ಕ್ಷಣಕ್ಕೊಂದು ಕಥೆ

ಕ್ಷಣಕ್ಕೊಂದು ಕಥೆ

ಪುಸ್ತಕದ ಲೇಖಕ/ಕವಿಯ ಹೆಸರು
ಸಂಪಟೂರು ವಿಶ್ವನಾಥ್
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ.೧೦೦.೦೦, ಮುದ್ರಣ: ಅಕ್ಟೋಬರ್ ೨೦೨೧

“ಮುದುಕನೊಬ್ಬ ಬಾವಿಯಲ್ಲಿ ಇಣಿಕಿದಾಗ ಅವನಿಗೆ ಚಂದ್ರ ಕಾಣಿಸಿದ. ‘ಅಯ್ಯೋ, ಚಂದ್ರ ಬಾವಿಯಲ್ಲಿ ಬಿದ್ದಿದ್ದಾನೆ, ಮೇಲಕ್ಕೆತ್ತಬೇಕು.’ ಅಂದುಕೊಂಡ. ಬಿಂದಿಗೆ ಕಟ್ಟಿ ನೀರನ್ನು ಸೇದಿದ. ಆಯ ತಪ್ಪಿ ಹಿಂದಕ್ಕೆ ಬಿದ್ದ. ಚಂದ್ರ ಆಕಾಶದಲ್ಲಿ ಕಾಣಿಸಿದ. ಅರೆ ! ಚಂದ್ರ ನೀರಿನಿಂದ ಮೇಲೆ ಬಂದು ಆಕಾಶಕ್ಕೆ ಹೊರಟು ಹೋಗಿದ್ದಾನೆ ಅಂದುಕೊಂಡ. ಹೀಗೆ ಮುದುಕ ಚಂದ್ರನನ್ನು ಉಳಿಸಿದ.”

***

ಗಾಡಿಯ ಚಕ್ರದ ಮೇಲೆ ಕೂತಿದ್ದ ಸೊಳ್ಳೆ ಹೇಳಿತು ‘ಎಷ್ಟೊಂದು ಧೂಳು ಎಬ್ಬಿಸ್ತಾ ಇದ್ದೀನಿ ನಾನು' ಅಂತ.

ಸ್ವಲ್ಪ ಹೊತ್ತಾದ ಮೇಲೆ ಅದೇ ಸೊಳ್ಳೆ ಓಡುತ್ತಿದ್ದ ಕುದುರೆಯ ಮೇಲೆ ಕುಳಿತು ಹೇಳಿತು ‘ನಾನು ಎಷ್ಟು ವೇಗವಾಗಿ ಓಡ್ತಾ ಇದ್ದೀನಿ'.

ನೀತಿ : ತನ್ನನ್ನು ಹೊಗಳಿಕೊಳ್ಳುವವನು ಅಪಹಾಸ್ಯಕ್ಕೆ ಗುರಿಯಾಗುತ್ತಾನೆ.

***

ಈ ಎರಡು ಪುಟ್ಟ ನೀತಿಯುಕ್ತ ಕಥೆಗಳು ಪ್ರಕಟವಾಗಿರುವುದು ಸಂಪಟೂರು ವಿಶ್ವನಾಥ್ ಅವರು ಬರೆದ ‘ಕ್ಷಣಕ್ಕೊಂದು ಕಥೆ’ ಎನ್ನುವ ಪುಸ್ತಕದಲ್ಲಿ. ಇದರಲ್ಲಿ ಅತೀ ಸಣ್ಣ ೧೨೦ ಕಥೆಗಳಿವೆ. ಮಕ್ಕಳಿಗೆ ಹೇಳುವ ಕಥೆಗಳೇ ಆದರೂ ದೊಡ್ದವರೂ ಈ ಕಥೆಗಳನ್ನು ಓದಿ ಬಹಳಷ್ಟು ನೀತಿಗಳನ್ನು ತಿಳಿದುಕೊಳ್ಳಬಹುದು. 

ಪುಸ್ತಕದ ಬೆನ್ನುಡಿಯಲ್ಲಿ ಪ್ರಕಾಶಕರು " ಇತ್ತೀಚೆಗೆ ಕಥೆಗಳನ್ನು ಸ್ವಾರಸ್ಯಕರವಾಗಿ ಹೇಳುವವರು ಮತ್ತು ಕುತೂಹಲದಿಂದ ಕೇಳಿಸಿಕೊಳ್ಳುವವರು ಕಡಿಮೆಯಾಗಿದ್ದಾರೆ ಎನ್ನುವ ಅಳಲು ಸತ್ಯಕ್ಕೆ ದೂರವಲ್ಲ. ಈ ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ಮಕ್ಕಳಿಗಾಗಿಯೇ ಬರೆದಿರುವ ೧೨೦ ಸಣ್ಣ ಕಥೆಗಳ ಸಂಕಲನವೇ ಈ ಹೊತ್ತಗೆ ' ಕ್ಷಣಕ್ಕೊಂದು ಕಥೆ'. ಮಕ್ಕಳ ಚಂಚಲ ಬುದ್ಧಿಯನ್ನು ಹಿಡಿದಿಡಲು ಸಣ್ಣ ಕತೆಗಿಂತ ಉತ್ತಮ ಮಾರ್ಗವಿಲ್ಲ. ಕ್ಷಣಕ್ಕೊಂದು ಕಥೆಯ ಮೂಲಕ, ಮೌಲ್ಯಗಳನ್ನು ಪ್ರತಿಪಾದಿಸುವ ಇಲ್ಲಿ ನಡೆದಿದೆ.

ಈ ಕೃತಿಯನ್ನು ರಚಿಸಿರುವ ಸಂಪಟೂರು ವಿಶ್ವನಾಥ್ ಕಳೆದ ೪೫ ವರ್ಷಗಳಿಂದ ಸುಮಾರು ೮೯ ಪುಸ್ತಕಗಳನ್ನೂ, ೩೦೦೦ಕ್ಕೂ ಮಿಕ್ಕಿ ಲೇಖನಗಳನ್ನು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರೆದಿದ್ದಾರೆ. ಕನ್ನಡನಾಡಿನ ಪುಸ್ತಕ ಪ್ರಿಯರು ಕೊಂಡು ಓದಬೇಕಾದ, ಮಕ್ಕಳ ಕಥೆ ಪುಸ್ತಕ ಇದು."  ಎಂದಿದ್ದಾರೆ.

ಲೇಖಕರಾದ ಸಂಪಟೂರು ವಿಶ್ವನಾಥ್ ಇವರು ತಮ್ಮ 'ಮೊದಲ ಮಾತಿ'ನಲ್ಲಿ " ಕಥೆಯ ಹೇಳಿ ಪಾಠ ಕಲಿಸುವ ಕಲೆ ಕನ್ನಡಿಗರಿಗೆ ಹೊಸದಲ್ಲ. ಕಥೆಯ ಮೂಲಕ ಲೋಕಜ್ಞಾನವನ್ನು ಹರಡುವುದೂ ಹಳೆಯ ತಂತ್ರವೇ. ಅಜ್ಜಿ ತಾತಂದಿರು ಇರುವ ಮನೆಗಳು ಈಗ ಅಪರೂಪ. ಅಪ್ಪ, ಅಮ್ಮ ಇಬ್ಬರಲ್ಲಿ ಒಬ್ಬರು ಮನೆಯಲ್ಲೇ ಇದ್ದು ತಮ್ಮ ಮಕ್ಕಳಿಗೆ ' ದಿನಕ್ಕೊಂದು ಕಥೆ' ಹೇಳುವುದು ಇನ್ನೂ ಅಪರೂಪ.

' ಮಕ್ಕಳು ಮೂರು, ನಾಲ್ಕು ನಿಮಿಷಕ್ಕಿಂತ ಹೆಚ್ಚು ವೇಳೆ ಯಾವುದೇ ಒಂದು ವಿಷಯವನ್ನು ಕುರಿತು ಗಮನವಿಟ್ಟು ಯೋಚಿಸಲಾರರು' ಎಂಬ ಅಂಶವನ್ನು ಮಕ್ಕಳ ಮನೋ ವಿಜ್ಞಾನಿಗಳು ಹಿಡಿದಿದ್ದಾರೆ. ಆದ್ದರಿಂದ ಆಸಕ್ತಿಯನ್ನು ಕೆರಳಿಸಿ ಸ್ವಾರಸ್ಯ ಉಳಿಸಿ ಸಾರವತ್ತಾದ ಅತಿ ಸಣ್ಣ ಕಥೆಯನ್ನು ಪ್ರಯತ್ನ ಈಗ ಚುರುಕಾಗಿ ನಡೆಯುತ್ತಿದೆ. ಇಂಥ ಒಂದು ಪ್ರಯತ್ನವೇ ನಿಮ್ಮ ಕೈಯಲ್ಲಿರುವ ಚಿಕ್ಕ ಪುಸ್ತಕ ' ಕ್ಷಣಕ್ಕೊಂದು ಕಥೆ'  ಎಂದು ಅಭಿಪ್ರಾಯಪಟ್ಟಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ೧೨೦ ಪುಟ್ಟ ಪುಟ್ಟ ಕಥೆಗಳಿವೆ. ಕಥೆಗಳ ಕೊನೆಯಲ್ಲಿ ಆ ಕತೆಯು ಹೇಳುವ ನೀತಿಯನ್ನು ದಪ್ಪಕ್ಷರಗಳಲ್ಲಿ ನೀಡಲಾಗಿದೆ. ೧೪೩ ಪುಟಗಳ ಈ ಪುಸ್ತಕವನ್ನು ಓದಿ ಇದರ ನೀತಿಯನ್ನು ತಮ್ಮ ಬದುಕಿನಲ್ಲಿ ಕೊಂಡರೆ ಜೀವನ ಖಂಡಿತವಾಗಿಯೂ  ಸಾರ್ಥಕವಾಗುವುದು.