ಕ್ಯಾಲ್ಸಿಯಂ ಕೊರತೆ ತುಂಬಲು ಈ ಆಹಾರಗಳನ್ನು ಸೇವಿಸಿ

ಕ್ಯಾಲ್ಸಿಯಂ ಕೊರತೆ ತುಂಬಲು ಈ ಆಹಾರಗಳನ್ನು ಸೇವಿಸಿ

ನಮ್ಮ ಮೂಳೆಗಳು ಮತ್ತು ಹಲ್ಲುಗಳು ಶಕ್ತಿಶಾಲಿಯಾಗಿ, ಬಲವಂತವಾಗಿ ಉಳಿಯಬೇಕಾದರೆ ಅದಕ್ಕೆ ಬೇಕಾದ ಮುಖ್ಯ ಅಂಶ ಕ್ಯಾಲ್ಸಿಯಂ. ಕ್ಯಾಲ್ಸಿಯಂ ಪ್ರಮಾಣ ನಿಮ್ಮ ದೇಹದಲ್ಲಿ ಸರಿಯಾಗಿದ್ದರೆ ನಿಮ್ಮ ಮೂಳೆಗಳ ಆರೋಗ್ಯ ಸರಿಯಾಗಿರುತ್ತದೆ. ಇಲ್ಲವಾದಲ್ಲಿ ಮೂಳೆಗಳು ಹಾಗೂ ಹಲ್ಲುಗಳು ಬೇಗನೇ ಸವೆಯುವುದು, ಮುರಿಯುವುದು, ಮುರಿದ ಮೂಳೆ ಬೇಗನೇ ಜೋಡಣೆಯಾಗದೇ ಇರುವ ಸಮಸ್ಯೆಗಳು ಕಾಡಲು ಆರಂಭವಾಗುತ್ತದೆ. ಕ್ಯಾಲ್ಸಿಯಂ ಎಂಬ ಖನಿಜಾಂಶ ನಮ್ಮ ದೇಹದಲ್ಲಿನ ವಿವಿಧ ಚಟುವಟಿಕೆಗಳಿಗೂ ನೆರವಾಗುತ್ತವೆ. ಮಾಂಸ ಖಂಡಗಳಲ್ಲಿ ರಕ್ತ ಸಂಚಲನೆ, ನರಮಂಡಲಗಳ ವ್ಯವಸ್ಥೆ, ರಕ್ತ ಹೆಪ್ಪುಗಟ್ಟುವುದು, ಜೀವಕೋಶಗಳ ಸಂವಹನ ಮುಂತಾದ ಚಟುವಟಿಕೆಗಳಿಗೆ ಕ್ಯಾಲ್ಸಿಯಂ ಬಹಳ ಅಗತ್ಯವಿರುತ್ತದೆ.

ಕ್ಯಾಲ್ಸಿಯಂ ಕೊರತೆಯಾದಾಗ ಈಗ ಬಹಳಷ್ಟು ಮಂದಿ ಮಾತ್ರೆಗಳ ಮೊರೆಹೋಗುತ್ತಾರೆ. ಆ ಮಾತ್ರೆಗಳ ಅಡ್ಡ ಪರಿಣಾಮದಿಂದ ತೂಕದಲ್ಲಿ ಹೆಚ್ಚಳ, ಹಸಿವಾಗದಿರುವುದು ಮೊದಲಾದ ಲಕ್ಷಣಗಳು ಕಾಣಿಸತೊಡಗುತ್ತವೆ. ಇದಕ್ಕಾಗಿ ನಾವು ನಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಅಂಶವನ್ನು ನಮ್ಮ ದೇಹಕ್ಕೆ ಒದಗಿಸುವ ಆಹಾರ ಪದಾರ್ಥಗಳನ್ನು ಬಳಸಬೇಕು. ಆ ಆಹಾರ ಪದಾರ್ಥಗಳಲ್ಲಿ ಪ್ರಮುಖವಾದದ್ದು ನಿಮಗೆ ತಿಳಿದೇ ಇರುವಂತೆ ಹಾಲು. ಅದರಲ್ಲೂ ಪುಟ್ಟ ಮಕ್ಕಳಿಗೆ ತಾಯಿಯ ಎದೆ ಹಾಲು ಅತ್ಯಂತ ಶ್ರೇಷ್ಟ ಕ್ಯಾಲ್ಸಿಯಂ ಭರಿತ ಆಹಾರ. ಯಾವತ್ತೂ ಹಸುಗೂಸುಗಳಿಗೆ ತಾಯಿಯ ಹಾಲಿನಿಂದ ವಂಚಿತರನ್ನಾಗಿಸಬಾರದು. ಹಾಲು ಹೊರತು ಪಡಿಸಿದರೆ ಯಾವೆಲ್ಲಾ ಆಹಾರ ಪದಾರ್ಥಗಳಲ್ಲಿ ಕ್ಯಾಲ್ಸಿಯಂ ಇದೆ ಗೊತ್ತೇ?

ಕಾಟೇಜ್ ಚೀಸ್: ಇದು ಬಹಳಷ್ಟು ಪೌಷ್ಟಿಕಾಂಶಗಳನ್ನು ಹೊಂದಿರುವ ಆಹಾರ ಪದಾರ್ಥ. ಸೋಡಿಯಂ, ಕ್ಯಾಲ್ಸಿಯಂ, ಪ್ರೋಟೀನ್, ಸತು ಮತ್ತು ವಿಟಮಿನ್ ಎ ಹೊಂದಿದೆ. ಇದು ಮೂಳೆಗಳನ್ನು ಶಕ್ತಿಯುತವಾಗಿ ಮಾಡುವುದರ ಜೊತೆಗೆ ರಕ್ತದ ಒತ್ತಡವನ್ನೂ ನಿಯಂತ್ರಣದಲ್ಲಿರಿಸುತ್ತದೆ. ಕೇವಲ ೧೦೦ ಗ್ರಾಂ ಪನೀರ್ ನಿಮಗೆ ೪೨% ಕ್ಯಾಲ್ಸಿಯಂ ನೀಡುತ್ತದೆ. ನೀವು ಚೀಸ್ ಮತ್ತು ಪನೀರ್ ಅನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ನಿಮ್ಮ ಮೂಳೆಗಳ ಮತ್ತು ಹಲ್ಲುಗಳ ಆರೋಗ್ಯ ಉತ್ತಮವಾಗುತ್ತದೆ. 

ಮೊಸರು: ಹಾಲು ಕೆಲವರಿಗೆ ಇಷ್ಟವಿರುವುದಿಲ್ಲ. ಅಂಥವರು ಮೊಸರನ್ನು ಆಹಾರದಲ್ಲಿ ತೆಗೆದುಕೊಳ್ಳಬಹುದು. ಇದರಲ್ಲೂ ಅಪಾರ ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ. ಮೊಸರು ಒಂದು ಪ್ರೊ ಬಯೋಟಿಕ್ ಆಹಾರವಾಗಿದ್ದು ಇದರ ನಿಯಮಿತ ಸೇವನೆಯಿಂದ ಕರುಳು ಆರೋಗ್ಯವಾಗಿರುತ್ತದೆ. ಆಹಾರ ಪದ್ಧತಿಯಲ್ಲಿ ಮೊಸರನ್ನು ಬಳಸುವುದರ ಮೂಲಕ ಮೂಳೆಗಳನ್ನು ಬಲಪಡಿಸಿಕೊಳ್ಳಬಹುದು.

ಸೋಯಾ ಹಾಲು: ಕೆಲವರಿಗೆ ಹಾಲು ಅಲರ್ಜಿ. ಅಂಥವರು ಸೋಯಾ ಬೀಜದ ಹಾಲನ್ನು ತಮ್ಮ ಆಹಾರದಲ್ಲಿ ಬಳಸಿಕೊಳ್ಳಬಹುದು. ಇದರಲ್ಲೂ ಕ್ಯಾಲ್ಸಿಯಂ ಅಂಶ ಯಥೇಚ್ಛವಾಗಿದ್ದು, ನಿಮ್ಮ ಮೂಳೆಗಳ ಸದೃಢತೆಗೆ ಸಹಕಾರಿ. ಪ್ರೋಟೀನ್ ಹಾಗೂ ನಾರಿನ ಅಂಶವನ್ನೂ ಒಳಗೊಂಡಿರುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಬೆಳವಣಿಗೆಗೆ ಉಪಯುಕ್ತ.

ಬಾದಾಮಿ: ಇದು ಒಂದು ಆರೋಗ್ಯಕರ ಒಣ ಹಣ್ಣು. ಇದರ ನಿಯಮಿತ ಸೇವನೆ ನಿಮ್ಮಲ್ಲಿ ಲವಲವಿಕೆಯನ್ನು ತುಂಬುತ್ತದೆ. ಒಂದು ಹಿಡಿ ಒಣ ಬಾದಾಮಿಯನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಿ ಮರು ದಿನ ಬೆಳಿಗ್ಗೆ ಅದನ್ನು ಸೇವಿಸುವುದು ಬಹಳ ಆರೋಗ್ಯದಾಯಕ. ಈ ಬಾದಾಮಿಯನ್ನು ತಿನ್ನುವುದರಿಂದ ಕ್ಯಾಲ್ಸಿಯಂ ಜೊತೆಗೆ ವಿಟಮಿನ್ ಎ, ಮೆಗ್ನೀಷಿಯಂ, ನಾರಿನ ಅಂಶ ಮತ್ತು ಪ್ರೋಟೀನ್ ಇದೆ. ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಬಾದಾಮಿಯನ್ನು ಸೇವಿಸಿ.

ಹಸಿರು ಎಲೆಗಳ ತರಕಾರಿಗಳು: ನೀವು ಸೇವಿಸುವ ಪಾಲಕ್, ಹರಿವೆ ಸೊಪ್ಪು, ಮೆಂತ್ಯ ಸೊಪ್ಪು, ಬಸಳೆ ಸೊಪ್ಪು, ಬ್ರೋಕೊಲಿ ಇವುಗಳಲ್ಲಿ ಅಪಾರ ಪ್ರಮಾಣದ ಕ್ಯಾಲ್ಸಿಯಂ ಅಂಶಗಳಿವೆ. ಇದರ ಜೊತೆಗೆ ಪೊಟ್ಯಾಶಿಯಂ, ಕಬ್ಬಿಣ ಮತ್ತು ವಿಟಮಿನ್ ಸಿ ಹೆಚ್ಚಾಗಿದ್ದು ಇವುಗಳ ಸೇವನೆಯಿಂದ ನಿಮ್ಮ ದೇಹದಲ್ಲ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರ ಜೊತೆಗೆ ನಿಮ್ಮ ಮೂಳೆಗಳ ಆರೋಗ್ಯಕ್ಕೂ ಸಹಕಾರಿ. ಹಾಲು ಕುಡಿಯಲು ಬಯಸದವರು ಈ ಕೆಲವು ಆಹಾರಗಳನ್ನು ಬಳಸುವುದರ ಮೂಲಕ ಕ್ಯಾಲ್ಸಿಯಂ ಅಂಶವನ್ನು ಪಡೆದುಕೊಳ್ಳಬಹುದು. ಮಾಂಸಹಾರಿಗಳು ತಮ್ಮ ಆಹಾರದಲ್ಲಿ ಮೀನು ಮತ್ತು ಚಿಪ್ಪು ಮೀನುಗಳನ್ನು ಬಳಸಿದರೆ ಕ್ಯಾಲ್ಸಿಯಂ ಲಭ್ಯವಾಗುತ್ತದೆ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ