ಕ್ಷಣ ಹೊತ್ತು ಆಣಿ ಮುತ್ತು (ಭಾಗ ೭)

ಕ್ಷಣ ಹೊತ್ತು ಆಣಿ ಮುತ್ತು (ಭಾಗ ೭)

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್.ಷಡಕ್ಷರಿ
ಪ್ರಕಾಶಕರು
ರಮಣಶ್ರೀ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೧೦.೦೦, ಮುದ್ರಣ: ೨೦೧೯

‘ಕ್ಷಣ ಹೊತ್ತು ಆಣಿ ಮುತ್ತು’ ಅಂಕಣ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭದಲ್ಲಿ ಪ್ರತೀ ದಿನ ಮೂಡಿ ಬರುತ್ತಿತ್ತು. ಇದನ್ನು ಪುಸ್ತಕ ರೂಪದಲ್ಲಿ ತಮ್ಮದೇ ಆದ ರಮಣಶ್ರೀ ಪ್ರಕಾಶನದಿಂದ ಹೊರತಂದಿದ್ದಾರೆ ಲೇಖಕರಾದ ಎಸ್.ಷಡಾಕ್ಷರಿಯವರು. ಇಲ್ಲಿರುವ ಪುಸ್ತಕ ಭಾಗ ೭. ಮೊದಲ ಭಾಗಕ್ಕೆ ಎಸ್.ಎಲ್ ಭೈರಪ್ಪನವರು ಬರೆದ ಮುನ್ನುಡಿಯನ್ನೇ ಇದಕ್ಕೂ ಬಳಸಿಕೊಳ್ಳಲಾಗಿದೆ. ಪುಟ್ಟ ಪುಟ್ಟ ಕಥೆಗಳ ಮೂಲಕ, ಮಹನೀಯರ ಬದುಕಿನಲ್ಲಿ ನಡೆದ ಘಟನೆಗಳ ಉದಾಹರಣೆಗಳ ಮೂಲಕ ಬರೆದ ಲೇಖನಗಳ ಗುಚ್ಚ ಇವು. ಈ ಪುಸ್ತಕದಲ್ಲಿ ೭೫ ಅಧ್ಯಾಯಗಳಿವೆ. ಪ್ರತಿಯೊಂದು ಚುಟುಕಾಗಿದ್ದು, ಯಾವಾಗ ಬೇಕಾದರೂ ಆವಾಗ ಓದಲು ಅನುಕೂಲಕರವಾಗಿವೆ. ‘ಬಂಗಾರದ ಕಲ್ಲಿಗಿಂತ ಬೆಲೆಬಾಳುವ ಕಲ್ಲು!’ ಎಂಬ ಅಧ್ಯಾಯದಲ್ಲಿ ಲೇಖಕರು ನೀಡಿದ ಉದಾಹರಣೆಯ ಕಥೆ ಬಹಳ ಸೊಗಸಾಗಿದೆ. ಯಥಾವತ್ತಾಗಿ ಇಲ್ಲಿ ನೀಡುತ್ತಿದ್ದೇನೆ. ಓದಿ ಅದರ ಸಾರವನ್ನು ತಿಳಿಯಿರಿ.

“ಪುರಾತನ ಕಾಲದ ಮಹಾರಾಜರೊಬ್ಬರ ಆಸ್ಥಾನಕ್ಕೆ ಮಹಾತ್ಮರೊಬ್ಬರು ಬಂದರು. ಮಹಾರಾಜರು ಅವರಿಗೆ ರಾಜೋಚಿತ ಸ್ವಾಗತವನ್ನು ನೀಡಿ ಸತ್ಕರಿಸಿದರು. ಅನಂತರ ಅವರನ್ನು ಅರಮನೆ, ಶಸ್ತ್ರಾಗಾರ, ಖಜಾನೆಯಲ್ಲೆಲ್ಲಾ ಸುತ್ತಾಡಿಸಿ ತಮ್ಮ ಸಿರಿ-ಸಂಪತ್ತುಗಳ ಪರಿಚಯ ಮಾಡಿಸಿದರು. ಅದರಲ್ಲೂ ಖಜಾನೆಯಲ್ಲಿ ಸುತ್ತಾಡಿಸುವಾಗ ತಮ್ಮಲ್ಲಿದ್ದ ಬಹಳ ಬೆಲೆ ಬಾಳುವ ಚಿನ್ನ-ಬೆಳ್ಳಿ, ವರ್ಜ ವೈಡೂರ್ಯಗಳ, ಮುತ್ತು -ರತ್ನ ಒಡವೆಗಳ ಅಪಾರ ಸಂಗ್ರಹವನ್ನು ಹೆಮ್ಮೆಯಿಂದ ತೋರಿಸಿದರು. ಇವುಗಳ ಬೆಲೆ ಶತಕೋಟಿ ರೂಪಾಯಿಗಳಿಗಿಂತ ಹೆಚ್ಚು ಎಂದರು. ಮಹಾತ್ಮರು ಅವೆಲ್ಲವನ್ನೂ ಕುತೂಹಲದಿಂದ ನೋಡಿ, ಮಹಾರಾಜರನ್ನು ಅಭಿನಂದಿಸಿ, ‘ಮಹಾರಾಜರೇ! ನಾವು ಸನ್ಯಾಸಿಗಳು. ನಮಗೆ ಇವುಗಳ ಬೆಲೆ ಗೊತ್ತಾಗುವುದಿಲ್ಲ. ನಮಗೆ ಇವೆಲ್ಲ ಬೇರೆ-ಬೇರೆ ಬಗೆಯ ಕಲ್ಲುಗಳಂತೆ ಕಾಣುತ್ತವೆ! ಅದಿರಲಿ, ಇವುಗಳಿಂದ ನಿಮಗೇನಾದರೂ ಆದಾಯವಿದೆಯೇ? ಎಂದು ಕೇಳಿದರು. ಅದಕ್ಕೆ ಮಹಾರಾಜರು ನಸುನಕ್ಕು ‘ಮಹಾತ್ಮರೇ ಇವುಗಳಿಂದ ನಮಗೆ ಆದಾಯವಿಲ್ಲ. ಅಪಾಯವಿದೆ. ಖರ್ಚಿದೆ. ಏಕೆಂದರೆ ಇವನ್ನು ಯಾರಾದರೂ ಅಪಹರಿಸುತ್ತಾರೋ ಎಂಬ ಹೆದರಿಕೆ ಸದಾ ಇರುತ್ತದೆ. ಇದನ್ನು ರಕ್ಷಿಸಲು ದೊಡ್ದ ಸೇನೆಗಾಗಿ ಅಪಾರ ಹಣ ವೆಚ್ಚ ಮಾಡಬೇಕಾಗುತ್ತದೆ. ‘ ಎಂದರು. ಮಹಾತ್ಮರು ‘ಹೌದಾ? ಹಾಗಿದ್ದರೆ ಈ ಕಲ್ಲುಗಳಿಂದ ಆದಾಯವಿಲ್ಲ ಎಂದಂತಾಯಿತು. ಆದರೆ ನಮಗೆ ಮತ್ತೊಂದು ಕಲ್ಲಿನ ಪರಿಚಯವಿದೆ. ಆ ಕಲ್ಲು ಇರುವವರಿಗೆ ಉಪಯೋಗವೂ ಇದೆ. ಆದಾಯವೂ ಇದೆ. ನಮ್ಮ ದೃಷ್ಟಿಯಲ್ಲಿ ಆ ಕಲ್ಲೇ ಇವೆಲ್ಲ ಕಲ್ಲುಗಳಿಗಿಂತ ಅಮೂಲ್ಯವಾದದ್ದು!‘ಎಂದರು. ಮಹಾತ್ಮರ ಮಾತುಗಳಿಂದ ಆಶ್ಚರ್ಯಗೊಂಡ ಮಹಾರಾಜರು ‘ನಮ್ಮ ಸಂಗ್ರಹಕ್ಕಿಂತ ಬೆಲೆಬಾಳುವ ಕಲ್ಲುಗಳಿವೆಯೇ? ಅವು ಎಲ್ಲಿವೆ? ತೋರಿಸುವ ಕೃಪೆ ಮಾಡಿ' ಎಂದರು. ಮಹಾತ್ಮರು ‘ಅಂತಹ ಕಲ್ಲುಗಳು ನಿಮ್ಮ ರಾಜ್ಯದಲ್ಲೇ ಇವೆ! ಬನ್ನಿ ತೋರಿಸುತ್ತೇನೆ' ಎಂದು ಹೇಳಿ ಮಹಾರಾಜರನ್ನು ಊರಿನಾಚೆಯ ಒಂದು ಗುಡಿಸಲಿಗೆ ಕರೆದುಕೊಂಡು ಹೋದರು. ಗುಡಿಸಲಿನಲ್ಲಿ ಅಜ್ಜಿಯೊಬ್ಬರು ರಾಗಿ ಬೀಸುತ್ತಾ ಕುಳಿತಿದ್ದರು. ಮಹಾತ್ಮರು ಆಕೆಯನ್ನು ತೋರಿಸಿ ‘ಈಕೆ ಒಬ್ಬ ಅನಾಥೆ. ಸುತ್ತಮುತ್ತಲಿನವರ ರಾಗಿಯನ್ನು ಬೀಸಿಕೊಡುತ್ತಾಳೆ. ಅವರು ಕೊಡುವ ನಾಲ್ಕಾರು ಕಾಸಿನಿಂದ ಜೀವನ ಸಾಗಿಸುತ್ತಾಳೆ. ಆಕೆಯ ರಾಗಿ ಬೀಸುವ ಕಲ್ಲು ನಿಜವಾಗಿಯೂ ಬೆಲೆ ಬಾಳುವ ಕಲ್ಲು! ಏಕೆಂದರೆ ಅದರಿಂದ ಆಕೆಗೆ ಆದಾಯವೂ ಇದೆ. ಯಾರಾದರೂ ಅಪಹರಿಸುತ್ತಾರೆನ್ನುವ ಭಯವೂ ಇಲ್ಲ. ಆದುದರಿಂದ ನಮ್ಮ ದೃಷ್ಟಿಯಲ್ಲಿ ಈ ಕಲ್ಲು ನಿಮ್ಮಲ್ಲಿರುವ ಕಲ್ಲುಗಳಿಗಿಂತ ಹೆಚ್ಚು ಬೆಲೆ ಬಾಳುತ್ತದೆ. ‘ ಎಂದಾಗ ಅವರ ಮಾತುಗಳನ್ನು ಅಲ್ಲಗಳೆಯಲು ಮಹಾರಾಜರಿಗೆ ಸಾಧ್ಯವಾಗಲಿಲ್ಲವಂತೆ.!”

ಇದೇ ರೀತಿಯ ನೀತಿಯುಕ್ತ ಕಥೆಗಳು ಈ ಪುಸ್ತಕದಲ್ಲಿ ಬಹಳಷ್ಟಿವೆ. ಸುಮಾರು ೧೫೦ ಪುಟಗಳ ಈ ಪುಸ್ತಕವನ್ನು ಲೇಖಕರು ೨೦೧೯ರಲ್ಲಿ ಪ್ರಕಟ ಮಾಡಿದ್ದಾರೆ. ಲೇಖಕರು ಈ ಪುಸ್ತಕವನ್ನು ತಮ್ಮ ಸಹೋದರರು ಹಾಗೂ ಸಹೋದರಿಗೆ ಅರ್ಪಿಸಿದ್ದಾರೆ.