ಕ್ಷಮಾಪಣೆಯಿಂದ ಶಿಕ್ಷೆಗೆ ಮುಕ್ತಿ ಸಿಗುವುದೇ?

ಕ್ಷಮಾಪಣೆಯಿಂದ ಶಿಕ್ಷೆಗೆ ಮುಕ್ತಿ ಸಿಗುವುದೇ?

ನೀವು ತಿಳಿದೋ / ತಿಳಿಯದೆಯೋ ಮಾಡುವ ಯಾವುದೇ ತಪ್ಪಿಗೆ ಕ್ಷಮೆ ಎಂಬುದು ಇರುತ್ತದೆ ಎಂಬುದು ಬಹಳ ಹಿಂದಿನ ಮಾತು. ಆದರೆ ಪ್ರತಿಯೊಂದು ತಪ್ಪಿಗೆ ತನ್ನದೇ ಆದ ಶಿಕ್ಷೆ ಇದ್ದೇ ಇರುತ್ತದೆ. ತಪ್ಪು ಮಾಡಿದವನು ಅದರ ಪ್ರತಿಫಲ ಉಣ್ಣಲೇ ಬೇಕು. ಕೆಲವು ತಪ್ಪುಗಳಿಗೆ ಶಿಕ್ಷೆ ಇರುವುದಿಲ್ಲವಾದುದರಿಂದ ಅವುಗಳಿಗೆ ಕ್ಷಮಾಪಣೆ ಸಾಕಾಗುತ್ತದೆ. ಆದರೆ ಕೆಲವು ತಪ್ಪುಗಳಿಗೆ ಕ್ಷಮೆ ಕೋರುವುದರಿಂದ ಶಿಕ್ಷೆಯ ಪ್ರಮಾಣ ಕಡಿಮೆ ಆಗಬಹುದು ಆದರೆ ಮುಕ್ತಿ ಸಿಗುವುದಿಲ್ಲ. ಅಂದರೆ ಪೂರ್ಣವಾಗಿ ಶಿಕ್ಷೆಯಿಂದ ವಿನಾಯತಿ ಸಿಗುವುದಿಲ್ಲ. ಇದಕ್ಕೆ ಉದಾಹರಣೆಯಾಗಿ ರಾಮಾಯಣದ ಒಂದು ಘಟನೆಯನ್ನು ಹೇಳಬಯಸುತ್ತೇನೆ.

ರಾಮ, ಸೀತೆ, ಲಕ್ಷ್ಮಣರು ಹದಿನಾಲ್ಕು ವರ್ಷದ ವನವಾಸದ ಸಂದರ್ಭದಲ್ಲಿ ಸ್ವಲ್ಪ ಸಮಯ ಚಿತ್ರಕೂಟದಲ್ಲಿ ವಾಸವಾಗಿದ್ದರು. ಒಂದು ದಿನ ಲಕ್ಷ್ಮಣ ಕಟ್ಟಿಗೆಯನ್ನು ತರಲು ಹೋಗಿದ್ದ. ರಾಮ ಸೀತೆಯ ತೊಡೆಯ ಮೇಲೆ ತಲೆ ಇಟ್ಟು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ. ಅದೇ ಸಮಯ ದೇವರಾಜ ಇಂದ್ರನ ಪುತ್ರನಾದ ಜಯಂತನು ಅಲ್ಲಿಗೆ ಬಂದ. ಆತ ಸೀತೆಯನ್ನು ನೋಡಿ ಮೋಹಿತನಾದ. ವಿವಾಹಿತ ಸ್ತ್ರೀಯನ್ನು ಮೋಹಿಸುವುದು ಸರಿಯಲ್ಲ ಎಂದು ತನ್ನ ಅಂತರಾತ್ಮ ಹೇಳುತ್ತಿದ್ದರೂ, ತಾನು ದೇವರಾಜ ಇಂದ್ರನ ಮಗ, ದೇವಪುರುಷ ಎನ್ನುವ ಗರ್ವದಿಂದ ಅಂತರಾತ್ಮದ ಮಾತಿಗೆ ಮಣಿಯಲಿಲ್ಲ. 

ಸೀತೆಯನ್ನು ಒಲಿಸುವುದಕೋಸ್ಕರ ಆತ ಒಂದು ಕಾಗೆಯ ರೂಪ ಧರಿಸಿ ಸೀತೆಯ ಕಾಲನ್ನು ಕುಕ್ಕಿದ. ನೋವಿನಿಂದ ಸೀತೆ ತಕ್ಷಣ ನೋಡಿದಾಗ ಅಲ್ಲೊಂದು ಕಾಗೆ ಕಾಣಿಸಿತು. ಪತಿವೃತಾ ಸ್ತ್ರೀ ಆದ ಸೀತೆಗೆ ಕೂಡಲೇ ಅದು ನೈಜವಾದ ಕಾಗೆಯಲ್ಲ. ಅದು ಯಾರೋ ಮಾಯಾವಿ ಕಾಗೆಯ ವೇಷ ಧರಿಸಿಕೊಂಡು ಬಂದದ್ದು ಎನ್ನುವ ಅರಿವಾಯಿತು. ರಾಮನಿಗೆ ಎಚ್ಚರವಾಗಬಾರದೆಂದು ನೋವನ್ನು ತಡೆದುಕೊಂಡರೂ ಮತ್ತೆ ಮತ್ತೆ ಕಾಗೆ ಕುಕ್ಕಿದಾಗ ಅದು ಅಸಹಜವಾದ ವರ್ತನೆ ಎಂದು ಸೀತೆಗೆ ಅರಿವಾಯಿತು. ಈ ಗಡಿಬಿಡಿಯಲ್ಲಿ ರಾಮನಿಗೆ ಎಚ್ಚರವಾಯಿತು. ಸೀತೆಯ ಕಾಲಿನಿಂದ ರಕ್ತ ಸುರಿಯುತ್ತಿತ್ತು. ಅಲ್ಲೇ ಒಂದು ಕಾಗೆ ಸುತ್ತಾಡುತ್ತಿತ್ತು.

ಸೀತೆ ವಿಷಯವನ್ನು ಅರುಹಿದಾಗ ರಾಮನಿಗೆ ಬಹಳ ಕೋಪ ಬಂತು. ಕೂಡಲೇ ನಿಜ ರೂಪ ತೋರಿಸುವಂತೆ ಕಾಗೆಗೆ ರಾಮ ಆಜ್ಞೆ ಮಾಡಿದ. ಜಯಂತ ತನ್ನ ನಿಜ ರೂಪ ತೋರಿದ. ತಪ್ಪು ಮಾಡಿದ್ದು ತಾನೇ ಆದರೂ ರಾಮನ ಎದುರು ವಾದ ಮಾಡತೊಡಗಿದ. ರಾಮ ತಕ್ಷಣ ಅಲ್ಲೇ ಹುಲ್ಲಿನಲ್ಲಿದ್ದ ಸಣ್ಣ ದರ್ಭೆಯ ಕಡ್ದಿಯನ್ನು ಮಂತ್ರಿಸಿ ಅದನ್ನೇ ಬ್ರಹ್ಮಾಸ್ತ್ರವಾಗಿ ಜಯಂತನ ಮೇಲೆ ಪ್ರಯೋಗಿಸಿದ. ಅದನ್ನು ಕಂಡು ಬೆದರಿದ ಜಯಂತ ಮೂರೂ ಲೋಕಗಳಿಗೆ ಹೋಗಿ ತನ್ನನ್ನು ರಕ್ಷಿಸಿ ಎಂದು ಕೋರಿಕೊಂಡರೂ ಯಾರೊಬ್ಬರೂ ಆತನ ನೆರವಿಗೆ ಬರಲಿಲ್ಲ. ಕಡೆಗೆ ಚಿತ್ರಕೂಟಕ್ಕೇ ಬಂದು ಶ್ರೀರಾಮನ ಕಾಲಿಗೆ ಬಿದ್ದ. “ಅರಿಯದೇ ತಪ್ಪು ಮಾಡಿದೆ. ದಯವಿಟ್ಟು ಕ್ಷಮೆ ನೀಡಿ" ಎಂದು ಶ್ರೀರಾಮನಲ್ಲಿ ಕೋರಿಕೊಂಡ. 

ಶ್ರೀರಾಮ ಶರಣಾಗತ ವತ್ಸಲ ಆದರೆ ಆತ ಪ್ರಯೋಗ ಮಾಡಿದ್ದು ಬ್ರಹ್ಮಾಸ್ತ್ರವಾಗಿರುವುದರಿಂದ ಮತ್ತು ಜಯಂತ ಮಾಡಿದ ತಪ್ಪು ಪೂರ್ಣವಾಗಿ ಕ್ಷಮಿಸಲಾಗದ ತಪ್ಪು ಆದುದರಿಂದ ಆತನ ಒಂದು ಕಣ್ಣನ್ನು ಆ ಅಸ್ತ್ರ ನಷ್ಟ ಮಾಡಿತು. ಒಂದು ಕಣ್ಣನ್ನು ಕಳೆದುಕೊಂಡರೂ ಜೀವ ಉಳಿಯಿತಲ್ಲಾ ಎನ್ನುವ ಸಮಾಧಾನದಿಂದ ಶ್ರೀರಾಮ ಕಾಲಿಗೆ ಬಿದ್ದು ಮತ್ತೊಮ್ಮೆ ಕ್ಷಮೆ ಕೋರಿ ದೇವಲೋಕಕ್ಕೆ ಹಿಂದಿರುಗಿದ. ಶ್ರೀರಾಮನಿಗೆ ಶರಣಾಗತಿ ನೀಡುವ ಮನಸ್ಸಿದ್ದರೂ ಜಯಂತ ಮಾಡಿದ್ದು ಸರ್ವ ಸ್ತ್ರೀಜನಾಂಗಕ್ಕೆ ಮಾಡಿದ ಅವಮಾನ. ಆ ಕಾರಣದಿಂದ ಸಂಫೂರ್ಣವಾಗಿ ಆತನ ತಪ್ಪಿನಿಂದ ಮುಕ್ತಿ ಸಿಗಲಿಲ್ಲ. 

ಇದು ರಾಮಾಯಣದಲ್ಲಿ ಬರುವ ಒಂದು ಪುಟ್ಟ ಪ್ರಸಂಗ. ಆದರೆ ಈ ಪ್ರಸಂಗ ಈಗಿನ ಕಾಲಕ್ಕೂ ಬಹಳ ಸರಿಹೊಂದುತ್ತದೆ. ಬಹಳಷ್ಟು ಮಂದಿ ಗೊತ್ತಿದ್ದೂ ತಪ್ಪು ಮಾಡುತ್ತಾರೆ, ಮತ್ತೆ ಕ್ಷಮೆಯಾಚಿಸುತ್ತಾರೆ. ಇದು ತಪ್ಪು ನಡೆ. ನಮ್ಮ ಜೀವನದಲ್ಲಿ ತಪ್ಪು ಮಾಡಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವುದೇ ಗುರಿಯಾಗದೇ, ಯಾವುದೇ ಕಾರಣಕ್ಕೂ ತಪ್ಪು ಮಾಡದೇ ಇದ್ದು ಶಿಕ್ಷೆಯಾಗದಂತೆ ನೋಡಿಕೊಳ್ಳುವುದು ಉತ್ತಮ. ಇಂತಹ ಉನ್ನತ ಮಟ್ಟದ ಬದುಕು ಸಾಗಿಸಬೇಕು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ