ಕ್ಲೌಡ್ ಸೇವೆ:ಪರಿಸರಪ್ರಿಯ

ಕ್ಲೌಡ್ ಸೇವೆ:ಪರಿಸರಪ್ರಿಯ

ಅಂತರ್ಜಾಲ ಆಧಾರಿತ ಸೇವೆಗಳನ್ನು ಬಳಸುವ ಮೂಲಕ ಸೌಕರ್ಯಗಳ ದಕ್ಷ ಬಳಕೆ ಸಾಧ್ಯ.ಹೀಗಾಗಿ ಅನಗತ್ಯ ಪೋಲು ತಪ್ಪಿಸಬಹುದು.ಸ್ಮರಣಶಕ್ತಿಯನ್ನು ಡಾಟಾ ಸೆಂಟರುಗಳ ಮೂಲಕ ಲಭ್ಯವಾಗಿಸುವ ಸೇವೆ,ಸರ್ವರ್ ಬಳಕೆ,ತಂತ್ರಾಂಶ ಸೇವೆ ಹೀಗೆ ವೈವಿಧ್ಯಮಯ ಸೇವೆಗಳನ್ನು ಒದಗಿಸುವ ಅಂತರ್ಜಾಲ ಅಧಾರಿತ ಕ್ಲೌಡ್ ಸೇವೆಗಳ ಮೂಲಕ ಬಳಕೆದಾರರು ಇಂತಹ ಮೂಲಸೌಕರ್ಯಗಳನ್ನು ತಾವೇ ನಿರ್ವಹಿಸುವ ತೊಂದರೆ ತಪ್ಪುತ್ತದೆ.ಹೊರಗುತ್ತಿಗೆಯಾಗಿ ಹಲವರಿಗೆ ಸೇವೆ ಒದಗಿಸುವ ಅಂತರ್ಜಾಲ ತಾಣಗಳು,ಉತ್ತಮ ಪರಿಣತ ಸೇವೆ,ಸಮಗ್ರ ನಿರ್ವಹಣೆ ಮತ್ತು ದಕ್ಷ ಸೇವೆ ನೀಡಲು ಸಾಧ್ಯವಾಗುತ್ತದೆ.ಮಾತ್ರವಲ್ಲ ಸೇವೆಗಳು ಬಳಕೆದಾರರಿಗೆ ಸ್ಪರ್ಧಾತ್ಮಕ ದರಗಳಲ್ಲೂ ಲಭ್ಯವಾಗುತ್ತವೆ.ವಿದ್ಯುಚ್ಛಕ್ತಿಯ ಮಿತಬಳಕೆಯು ಆಗುವುದರಿಂದ ಇದು ಪರಿಸರಪ್ರಿಯವು ಹೌದು. 
ಕ್ಲೌಡ್ ಸೇವೆಗಳ ಮೂಲಕ ವಿನೂತನ ಸೇವೆಗಳನ್ನು ಒದಗಿಸುವಲ್ಲಿ ಭಾರತೀಯ ಕಂಪೆನಿಗಳು ಆಸಕ್ತಿ ತೋರುತ್ತಿವೆ.ಅಪ್ನಾಟೆಕ್ನಾಲಜಿ ಎನ್ನುವ ಕಂಪೆನಿಯು,ರೈಲ್ವೇ ಹಳಿಗಳ ಸಮೀಪ ಸಂವೇದಕಗಳನ್ನು ಸ್ಥಾಪಿಸಿ,ಅದರ ಮೂಲಕ ರೈಲ್ವೇ ಹಳಿಗಳ ಸುರಕ್ಷತೆಗೆ ಅಪಾಯವಿದ್ದಾಗ,ಎಚ್ಚರಿಕೆ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.ಅದು ತನ್ನ ಸೇವೆಯನ್ನು ಅಂತರ್ಜಾಲದ ಸರ್ವರುಗಳ ಮುಖಾಂತರ ನೀಡುವುದರಿಂದ,ಇದೂ ಒಂದು ಕ್ಲೌಡ್ ಸೇವೆಯಾಗಿ ಪರಿಗಣಿಸಲ್ಪಡುತ್ತದೆ.ಇದೇ ರೀತಿ ಹೋಟೆಲ್ ನಿರ್ವಹಣೆ,ಮೊಬೈಲ್ ಸೇವೆಗಳು,ಐಟಿ,ಬ್ಯಾಂಕಿಂಗ್ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕ್ಲೌಡ್ ಆಧಾರಿತ ಸೇವೆಗಳು ಲಭ್ಯವಾಗುತ್ತಿವೆ.ಸದ್ಯ ಭಾರತದಲ್ಲಿ ಸಾವಿರದ ಅರುನೂರು ಕೋಟಿ ರೂಪಯಿಗಳ ವ್ಯವಹಾರ ಈ ರೀತಿಯಲ್ಲಿ ನಡೆಯುತ್ತಿದ್ದು,ಇನ್ನೈದು ವರ್ಷಗಳಲ್ಲಿ ಇದು ಹತ್ತು ಪಟ್ಟು ಏರಬಹುದು ಎಂದು ಅಂದಾಜು.
ಇದೇ ವೇಳೆ ಕಂಪ್ಯೂಟರುಗಳಿಗೆ ಬೇಡಿಕೆ, ಈ ವರ್ಷ ಸುಮಾರು ಮೂವತ್ತೈದು ಶೇಕಡಾ ಏರಬಹುದು ಎಂದು ಅಂದಾಜಿಸಲಾಗಿದೆ.ಡೆಸ್ಕ್‌ಟಾಪ್‌ಗಳಿಗೆ ಬೇಡಿಕೆ ಆರು ದಶಲಕ್ಷಗಳಿಗೆ ಅಂದರೆ ಸುಮಾರು ಶೇಕಡಾ  ಹದಿನಾರರಷ್ಟು ಏರಬಹುದು ಎಂದು ಅಂದಾಜು.ನೆಟ್‌ಬುಕ್ ಮತ್ತು ನೋಟ್‌ಬುಕ್‌ಗಳಿಗೆ ಬೇಡಿಕೆ ಮೂರು ದಶಲಕ್ಷ ಸಂಖ್ಯೆಯಲ್ಲಿ ಬರಬಹುದು ಎಮ್ದು ಅಂದಾಜು.ಸರ್ವರ್ ಕಂಪ್ಯೂಟರುಗಳಿಗೆ ಮಾತ್ರಾ ಬೇಡಿಕೆ ಇಳಿದಿದ್ದು,ಇದು ಕ್ಲೌಡ್ ಸೇವೆಗಳ ಬಳಕೆಯ ಕಾರಣ ಆಗಿರಲೂ ಬಹುದು.ಪ್ರತಿಯೊಂದು ಸಣ್ಣ ಅಥವಾ ಮಧ್ಯಮ ಕಂಪೆನಿಗಳೀಗ ಇಂತಹ ಕಂಪ್ಯೂಟರುಗಳನ್ನು ಹೊಂದುವ ಅಗತ್ಯ ಇಲ್ಲದ್ದರಿಂದ,ಬೇಡಿಕೆ ಇಳಿಮುಖವಾಗಿರಬಹುದು.
----------------------------
ಫಿಲಿಪ್ಸ್ ಕಂಪೆನಿಯ ಮೊಬೈಲ್ ಫೋನ್
ಖ್ಯಾತ ಫಿಲಿಪ್ಸ್ ಕಂಪೆನಿಯೂ ಮೊಬೈಲ್ ಹ್ಯಾಂಡ್‍ಸೆಟ್‌‍ಗಳನ್ನು ಮಾರಾಟ ಮಾಡಲು ಆರಂಭಿಸಿದೆ.ಸಾವಿರದೇಳ್ನೂರು ರೂಪಾಯಿಗಳಿಂದ ತೊಡಗಿ,ಎಂಟು ಸಾವಿರದ ವರೆಗಿನ ಬೆಲೆಯ ಸೆಟ್‌ಗಳನ್ನದು ಮಾರಾಟ ಮಾಡುತ್ತಿದೆ.ಚೈನೀಸ್ ಕಂಪೆನಿಯೊಂದು,ಹಾಂಕಾಂಗ್ ಕಂಪೆನಿಯ ಜತೆ ಸೇರಿ,ಫಿಲಿಪ್ಸ್ ಬ್ರಾಂಡ್‌ನ ಮೊಬೈಲ್ ಸೆಟ್ಟುಗಳ ನಿರ್ವಹಣೆ ಮಾಡುತ್ತಿದೆ. ,ಬಳಸದಿರುವ ಸಮಯದಲ್ಲಿ ಅತಿ ಕನಿಷ್ಠ ಶಕ್ತಿ ಬಳಸುವ ಈ ಹ್ಯಾಂಡ್‌ಸೆಟ್ಟುಗಳಲ್ಲಿ,ಬ್ಯಾಟರಿಯನ್ನು ಹೆಚ್ಚು ಹೊತ್ತು ಬಾಳಿಕೆ ಬರುತ್ತದೆ.
----------------------------------------------------
ಝಗತ್ ಗೂಗಲ್ ಬಗಲಿಗೆ
ಗೂಗಲ್ ಹಲವು ಕಂಪೆನಿಗಳನ್ನು ಖರೀದಿಸಲು ಒಲವು ತೋರಿಸುತ್ತಿದೆ.ಈ ವರ್ಷವೇ ಇದುವರೆಗೆ ಗೂಗಲ್ ಇಪ್ಪತ್ತು ಕಂಪೆನಿಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.ಹೋಟೆಲ್‌ಗಳ ಬಗ್ಗೆ ವಿವರ ನೀಡುವ ಝಗತ್ ಎನ್ನುವ  ಕಂಪೆನಿಯು, ಅದರ ಈ ವಾರದ ಖರೀದಿ.ವಿವಿಧೆಡೆ ಲಭ್ಯವಿರುವ ಹೋಟೆಲುಗಳು,ಅಲ್ಲಿ ದೊರೆಯುವ ಊಟೋಪಚಾರಗಳ ವ್ಯವಸ್ಥೆ ಬಗ್ಗೆ ಈ ಅಂತರ್ಜಾಲ ತಾಣದಲ್ಲಿ ವಿವರಗಳು ಸಿಗುತ್ತವೆ.ಸೇವೆ ಸ್ವೀಕರಿಸಿದವರು ಒದಗಿಸಿದ ಪ್ರತಿಕ್ರಿಯೆಗಳೂ ಇಲ್ಲಿ ಸಿಗುತ್ತವೆ.ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಆಸ್ತಿತ್ವದಲ್ಲಿರುವ ಝಗತ್ ತಾಣವು ಕಲೆ ಹಾಕಿರುವ ಮಾಹಿತಿಯನ್ನು ಗೂಗಲ್ ನಕ್ಷೆ,ಶೋಧ ಸೇವೆಗಳ ಜತೆ ಸಮ್ಮಿಳನಗೊಳಿಸಿ,ಜನರಿಗೆ ವಿನೂತನ ಅನುಭವ ನೀಡಲು ಗೂಗಲಿಗೆ ಸಾಧ್ಯವಾಗಲಿದೆ.ಇಂತಹ ಮಾಹಿತಿ ನೀಡುವ ಇತರ ತಾಣಗಳಿಗೆ ಗೂಗಲ್-ಝಗತ್ ಜುಗಲ್‌ಬಂದಿ ಸಿಹಿ ಸುದ್ದಿಯಂತೂ ಅಲ್ಲ.
-------------------------------------------
ಪತ್ರಿಕೆಗಳು ಮತ್ತು ಅಂತರ್ಜಾಲ


ಭಾರತದಲ್ಲಿ ಪತ್ರಿಕೆಗಳು ಸದ್ಯ ತಮ್ಮ ಮುದ್ರಿತ ಪ್ರತಿಯ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಫಲವಾಗಿವೆ.ಭಾಷಾಪತ್ರಿಕೆಗಳ ಪ್ರಸಾರ ಏರುಗತಿಯಲ್ಲಿದೆ.ಆದರೆ ವಿಶ್ವದ ಉಳಿದೆಡೆ ಮುದ್ರಿತ ಪತ್ರಿಕೆಗಳ ಪ್ರಸಾರ ಇಳಿಯುತ್ತಿವೆ.ಅಲ್ಲಿ ಪತ್ರಿಕೆಗಳು ತಮ್ಮ ಅಂತರ್ಜಾಲ ಆವೃತ್ತಿಗಳ ಮೂಲಕ ತಮ್ಮ ಓದುಗರನ್ನು ಹೆಚ್ಚಿಸಲು ಪ್ರಯತ್ನಿಸ ಬೇಕಿದೆ.ಡಿಜಿಟಲ್ ಮಾಧ್ಯಮದ ಮೂಲಕವೇ ತಮ್ಮತನ ಉಳಿಸಿಕೊಳ್ಳಲು ಹೋರಾಟ ಅನಿವಾರ್ಯ ಎನ್ನುವುದು ಅಲ್ಲಿನ ಪತ್ರಿಕೋದ್ಯಮಿಗಳ ಅನಿಸಿಕೆಯಾಗಿದೆ.ಅಂತರ್ಜಾಲ ಆವೃತ್ತಿಗಳಲ್ಲಿ ಮುದ್ರಿತ ಪ್ರತಿಯನ್ನು ನೀಡಿದರೆ ಸಾಕಾಗದು ಎನ್ನುವುದು ಅಲ್ಲಿ ವ್ಯಕ್ತವಾಗುತ್ತಿರುವ ಅಂಶವಾಗಿದೆ.ಆನ್‌ಲೈನ್ ಆವೃತ್ತಿಯಲ್ಲಿ ತಾಜಾ ಸುದ್ದಿ,ವಿಶ್ಲೇಷಣೆ,ಓದುಗರ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಭಾಗವಹಿಸಲು ಅನುಕೂಲತೆ ಅಗತ್ಯವಾಗಿದೆ.ಓದುಗರು ಸುದ್ದಿಯನ್ನು ಹಂಚಿಕೊಳ್ಳಲು,ತಮ್ಮ ಚಿತ್ರಗಳನ್ನು ಅಪ್ಲೋಡ್ ಮಾಡಲು ಪತ್ರಿಕೆಗಳು ಅವಕಾಶ ನೀಡಿ,ಓದುಗರನ್ನು ಆಕರ್ಷಿಸುತ್ತಿವೆ.ಓದುಗರು ಭಾಗವಹಿಸಲು ಅನುಕೂಲ ನೀಡುವುದರಿಂದ,ಅವರು ಅಂತರ್ಜಾಲ ತಾಣದಲ್ಲಿ ಕಳೆಯುವ ಸಮಯವೂ ಹೆಚ್ಚುವುದು ಒಂದು ಅನುಕೂಲವಾಗಿದೆ. ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್ ಮತ್ತು ಟ್ವಿಟರ್ ಅಂತಹ ತಾಣಗಳಲ್ಲೂ ಪತ್ರಿಕೆಯ ಪುಟಗಳನ್ನು ರೂಪಿಸುವುದು,ಸದ್ಯ ಮಾಮೂಲಿಯಾಗಿದೆ.ಜಕಾರ್ತಾ ಗ್ಲೋಬ್ ಅಂತಹ ಪತ್ರಿಕೆಯು ಫೇಸ್‌ಬುಕ್ ಪುಟದ ಮೂಲಕ ಲಕ್ಷಗಟ್ಟಲೆ ಪತ್ರಿಕೆಯ ಅಭಿಮಾನಿ ಒದುಗರನ್ನು ಆಕರ್ಷಿಸಲು ಸಫಲವಾಗಿವೆ.ಪತ್ರಿಕೆಯ ಸುದ್ದಿಗಳನ್ನು ಟ್ವಿಟರ್ ಖಾತೆಯ ಮೂಲಕ ನೀಡಿ,ಟ್ವಿಟರ್ ಬಳಗದ ಸದಸ್ಯರನ್ನೂ ಆಕರ್ಷಿಸುವುದೂ ಪತ್ರಿಕೆಗೆ ಸಾಧ್ಯವಾಗಿದೆ.


ಮುದ್ರಿತ ಪ್ರತಿಯಲ್ಲಿ ಮೂರು ಆಯಾಮಗಳ ಚಿತ್ರಗಳನ್ನು ಪ್ರಕಟಿಸುವ ತಾಂತ್ರಿಕತೆ‍, ಪತ್ರಿಕೆಗಳಿಗೆ ಈಗ ಲಭ್ಯವಾಗಿರುವ ಹೊಸ ತಂತ್ರಜ್ಞಾನ.ಇದರ ಮೂಲಕ ಮುದ್ರಿಸಿದ ಪತ್ರಿಕೆಯ ಜತೆಗೆ ಅಗ್ಗದ ಕನ್ನಡಕವನ್ನೂ ಪತ್ರಿಕೆಗಳು ನೀಡಬೇಕಾಗುತ್ತದೆ.ವಿಶೇಷ ಕ್ಯಾಮರಾ ಬಳಸಿ,ಚಿತ್ರೀಕರಿಸಿದ ಚಿತ್ರಗಳನ್ನು,ವಿಶೇಷ ರೀತಿಯಲ್ಲಿ ಮುದ್ರಿಸಿ, ಮೂರು ಆಯಾಮಗಳಲ್ಲಿ ಕಾಣುವಂತೆ ಮಾಡಬಹುದು.ಜರ್ಮನ್,ಥಾಯ್ಲೆಂಡ್,ಬ್ರೆಜಿಲ್‌ನಲ್ಲಿ ಇಂತಹ ಪ್ರಯೋಗಗಳೀಗಾಗಲೆ ನಡೆದಿವೆ.


ಭಾಷಾಪತ್ರಿಕೆಗಳು ಯುನಿಕೋಡ್ ಮೂಲಕ ತಮ್ಮ ಪತ್ರಿಕೆಗಳ ಆವೃತ್ತಿಯನ್ನು ನೀಡಿದಾಗ ಪತ್ರಿಕೆಯು ತನ್ನದೇ ಆದ ಫಾಂಟ್ ಹೊಂದುವ ಅಗತ್ಯವಿಲ್ಲದಾಗುತ್ತದೆ.ಯುನಿಕೋಡ್ ಈಗ ಎಲ್ಲಾ ಆಪರೇಟಿಂಗ್ ವ್ಯವಸ್ಥೆಗಳ ಭಾಗವಾಗಿ ಬಿಟ್ಟಿರುವುದರಿಂದ,ಭಾಷಾ ಪತ್ರಿಕೆಗಳು ಅಂತರ್ಜಾಲದಲ್ಲಿ ಓದುಗರಿಗೆ ಸುಲಭವಾಗಿ ಲಭ್ಯವಾಗುತ್ತವೆ,ಅಲ್ಲದೆ ಭಾಷಾಪತ್ರಿಕೆಗಳ ವರದಿ,ಬರಹಗಳ ಶೋಧನೆಯೂ ಸಾಧ್ಯವಾಗುತ್ತದೆ.ಸ್ಮಾರ್ಟ್ ಫೋನು ಆಪರೇಟಿಂಗ್ ವ್ಯವಸ್ಥೆಗಳ ಮಟ್ಟಿಗೆ ಈ ವ್ಯವಸ್ಥೆಯಿನ್ನೂ ಸರಿಯಾಗಿ ಕಾರ್ಯಗತವಾಗಬೇಕಿದೆಯಷ್ಟೆ.ಅಂದಹಾಗೆ ಆಂಧ್ರದ ಕಂಪೆನಿಯೊಂದಾದ ಸಿಲಿಕಾನ್ ಆಂಧ್ರ, ಯುನಿಕೋಡ್ ಒಕ್ಕೂಟದ ಸದಸ್ಯನಾಗಿದೆ.ಅದು  ಮೂರುದಿನಗಳ ವಿಶ್ವ ತೆಲುಗು ಸಮಾವೇಶ ನಡೆಸುತ್ತಿದ್ದು,ಕ್ಯಾಲಿಫೋರ್ನಿಯಾದಲ್ಲಿ ಕಾರ್ಯಕ್ರಮ ಆಯೋಜಿಸಿದೆ.ಯುನಿಕೋಡ್ ವ್ಯವಸ್ಥೆಗೆ ಹಲವು ಫಾಂಟ್‌ಗಳನ್ನು ಬಿಡುಗಡೆಗೊಳಿಸಿ,ತೆಲುಗು ಬಳಕೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲದು ಪ್ರಯತ್ನಿಸುತ್ತಿದೆ.


-------------------------------------------
ತುಷಾರ:ವಾರ್ಷಿಕ  ಚಂದಾ ಗೆಲ್ಲಿ!

ಈ ಪ್ರಶ್ನೆಗೆ ಸರಿಯುತ್ತರ ಕಳುಹಿಸಿ,ತುಷಾರ ಮಾಸಿಕದ ವಾರ್ಷಿಕ ಚಂದಾ ಗೆಲ್ಲಿ! ಬಹುಮಾನ ಪ್ರಾಯೋಜಿಸಿದವರು ಶೋಭಾ ಮೋಹನ್,ಬೆಂಗಳೂರು.


*ಕನ್ನಡ ಟೈಪಿಸಲು ಕಂಪ್ಯೂಟರಿನಲ್ಲಿ ಯಾವ ವ್ಯವಸ್ಥೆಗಳಿವೆ?


(ಉತ್ತರವನ್ನು nistantusansaara@gmail.comಗೆ ಮಿಂಚಂಚೆ ಮಾಡಿ ವಿಷಯ:NS47 ನಮೂದಿಸಿ.)


ಕಳೆದ ವಾರದ ಬಹುಮಾನಿತ ಉತ್ತರ:


*ಬ್ರಾಡ್‌ಬ್ಯಾಂಡ್ ಅನಿಸಿಕೊಳ್ಳಲು ದತ್ತಾಂಶ ವೇಗ ಪ್ರತಿಸೆಕೆಂಡಿಗೆ ಕನಿಷ್ಠವೆಂದರೂ ಇನ್ನೂರೈವತ್ತಾರು ಕಿಲೋಬಿಟ್ಸ್ ಇರಬೇಕು.ಬಹುಮಾನ ಗೆದ್ದವರು ವಿಷ್ಣುಮೂರ್ತಿ,ಮಂಗಳೂರು.ಅಭಿನಂದನೆಗಳು.


Udayavani
*ಅಶೋಕ್‌ಕುಮಾರ್ ಎ

Udayavani Unicode

Comments