ಕ್ರಿಯಾತ್ಮಕ ಭ್ರಮೆಯ ಅತಿವೃಷ್ಟಿಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫

ಕ್ರಿಯಾತ್ಮಕ ಭ್ರಮೆಯ ಅತಿವೃಷ್ಟಿಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫

ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫

(೧೦೬)

   "ಭ್ರಮೆಯ ಗರ್ಭದೊಳಗಿಂದ ಉದಿಸುವ ಅತೀತ ಭ್ರಮೆಯನ್ನು ನೈಜತೆ ಎನ್ನುತ್ತೇವೆ. ನಿನ್ನ ಮನಸ್ಸಿನಲ್ಲಿ ಈ ದೃಶ್ಯವು ಭ್ರಮೆ ಎನ್ನಿಸುವುದೇ ಒಂದು ಭ್ರಮೆ ಎಂಬುದನ್ನು ಅರಿತುಕೊ ಗೆಳೆಯ" ಎಂದ ಪ್ರಕ್ಷುವು ನನ್ನಲ್ಲಿ ಸಾಕಷ್ಟು ಪ್ರಕ್ಷುಬ್ಧತೆಯನ್ನು ಉಂಟುಮಾಡತೊಡಗಿದ್ದ.

"ನೀನೇನಾದರೂ ಕೃಷ್ಣನಂತೆ ನನಗೆ ಕಲೆಯ-ವಿಶ್ವರೂಪದರ್ಶನ ಮಾಡಿಸುತ್ತಿದ್ದೀಯ ಹೇಗೆ?" ಎಂದು ಕೇಳಿದೆ.

"ಹಾಗಲ್ಲ. ಹಾಗೆಂದೇ ಭಾವಿಸಿಕೊ. ಇಡಿಯ ಭಾರತದಲ್ಲೇ ಒಂದೇ ಕಡೆ, ಹಲವು ದಿಗ್ಗಜ ಕಲಾವಿದರ ಸ್ಥಳ-ನಿರ್ದಿಷ್ಟ ಕಲಾಕೃತಿಗಳು ಇರುವುದನ್ನು, ಅದೂ ದಶಕಗಳ ಕಾಲ ಒಟ್ಟಾಗಿರುವುದನ್ನು, ಇಲ್ಲಲ್ಲದೆ ಮತ್ತೆಲ್ಲಿ ಕಾಣುವೆ? ಈ ಜಾಗದ ಮಹಿಮೆ ಹೇಳು ನೋಡುವ" ಎಂದಾತ ಎದ್ದುನಿಂತು ಕಲಾಭವನದ ಸುತ್ತಲೂ, ೩೬೦ಡಿಗ್ರಿ ಕೈಯನ್ನು ಮುಂದೆ ಮಾಡಿ ಒಂದು ಸುತ್ತು ಹಾಕಿದ, ಇದ್ದಲ್ಲೇ.           

      ಸುಮಾರು ಮಧ್ಯರಾತ್ರಿ ೨ ಗಂಟೆ ಸಮಯವಾಗಿತ್ತು. ಪ್ರಕ್ಷುಬ್ಧನ ಬೋಧನೆ ಶುರುವಾಗಿತ್ತು. ದಿನವಿಡೀ ನಿದ್ರೆ ಮಾಡಿ ಈಗ ಎಚ್ಚರವಾಗಿದ್ದಂತಿತ್ತು ಆತನ ಮುಖಭಾವ. ಫ್ರೆಶ್ ಆಗಿ ಕಾಣುತ್ತಿದ್ದ. ನನಗೆ ನಿದ್ರೆ ಮಾಡುವಾಗಿನ ಸೆಖೆ, ಸೊಳ್ಳೆ ಹಾಗೂ ಬಿಸಿಯಧಗೆಯ ಭಯದಿಂದಾಗಿ ಹಾರಿಹೋಗಿದ್ದ ನಿದ್ರೆ, ಈಗಿನ ಅಸಹಜ ಪರಿಸ್ಥಿತಿಯಿಂದಾಗಿ ಹಾರಿಹೋಗಿತ್ತು! ನಿದ್ರೆ ಬರದಿರಲು ಕಾರಣ ಬದಲಾಗಿದ್ದರೂ ನಿದ್ರೆ ಮಾತ್ರ ಬಹುದೂರವಾಗತೊಡಗಿತ್ತು.

     ಬ್ಲಾಕ್ ಹೌಸಿನ ಎರಡನೇ ನಂಬರಿನ ಖಾಲಿ ಕೋಣೆಯಿಂದ ಹೊರಬಂದು ಎರಡು ನಿಮಿಷಮಾತ್ರವಾಗಿತ್ತು. ಅದನ್ನು ನೋಡುತ್ತಲೇ ಕುಳಿತು ಈತನೊಂದಿಗೆ ಮಾತನಾಡುತ್ತಿದ್ದೆ. "ಕಲಾಕೃತಿಯೊಂದರೊಳಗೆ ಹೋಗಿಬಂದಂತಾಗಲಿಲ್ಲವೆ, ಅದರೊಳಗೆ ಹೊಕ್ಕಿ ಹೊರಬಂದದ್ದು?" ಕೇಳಿದ ಪ್ರಕ್ಷು ಮುಂದುವರೆದು, "ಕಲಾಕೃತಿಯ ಒಳಗಿಂದ ಹೊರಗೆ ಕುಳಿತಿದ್ದ ರಾಮ್‍ಕಿಂಕರ್ ಕಲಾವಿದನನ್ನು ನೋಡಿದ್ದು--ಅದು ಭ್ರಮೆಯಾಗಿದ್ದರೂ ಸಹ--ಕಲೆಯ ಒಳಗಿಂದ ಕಲಾವಿದ ಅಜರಾಮರನಾಗಿದ್ದನ್ನು ಕಂಡಂತಾಗಲಿಲ್ಲವೆ?" ಎಂದ.

     "ನನಗೀಗ ಚಿಂತೆಯಾಗಿರುವುದು ಅದಲ್ಲ. ನೀನು ನನ್ನನ್ನು ಎರಡನೇ ಕೋಣೆಯ ಒಳಕ್ಕೆ ಕರೆದುಹೋಗಿ ಒಳಗಿನ ಖಾಲಿತನವನ್ನು ತೋರಿಸುವ ಐದು ನಿಮಿಷದ ಮುನ್ನ ಅದರೊಳಗೆ ಆ ರೂಮಿನಲ್ಲೇ ವಾಸಿಸುವ ಹುಡುಗ ಹೊಕ್ಕಿದ್ದನ್ನು ಕಂಡಿದ್ದೆ. ಮತ್ತು ಈ ಸಂಜೆ ಎಂಟುಗಂಟೆಗೆ, ಅಂದರೆ ಕೆಲವೇ ಗಂಟೆಗಳ ಹಿಂದೆ ಆ ಕೋಣೆಯು ಒಂದು ಲಾರಿಯಾಗುವಷ್ಟು ಆತನ ಸಾಮಾನು ಸರಂಜಾಮನ್ನು ಹೊಂದಿರುವುದನ್ನು ನಾನೇ ಕಣ್ಣಾರೆ ಕಂಡಿರುವೆ" ಎಂದು ಪ್ರಕ್ಷುವನ್ನು ಕೈಹಿಡಿದುಕೊಂಡು ಎರಡನೇ ರೂಮಿನ ಸಮೀಪ ಹೋದೆ. ಬಾಗಿಲು ತಟ್ಟಿದೆ. ಸ್ವಲ್ಪ ಸಮಯದ ನಂತರ ಒಳಗಿನಿಂದ ಬಾಗಿಲು ತೆಗೆದುಕೊಂಡಿತು. ಕಣ್ಣುಕೋರೈಸುವಷ್ಟು ಬೆಳಕಿತ್ತು!

     "ಓಹ್. ಅನಿಲ್ ದಾ. ಇನ್ನೂ ನಿದ್ರೆ ಬರಲಿಲ್ಲವೆ?" ಎಂದ ಅದರೊಳಗಿದ್ದ ಎಂ.ವಿ.ಎ ವಿದ್ಯಾರ್ಥಿ.

     "ಈಗ ಐದು ನಿಮಿಷದ ಮುಂಚೆ ಈ ಕೋಣೆಯ ಒಳಕ್ಕೆ ನಾನು ಬಂದಿದ್ದೆ"

     "ಇಲ್ಲವಲ್ಲ"

     "ಕೋಣೆ ಪೂರ್ತಿ ಖಾಲಿಯಾಗಿತ್ತು ಮತ್ತು ಕತ್ತಲಿತ್ತು. ಪ್ರಕ್ಷು ನನ್ನೊಂದಿಗಿದ್ದ"

     "ಪ್ರಕ್ಷುಬ್ಧ?!!"

     "ಹೌದು"

     "ಈ ಪ್ರಕ್ಷುಬ್ ದಾ ಯಾವಾಗಲೂ ಹೀಗೆಯೇ. ಅಪರೂಪಕ್ಕೆ ಬರುವವರನ್ನು ಮಾತ್ರ ಭೇಟಿಮಾಡುವುದು, ಬೆಳಿಗ್ಗೆ ಹೊತ್ತು ಯಾರಿಗೂ ಸಿಗದಿರುವುದು. ಆತನ ಬಗ್ಗೆ ನಿನಗೆ ಗೊತ್ತಲ್ಲ?" ಎಂದ.

     "ಹದಿನೆಂಟು ವರ್ಷಗಳ ದೋಸ್ತಿ ಗುರುವೆ. ಅಂದಹಾಗೆ ಆತನೂ ಇಲ್ಲಿ ನನ್ನೊಂದಿಗಿದ್ದಾನೆ" ಎಂದೆ.

     ರೂಮಿನೊಳಗಿನ ವಿದ್ಯಾರ್ಥಿ ಕಸಿವಿಸಿಗೊಂಡ, "ಆತನನ್ನು ಇಲ್ಲಿಗ್ಯಾಕೆ ಕರೆದುಕೊಂಡು ಬಂದಿರಿ?" ಎಂದು ರಪ್ಪನೆ ಬಾಗಿಲು ದೂಡಿ, ನನ್ನನ್ನು ಒಳಗೇ ಇರಿಸಿ, ಹೊರಗಿನಿಂದ ಚಿಲಕ ಹಾಕಿಕೊಂಡು, ಹೊರಗೋದ, ಆತನನ್ನು ಹುಡುಕಾಡುವಂತೆ. ಐದಾರು ನಿಮಿಷದ ನಂತರ ಒಳಬಂದ. ಅಷ್ಟರಲ್ಲಿ ಕಿಟಕಿಯ ಹೊರಗಿಂದಲೇ ಪ್ರಕ್ಷು ಪ್ರತ್ಯಕ್ಷನಾದ, "ಅನಿಲ್, ಒಂದತ್ತು ನಿಮಿಷ. ಹುಡುಗರ ಹಾಸ್ಟೆಲ್ಲಿನ ನಡುವಿನ ಹಾಳುಬಾವಿಯ ಹತ್ತಿರ ಕುಳಿತಿರುತ್ತೇನೆ. ಅಲ್ಲಿಗೆ ಬಾ, ಇಲ್ಲಿ ಮಾತು ಮುಗಿದ ನಂತರ. ಅಲ್ಲಿ ಕೆಲವು ಹುಡುಗರು ರೂಮಿನ ಬಾಗಿಲು ತೆಗೆದು ಚಿತ್ರಬಿಡಿಸುತ್ತಿದ್ದಾರೆ ಇನ್ನೂ. ಅವರೊಂದಿಗೆ ಮಾತನಾಡುತ್ತಿರುತ್ತೇನೆ. ನಡುವೆ ಯಾರೇ ಮಾತನಾಡಿಸಿದರೂ ನಾನು ಅಲ್ಲಿರುವುದನ್ನು ಹೇಳಬೇಡ. ನನ್ನನ್ನು ಮತ್ತು ನಿನ್ನನ್ನು ಇಬ್ಬರನ್ನೂ ಇಕ್ಕಟ್ಟಿಗೆ ಸಿಲುಕಿಸದೆ ಬೇಗ ಬಂದುಬಿಡು" ಎಂದು ಮಾಯವಾದ.

     ಐದು ನಿಮಿಷದ ನಂತರ ರೂಮಿನ-ವಿದ್ಯಾರ್ಥಿ ಒಳಬಂದ. "ಪ್ರಕ್ಷು ಸಿಕ್ಕಿದನೆ?" ಕೇಳಿದೆ.

     ಆತ ನನ್ನ ಮುಖ ನೋಡುತ್ತ ಹೇಳಿದ, "ಏಳು ವರ್ಷಗಳಿಂದ ಇಲ್ಲಿ ಓದುತ್ತಿದ್ದೇನೆ. ಒಮ್ಮೆಯೊ ಆತನನ್ನು ಭೇಟಿಯಾಗಿಲ್ಲವೆಂದರೆ ನಂಬುತ್ತೀಯ?" ಎಂದು ಉತ್ತರಿಸುತ್ತ ಖೇದಗೊಂಡ. ಇಂತಹ ವಿಚಿತ್ರಗಳನ್ನು ಇದೇ ಕೋಣೆಯಲ್ಲಿ ಸರಿಸುಮಾರು ಇಪ್ಪತ್ತು ವರ್ಷದ ಹಿಂದೆ ವಾಸಿಸುತ್ತಿದ್ದಾಗಲೇ ನಾನು ನೋಡಿಬಿಟ್ಟಿದ್ದೆ. ಆಗ ಒಬ್ಬ ನಮ್ಮ ಕೋಣೆಯ ಹೊರಗಿನ ಬೃಹತ್ ಮರದ ಮೇಲೆ ಇಪ್ಪತ್ತಡಿ ವ್ಯಕ್ತಿಯೊಬ್ಬ ಬದುಕಿದ್ದಾನೆಂದು ನಂಬಿದ್ದ. ಹುಡುಗಿಯೊಬ್ಬಳು ತನ್ನನ್ನು ಯಾರೋ ಫಾಲೋ ಮಾಡುತ್ತಿದ್ದಾರೆಂದೂ, ಅದು ತನ್ನದೇ ಪ್ರತಿಬಿಂಬವೆಂತಲೂ ನಂಬಿಬಿಟ್ಟಿದ್ದಳು. ಸ್ವತಃ ತನ್ನದೇ ಸ್ಟುಡಿಯೋದ ಒಳಕ್ಕೂ ಒಬ್ಬಳೇ ಹೋಗಲು ನಿರಾಕರಿಸುತ್ತಿದ್ದಳು. ಮತ್ತೊಬ್ಬ ತನ್ನ ಸ್ಟುಡಿಯೋದ ಗೋಡೆಯ ಮೇಲೆ ಪ್ರಸಿದ್ಧ ಕಲಾವಿದ ವ್ಯಾನ್ ಗೋನ ಹೆಗಲ ಮೇಲೆ ತನ್ನ ಭಾವಚಿತ್ರವು ಕೈಹಾಕಿದಂತೆ ಚಿತ್ರಬಿಡಿಸಿದ್ದ (ವ್ಯಾನ್ ಗೋ ಈತನ ಅಭಿಮಾನಿ ಎಂಬಂತೆ), ಇತ್ಯಾದಿ. ಮುಸಿನಗುತ್ತ, ಆ ಹುಡುಗನಿಗೆ "ದ್ಯಾಕಾ ಹೋಬೆ" ಎಂದು ಬಾಯ್ ಹೇಳುತ್ತ ಹೊರಬಂದೆ.//