ಕ್ರಾಸ್ ರೋಡ್ಸ್

ಕ್ರಾಸ್ ರೋಡ್ಸ್

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ವಿರೂಪಾಕ್ಷ ದೇವರಮನೆ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೨

ಡಾ. ವಿರೂಪಾಕ್ಷ ದೇವರಮನೆ ಮೂಲತಃ ಹೊಸಪೇಟೆಯ ನಾಗೇನಹಳ್ಳಿಯವರು. ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಹಾಗೂ ಮಂಗಳೂರಿನ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಮನೋವೈದ್ಯಕೀಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು 2008ರಿಂದ ಉಡುಪಿಯ ಡಾ.ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯಲ್ಲಿ ಮನೋವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರವೃತ್ತಿಯಲ್ಲಿ ಲೇಖಕರಾದ ವೈದ್ಯರು ಮಾನವ ಸಂಬಂಧಗಳು, ಸಂಬಂಧಗಳಲ್ಲಿ ಸಂವಹನ ಹಾಗೂ ಸಾಮರಸ್ಯ, ಪೇರೆಂಟಿಂಗ್, ಮಕ್ಕಳ ಆರೈಕೆ ಹಾಗೂ ಪೋಷಣೆ ಕುರಿತು ಹಾಗೂ ಉಪನ್ಯಾಸಗಳ ಮೂಲಕ ಪರಿಚಿತರು.

ವಿರೂಪಾಕ್ಷ ದೇವರಮನೆ ಇವರು ಬರೆದ ‘ಕ್ರಾಸ್ ರೋಡ್ಸ್' ಕಿಶೋರದ ಕವಲು ಹಾದಿ ಪುಸ್ತಕದ ಬೆನ್ನುಡಿಯ ಬರಹ ಹೀಗಿದೆ  “ನಾವೆಲ್ಲ ಬದುಕಿನ ಕಾಸ್‌ರೋಡ್ ದಾಟಿ ಬಂದವರೆ, ಯೌವನದ ಕನಸುಗಳ ಬೆನ್ನು ಹತ್ತಿದವರಿಗೆ ಹೆತ್ತವರ ಸಹಕಾರ, ಗುರು ಹಿರಿಯರ ಮಾರ್ಗದರ್ಶನ ಒಂದುಗೂಡಿದಲ್ಲಿ ಹರೆಯ ಬಾಳಿನ ವಸಂತ, ಇಲ್ಲವಾದಲ್ಲಿ ಬದುಕಿನ ವೈಶಾಖ ಆರಂಭವಾಗಬಹುದು. ಹರೆಯದಲ್ಲಿ ಬಹಳಷ್ಟು ಜನರಿಗೆ ಕೋರ್ಸು, ಕಾಲೇಜು, ಸ್ನೇಹಿತರು, ವೃತ್ತಿ, ಸಂಗಾತಿಯ ಆಯ್ಕೆಗಳಲ್ಲಿನ ಗೊಂದಲ ಸಹಜವಾದದ್ದೆ, ಆದರೆ ಹೆತ್ತವರಿಗೂ ಮಕ್ಕಳಿಗೂ ಇಂತಹ ವಿಷಯಗಳಲ್ಲಿ ಅಭಿಪ್ರಾಯ ಭೇದಗಳು ಹೆಚ್ಚಿದಷ್ಟೂ ಕಿಶೋರದ ಕವಲುಹಾದಿಯ ಪಯಣ ಅಸಹನೀಯವೆನಿಸುತ್ತದೆ. 

ಹರೆಯ ತರುವ ಶಾರೀರಿಕ ಮಾನಸಿಕ ಬದಲಾವಣೆಗಳು, ಶೈಕ್ಷಣಿಕ, ವೃತ್ತಿಯಲ್ಲಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಹಿರಿಯರ ಸಹಕಾರ ಅತ್ಯಗತ್ಯ. ಉಡಲು ತೊಡಲು ಯಾವ ಕೊರತೆಯಿಲ್ಲದಿರಬಹುದು. ಆದರೆ ಹದಿಹರೆಯದಲ್ಲಿ "ಹೆದರದಿರು ನಾನಿದ್ದೇನೆ" ಎನ್ನುವ ಭರವಸೆಯ ಮಾತುಗಳು, ‘ನೀನೆಂದರೆ ನನಗೆ ಹೆಮ್ಮೆ’ ಎನ್ನುವ ಆತ್ಮಾನುಭೂತಿ ಹೆಚ್ಚಿಸುವ ಮಾತುಗಳ ಕೊರತೆ ಅವರನ್ನು ಕಾಡಬಹುದು. ಆತಂಕ, ಖಿನ್ನತೆ, ಕೀಳರಿಮೆ, ಒಂಟಿತನ, ಐಡೆಂಟಿ ಕ್ರೈಸಿಸ್, ಒಂದೆಡೆಯಾದರೆ ಲೈಂಗಿಕತೆಯ ಕುರಿತಾದ ಪ್ರಶ್ನೆಗಳು, ಅತಿಯಾದ ಇಂಟರ್‌ಸೆಟ್ ಬಳಕೆ, ಮದ್ಯ-ಮಾದಕ ವ್ಯಸನಗಳ ಕುರಿತಾದ ಕುತೂಹಲ ಹರೆಯದ ಮಕ್ಕಳನ್ನು ಕಾಡಬಹುದು. ಬದುಕಿನ ‘ಕ್ರಾಸ್‌ ರೋಡ್‌’ನಲ್ಲಿರುವ ಮಕ್ಕಳ ಬೆನ್ನುತಟ್ಟಿ, ಕೈ ಹಿಡಿದು ರಸ್ತೆ ದಾಟಿಸಿ, ನೆಮ್ಮದಿಯಾಗಿ ಟಾಟಾ ಮಾಡಿ ಕಳುಹಿಸಿದ್ದೇ ಆದಲ್ಲಿ ಅವರು ಬದುಕಿನಲ್ಲಿ ಗೆಲ್ಲುವುದರಲ್ಲಿ ಸಂಶಯವಿಲ್ಲ. 

ಟೀನೇಜ್‌ನಲ್ಲಾಗುವ ಸಹಜ ಬದಲಾವಣೆಗಳು ಹಾಗೂ ಅವರ ಮೆದುಳಿನ ಕಾರ್ಯ ವೈಖರಿಯ ಕುರಿತು ಹೆತ್ತವರಿಗೆ ಅವಶ್ಯಕ ಮಾಹಿತಿ ನೀಡಿ, ನಾಡಿನ ಪ್ರತೀ ಮನೆಯ ಮಗು ಕಿಶೋರದ ಕವಲು ಹಾದಿಯನ್ನು ಸುಗಮವಾಗಿ ದಾಟಲಿ ಎನ್ನುವ ಹಾರೈಕೆ ಈ ಪುಸ್ತಕದ್ದು. ೧೨೮ ಪುಟಗಳಿರುವ ಈ ಪುಸ್ತಕವನ್ನು ಎಲ್ಲಾ ಹೆತ್ತವರು ಕೊಂಡು ಓದಿದರೆ ಅವರಿಗೆ ತಮ್ಮ ಮಗಳು ಅಥವಾ ಮಗ ಹದಿಹರೆಯಕ್ಕೆ ಬಂದಾಗ ಅವರನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅನುಕೂಲವಾಗುತ್ತದೆ.