ಕ್ಲಿನಿಕಲ್ ಪ್ರಯೋಗಕ್ಕೆ ತಂತ್ರಜ್ಞಾನ ಬಳಕೆ: ಕ್ರಾಂತಿಕಾರಿ ಹೆಜ್ಜೆ

ಕ್ಲಿನಿಕಲ್ ಪ್ರಯೋಗಕ್ಕೆ ತಂತ್ರಜ್ಞಾನ ಬಳಕೆ: ಕ್ರಾಂತಿಕಾರಿ ಹೆಜ್ಜೆ

ಔಷಧಗಳ ನಿಕಲ್ ಪ್ರಯೋಗಕ್ಕೆ ಸಂಬಂಧಿಸಿದ ನಿಯಮಾವಳಿಗಳಲ್ಲಿ ಪ್ರಮುಖ ಮಾರ್ಪಾಡನ್ನು ಮಾಡಲು ಮುಂದಾಗಿರುವ ಕೇಂದ್ರ ಸರಕಾರ ಯಾವುದೇ ಹೊಸ ಔಷಧವನ್ನು ಸಂಶೋಧಿಸಿದಾಗ ಅವುಗಳನ್ನು ಪ್ರಾಣಿಗಳ ಮೇಲೆ ಪ್ರಯೋಗಿಸುವ ಜೊತೆ ಜೊತೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲು ತೀರ್ಮಾನಿಸಿದೆ.

ಔಷಧ ತಜ್ಞರು ಮತ್ತು ವೈದ್ಯರು ಯಾವುದೇ ಹೊಸ ಔಷಧ ಅಥವಾ ಲಸಿಕೆಯನ್ನು ಸಂಶೋಧಿಸಿದ ಸಂದರ್ಭದಲ್ಲಿ ಅವುಗಳನ್ನು ಮಾನವ ಬಳಕೆಗೆ ಮುಕ್ತಗೊಳಿಸುವ ಮೊದಲು ವಿವಿಧ ಹಂತಗಳಲ್ಲಿ ಕ್ಲಿನಿಕಲ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಮೊದಲ ಹಂತದಲ್ಲಿ ನಿರ್ದಿಷ್ಟ ಪ್ರಾಣಿಗಳ ಮೇಲೆ ಈ ಔಷಧಗಳ ಕ್ಲಿನಿಕಲ್ ಪ್ರಯೋಗ ನಡೆಯುತ್ತದೆ. ಬಹುತೇಕ ಬಾರಿ ಈ ಪರೀಕ್ಷೆಗಳು ವಿಫಲಗೊಳ್ಳುವುದರಿಂದ ವಿನಾಕಾರಣವಾಗಿ ಪ್ರಾಣಿಗಳು ಸಂಕಷ್ಟ ಅನುಭವಿಸುವಂತಾಗುತ್ತದೆಯಲ್ಲದೆ ಕೆಲವೊಮ್ಮೆ ಪ್ರಾಣಿಗಳು ಸಾವನ್ನಪ್ಪುತ್ತವೆ. ಅಷ್ಟು ಮಾತ್ರವಲ್ಲದೆ ಔಷಧಗಳ ಕ್ಲಿನಿಕಲ್ ಪ್ರಯೋಗಕ್ಕಾಗಿಯೇ ಪ್ರಾಣಿಗಳನ್ನು ಕೂಡಿಡುವ ಮೂಲಕ ಅವುಗಳ ನೈಸರ್ಗಿಕ ಮತ್ತು ಸ್ವಚ್ಛಂದ ಬದುಕಿಗೆ ತಡೆಯೊಡ್ಡಲಾಗುತ್ತದೆ. ಈ ಪ್ರಯೋಗಗಳ ಸಂದರ್ಭದಲ್ಲಿ ಪ್ರಾಣಿಗಳನ್ನು ವಿಪರೀತವಾಗಿ ಹಿಂಸೆಗೊಳಪಡಿಸಲಾಗುತ್ತದೆ. ಇವೆಲ್ಲದರ ಕುರಿತಂತೆ ನಿರಂತರವಾಗಿ ಪ್ರಾಣಿದಯಾ ಸಂಘಟನೆಗಳು ಅಸಮಾಧಾನವನ್ನು ಹೊರಹಾಕುತ್ತಲೇ ಬಂದಿವೆ.

ಇದೇ ವೇಳೆ ಪ್ರಾಣಿಗಳ ಮೇಲಣ ಕ್ಲಿನಿಕಲ್ ಪರೀಕ್ಷೆಯ ಬಳಿಕ ಆಯ್ದ ಮಾನವರನ್ನು ಈ ಪ್ರಯೋಗಕ್ಕೆ ಗುರಿಪಡಿಸಲಾಗುತ್ತದೆ. ಇಂಥ ಪರೀಕ್ಷೆಯ ಸಂದರ್ಭದಲ್ಲಿ ಕೆಲವೊಂದು ಆಯ್ದ ಸಮುದಾಯಗಳ ಯಾ  ಪ್ರದೇಶಗಳ ಜನರನ್ನೇ ಗುರಿಯಾಗಿಸಲಾಗುತ್ತದೆ ಎಂಬ ಆರೋಪವೂ ವಿಶ್ವದ ಹಲವಾರು ಮಾನವ ಹಕ್ಕುಗಳ ಸಂಘಟನೆಗಳಿಂದ ಕೇಳಿಬರುತ್ತಿದೆ. ಇವೆಲ್ಲವೂ ಔಷಧಗಳ ಕ್ಲಿನಿಕಲ್ ಪ್ರಯೋಗಕ್ಕೆ ದೊಡ್ಡ ಕಂಟಕಗಳಾಗಿ ಪರಿಣಮಿಸಿದ್ದವು. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಔಷಧ ಉದ್ಯಮ ಕ್ಷೇತ್ರದಲ್ಲಿ ಔಷಧಗಳ ಕ್ಲಿನಿಕಲ್ ಪ್ರಯೋಗಗಳ ವೇಳೆ ಪರ್ಯಾಯ ವಿಧಾನಗಳನ್ನು ಅಳವಡಿಸುವ ಸಂಬಂಧ ವರ್ಷಗಳಿಂದೀಚೆಗೆ ಭಾರೀ ಚರ್ಚೆ, ಅಧ್ಯಯನ, ಸಂಶೋಧನೆಗಳು ನಡೆಯುತ್ತ ಬಂದಿವೆ. ಇವೆಲ್ಲದರ ಫಲವಾಗಿ ಕ್ಲಿನಿಕಲ್ ಪ್ರಯೋಗಕ್ಕೆ ತಂತ್ರಜ್ಞಾನದ ಬಳಕೆಯ ಚಿಂತನೆ ರೂಪುಗೊಂಡಿದೆ. ಈ ವಿಧಾನದಲ್ಲಿ ಚಿಪ್  ಆಧಾರಿತ ಮಾನವ ಅಂಗಾಂಶಗಳು, ಪ್ರಯೋಗಾಲಯದಲ್ಲಿ ಅಂದರೆ ಪ್ರಣಾಳದಲ್ಲಿ ಬೆಳೆಸಲಾದ ಅಂಗಾಂಶಗಳು ಅಥವಾ ಜೀವಕೋಶಗಳ ಮೇಲೆ ಕ್ಲಿನಿಕಲ್ ಪ್ರಯೋಗ ನಡೆಸಲಾಗುತ್ತದೆ. ಇದರಿಂದ ಔಷಧ ಪಡೆದವರ ಸುರಕ್ಷತೆ ಮತ್ತು ಔಷಧದ ಸಾಮರ್ಥ್ಯದ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಮಾನವನ ಮೇಲೆ ಕ್ಲಿನಿಕಲ್ ಪ್ರಯೋಗ ನಡೆಸಲಾಗುತ್ತದೆ. ಆರಂಭದಲ್ಲಿ ಈ ವಿಧಾನವನ್ನು ಪ್ರಾಣಿಗಳ ಮೇಲೆ ಪ್ರಯೋಗದ ಜೊತೆಜೊತೆಗೆ ಅನುಸರಿಸಲಾಗುವುದು. ಸದ್ಯದ ಲೆಕ್ಕಾಚಾರದ ಪ್ರಕಾರ ತಂತ್ರಜ್ಞಾನ ಆಧಾರಿತ ಕ್ಲಿನಿಕಲ್ ಪ್ರಯೋಗದ ಯಶಸ್ಸಿನ ದರ ಶೇಕಡ.೭೦ ರಿಂದ ೮೦ರಷ್ಟು ಆಗಿರುತ್ತದೆ. ಪ್ರಾಣಿ ಮತ್ತು ಮಾನವರನ್ನು ಕ್ಲಿನಿಕಲ್ ಪ್ರಯೋಗಕ್ಕೆ ಬಳಸಿದ ಸಂದರ್ಭದಲ್ಲಿ ಎದುರಾಗುವ ಅಡ್ಡಪರಿಣಾಮಗಳೂ ಬಹಳಷ್ಟು ಕಡಿಮೆಯಾಗಲಿದೆ ಮತ್ತು ವೆಚ್ಚವೂ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಒಟ್ಟಿನಲ್ಲಿ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಔಷದಗಳ ಕ್ಲಿನಿಕಲ್ ಪ್ರಯೋಗಕ್ಕೆ ಸಂಬಂಧಿಸಿದ ಎಲ್ಲ ಆರೋಪಗಳು ಮತ್ತು ಕಳಂಕವನ್ನು ಇದು ತೊಡೆದು ಹಾಕಲಿದೆ. ಎಲ್ಲವೂ ನಿರೀಕ್ಷಿತ ಫಲಿತಾಂಶವನ್ನು ತಂದುಕೊಟ್ಟದ್ದೇ ಈ ವಿಧಾನ ಔಷದಿಗಳ ಕ್ಲಿನಿಕಲ್ ಪ್ರಯೋಗಕ್ಕೆ ಹೊಸ ಭಾಷ್ಯವನ್ನು ಬರೆಯಲಿದೆ. ಅಮೆರಿಕದ ಬಳಿಕ ಭಾರತ ಇಂಥ ದಿಟ್ಟ ಚಿಂತನೆಯನ್ನು ಇದು ವೈದ್ಯಕೀಯ ಕ್ಷೇತ್ರದಲ್ಲಿ ಮೈಲಿಗಲ್ಲು ಸ್ಥಾಪಿಸುವತ್ತ ಹೆಜ್ಜೆ ಇರಿಸಿದೆ.

ಕೃಪೆ: ಉದಯವಾಣಿ,  ಸಂಪಾದಕೀಯ, ದಿ: ೧೨-೧೨-೨೦೨೨