ಕ್ಯಾಮರಾ ಮೀಟರಿಂಗ್

ಕ್ಯಾಮರಾ ಮೀಟರಿಂಗ್

ಬರಹ

Aperture, Shutter Speed, ISOಗಳನ್ನು ಉಪಯೋಗಿಸಿಕೊಂಡು ಛಾಯಾಗ್ರಹಣದಲ್ಲಿ ಬೆಳಕನ್ನು ನಿಯಂತ್ರಿಸಬಹುದು. ಚಿತ್ರಕ್ಕೆ ಎಷ್ಟು ಬೆಳಕು ಬೇಕು ಎಂಬುದನ್ನು ಕ್ಯಾಮರಾದ ಮೀಟರಿಂಗ್ ಸೂಚಿಸುತ್ತದೆ. ಸಾಮಾನ್ಯವಾಗಿ ಕ್ಯಾಮರಾದಲ್ಲಿ ೦.೩, ೦.೪ ಮಧ್ಯಂತರದಲ್ಲಿ -೨.೦ ರಿಂದ ೨.೦ ವರೆಗೆ ಮೀಟರಿಂಗ್ ಗುರುತು ಇರುತ್ತದೆ. ಅಂದರೆ -೨.೦, -೧.೭, -೧.೩,-೧.೦, -೦.೭, -೦.೩, ೦, ೦.೩, ೦.೭, ೧.೦, ೧.೩, ೧.೭, ೨.೦ ಎಂದು ಗುರುತಿರುವ ಸ್ಕೇಲಿನಂತೆ ಇರುತ್ತದೆ. ಇಲ್ಲಿ ಮೀಟರಿಂಗ್ ಬೆಲೆ ಋಣಾತ್ಮಕ ಸಂಖ್ಯೆ ತೋರಿಸುತ್ತಿದ್ದರೆ ನಿಮ್ಮ ಚಿತ್ರ ಅಂಡರ್ ಎಕ್ಸ್-ಫೋಸಾಗಿದೆಯೆಂದೂ, ಧನಾತ್ಮಕ ಬೆಲೆ ಸೂಚಿಸುತ್ತಿದ್ದರೆ ಓವರ್-ಎಕ್ಸ್-ಪೋಸಾಗಿದೆಯೆಂದೂ, ೦ ಸೂಚಿಸುತ್ತಿದ್ದರೆ ಸರಿಯಾಗಿ ಎಕ್ಸ್-ಪೋಸಾಗಿದೆಯೆಂದು ಸೂಚಿಸುತ್ತದೆ.

ಲ್ಯಾಂಡ್-ಸ್ಕೇಪುಗಳಂತೆ ಇಡೀ ಚಿತ್ರವೇ ನಿಮ್ಮ ವಿಷಯವಾಗಿರಬಹುದು ಅಥವಾ ಪೋರ್ಟ್ರೈಟ್, ಮಾಕ್ರೋಗಳಂತೆ ಚಿತ್ರದ ಕೆಲವು ಭಾಗ ಮಾತ್ರ ನಿಮ್ಮ ವಿಷಯವಾಗಿರಬಹುದು. ಅಂದರೆ ಕೆಲವೊಮ್ಮೆ ಇಡೀ ಚಿತ್ರ ಸರಿಯಾಗಿ ಎಕ್ಸ್-ಪೋಸ್ ಆಗಿದೆಯೇ ನೋಡಿಕೊಳ್ಳಬೇಕು, ಇನ್ನು ಕೆಲವೊಮ್ಮೆ ಚಿತ್ರದ ಕೆಲವು ಭಾಗ ಮಾತ್ರ ಸರಿಯಾಗಿ ಎಕ್ಸ್-ಪೋಸ್ ಆಗಿದೆಯೇ ನೋಡಿಕೊಳ್ಳಬೇಕು. ಈ ಅನುಕೂಲಕ್ಕಾಗಿ ಸಾಮಾನ್ಯ ಕ್ಯಾಮರಾದಲ್ಲಿ ಮಾಟ್ರಿಕ್ಸ್, ಸೆಂಟರ್ ವೈಟೆಡ್, ಕ್ರಾಸ್ ಹೈರ್ ಮೊದಲಾದ ಮೀಟರಿಂಗ್ ಮೋಡುಗಳಿರುತ್ತವೆ. ಈಗ ಈ ಮೀಟರಿಂಗ್ ಮೋಡಿನ ವಿಧ ಮತ್ತು ಉಪಯೋಗವನ್ನು ತಿಳಿದುಕೊಳ್ಳೋಣ.

ಮ್ಯಾಟ್ರಿಕ್ಸ್ ಮೀಟರಿಂಗ್ ಮೋಡ್:

ಮ್ಯಾಟ್ರಿಕ್ಸ್ ಮೀಟರಿಂಗ್ ಮೋಡು ಚಿತ್ರದ ಚೌಕಟ್ಟಿನೊಳಗಿರುವ ಬೇರೆ ಬೇರೆ ಭಾಗಗಳಲ್ಲಿನ ಬೆಳಕಿನ ತೀವ್ರತೆಯನ್ನು ಅಳೆದು, ಈ ಅಳತೆಯನ್ನು ಸರಾಸರಿಯಂತೆ ಒಂದುಗೂಡಿಸಿ ಚಿತ್ರಕ್ಕೆ ಬೇಕಾದ ಒಟ್ಟು ಬೆಳಕಿನ ಪ್ರಮಾಣವನ್ನು ಸೂಚಿಸುತ್ತದೆ.

ಈ ಮೇಲಿನ ಲ್ಯಾಂಡ್-ಸ್ಕೇಪಿನಲ್ಲಿ ಮುನ್ನೆಲೆಯ ಗುಡ್ಡ ಮರ, ನಡುನೆಲೆಯ ಗುಡ್ಡ, ಹಿನ್ನೆಲೆಯ ಚಂದ್ರನನ್ನೊಳಗೊಂಡ ಆಗಸ ಒಟ್ಟಿನಲ್ಲಿ ನಿಸರ್ಗವು ನನ್ನ ವಿಷಯವಾದ್ದರಿಂದ ಎಲ್ಲವನ್ನೂ ಸರಿಯಾಗಿ ಎಕ್ಸ್-ಪೋಸ್ ಮಾಡಲು ಮ್ಯಾಟ್ರಿಕ್ಸ್ ಮೀಟರಿಂಗ್ ಬಳಸಿದ್ದೇನೆ. ಹೆಚ್ಚಿನ ಕ್ಯಾಮರಾದಲ್ಲಿ ಇದು ಸಾಮಾನ್ಯವಾಗಿ ಆಯ್ಕೆಯಾಗಿರುವ ಮೀಟರಿಂಗ್ ಮೋಡ್.

ಸೆಂಟರ್ ವೈಟೆಡ್ ಮೀಟರಿಂಗ್ ಮೋಡ್:

ಸೆಂಟರ್ ವೈಟೆಡ್ ಮೀಟರಿಂಗ್ ಮೋಡು ಮ್ಯಾಟ್ರಿಕ್ಸ್ ಮೀಟರಿಂಗಿನಂತೆಯೇ ಚಿತ್ರದ ಚೌಕಟ್ಟಿನೊಳಗಿನ ಹಲವು ಭಾಗಗಳಲ್ಲಿನ ಬೆಳಕಿನ ತೀವ್ರತೆಯನ್ನು ಅಳೆಯುವುದಾದರೂ ಮಧ್ಯಭಾಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ.

ಈ ಮೇಲಿನ ಚಿತ್ರವನ್ನು ಹೋಟೆಲಿನ ಒಳಗಡೆಯಿಂದ ತೆಗೆದದ್ದು. ಮಧ್ಯಾಹ್ನದ ಸಮಯವಾದ್ದರಿಂದ ಹೊರಗಡೆ ಪ್ರಖರ ಬೆಳಕು ಮತ್ತು ಹೋಟೆಲಿನ ಒಳಗಡೆ ಕಡಿಮೆ ಬೆಳಕಿತ್ತು. ಅಂದರೆ ಒಳಗಡೆಯ ಮತ್ತು ಹೊರಗಡೆಯ ಬೆಳಕಿನ ವ್ಯತ್ಯಾಸ ಜಾಸ್ತಿ ಇತ್ತು. ಇಲ್ಲಿ ನನ್ನ ವಿಷಯ ಜನರಾಗಿದ್ದು, ಮ್ಯಾಟ್ರಿಕ್ಸ್ ಮೀಟರಿಂಗ್ ಉಪಯೋಗಿಸಿದಲ್ಲಿ ಅಂಡರ್-ಎಕ್ಸ್-ಪೋಸಾಗುವ ಸಾಧ್ಯತೆ ಇತ್ತು. ಆದ್ದರಿಂದ ಮೀಟರಿಂಗ್ ಮೋಡನ್ನು ಸೆಂಟರ್ ವೈಟೆಡ್ಗೆ ಬದಲಿಸಿ, ನನ್ನ ವಿಷಯದ ಮೇಲೆ ಬೀಳುತ್ತಿರುವ ಬೆಳಕನ್ನು ಅಳೆದು, ಮರು ಸಂಯೋಜಿಸಿ ತೆಗೆದೆ. ಇಲ್ಲಿ ವಿಷಯ ಸರಿಯಾಗಿ ಎಕ್ಸ್-ಪೋಸಾಗಿದ್ದು, ಹಿನ್ನೆಲೆ ಓವರ್-ಎಕ್ಸ್-ಪೋಸಾಗಿದ್ದು ಗಮನಿಸಬಹುದು.

ಕ್ರಾಸ್ ಹೇರ್ (ಸ್ಪಾಟ್) ಮೀಟರಿಂಗ್ ಮೋಡ್:

ಮೇಲಿನೆರಡು ಮೀಟರಿಂಗ್ ಮೋಡುಗಳಿಗೆ ಭಿನ್ನವಾಗಿ ಕ್ರಾಸ್ ಹೇರ್ ಮೀಟರಿಂಗ್ ಮೋಡಿನಲ್ಲಿ ಚಿತ್ರದ ಚೌಕಟ್ಟಿನ ಒಂದು ಭಾಗದ (ಸಾಮಾನ್ಯವಗಿ ಮಧ್ಯ ಭಾಗದ) ಬೆಳಕಿನ ಪ್ರಮಾಣವನ್ನು ಮಾತ್ರ ಪರಿಗಣಿಸುತ್ತದೆ. ಬೆಳಕಿನ ವ್ಯತ್ಯಾಸ ತುಂಬಾ ವ್ಯತಿರಿಕ್ತವಾಗಿದ್ದ ಪಕ್ಷದಲ್ಲಿ ಇದನ್ನು ಉಪಯೋಗಿಸಬಹುದು.

ಈ ಮೇಲಿನ ಚಿತ್ರದಲ್ಲಿ ಬೆಳಕು ವಿಶಿಷ್ಟವಾಗಿದ್ದು ನನ್ನ ವಿಷಯದ ಮೇಲೆ ಅದರ ಪ್ರಮಾಣ ಅನಿರ್ಧಿಷ್ಟವಾಗಿ ಹರಡಿದೆ. ಮ್ಯಾಟ್ರಿಕ್ಸ್ ಮೀಟರಿಂಗ್ ಉಪಯೋಗಿಸಿದ್ದಲ್ಲಿ ಮುಖದ ಕೆಲವು ಭಾಗ ಓವರ್-ಎಕ್ಸ್-ಪೋಸಾಗಿ ಉಳಿದ ಭಾಗ ಸರಿಯಾಗಿ ಎಕ್ಸ್-ಪೋಸಾಗುತ್ತಿತ್ತು. ಅದೂ ಅಲ್ಲದೇ ಹಿನ್ನೆಲೆ ಸಂಪೂರ್ಣ ಕತ್ತಲಾಗಿದ್ದುದರಿಂದ ಬೆಳಕಿನ ಪ್ರಮಾಣವನ್ನು ತಪ್ಪಾಗಿ ಅಳೆಯುವ ಸಾಧ್ಯತೆ ಇತ್ತು. ಆದ್ದರಿಂದ ಕ್ರಾಸ್ ಹೇರ್ ಮೀಟರಿಂಗ್ ಮೋಡ್ ಬಳಸಿ ನನಗೆ ಬೇಕಾದ ಮುಖದ ಭಾಗದ ಬೆಳಕನ್ನು ಅಳೆದು ಮರು ಸಂಯೋಜಿಸಿ ತೆಗೆದೆ. ಬೆಳಕನ್ನು ಅಳೆಯುವಲ್ಲಿ ಹಿನ್ನೆಲೆಯನ್ನು ಕಡೆಗಣಿಸಿದ್ದು, ಹಿನ್ನೆಲೆ ಸಂಪೂರ್ಣ ಕತ್ತಲಿರುವುದನ್ನು ಗಮನಿಸಬಹುದು.

ಇದೇ ರೀತಿ ಈ ಮೇಲಿನ ಚಂದ್ರನ ಚಿತ್ರ ಕೂಡ ಕ್ರಾಸ್ ಹೇರ್ ಮೀಟರಿಂಗ್ ಉಪಯೋಗಿಸಿ ತೆಗೆದದ್ದು. ಇಲ್ಲಿಯೂ ಚಂದ್ರನ ಸುತ್ತಲಿನ ಆಗಸಕ್ಕೂ ಚಂದ್ರನಿಗೂ ಇರುವ ಬೆಳಕಿನ ವ್ಯತ್ಯಾಸ ಅಧಿಕ.

ಲ್ಯಾಂಡ್-ಸ್ಕೇಪು, ಪೋರ್ಟ್ರೈಟ್ ಉದಾಹರಣೆಗೆ ಕೊಟ್ಟಿದ್ದಷ್ಟೆ. ಇದರರ್ಥ ಲ್ಯಾಂಡ್-ಸ್ಕೇಪುಗಳಿಗೆ ಕೇವಲ ಮ್ಯಾಟ್ರಿಕ್ಸ್ ಮೀಟರಿಂಗ್ ಮೋಡ್ ಮತ್ತು ಪೋರ್ಟ್ರೈಟ್ಗಳಿಗೆ ಕೇವಲ ಸೆಂಟರ್ ವೈಟೆಡ್/ ಕ್ರಾಸ್ ಹೇರ್ ಮೀಟರಿಂಗ್ ಮೋಡ್ ಉಪಯೋಗಿಸಬೇಕೆಂದಲ್ಲ.ಬೆಳಕಿನ ವ್ಯತ್ಯಾಸಕ್ಕೆ, ವಿಷಯಕ್ಕೆ ಅನುಗುಣವಾಗಿ ಈ ಮೇಲಿನ ವಿವಿಧ ಮೀಟರಿಂಗ್ ಮೋಡುಗಳನ್ನು ಬಳಸಿಕೊಳ್ಳಬಹುದು. ಹೆಚ್ಚಿನ ಛಾಯಾಗ್ರಾಹಕರು ಪೋರ್ಟ್ರೈಟ್ಗಳಿಗೆ ಸೆಂಟರ್ ವೈಟೆಡ್ ಅಥವಾ ಕ್ರಾಸ್ ಹೇರ್ ಮೀಟರಿಂಗ್ ಮೋಡ್ ಬಳಸುವರು.

ಚಿತ್ರ ಕೃಪೆ: ಪಾಲ