ಕ್ಯಾಲಿಫೋರ್ನಿಯಾ ಒಂದು ಹಚ್ಚ-ಹೊಸ ಕಾಲೋನಿಯೇನೋ ಎನ್ನುವ ಭ್ರಮೆ ಯಾರಿಗಾದರೂ ಆದರೆ, ಆಶ್ಚರ್ಯವೇನಲ್ಲ !

ಕ್ಯಾಲಿಫೋರ್ನಿಯಾ ಒಂದು ಹಚ್ಚ-ಹೊಸ ಕಾಲೋನಿಯೇನೋ ಎನ್ನುವ ಭ್ರಮೆ ಯಾರಿಗಾದರೂ ಆದರೆ, ಆಶ್ಚರ್ಯವೇನಲ್ಲ !

ಬರಹ

ಪ್ರಕೃತಿದೇವಿಯ ಸೃಷ್ಟಿಯಲ್ಲಿ, ಒಬ್ಬ ನವವಧುವಿನ ಸಿಂಗಾರ, ಸಂಭ್ರಮವನ್ನು ಕಾಣಬೇಕಾದರೆ, ನಾವು ’ಕ್ಯಾಲಿಫೋರ್ನಿಯಕ್ಕೆ ಹೋಗಲೇ ಬೇಕು. ಈ ರಾಜ್ಯ ಅಸ್ತಿತ್ವಕ್ಕೆ ಬಂದು ಅದೆಷ್ಟೋ ವರ್ಷವಾದಾಗ್ಯೂ, ಅದು ಇಂದಿಗೂ ತನ್ನ ತಾಜಾ ಹವಾಮಾನ, ಪ್ರಕೃತಿ ಸೌಂದರ್ಯಗಳಿಂದ ನಳ-ನಳಿಸುತ್ತಿದೆ. ನಾವಿದ್ದ ಕಾಸ್ಟಾಮೆಸ ನಗರವನ್ನೇ ತೆಗೆದುಕೊಂಡರೆ, ಅದೆಷ್ಟು ವಿಶ್ವದ ಪ್ರಮುಖ-ಕಾರ್ಯಾಲಯಗಳ ಪ್ರಮುಖ-ಕೇಂದ್ರಗಳಿವೆ ಅಲ್ಲಿ ; ಒಂದೇ ಎರಡೇ ? ಮತ್ತೆ ಹೊಸದಾಗಿ ಕಟ್ಟಲು ಯಾವ ಆಸೆಯನ್ನೂ ಕೊಡದೆ, ಎಲ್ಲವನ್ನೂ ಸುವ್ಯವಸ್ಥಿತವಾಗಿ, ’ಯಿಯರ್ ಮಾರ್ಕ್,’ ಮಾಡಿ, ಭವ್ಯವಾಗಿ ನಗರ ನಿರ್ಮಾಣಮಾಡಿದ ಹಿರಿಯ ಅಧಿಕಾರಿಗಳಿಗೆ, ವಂದಿಸಬೇಕು.

ಭಾರಿ-ಭಾರಿ ಹೋಟೆಲ್ ಗಳು, ಸಾಫ್ಟ್ವೇರ್ ಕಂಪೆನಿಗಳು, ಮಾಲ್ ಗಳು, ಸೊಗಸಾದ ಬೀಚ್ ಗಳು, ಆರ್ಟ್ ಗ್ಯಾಲರಿಗಳು, ಪರ್ಫಾರ್ಮಿಂಗ್ ಸಭಾಗೃಹಗಳು, ಕಾರ್ ಪಾರ್ಕಿಂಗ್ ವ್ಯವಸ್ಥೆಗಳು, ಹತ್ತಿರದ, ’ಜಾನ್ ವೇನ್ ವಿಮಾನನಿಲ್ದಾಣ, ಸ್ವಲ್ಪಹೋದರೆ, ’ಲಾಸ್ ಎಂಜಲೀಸ್ ಅಂತಾರಾಷ್ಟ್ರೀಯ ಹವಾಯಿ ಅಡ್ಡೆ’, ಎಲ್ಲಿನೋಡಿದರಲ್ಲಿ ನೀರಿನ ಕಾರಂಜಿಗಳು, ಹಚ್ಚಾದ ಲಾನ್ ಗಳು, ನೀಲಗಿರಿ, ಮುಂತಾದ ದಷ್ಟಪುಷ್ಟವಾಗಿ ಮುಗಿಲೆತ್ತರ ಬೆಳೆದುನಿಂತ ವೃಕ್ಷಗಳು, ಭೂಕಂಪದ ಅನುಭವ ಪ್ರತಿಕ್ಷಣದಲ್ಲಿದ್ದರೂ ಕಂಗೆಡದೆ, ನಿರ್ಮಿಸಿದ ’ಸ್ಕೈಸ್ಕ್ರಾಪರ್ ಗಳು, ನಮ್ಮನ್ನು ಮಂತ್ರಮುಗ್ಧರನ್ನಾಗಿ ಮಾಡಿಬಿಡುತ್ತವೆ.

ಎಷ್ಟೊಂದು ಜಾಗವಿದೆಯೆಂದರೆ, ಅನೇಕ ಪ್ರಮುಖಕಾರ್ಯಾಲಯಗಳಿಗೆ ಕಾಂಪೌಂಡೇ ಕಟ್ಟಿಲ್ಲ. ರಸ್ತೆಯ ಫುಟ್ಪಾತ್ ನಮೇಲೆ ಹೋದಾಗ, ನಯನಮನೋಹರವಾದ ಬಣ್ಣ-ಬಣ್ಣದ ಹೂಗಳನ್ನು ನಾವು ಮುಟ್ಟಬಹುದು, ಆ ಹೂವಿನ ಗಿಡಗಳಲ್ಲಿ, ಒಂದೋ-ಎರಡೋ ಎಲೆ, ಆದರೆ ಗಿಡದತುಂಬಾ ಹೂಗಳು ! ನೋಡಲು ಸ್ವರ್ಗ. ಪೊದೆಯಂತೆ ಬೆಳೆದು ಹರಡಿಕೊಂಡ ಈ ಗಿಡಗಳು ವರ್ಷವೆಲ್ಲಾ ಹೀಗೆಯೇ ಇರುವುದಾಗಿ ತಿಳಿದುಬಂತು. ಅಮೆರಿಕದ ಪ್ರಚಂಡ ’ವಿಂಟರ್,’ ಇವಕ್ಕೆ ಎನೂ ಮಾಡುವುದಿಲ್ಲವಂತೆ ! ಅಷ್ಟಕ್ಕು’ ಕ್ಯಾಲಿಫೋರ್ನಿಯ ಈಸ್ ಡಿಫರೆಂಟ್,’ ಅನ್ನೋ ಮಾತು, ಅಲ್ಲೆಲ್ಲಾ ಕೇಳಿಬರುತ್ತಿತ್ತು. ಭಾರತೀಯ ಬಂಧುಗಳೆಲ್ಲಾ ತಮ್ಮ ಪಂಚೆ, ಧೋತಿ, ಚಡ್ಡಿ, ಇಲ್ಲವೇ ಬರ್ಮುಡಾ ಗಳನ್ನು ಧರಿಸಿ, ’ ಬಿಂದಾಸ್,’ ಸುತ್ತಾಡುತ್ತಿದ್ದ ದೃಷ್ಯ, ಎಲ್ಲರ ಗಮನವನ್ನೂ ಸೆಳೆದಿತ್ತು !

-ಚಿತ್ರ-ವೆಂ