ಕ್ರೈಸ್ತ ಕೋಲಾಟದ ಪದಗಳು
(ಹಾಸನ ಜಿಲ್ಲೆಯ ಶೆಟ್ಟಿಹಳ್ಳಿಯು ಇದೀಗ ಹೇಮಾವತಿ ಜಲಾಶಯದಲ್ಲಿ ಮುಳುಗಿಹೋದಿದೆ. ಕನ್ನಡ ಕ್ರೈಸ್ತರ ಪ್ರಾಚೀನ ಊರಾಗಿತ್ತು. ಅದರ ಪುನರ್ವಸತಿಯ ಊರಾದ ಜ್ಯೋತಿನಗರದಲ್ಲಿ ಈ ಕೋಲಾಟದ ಪದಗಳನ್ನು ದಾಖಲಿಸಲು ನೆರವಾದ ಕೋಲಾಟದ ತಂಡದವರಿಗೆ ಧನ್ಯವಾದಗಳನ್ನು ಸೂಚಿಸುತ್ತಾ ಇಲ್ಲಿ ಪ್ರಕಟಿಸುತ್ತಿದ್ದೇನೆ. ನಿಮ್ಮ ಊರುಗಳಲ್ಲೂ ಇಂತಹ ಕ್ರೈಸ್ತ ಜಾನಪದ ಹಾಡುಗಳಿದ್ದರೆ ನನಗೆ ತಿಳಿಸಿರೆಂದು ವಿನಂತಿಸುತ್ತೇನೆ.)
೧. ಹೆರೋದ ರಾಯನಿಂದ
ಹೆರೋದ ರಾಯನಿಂದ ಬಂದ ನಿರೂಪದ ಮೇರೆಗೆ
ದಾವಿದ ಮಗನಾದ ಜೋಸೆಫ್ ತನ್ನ ಪತ್ನಿಯೊಂದಿಗೆ
ಬೆತ್ಲೆಹೇಂ ಗ್ರಾಮಕ್ಕೆ ಇಬ್ಬರೂ ಚಿತ್ತೈಸಿ ಬಂದರು
ಮನೆಗಳು ಸಿಕ್ಕದೆ ದನಗಳ ಕೊಟ್ಟಿಗೆ ಮಧ್ಯದಲ್ಲಿದ್ದರು
ಡಿಸೆಂಬರ್ ತಿಂಗಳು ಇಪ್ಪತ್ತೈದನೇ ದಿನದಲ್ಲಿ
ಮಧ್ಯರಾತ್ರಿ ಕನ್ಯಾಮರಿಯಮ್ಮ ಮಗನು ಹುಟ್ಟಿದನು
ಆಕಾಶದಿಂದಲಿ ಇಳಿದ ದೇವತೆದೊರೆಗಳು
ಕುರಿಗಳ ಕಾಯುವ ಗೊಲ್ಲರಿಗೆ ಕೊಟ್ಟರು ಸುದ್ದಿಯನು
ಗೊಲ್ಲರೋಡಿಬಂದು ಹೇಳಿದ ಕೊಟ್ಟಿಗೆಯೊಳಗೋಗಿ
ಹುಲ್ಲಿನ ಮೇಲೆ ಮಲಗಿರುವ ಬಾಲರನು ನೋಡಿ
ಇವತ್ತು ದಿನದಲ್ಲಿ ಸ್ವಾಮಿ ರಕ್ಷಣೆ ಉಂಟಾಯ್ತು
ಆದಾಮರಿಗೆ ಆಳಿದ ಕೊಟ್ಟ ವಾಗ್ದತ್ತ ನಿಜವಾಯ್ತು
ಹೆರೋದ ರಾಯನಿಂದ ಬಂದ ನಿರೂಪದ ಮೇರೆಗೆ
ದಾವಿದ ಮಗನಾದ ಜೋಸೆಫ್ ತನ್ನ ಪತ್ನಿಯೊಂದಿಗೆ
೨ ರಾಯರು ಬಂದ ನಡೆಗಳ ಚಂದ
ರಾಯರು ಬಂದ ನಡೆಗಳ ಚಂದ ನೋಡುತಲಿದ್ದೆ ಕಾಣಮ್ಮ
ಜೋತಿಷ್ಯ ರಾಯರ ಬೆಡಗ ಕಂಡು ಬೆರಗಾಗೋದರು ಕಾಣಮ್ಮ
ಬೆತ್ಲೆಹೇಮ್ ಬೋರೆಯ ಕೆಳಗೆ ಬೆಳ್ಳಿ ಮೂಡಿತು ಕಾಣಮ್ಮ
ಬೆಳ್ಳಿ ಮೂಡಿದ ಬೆಳಕ ಕಂಡು ಬೆರಗಾಗೋದರು ಕಾಣಮ್ಮ
ಗಾಡಿ ರಥಗಳ ಹೂಡುತ ಮುಂದಕ್ಕೆ ಗಾಡಿ ನಡೆಸ್ವರು ಕಾಣಮ್ಮ
ನಮ್ಮ ಊರ ನಡೆಸ್ವರು ಕಾಣಮ್ಮ
ನಜರೇತ್ ಮರಿಯಾ ಜೂದರ ದೊರೆಯ ಕೇಳುತ ಬರುತ್ತಾರೆ ಕಾಣಮ್ಮ
ನೆರೇದ ಸುದ್ಧಿ ಹೆರೋದ ಕೇಳಿ ಎದೆ ಬಡಿದುದ್ದನ್ನು ಕಾಣಮ್ಮ
ಕೂಗಿ ಕರೆದುದ್ದನ್ನು ಕಾಣಮ್ಮ
ದಿಕ್ಕುದಿಕ್ಕಿನ ರಾಯರು ಬಂದು ತಕ್ಕೈಸಿಕೊಂಡರು ಕಾಣಮ್ಮ
೩ ಚೆಂದಾ ನೋಡಿರೇ
ಚೆಂದ ನೋಡಿರೇ ನೀವು ಚೆಂದ ನೋಡಿರೇ
ಚೆಂದ ಜೋಸೆಫರು ಮಠದಲ್ಲಿ ಕೂತಿರ | ಚೆಂದ . . .
ಬಾಲರ ಹಿಡಕಂದು ಲೋಲಾಗಿ ನಿಂತಿರ
ಬಡಗಿ ಜೋಸೆಫರ ಬೆಡಗಿನ ಮಠದಲ್ಲಿ | ಚೆಂದ . . .
ಮಕ್ಕಳ ಹರಸುವ ಲಾಲನೆ ಮಾಡುವ
ಬಡವರ ಪಾಲಕ ಬಡಗಿ ಜೋಸೆಫರ | ಚೆಂದ . . .