ಕ್ರಿಕೆಟ್ ತಂಡದಲ್ಲಿ ಪದೇ ಪದೆ ಬದಲಾವಣೆ ಸಲ್ಲದು

ಇದೇ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಪುರುಷರ ಟಿ೨೦ ವಿಶ್ವಕಪ್ ಪಂದ್ಯಾವಳಿ ನಡೆಯುತ್ತಿದ್ದು, ಎಲ್ಲ ದೇಶಗಳು ಸಜ್ಜಾಗುತ್ತಿವೆ. ಅಂದರೆ ಇನ್ನು ಸರಿಯಾಗಿ ೩ ತಿಂಗಳುಗಳಲ್ಲಿ ಈ ಪಂದ್ಯಾವಳಿಗೆ ಇಡೀ ಜಗತ್ತು ಸಾಕ್ಷಿಯಾಗುತ್ತಿದೆ. ಇದಕ್ಕೆ ತಕ್ಕಂತೆ ಭಾರತದಲ್ಲೂ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಅವರ ನೇತೃತ್ವದಲ್ಲಿ ತಂಡವನ್ನು ತಯಾರು ಮಾಡಲಾಗುತ್ತಿದೆ.
ಭಾರತ ಕ್ರಿಕೆಟ್ ತಂಡದ ಈಗಿನ ಅತೀ ದೊಡ್ಡ ಸಮಸ್ಯೆ ಎಂದರೆ ಸ್ಥಿರ ಪ್ರದರ್ಶನದ್ದು. ಇತೀಚೆಗಷ್ಟೇ ಐಪಿಎಲ್ ಪಂದ್ಯಾವಳಿ ಮುಗಿದಿದ್ದು ಇದರಲ್ಲಿ ಮಿಂಚಿದ ಕೆಲವರನ್ನು ತಂಡಕ್ಕೆ ಸೇರಿಸಿಕೊಂಡು ಪ್ರಯೋಗ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿಯೂ ಇವರಲ್ಲಿ ಯಾರಾದರೂ ಮಿಂಚಿದರೆ ಅವರನ್ನು ವಿಶ್ವಕಪ್ ತಂಡಕ್ಕೆ ಆರಿಸುವ ಇರಾದೆ ಬಿಸಿಸಿಐನದ್ದು. ಆದರೆ ಈ ಹೊತ್ತಿನಲ್ಲಿ ತಂಡದಲ್ಲಿ ಭಾರೀ ಪ್ರಮಾಣದ ಪ್ರಯೋಗ ತರವೇ ಎಂಬ ಪ್ರಶ್ನೆಯೂ ಎದ್ದಿದೆ. ಐಪಿಎಲ್ ಮುಗಿದ ಆನಂತರ, ಗಾಯದ ಸಮಸ್ಯೆಯಿಂದ ಕೆ ಎಲ್ ರಾಹುಲ್ ಬ್ಯಾಟ್ ಹಿಡಿದೇ ಇಲ್ಲ. ಇನ್ನು ನಾಯಕ ರೋಹಿತ್ ಶರ್ಮ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ನಲ್ಲೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಇದ್ದುದರಲ್ಲಿ ಉತ್ತಮ ಬ್ಯಾಟಿಂಗ್ ಹರಿದು ಬಂದದ್ದು ಕೆ ಎಲ್ ರಾಹುಲ್ ಅವರ ಕಡೆಯಿಂದಲೇ. ಆದರೆ ಇವರ ಗಾಯದ ಸಮಸ್ಯೆ ದೊಡ್ದದಾಗಿ ಕುಳಿತಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ಐಪಿಎಲ್ ಗೆದ್ದ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಕೂಡ ಅಷ್ಟೇನೂ ಸಿಡಿದಿಲ್ಲ. ಇದು ಐರ್ಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಸಾಬೀತಾಗಿದೆ.
ಇದರ ನಡುವೆಯೂ ಬುಧವಾರ ಬಿಸಿಸಿಐ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡಿದ್ದು, ಅನುಭವಿಗಳಿಗೆ ವಿಶ್ರಾಂತಿ ನೀಡಿದೆ. ಅಂದರೆ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್ ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ ಅವರನ್ನು ತಂಡದಿಂದ ಕೈಬಿಟ್ಟು ಶಿಖರ್ ಧವನ್ ನೇತೃತ್ವದಲ್ಲಿ ತಂಡವನ್ನು ಕಳುಹಿಸಿಕೊಡಲು ಮುಂದಾಗಿದೆ. ಅನುಭವಿ ಆಟಗಾರ ರವೀಂದ್ರ ಜಡೇಜ ಅವರಿಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ.
ಐಪಿಎಲ್ ನಲ್ಲಿ ಮಿಂಚಿದ ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಲ್, ಅಕ್ಸರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ಆರ್ಷದೀಪ್ ಸಿಂಗ್ ಮೊದಲಾದವರಿಗೆ ಸ್ಥಾನ ನೀಡಲಾಗಿದೆ. ವಿಶೇಷವೆಂದರೆ ಇವರಲ್ಲಿ ಸೂರ್ಯಕುಮಾರ್ ಯಾದವ್, ಶ್ರೇಯಸ್, ಶಿಖರ್ ಧವನ್, ಚಹಲ್, ಸಿರಾಜ್ ಸೇರಿ ಕೆಲವರಿಗೆ ಮಾತ್ರ ಏಕದಿನದಲ್ಲಿ ಆಡಿದ ಅನುಭವವಿದೆ. ಉಳಿದಂತೆ ಬಹುತೇಕರು ಏಕದಿನಕ್ಕೆ ಹೊಂದಿಕೊಳ್ಳುವರೇ ಎಂದು ನೋಡಬೇಕಾಗಿದೆ.
ಆದರೆ ಇದೆಲ್ಲಕ್ಕಿಂತ ಹೆಚ್ಚಾಗಿ, ವಿಶ್ವಕಪ್ ಗೆ ಇನ್ನು ೩ ತಿಂಗಳುಗಳಿರುವಾಗ ಈ ಮಟ್ಟದ ಪ್ರಯೋಗ ಬೇಕಿರಲಿಲ್ಲ ಎಂಬುದು ಹಿರಿಯ ಕ್ರಿಕೆಟಿಗರ ಮಾತುಗಳು. ಇರ್ಫಾನ್ ಪಠಾಣ್ ಅವರು ವಿಶ್ರಾಂತಿ ನೀಡುವ ನಿರ್ಧಾರವನ್ನು ಟೀಕಿಸಿದ್ದಾರೆ. ಇದರಿಂದ ಫಾರ್ಮ್ ಬರುತ್ತದೆಯೇ ಎಂದೂ ಪ್ರಶ್ನಿಸಿದ್ದಾರೆ. ಒಮ್ಮೆ ಅವಲೋಕಿಸಿದರೆ, ಅವರ ಮಾತು ಸತ್ಯ ಎನ್ನಿಸುತ್ತದೆ. ವಿಶ್ವಕಪ್ ಗೂ ಮುನ್ನ ಒಂದು ಗಟ್ಟಿ ತಂಡ ಕಟ್ಟುವ ಅನಿವಾರ್ಯತೆ ಇದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೭-೦೭-೨೦೨೨