ತುಂಬಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಅವರಲ್ಲಿ ಭರವಸೆ ಮೂಡಿಸಿದರೆ ಅವರ ಮನೋಧೈರ್ಯ ವೃದ್ಧಿಹೊಂದಿ ನಿಧಾನವಾಗಿ ಚೇತರಿಸಿಕೊಳ್ಳುತ್ತಾರೆ ಎಂಬುವುದನ್ನು ವೈದ್ಯರೂ ಧೃಢಪಡಿಸುತ್ತಾರೆ. ಒಂದೆರಡು ತಿಂಗಳಲ್ಲಿ ಸಾಯಬಹುದಾದ ಕ್ಯಾನ್ಸರ್ ರೋಗಿ ವರ್ಷಗಟ್ಟಲೆ ಆರೋಗ್ಯಕರವಾದ ಜೀವನವನ್ನು ಸಾಗಿಸುತ್ತಾರೆ. ಇದಕ್ಕೆ ಅಗತ್ಯವಾದದ್ದು ನಾವು ತುಂಬುವ ಧೈರ್ಯ ಹಾಗೂ ಕಾಳಜಿ.
ಸೆಪ್ಟೆಂಬರ್ ೨೨ನ್ನು 'ವಿಶ್ವ ಗುಲಾಬಿ ದಿನ' (World Rose Day) ಎಂದು ಆಚರಿಸಲಾಗುತ್ತದೆ. ಇದಕ್ಕೆ ಕಾರಣ ಕೆನಡಾದ ಮೆಲಿಂಡಾ ರೋಸ್ ಎಂಬ ಬಾಲಕಿ ಹಾಗೂ ಆಕೆಯ ಮನೋಸ್ಥೈರ್ಯ. ಮೆಲಿಂಡಾ ರೋಸ್ ಯಾರು ಎಂಬ ಸಂಶಯ ನಿಮ್ಮ ಮನಸ್ಸಿನಲ್ಲಿರಬಹುದಲ್ಲವೇ? ಈಕೆ ಕೆನಡಾ ದೇಶದಲ್ಲಿ ವಾಸಿಸುತ್ತಿದ್ದ ಓರ್ವ ಬಾಲಕಿ. ಈಕೆಗೆ ೧೨ ವರ್ಷ ತುಂಬಿದ ಸಮಯದಲ್ಲಿ ಕ್ಯಾನ್ಸರ್ ಇದೆ ಎಂದು ತಿಳಿದಾಗ ಅದು ಅಂತಿಮ ಹಂತ ಮುಟ್ಟಿಯಾಗಿತ್ತು. ವೈದ್ಯರೂ ಸಹ ಈಕೆ ಹೆಚ್ಚೆಂದರೆ ಒಂದೆರಡು ವಾರಗಳ ಕಾಲ ಬದುಕಬಹುದು ಎಂದು ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದರು. ಆದರೆ ತನ್ನ ಅದಮ್ಯವಾದ ಧೈರ್ಯದಿಂದ ಈಕೆ ೬ ತಿಂಗಳು ಬದುಕಿ ವೈದ್ಯ ಜಗತ್ತಿಗೇ ಅಚ್ಚರಿಯನ್ನು ಮೂಡಿಸಿದಳು. ತನಗಿನ್ನು ಹೆಚ್ಚು ದಿನಗಳಿಲ್ಲ ಎಂದು ತಿಳಿದ ಬಳಿಕವೂ ಮೆಲಿಂಡಾ ಅಳುತ್ತಾ ಕೂರಲಿಲ್ಲ, ತನ್ನ ವಯಸ್ಸಿಗೂ ಮೀರಿದ ಪ್ರಬುದ್ಧತೆಯಿಂದ ಬದುಕಿ ತೋರಿಸಿದಳು. ಆಕೆ ಕ್ಯಾನ್ಸರ್ ಪೀಡಿತರನ್ನು ಪ್ರೋತ್ಸಾಹಿಸಲು ಹಲವಾರು ಕವನ, ಕಥೆ ಹಾಗೂ ಸ್ಪೂರ್ತಿದಾಯಕ ಪತ್ರಗಳನ್ನು ಬರೆದಳು. ತನ್ನ ಬದುಕು ಅಂತ್ಯವಾದರೂ ಅನೇಕ ಕ್ಯಾನ್ಸರ್ ಪೀಡಿತರಿಗೆ ಸ್ಪೂರ್ತಿಯಾಗುವಂತೆ ಬದುಕಿ ತೋರಿಸಿದಳು. ಈ ಕಾರಣದಿಂದಲೇ ಆಕೆಯ ಜನ್ಮದಿನವಾದ ಸೆಪ್ಟೆಂಬರ್ ೨೨ನ್ನು ಕ್ಯಾನ್ಸರ್ ಪೀಡಿತರಿಗೆ ಕಾಳಜಿಯನ್ನು ತೋರಿಸುವ 'ರೋಸ್ ಡೇ' ಎಂದು ಆಚರಿಸಲಾಗುತ್ತದೆ.
ಮೆಲಿಂಡಾ ರೋಸ್ ಹೆಸರಿನಲ್ಲಿ ರೋಸ್ ಇರುವುದರಿಂದ ರೋಸ್ ಡೇ ಎಂದು ಆಚರಿಸಲಾಯಿತೇ? ಈ ಬಗ್ಗೆ ದ್ವಂದ್ವಗಳಿವೆ. ಆದರೆ ಗುಲಾಬಿಯನ್ನು ಅಂದರೆ ಹೂವನ್ನು ನೀಡುವುದರ ಮೂಲಕ ಬೇಗನೇ ಗುಣಮುಖರಾಗಿ (Get Well Soon) ಎನ್ನುವ ಸಂಪ್ರದಾಯ ಹಲವಾರು ದೇಶಗಳಲ್ಲಿವೆ. ಈ ಕಾರಣದಿಂದಲೂ ಗುಲಾಬಿ ದಿನವನ್ನಾಗಿ ಆಚರಣೆ ಮಾಡುವ ಕ್ರಮ ಜಾರಿಗೆ ಬಂದಿರಬಹುದು. ಕ್ಯಾನ್ಸರ್ ಪೀಡಿತ ರೋಗಿಯೊಬ್ಬರಿಗೆ ಗುಲಾಬಿ ಹೂವು ನೀಡಿ ಒಂದೆರಡು ಧೈರ್ಯ ತುಂಬುವ ಮಾತುಗಳನ್ನಾಡಿದರೆ ಆ ವ್ಯಕ್ತಿ ನಿಜಕ್ಕೂ ಅಭದ್ರತೆಯ ಭಾವನೆಯಿಂದ ಹೊರಬರುತ್ತಾನೆ. ಇನ್ನಷ್ಟು ಬದುಕಬೇಕೆಂಬ ಆಸೆ ಅವನಿಗಾಗುತ್ತದೆ. ಇದರಿಂದ ಆತ ಇನ್ನಷ್ಟು ದಿನ ಬದುಕಲು ಹೋರಾಟ ಮಾಡುತ್ತಾನೆ. ಗುಣಮುಖನಾಗುವ ಸಾಧ್ಯತೆಯೂ ಇದೆ.
ಈ ಹಿಂದೆ ಕ್ಯಾನ್ಸರ್ ಶಮನ ಔಷಧಿಗಳು ಬಹಳ ದುಬಾರಿಯಾಗಿದ್ದವು. ಆದರೆ ಈಗ ಕೇಂದ್ರ ಸರಕಾರವು ಈ ಔಷಧಿಗಳನ್ನು ಅತ್ಯಗತ್ಯ ಔಷಧಿಗಳ ಪಟ್ಟಿಗೆ ಸೇರಿಸಿರುವುದರಿಂದ ಅವುಗಳು ಬಹಳಷ್ಟು ಕಡಿಮೆ ಬೆಲೆಯಲ್ಲಿ ಸಿಗುತ್ತಿವೆ. ಇದರಿಂದಾಗಿ ಕ್ಯಾನ್ಸರ್ ಚಿಕಿತ್ಸೆಯ ನೋವಿನ ಜೊತೆ ಆರ್ಥಿಕವಾಗಿ ಇನ್ನಷ್ಟು ಸಂಕಷ್ಟಕ್ಕೆ ಬೀಳುವುದು ಬಹು ಮಟ್ಟಿಗೆ ತಗ್ಗಲಿದೆ. ಔಷಧದ ಬೆಲೆಯನ್ನು ತೆರಲಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಸಮಸ್ಯೆಗೆ ಬಹಳಷ್ಟು ಬ್ರೇಕ್ ಬೀಳಲಿದೆ. ಈ ನಿಟ್ಟಿನಲ್ಲಿ ಸರಕಾರ ಕೈಗೊಂಡ ಈ ಕ್ರಮವು ಬಹಳಷ್ಟು ಶ್ಲಾಘನೀಯವಾಗಿದೆ.
ಭಾರತ ದೇಶದಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ೧೫ ಲಕ್ಷದಷ್ಟಿದೆ. ಮೇಘಾಲಯದಲ್ಲಿ ಗರಿಷ್ಟ ಪ್ರಮಾಣದಲ್ಲಿ ಕ್ಯಾನ್ಸರ್ ಪೀಡಿತರು ಇದ್ದಾರೆ. ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಅಮೇರಿಕಾ ದೇಶಗಳಲ್ಲಿ ಭಾರತಕ್ಕಿಂತಲೂ ಅಧಿಕ ಪ್ರಮಾಣದ ಕ್ಯಾನ್ಸರ್ ಪೀಡಿತರನ್ನು ನಾವು ಕಾಣಬಹುದಾಗಿದೆ. ಮಾನವರಲ್ಲಿ ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ದೊಡ್ಡ ಕರುಳು, ಚರ್ಮ, ಹೊಟ್ಟೆ, ರಕ್ತ ಹೀಗೆ ಹಲವಾರು ಬಗೆಯ ಕ್ಯಾನ್ಸರ್ ಗಳು ಕಾಣಸಿಗುತ್ತವೆ. ಕೆಲವು ಕ್ಯಾನ್ಸರ್ ಗಳು ನಮ್ಮ ಆಹಾರ ಪದ್ಧತಿಯಿಂದ ಬಂದರೆ, ಕೆಲವು ಅನುವಂಶೀಯವಾಗಿಯೂ ಬರುವ ಸಾಧ್ಯತೆ ಇದೆ. ಗುಟಕಾ, ತಂಬಾಕು ಸೇವನೆಯಿಂದ ಬಾಯಿ, ಗಂಟಲು ಕ್ಯಾನ್ಸರ್ ಬಂದರೆ ಬೀಡಿ, ಸಿಗರೇಟು ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ.
ಕ್ಯಾನ್ಸರ್ ಪೀಡಿತರಿಗೆ ನಮ್ಮ ಸಾಂತ್ವನದ ಅಗತ್ಯತೆ ಬಹಳ ಇದೆ. ಅದರಲ್ಲೂ ಪೀಡಿತರು ಪುಟ್ಟ ಮಕ್ಕಳಾದರೆ ನಾವು ಅವರ ಜೊತೆ ಒಂದು ದಿನ ಕಳೆಯ ಬಹುದು. ಅವರೊಂದಿಗೆ ಆಟವಾಡಿ, ಪುಟ್ಟ ಉಡುಗೊರೆ ನೀಡಿ ಅವರನ್ನು ಖುಷಿ ಪಡಿಸಬಹುದು. ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುತ್ತಿರುವ ಸ್ವಯಂ ಸೇವಾ ಸಂಘಟನೆಗಳ ಜೊತೆ ಸೇರಿ ಬಿಡುವಿದ್ದಾಗಲೆಲ್ಲಾ ಅವರು ನಡೆಸುವ ಉತ್ತಮ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಮುಂದಿನ ವರ್ಷ 'ಗುಲಾಬಿ ದಿನ' ಬಂದಾಗ ಖಂಡಿತವಾಗಿಯೂ ನೀವು ಓರ್ವ ಕ್ಯಾನ್ಸರ್ ಪೀಡಿತರನ್ನು ಭೇಟಿಯಾಗಿ ಪ್ರೀತಿ, ಕಾಳಜಿ ತೋರುವಿರಲ್ಲವೇ...?
ಚಿತ್ರ ಕೃಪೆ: ಅಂತರ್ಜಾಲ ತಾಣ