ಕ್ಲೇಶ - ಅವಿದ್ಯ

ಕ್ಲೇಶ - ಅವಿದ್ಯ

ಇಂದು ಪಾತಂಜಲ ಮಹರ್ಷಿಯ ಯೋಗ ಸೂತ್ರದ ಎರಡನೇ ಪಾದ, ಎರಡನೇ ಸೂತ್ರದಲ್ಲಿ ಕ್ಲೇಶದ ಬಗ್ಗೆ ಹೇಳುತ್ತಾನೆ. ಕ್ಲೇಶ ಎಂದರೇನು...? ಕ್ಲೇಶ ಎಂದರೆ ಮನಸ್ಸಿನ ಬಂಧನ. ದುಃಖಕ್ಕೆ ಯಾವುದು ಕಾರಣವೋ ಅದು ಕ್ಲೇಶ. ಇದು ಮನಸ್ಸಿನ ಹೊಲಸು, ಮಲಿನ. ಸೆರೆಮನೆ ಅಂದರೆ ಅಲ್ಲಿ ಊಟ, ತಿಂಡಿ, ಮಾಡಲು ಕೆಲಸ, ತೊಡಲು ಬಟ್ಟೆ ಎಲ್ಲಾ ಕೊಡುತ್ತಾರೆ. ಆದರೆ ಆ ಸ್ಥಳ ಬಿಟ್ಟು ಹೊರಗೆ ಬರುವಂತಿಲ್ಲ. ಹಾಗೆ ನಾವು ಮನಸ್ಸಿನಲ್ಲಿ ಅನೇಕ ಮಿತಿಗಳನ್ನು ಹಾಕಿಕೊಂಡಿದ್ದೇವೆ. ಆ ಮಿತಿ ಬೃಹತ್ ಗೋಡೆಯಾಗಿದ್ದು , ಅದರಲ್ಲಿ ನಾವು ಬಂದಿಯಾಗಿದ್ದೇವೆ. ಉದಾಹರಣೆಗೆ ಜಾತಿ, ಮತ, ಪಂಥ, ಭಾಷೆ, ದೇಶ ಮತ್ತು ಸಮಾಜ. ಎಲ್ಲಿಯವರೆಗೆ ನಾವು ಬಂಧನದಲ್ಲಿ ಇರುತ್ತೇವೆಯೋ, ಸ್ವಾತಂತ್ರ್ಯ ಇರುವುದಿಲ್ಲ. ಸ್ವಾತಂತ್ರ್ಯ ಇಲ್ಲದ ಮೇಲೆ ಅಲ್ಲಿ ದುಃಖವೇ ವಿನಹ ಶಾಂತಿ, ಸಮಾಧಾನ  ಮತ್ತು ಸಂತೋಷ ಇರುವುದಿಲ್ಲ. ನಾವು ಗಿಳಿಯನ್ನು ಬಂಗಾರದ ಪಂಜರದೊಳಗೆ ತಂದು ಇಡುತ್ತೇವೆ. ಅದಕ್ಕೆ ಬೇರೆ ಬೇರೆ ದೇಶದ ಹಣ್ಣು, ತರಕಾರಿ ಮತ್ತು ಬೀಜ ಎಲ್ಲವನ್ನು ಬೆಳ್ಳಿಯ ಅಥವಾ ಚಿನ್ನದ ಬಟ್ಟಲಿನಲ್ಲಿ ನೀಡುತ್ತೇವೆ. ಆದರೆ ಅದಕ್ಕೆ ಅದು ಬಂಧನ. ಮರದ ಮೇಲೆ ಇರುವ ಗಿಳಿಗೆ ಇದ್ಯಾವುದೂ ಇಲ್ಲ. ಆದರೆ ಸ್ವಾತಂತ್ರ್ಯ ಶಾಂತಿ ಮತ್ತು ಸಮಾಧಾನ ಇದೆ. ಹಾಗೆ ನಾವು ಸ್ವಾತಂತ್ರ್ಯ ಶಾಂತಿ ಮತ್ತು ಸಮಾಧಾನ ಪಡೆಯಬೇಕಾದರೆ ಬಂಧನದಿಂದ ಮುಕ್ತರಾಗಿ, ಸ್ವಾತಂತ್ರ್ಯ ಪಡೆಯಬೇಕು.

ಪಾತಂಜಲ ಮಹರ್ಷಿ ಎರಡನೇ ಸೂತ್ರದಲ್ಲಿ 5 ಕ್ಲೇಶಗಳನ್ನು ಹೇಳುತ್ತಾನೆ.

1. ಅವಿದ್ಯ 2. ಆಸ್ಮಿತ, 3. ರಾಗ, 4. ದ್ವೇಷ  5. ಅಭಿನವೇಶ. ಇವು ಮರೆಯಾಗಬೇಕು, ಇಲ್ಲವೇ ಕ್ಷೀಣವಾಗಬೇಕು. ಆಗ ಬಂದನದಿಂದ ಮುಕ್ತರಾಗುತ್ತೇವೆ.

ಇಂದು ನಾವು ಅವಿದ್ಯ ಬಗ್ಗೆ ತಿಳಿದುಕೊಳ್ಳೋಣ. ಅವಿದ್ಯೆ ಎಂದರೆ ವಿದ್ಯೆ ಇಲ್ಲ ಎಂದು ಅರ್ಥವಲ್ಲ. ನಾವೆಲ್ಲರೂ ನೋಡುತ್ತೇವೆ, ಕೇಳುತ್ತೇವೆ ಮತ್ತು ಮಾಡುತ್ತೇವೆ ಎಂದಾಗ ಜ್ಞಾನ ಪ್ರತಿಯೊಬ್ಬರಲ್ಲೂ ಇರುತ್ತದೆ. ಕೆಲವರಲ್ಲಿ ಕಡಿಮೆ ಮತ್ತೆ ಕೆಲವರಲ್ಲಿ ಹೆಚ್ಚು ಇರಬಹುದು. ಆದರೆ ಪಡೆದ ಜ್ಞಾನ ಯಥಾ ಜ್ಞಾನವೇ ಅನ್ನುವುದು ಮುಖ್ಯ. ಇರುವುದೇ ಬೇರೆ ತಿಳಿದುಕೊಂಡಿರುವುದೇ ಬೇರೆ ಇದಕ್ಕೆ ಅವಿದ್ಯ ಎನ್ನುವರು. ಅಂದರೆ ತಪ್ಪು ಜ್ಞಾನ ಪಡೆದಿದ್ದೇವೆ ಎಂದು ಅರ್ಥ. ಉದಾಹರಣೆಗೆ ಸೀತಾದೇವಿ, ಬಂಗಾರದ ಜಿಂಕೆ ನೋಡಿ, ಅದನ್ನು ಬೇಕು ಎಂದು ಹಠ ಹಿಡಿದಳು. ಅದನ್ನು ಬೆನ್ನು ಹತ್ತಿ ರಾಮ ಮತ್ತು ಲಕ್ಷ್ಮಣ ಹೊರಟರು. ಸೀತಾಪಹರಣವಾಯಿತು, ರಾಮಾಯಣವಾಯಿತು. ಬಂಗಾರದ ಜಿಂಕೆ ಜಗತ್ತಿನಲ್ಲಿ ಇಲ್ಲ ಎನ್ನುವ ಜ್ಞಾನ ಮರೆತು, ತಪ್ಪು ಜ್ಞಾನದಿಂದ ರಾಮಾಯಣ ಆಯ್ತು. ಇಂದು ನಮ್ಮ ದೈನಂದಿನ ಜವನದಲ್ಲಿ ನೋಡುತ್ತಿದ್ದೇವೆ. ಅತ್ತೆ ಸೊಸೆ ಜಗಳ, ಗಂಡ ಹೆಂಡತಿ ವಿಚ್ಛೇದನ, ನ್ಯಾಯಾಲಯದಲ್ಲಿ ಆಸ್ತಿಗಾಗಿ ಹೋರಾಟ, ಜಾತಿ, ಧರ್ಮ, ಸಮುದಾಯದ ಗಲಾಟೆ, ಇವೆಲ್ಲ ತಪ್ಪು ಜ್ಞಾನದಿಂದ ಆಗುತ್ತಿರುವುದು. ಇದಕ್ಕೆ ಅವಿದ್ಯೆ ಎನ್ನುವರು. ಒಬ್ಬ ರಾತ್ರಿ ಹೋಗಿ ಬೇರೆಯವರ ಮರದಿಂದ ಮೂಟೆ -ಮೂಟೆ ಹಣ್ಣು ಕದ್ದು ತಂದನು. ಬೆಳಿಗ್ಗೆ ಬೇರೆ ಒಬ್ಬ ಹೋಗಿ ಒಂದು ಹಣ್ಣನ್ನು ಕಿತ್ತನು. ಅಷ್ಟರಲ್ಲಿ ಯಜಮಾನ ಬಂದನು. ನೀನಾ ಹಣ್ಣು ಕಿತ್ತಿದ್ದು ಎಂದನು ಯಜಮಾನ. ಹೌದು ನಾನು ಒಂದು ಹಣ್ಣು ಕಿತ್ತು ತಿಂದಿದ್ದೇನೆ ಎಂದನು. ಆಗ ರಾತ್ರಿ ಕದ್ದವನು ಮನಸ್ಸಿನಲ್ಲಿ ಹೇಳಿಕೊಂಡ ನಾನು ಎಷ್ಟು ಬುದ್ಧಿವಂತ. ಅಷ್ಟು ಹಣ್ಣು ಕದ್ದು ತಂದರೂ ಮಾಲೀಕನಿಗೆ ಸಿಕ್ಕಿ ಬೀಳಲಿಲ್ಲ. ಈತ ಬೆಳಿಗ್ಗೆ ನೇರ ಹೋಗಿ ಮಾಲೀಕನಿಗೆ ಸಿಕ್ಕಿಬಿದ್ದ. ಆತ ಎಂಥ ದಡ್ಡ ಎಂದನು. ಹೀಗೆ ನಮ್ಮ ಜೀವನ ತಪ್ಪು ಜ್ಞಾನದಿಂದ ನಡೆಯುತ್ತಿದೆ. ಇದಕ್ಕೆ ಪಾತಂಜಲ ಹೇಳಿದ ಅವಿದ್ಯ. ಈ ಅವಿದ್ಯೆ ಪ್ರಧಾನವಾದದ್ದು. ಉಳಿದ ನಾಲ್ಕು ಕ್ಲೇಶಗಳಿಗೆ ಪೋಷಕವಾದುದ್ದು ಈ ಅವಿದ್ಯೆ. ಈ ಅವಿದ್ಯೆ ಬಲಿಷ್ಠವಾದರೆ ಉಳಿದ ಆಸ್ಮಿತ, ರಾಗ, ದ್ವೇಷ ಮತ್ತು ಅಭಿನವೇಶ ಹುಲುಸಾಗಿ ಬೆಳೆಯುತ್ತವೆ. ಪಾತಂಜಲ ಮಹರ್ಷಿ ಅವಿದ್ಯೆಯಲ್ಲಿ ನಾಲ್ಕು ವಿಧಗಳನ್ನು ಗುರುತಿಸಿದನು.

1. ದೇಹ ಅನಿತ್ಯ- ಈ ದೇಹ ಕಾಲದಿಂದ ಪರಿಮಿತವಾಗಿದೆ. ಅಂದರೆ ಇಷ್ಟು ವರ್ಷ ಬದುಕುತ್ತೇವೆ ಎಂದರ್ಥ. ಇಷ್ಟೇ ವರ್ಷ ಅಂದಾಗ ಅದು ದಿನೇ ದಿನೇ ಬದಲಾಗುತ್ತದೆ. ಅದು ಇದ್ದ ಹಾಗೆ ಇರುವುದಿಲ್ಲ. ಉದಾಹರಣೆಗೆ ಒಂದು ಹಸುಗೂಸು ಹಾಗೆ ಇದ್ದರೆ, ಅದು ವೈಭವವಲ್ಲ. ಅದು ಬೆಳೆದು ಬಾಲಕ, ಯುವಕ, ತರುಣ ಮತ್ತು ಮುದುಕ ಆದಾಗಲೇ ಅದರ ವೈಭವ. ಈ ಸತ್ಯ ಮರೆತು ನಿತ್ಯ ಎಂದು ಭಾವಿಸುವುದೇ ಅವಿದ್ಯ, ಅದು ಕ್ಲೇಶ. ಇದು ಅಪರಿಪೂರ್ಣ. ಇದನ್ನು ಪರಿಪೂರ್ಣಮಾಡಲು ಆಗುವುದಿಲ್ಲ. ಇದು ಅನಿತ್ಯ. ಆದುದರಿಂದಲೇ ಜೀವನದಲ್ಲಿ ಸೋಲು ಗೆಲುವು ಇರುತ್ತದೆ. ಬರೀ ಗೆಲುವು ಆದರೆ ಅದರಲ್ಲಿ ಏನೋ ತಪ್ಪು ಅಡಗಿದೆ. ಅದನ್ನು ಗೆಲುವು ಮಾಡಬೇಕೆಂದು ಭಾವಿಸುವುದೇ ಅವಿದ್ಯ, ಅದು ಕ್ಲೇಶ.

2. ದೇಹ ಅಶುಚಿ - ಶುದ್ಧ ನೀರು ಎಂದಾಗ ಅದರಲ್ಲಿ ಬರೀ ನೀರು ಇರಬೇಕು. ಶುದ್ಧ ಹಾಲು ಎಂದಾಗ ಬರಿ ಹಾಲೆ ಇರಬೇಕು. ಅದರಲ್ಲಿ ಮಿಶ್ರ ಇಲ್ಲ. ಆದರೆ ದೇಹ ಮಿಶ್ರ. ಆದ್ದರಿಂದ ದೇಹ ಶುದ್ಧವಲ್ಲ. ಏಕೆಂದರೆ ದೇಹ ಸ್ನಾನ ಮಾಡಿ ಶುಚಿಗೊಳಿಸಬಹುದು. ಅದು ಕೆಲವು ಸಮಯದ ನಂತರ  ಅಶುದ್ಧವಾಗುತ್ತದೆ. ಈ ದೇಹ ಗಂಧಕ, ಕ್ಯಾಲ್ಸಿಯಂ, ಇಂಗಾಲ, ಆಮ್ಲಜನಕ, ಜಲಜನಕ, ಸಾರಜನಕ, ರಂಜಕ, ಕಬ್ಬಿಣ, ಮೆಗ್ನೀಷಿಯಂ, ಮ್ಯಾಂಗನೀಸ್, ಸೋಡಿಯಂ, ಮತ್ತು ಜಿಂಕ್ ಮುಂತಾದ ಮೂಲ ವಸ್ತುಗಳಿಂದಾಗಿದೆ. ಈ ಮಿಶ್ರಣದಿಂದಾಗಿ ಅದು ಶುದ್ಧವಲ್ಲ. ನಮ್ಮ ಮನಸ್ಸು ಸತ್ವ ರಜೊ ಮತ್ತು ತಮ  ಗುಣದಿಂದಾಗಿ ಆಗಾಗ್ಗೆ ಬದಲಾಗುತ್ತದೆ. ಆಯುರ್ವೇದ ಹೇಳಿದಂತೆ ದೇಹ, ವಾತ, ಪಿತ್ತ ಮತ್ತು ಕಫದ ಬದಲಾವಣೆಯಿಂದ ದೇಹ ಬದಲಾಗುತ್ತದೆ. ವಾತಾವರಣದಲ್ಲಿ, ಊಟದಲ್ಲಿ, ಕೆಲಸದಲ್ಲಿ ಮತ್ತು ವ್ಯವಹಾರದಲ್ಲಿ ಆಗುವ ಬದಲಾವಣೆಯಿಂದ ದೇಹ ಬದಲಾಗುತ್ತದೆ. ಹೀಗೆ ಅಶುಚಿಯನ್ನು ಶುಚಿಯಾಗಿ ಇರಬೇಕೆನ್ನುವ ನಿರೀಕ್ಷೆಗೆ ಅವಿದ್ಯೆ, ಅದು ಕ್ಲೇಶ.

3. ದುಃಖ - ಬದಲಾವಣೆಯಿಂದ ದುಃಖವಾಗುತ್ತದೆ. ನಾವು ಕೆಲವೊಂದನ್ನು ಪ್ರೀತಿಸುತ್ತೇವೆ. ಅದು ಪ್ರೀತಿಸಿದಂತೆ ಇರದಿದ್ದರೆ ಅಥವಾ ಪ್ರೀತಿಸದಂತೆ ಆಗದಿದ್ದರೆ, ದುಃಖವಾಗುತ್ತದೆ. ಉದಾಹರಣೆಗೆ ಕಪ್ಪು ಕೂದಲನ್ನು ಪ್ರೀತಿಸುತ್ತೇವೆ. ಬಿಳಿ ಕೂದಲು ಆದಾಗ ದುಃಖ. ಇದು ಇರೋದೇ ಹೀಗೆ ಅಂದರೆ ದುಃಖ ಇಲ್ಲ.  ಒಪ್ಪಿಕೊಂಡು ಬಿಟ್ಟರೆ ಸಮಾಧಾನ. ಒಪ್ಪಿಕೊಳ್ಳದೆ ಇರುವುದೇ ಅವಿದ್ಯ. ಅದು ಕ್ಲೇಶ. ಜಗತ್ತಿನಲ್ಲಿ ಬದುಕಿದ್ದೀವಿ ಅಂದಾಗ ಹೊಗಳುವವರು ತೆಗಳುವವರು ಇರೋದೇ. ಜೀವಿಸುವಾಗ ರೋಗರುಜಿನ ಬರೋದೆ. ಬದುಕಿದಾಗ ಹಸಿವು ನೀರಡಿಕೆ ಇರೋದೇ. ಎಲ್ಲರೂ ನಮ್ಮ ಮಾತು ಕೇಳೋದಿಲ್ಲ... ಹೀಗೆ ಇರೋದೆ. ಇದನ್ನು ಒಪ್ಪಿಕೊಳ್ಳದೆ ಬೇರೆ ರೀತಿ ತಿಳಿದುಕೊಳ್ಳುವುದೇ ಅವಿದ್ಯೆ.

4. ಈ ದೇಹ ಅನಾತ್ಮ- ಈ ದೇಹಕ್ಕೆ ತನ್ನ ಜ್ಞಾನ ಇಲ್ಲ. ನಾನು ಅನ್ನುವುದು ಆತ್ಮ. ಏಕೆಂದರೆ ಅದಕ್ಕೆ ನನ್ನ ಜ್ಞಾನ ನನಗೆ ಇದೆ. ನಾನು ಇದ್ದೀನಿ ಅನ್ನುವ ಜ್ಞಾನ ಇದೆ. ಅದೇ ಆತ್ಮ. ನನ್ನ ಜ್ಞಾನ ನನಗಿದ್ದರೆ ಅದು ಆತ್ಮ. ದೇಹಕ್ಕೆ ತನ್ನ ಜ್ಞಾನ ಇಲ್ಲ ಹಾಗಾಗಿ ಅದು ಅನಾತ್ಮ. ನಾನು ಶುದ್ಧ ದೇಹ,  ದೇಹವೇ ಆತ್ಮ ಎಂದು ತಿಳಿಯುವುದೇ ಅವಿದ್ಯೆ, ಅದು ಕ್ಲೇಶ. ಅನಿತ್ಯ , ಅಶುಚಿ , ದುಃಖ, ಅನಾತ್ಮ ಎಂದು ಭಾವಿಸುವುದೇ ವಿದ್ಯೆ. ಅದನ್ನು ಬಿಟ್ಟು ನಾನು ನಿತ್ಯ , ಶುಚಿ, ಸಂತೋಷ, ಆತ್ಮ ಎಂದು ಭಾವಿಸುವುದೇ ಅವಿದ್ಯೆ, ಅದು ಕ್ಲೇಶ, ಅಲ್ಲವೇ?

-ಎಂ.ಪಿ. ಜ್ಞಾನೇಶ್, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ