ಕ್ಷಮಿಸಬೇಕಿತ್ತಾ ಆತನನ್ನು ...?

ಕ್ಷಮಿಸಬೇಕಿತ್ತಾ ಆತನನ್ನು ...?

ಕ್ಷಮಿಸಬೇಕಿತ್ತಾ ಆತನನ್ನು ...?

ಜುಲೈ 30 2015
ಬೆಳಗಿನ ಜಾವ 3.30ರ ಸಮಯ. ನಾಗ್ಪುರ ಸೆಂಟ್ರಲ್ ಜೈಲಿನ ಸೆಲ್ ಒಂದರಲ್ಲಿ ಮುದುರಿ ಮೂಲೆಯಲ್ಲಿ ಮಲಗಿದ್ದಾನೆ ಆತ. ಅವನ ಜೀವನದ ಮಹತ್ವದ ದಿನವಿದು. ನಿದ್ದೆ ಮಾಡದೆ ದಿನಗಳೇ ಕಳೆದು ಹೋಗಿವೆ.., ಯೋಚಿಸುತ್ತಿದ್ದಾನೆ, ನಾನು ಮಾಡಿದ ಕಾರ್ಯ ಸರಿಯೇ ತಪ್ಪೇ? ಅಂತರಾತ್ಮ ತಪ್ಪು ಎನ್ನುತ್ತದೆ. ಹಾಗಾದರೆ, ಮತ್ತೇಕೆ ಹೊರ ಪ್ರಪಂಚದಲ್ಲಿ ಕೆಲವರು ನನ್ನನ್ನು ಬೆಂಬಲಿಸುತ್ತಿದ್ದಾರೆ? ಅವರು ನನ್ನಂತೆಯೇ ಪಾತಕಿಗಳೇ?. ಅಥವಾ ನನ್ನ ಶಿಕ್ಷೆಯನ್ನು ಮುಂದಿಟ್ಟು ಕೊಂಡು ತಮ್ಮ ಸ್ವಾರ್ಥವನ್ನೇನಾದರು ಸಾಧಿಸುತ್ತಿದ್ದಾರೆಯೇ?ಯೆರಡನೆಯ ಆಲೋಚನೆಯೆ ಸರಿಯಿರಬೇಕೆನಿಸುತ್ತದೆ ಮನಸು ಗೋಜಲಾಗತ್ತದೆ..ಅವನ ಮನದ ತುಂಬ ಬರೀ ದ್ವಂದ್ವಗಳೆ.  ದೂರದಲೆಲ್ಲೊ ಕೇಳಿಸಲಾರಂಭಿಸಿದ ಬೂಟುಗಳ ಸದ್ದು ಬರಬರುತ್ತ ಹತ್ತಿರವಾಗುತ್ತವೆ. ಬೂಟುಗಳು ಬಂದು ನಿಂತದ್ದು ಇವನ ಸೆಲ್ ನ ಮುಂದೆಯೇ...ಮಲಗಿದ್ದಲ್ಲಿಂದಲೇ ಕತ್ತೇತ್ತಿ ನೋಡುತ್ತಾನೆ. ಸೆಲ್ ನ ಮುಂದೆ, ಜೈಲ್ ಸೂಪರಿಡೆಂಟ್ ಯೋಗೇಶ್ ದೇಸಾಯಿ ನಿಂತಿದ್ದಾರೆ. ಕೈನಲ್ಲಿದ್ದ ಎರೆಡು ಜೊತೆ ಹೊಸ ಬಟ್ಟೆಗಳನ್ನು ನೀಡಿ ಬಿಸಿ ನೀರಿನಲ್ಲಿ ಸ್ನಾನ ಮಾಡಿಬರುವಂತೆ ಸೂಚಿಸುತ್ತಾರೆ. ಸ್ನಾನ ಮಾಡಿ ಬಂದ ಆತ ಕೊನೆಯ ಬಾರಿಗೆ ನಮಾಜ್ ಮಾಡುತ್ತಾನೆ. ತನ್ನ ಧರ್ಮದ ಪವಿತ್ರ ಗ್ರಂಥವನ್ನು ಕೊನೆಯ ಸಲ ಓದುತ್ತಾನೆ. ಅವನಿಷ್ಟದ ಉಪಹಾರ ತಿನ್ನಿಸಿದ ಜೈಲಾಧಿಕಾರಿಗಳು ಅವನನ್ನು ಫಾರ್ಸಿ ಯಾರ್ಡ್ (ಮರಣದಂಡನೆ ನೀಡುವ ಸ್ಥಳ)ನೆಡೆಗೆ ಕರೆತರುತ್ತಾರೆ. ಮೂಡಣದಲ್ಲಿ ಇವನಿಗೆ ಸೂರ್ಯನ ಕೊನೆಯ ದರ್ಶನವಾಗುತ್ತಿದ್ದಂತೆ, ಮುಖಕ್ಕೆ ಕಪ್ಪು ಬಟ್ಟೆ ಮುಚ್ಚಿ ನೇಣಿನ ಕುಣಿಕೆ ಬಿಗಿಯುತ್ತಾರೆ. ಕಾನೂನಿನ ಕುಣಿಕೆ ಬಿಗಿಯಾದಂತೆಲ್ಲ ಆತನ ಅಪರಾಧಿ ಉಸಿರು ಚಡಪಡಿಸುತ್ತಾ ಕೊನೆಗೊಮ್ಮೆ ದೇಹವನ್ನೆ ತೊರೆಯುತ್ತದೆ. ದೇಹ ತೊರೆಯುವ ಮೊದಲು ಮಾಡಿದ ಪಾಪ ಕ್ರುತ್ಯಕ್ಕೆ ಉಸಿರು ಪಶ್ಚಾತಾಪ ಪಡುತ್ತದೆ. ಸಂಬಂಧಿಕರ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಕೊನೆಗೂ ಆತ ಬದುಕಲು ನಡೆಸಿದ ಹೋರಾಟ ವ್ಯರ್ಥವಾಗುತ್ತದೆ. ಸಾವು ಅವನನಪ್ಪಿಕೊಂಡಿರುತ್ತದೆ. ಅಷ್ಟಕ್ಕೂ ಅವನಿಗೆ ಬದುಕುವ ಅರ್ಹತೆ ಇತ್ತೇ..? 1993ರ ಮುಂಬೈ ಸ್ಪೊಟದ ಬಗ್ಗೆ ತಿಳಿದವರಾರು ಹೌದು ಎನ್ನುವುದಿಲ್ಲ. ಏಕೆಂದರೆ ಆತ ಮುಂಬೈ ಸ್ಪೊಟದ ರೂವಾರಿ ಯಾಕೂಬ್ ಮೆನನ್.
ಯಾರೀ ಯಾಕೂಬ್ ಮೆನನ್..?
1962 ಜುಲ್ಯೈ 30ರಂದು ಮುಂಬೈನಲ್ಲಿ ಹುಟ್ಟಿದ ಯಾಕೂಬ್, 1986ರಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಉನ್ನತ ಪದವಿ ಪಡೆಯುತ್ತಾನೆ. ತದನಂತರ ಅತಿ ಕಷ್ಟದ ಕೋರ್ಸ್ ಎಂದೇ ಕರೆಯಿಸಿಕೊಳ್ಳುವ ಚಾರ್ಟರ್ಡ್ ಅಕೌಂಟೆಂಟ್ ಕೋರ್ಸ್ ನ್ನು 1990ರಲ್ಲಿ ಯಶಸ್ವಿಯಾಗಿ ಮುಗಿಸುತ್ತಾನೆ.ಅಂತಹ ಬುದ್ದಿಶಾಲಿ ಈ ಯಾಕೂಬ್. 1991ರಲ್ಲಿ ತನ್ನ ಬಾಲ್ಯದ ಗೆಳಯ ಚೇತನ್ ಮೆಹ್ತಾ ಜೊತೆ ಸೇರಿ "ಮೆಹ್ತಾ ಅಂಡ್ ಮೆನನ್" ಎಂಬ ಸಂಸ್ಥೆಯನ್ನು ತೆರೆಯುತ್ತಾನೆ. ಅಡೆ ವರ್ಷ "ವರ್ಷದ ಚಾರ್ಟರ್ಡ್ ಅಕೌಂಟೆಂಟ್" ಪ್ರಶಸ್ತಿಯನ್ನು ಸಹ ಪಡೆಯುತ್ತಾನೆ. ದೇವರು ಯಾಕೂಬ್ ಗೆ ಎಲ್ಲವನ್ನು ಕರಣಿಸಿರುತ್ತಾನೆ. ಆದರೆ ಯಾಕೂಬ್ ಅದನೆಲ್ಲ ಬಿಟ್ಟು ತನ್ನ ಅಣ್ಣನ ಜೊತೆಗೂಡಿ ದಾವೂದ್ ಇಬ್ರಾಹಿಂ ಎಂಬ ದೇಶದ್ರೋಹಿ ಭಯೋತ್ಪಾದಕನ ಪರಿಚಯಕ್ಕೆ ಬೀಳುತ್ತಾನೆ.
1993ರಲ್ಲಿ ಬಾಬ್ರಿ ಮಸೀದಿ ಗಲಭೆಯಿಂದ ದೇಶದಲ್ಲಿ ಕೋಮುಗಲಭೆ ಬುಗಿಲೆದ್ದು, ಸಾವಿರಾರು ಸಾವು ನೋವು ಸಂಭವಿಸಿದ ಸಮಯವದು. ಗಲಭೆಯಲ್ಲಿ ಸತ್ತವರಲ್ಲಿ ಮುಂಬೈ ಮುಸ್ಲಿಂ ಭಾಂದವರ ಸಂಖ್ಯೆ ಹೆಚ್ಚಿರುತ್ತದೆ. ಇದರಿಂದ ಸುಖಾಸುಮ್ಮನೆ ಮೈ ಪರಚಿಕೊಳ್ಳುವ ಪಾಕಿಸ್ತಾನಿ ಗೂಡಾಚಾರಿ ಸಂಸ್ಥೆ ಐ.ಎಸ್.ಐ, ಮುಂಬೈ ಹಿಂದೂಗಳ ಮಾರಣ ಹೋಮ ನಡೆಸುವಂತೆ ಪಾಕಿಸ್ತಾನ ಮೂಲದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಎನ್ನುವ ನರ ರಾಕ್ಷನಿಗೆ ಸೂಚಿಸುತ್ತದೆ. ಪಾಕಿಸ್ತಾನದ ನೆರವಿನೊಂದಿಗೆ ದಾವೂದ್ ಇಬ್ರಾಹಿಂ ಎಂಬ ಭೂಗತ ಪಾತಕಿ, ಮುಂಬೈನ ಹಿಂದೂಗಳ ಮೇಲೆ ಸೇಡು ತೀರಿಸಿಕೊಳ್ಳುವ ದುಷ್ಟ ಯೋಜನೆಯೊಂದನ್ನು ದುಬೈನಲ್ಲೇ ಕುಳಿತು ರೂಪಿಸುತ್ತಾನೆ . ಈ ಯೋಜನೆಯನ್ನು ಜಾರಿಗೆ ತರಲು ಟೈಗರ್ ಮೆನನ್ ಎಂಬುವ ತನ್ನ ಸಹಚರನನ್ನು ಬಳಸಿಕೊಳ್ಳುತ್ತಾನೆ. ಯೋಜನೆಯ ಮೊದಲ ಭಾಗವಾಗಿ 1993 ಫೆಬ್ರವರಿ 12ರಂದು ಟೈಗರ್ ಮೆನನ್ 19 ಮುಸ್ಲಿಂ ಯುವಕರನ್ನು ,ಬಾಂಬ್ ತಯಾರಿಸುವ ಮತ್ತು ಶಸ್ತ್ರಾಸ್ತ್ರಗಳನ್ನು ಬಳಸುವ ತರಬೇತಿಗಾಗಿ ದುಬೈ ಮೂಲಕ ಪಾಕಿಸ್ತಾನಕ್ಕೆ ಕಳುಹಿಸುತ್ತಾನೆ. ಎರೆಡು ವಾರಗಳ ತರಭೇತಿ ಮುಗಿಸಿ ಬರುವ 19 ಮುಸ್ಲಿಂ ಯುವಕರನ್ನು ಅಕ್ಷರಶಃ ರಕ್ತ ಪಿಪಾಸುಗಳನ್ನಾಗಿ ಪರಿವರ್ತಿಸಿರುತ್ತಾನೆ ದಾವೂದ್. ಹಿಂದೂಗಳ ಮಾರಣ ಹೋಮಕ್ಕೆ 1993 ರ ಮಾರ್ಚ್ 13ರ ಶುಕ್ರವಾರದ ಮಧ್ಯಾನವನ್ನು ಆರಿಸಿಕೊಳ್ಳುತ್ತಾನೆ ಟೈಗರ್ ಮೆನನ್. ಶುಕ್ರವಾರ ಮಧ್ಯಾಹ್ನವನ್ನು ಆರಿಸಿಕೊಳ್ಳುವ ಹಿಂದೆಯು ಒಂದು ಆಲೋಚನೆ ಇರುತ್ತದೆ.ಸಾಮಾನ್ಯವಾಗಿ ಶುಕ್ರವಾರ ಮಧ್ಯಾನ ೧೨ರಿಂದ ೩ಗಂಟೆಯ ನಡುವೆ ಮುಸ್ಲಿಂ ಬಾಂಧವರು ನಮಾಜ್ ಗಾಗಿ ಮಸೀದಿಗಳಿಗೆ ತೆರಳುವುದರಿಂದ, ಆ ಸಮಯದಲ್ಲಿ ಮುಂಬೈ ರಸ್ತೆಗಳಲ್ಲಿ ಬಾಂಬ್ ಸ್ಪೋಟಿಸಿದರೆ ಕೇವಲ ಹಿಂದುಗಳು ಸಾಯುತ್ತಾರೆಂಬ ಮಾಸ್ಟರ್ ಪ್ಲ್ಯಾನ್ ಟೈಗರ್ ಮೆನನ್ ನದು. ಅಂದುಕೊಂಡಂತೆಯೇ, 1993 ಮಾರ್ಚ್ 13ರ ಮಧ್ಯಾನ 1.30 ರಿಂದ 3.30ರ ನಡುವೆ 13ಕಾರ್ ಬಾಂಬ್ ಗಳನ್ನು ಸಿಡಿಸಿ ಮುಂಬೈ ಎಂಬ ಮಹಾನಗರಿಯಲ್ಲಿ ರಕ್ತದ ಹೊಳೆಯನ್ನೇ ಹರಿಸಿಬಿಡುತ್ತಾರೆ ದಾವೂದ್ ಮತ್ತು ಟೈಗರ್. ಇವರ ಈ ಪೈಶಾಚಿಕ ಕೃತ್ಯಕ್ಕೆ ಅಂದು ಬಲಿಯಾಗಿದ್ದು 257 ಜನ. ಗಾಯಗೊಂಡವರು ೧೬೦೦ ಜನ. ಮನೆ ಮಠ ಕಳೆದುಕೊಂಡವರದೆಷ್ಟೋ ಜನ. ಮುಂಬೈ ಬೀದಿಗಳು ಮಡಿದವರ ಸಂಬಂಧಿಕರ ಮತ್ತು ಗಾಯಗೊಂಡವರ ಆಕ್ರಂದನಗಳಿಂದ ತುಂಬಿ ಹೋಗುತ್ತವೆ. ದಾಳಿಯಲ್ಲಿ ಹೆತ್ತವರನ್ನು,ಮಕ್ಕಳನ್ನು, ಒಡಹುಟ್ಟಿದವರನ್ನು, ಬಾಳಸಂಗಾತಿಗಳನ್ನು ಕಳೆದುಕೊಂಡವರ ನೋವಿನ ಚೀತ್ಕಾರಗಳು ಇಡೀ ದೇಶದ ಕರುಳು ಕಿವುಚುತ್ತದೆ.  ದಾವೂದ್ ಮತ್ತು ಟೈಗರ್ ಮೆನನ್ ನ ಅಟ್ಟಹಾಸಕ್ಕೆ ಇಡೀ ಭಾರತವೇ ಬೆಚ್ಚಿಬಿಳುತ್ತದೆ. ಇಂತಹ ಇಬ್ಬರು ಪಾತಕಿಗಳಿಗೆ ಹೆಗಲು ಕೊಟ್ಟು , ಇವರ ಪಾತಕಕ್ಕೆ ಹಣ, ವಾಹನ ಮತ್ತು ಹುಡುಗರನ್ನು ಸರಬರಾಜು ಮಾಡಿದವನೇ ಈ ಯಾಕೂಬ್ ಮೆನನ್, ಟೈಗರ್ ಮೆನನ್ ನ ಸಹೋದರ. ಈಗ ಹೇಳಿ ಓದುಗರೆ  ಕ್ಷಮಿಸಬೇಕಿತ್ತಾ ಯಾಕೂಬ್ ನನ್ನು?
           ಆಘಾತದಿಂದ ಚೇತರಿಸಿಕೊಂಡು, ಬಾಂಬ್ ಸ್ಪೋಟದ ರೂವಾರಿಗಳನ್ನು ಹುಡುಕಿ ಹೊರಟ. ಮುಂಬೈ ಪೋಲಿಸರು ಸ್ಪೋಟದ ಹಿಂದಿದ್ದದ್ದು ದಾವೂದ್ ಮತ್ತು ಮೆನನ್ ಸಹೋದರರೆಂದು ಪತ್ತೆ ಹಚ್ಚುತ್ತಾರೆ. ಬಂಧನದ ಭೀತಿಯಿಂದ ದಾವೂದ್ ದುಬೈಗೆ ಓಡಿಹೋದರೆ, ಟೈಗರ್ ಪಾಕಿಸ್ತಾನ ಸೇರಿಕೊಳ್ಳುತ್ತಾನೆ. ಯಾಕೂಬ್ ಮಾತ್ರ ಅತಂತ್ರಿಯಾಗಿ ದೇಶ-ದೇಶ ಸುತ್ತುತ್ತಿರುವಾಗ 1994 ಆಗಸ್ಟ್ ನಾಲ್ಕರಂದು ದೆಹಲಿ ರೈಲ್ವೆ ನಿಲ್ದಾಣದಲ್ಲಿ  ಬಂಧನಕೊಳಗಾಗುತ್ತಾನೆ. ಟಾಡಾ ಕಾಯ್ದೆಯಡಿ ಯಾಕೂಬ್ ವಿರುದ್ದ ಕೇಸು ದಾಖಲಾಗುತ್ತದೆ.
                                ಹದಿಮೂರು ವರ್ಷಗಳ ಕೂಲಂಕುಷ ವಿಚಾರಣೆ ನಡೆಸಿದ ಟಾಡಾ ನ್ಯಾಯಾಲಯ , ಸಾಕ್ಷಾಧಾರಗಳನ್ನು ಪರಿಶೀಲಿಸಿ ಯಾಕೂಬ್ ನನ್ನು ಅಪರಾಧಿಯೆಂದು ಪರಿಗಣಿಸುತ್ತದೆ. 2007ರಲ್ಲಿ ಟಾಡಾ ಕಾಯಿದೆಯಡಿ ಯಾಕೂಬ್ ಗೆ ಮರಣದಂಡನೆಯನ್ನು ವಿಧಿಸುತ್ತದೆ.
2013ರಲ್ಲಿ ಯಕೂಬ್, ಟಾಡಾ ಕೋರ್ಟ್ ನ ತೀರ್ಪನ್ನು ಪ್ರಶ್ನಿಸಿ ಸುಪ್ರಿಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತಾನೆ. ವಾದ-ವಿವಾದ ಮತ್ತು ಸಾಕ್ಷಿಗಳನ್ನು ಪರಿಶೀಲಿಸಿದ ಸುಪ್ರಿಂಕೋರ್ಟ್, ಟಾಡಾ ಕೋರ್ಟ್ ನ ತೀರ್ಪನ್ನು ಎತ್ತಿಹಿಡಿದು, ಯಾಕೂಬ್ ಗೆ ಮರಣ ದಂಡನೆಯನ್ನು ಖಾಯಂಗೊಳಿಸುತ್ತದೆ. 2013ರ ಜುಲೈ ಮತ್ತು ಆಗಸ್ಟ್ ನಲ್ಲಿ ತೀರ್ಪನ್ನು ಮರು ಪರಿಶೀಲಿಸಲು ಯಾಕೂಬ್ ಮಾಡಿದ ಮನವಿಯನ್ನು ಸುಪ್ರಿಂಕೋರ್ಟ್ ತಿರಸ್ಕರಿಸಿ ಈ ಹಿಂದಿನ ತೀರ್ಪನ್ನು ಎತ್ತಿ ಹಿಡಿಯುತ್ತದೆ. ಇನ್ನು ಕೋರ್ಟ್ ಗೆ ಅಲೆದು ಪ್ರಯೋಜನವಿಲ್ಲವೆಂದರಿತ ಯಾಕೂಬ್ ರಾಷ್ಟ್ರಪತಿ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸುತ್ತಾನೆ. 2014ರ ಏಪ್ರಿಲ್ ನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವ ಮೂಲಕ ಯಾಕೂಬ್ ಗೆ ಗಲ್ಲು ನಿಚ್ಚಳವಾಗುತ್ತದೆ.
         ಆಗ ಪ್ರಾರಂಭವಾಗುತ್ತದೆ ನೋಡಿ ನಮ್ಮ ಕೆಲವು ನೈತಿಕತೆ ಇಲ್ಲದ ರಾಜಕೀಯ ಪಕ್ಷಗಳ, ರಾಜಕಾರಣಿಗಳ ಮತ್ತು ಮಾಧ್ಯಮಗಳ ದುರ್ವರ್ತನೆ. ಕೇಂದ್ರ ಸರ್ಕಾರವನ್ನು ದೂಷಿಸುವ ಭರದಲ್ಲಿ, ಉಗ್ರ ಯಾಕೂಬ್ ನ ಬೆನ್ನಿಗೆ ನಿಲ್ಲುತ್ತಾರೆ. ಯಾಕುಬ್ ಗಲ್ಲು ಶಿಕ್ಷೆಯನ್ನು ರದ್ದು ಮಾಡಬೇಕೆಂಬ ದೊಡ್ಡ ಆಂದೋಲನವನ್ನೆ ಪ್ರಾರಂಭಿಸುತ್ತವೆ. ಈತನ್ಮದ್ಯೆ ಯಾಕೂಬ್ ಬೆಂಬಲಿಗರು, ಯಾಕೂಬ್ ಶಿಕ್ಷೆಯನ್ನು ವಜಾಹೊಳಿಸುವಂತೆ 3ಬಾರಿ ಸುಪ್ರಿಂಕೋರ್ಟ್ ನ ಬಾಗಿಲು ಬಡಿಯುತ್ತಾರೆ. ಇವರ ವಾದವನ್ನು ಮತ್ತೆ ತಾಳ್ಮೆಯಿಂದಾಲಿಸಿದ ಸುಪ್ರಿಂಕೋರ್ಟ್ ವಾದದಲ್ಲಿ ಹುರುಳಿಲ್ಲವೆಂದು ಶಿಕ್ಷೆಯನ್ನು ಮತ್ತೆ ಖಾಯಂಗೊಳಿಸುತ್ತದೆ. 2015 ಏಪ್ರಿಲ್ 30ರಂದು ಮಹಾರಾಷ್ಟ್ರ ಸರ್ಕಾರ ಜುಲೈ 30ರಂದು ಯಾಕೂಬ್ ನನ್ನು ಗಲ್ಲಿಗೇರಿಸುವುದೆಂಬ ಮರಣ ಶಾಸನವನ್ನು ಬಿಡುಗಡೆಗೊಳಿಸುತ್ತದೆ. ಇದಾದನಂತರವು ಕಾಂಗ್ರೆಸ್ಸ್ ಪಕ್ಷದ ಕೆಲವು ರಾಜಕಾರಣಿಗಳು ಕೆಲವು ಬಾಲಿವುಡ್ ನಟರು, ಮರಣದಂಡನೆಯನ್ನು ರದ್ದು ಪಡಿಸುವಂತೆ ಮತ್ತೆರೆಡು ಬಾರಿ ಸುಪ್ರಿಂಕೋರ್ಟ್ ಬಾಗಿಲು ಬಡಿಯುತ್ತಾರೆ. ಯಾವುದಕ್ಕೂ ಬಗ್ಗದ ಸುಪ್ರಿಂಕೋರ್ಟ್ ಅರ್ಜಿಗಳನ್ನು ವಜಾಗೊಳಿಸುತ್ತದ್ದೆ.
ಬಹುಶಃ ಯಾಕೂಬ್ ಗೆ ಅವನನ್ನು ನಿರಪರಾಧಿಯೆಂದು ಸಾಭೀತುಪಡಿಸಲು ದೊರಕಿದಸ್ಟು ಅವಕಾಶಗಳು ಬೇರಾವ ಅಪರಾಧಿಗೂ ಲಭಿಸಿರುವುದಿಲ್ಲ. ಆದರೆ ಯಾಕೂಬ್ ಅಪರಾಧಕ್ಕೆ ಸಾಲು-ಸಾಲು ಸಾಕ್ಷ್ಯಗಳಿದ್ದವು. ಮುಂಬೈ ಮಾರಣಹೋಮದಲ್ಲಿ ಯಾಕೂಬ್ ನ ಕೈವಾಡ ಸಾಬೀತಾಗಿತ್ತು. ನಮ್ಮಲ್ಲಿ ಎಂತಹ ನೀಚ ರಾಜಕಾರಣಿಗಳಿದ್ದಾರೆಂದರೆ, ಜುಲೈ 28ರಂದು ಅಂದರೆ ಗಲ್ಲು ಶಿಕ್ಷೆಯ ಎರೆಡು ದಿನ ಮೊದಲು, ಯಾಕೂಬ್ ನನು ಕ್ಷಮಿಸಬೇಕೆಂಬ ಮನವಿಯನ್ನು ಸುಪ್ರಿಂಕೋರ್ಟ್ ಗೆ ಸಲ್ಲಿಸುತ್ತಾರೆ. ಈ ಮನವಿಗೆ ಕೆಲವು ಕಾಂಗ್ರೇಸ್ ನಾಯಕರು ,ಸಲ್ಮಾನ್, ಕರೀನಾ, ಶತ್ರುಘ್ನ ಸಿನ್ಹಾ ಸೇರಿದಂತೆ ಹಲವು ಬಾಲಿವುಡ್ ನಟರು ಸಹಿ ಹಾಕುತ್ತಾರೆ. ರಾಜ್ಯದಲ್ಲಿ ರೈತರು ಸಾಲು-ಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಕೇಂದ್ರದ ಬಳಿಕುಳಿತು ರೈತರ ಸಮಸ್ಯೆಗೆ ಪರಿಹಾರ ಹುಡುಕಲು ಸಮಯವಿಲ್ಲದ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಯಾಕೂಬ್ ನ ಕ್ಷಮಾದಾನ ಮನವಿಗೆ ಸಹಿ ಹಾಕುತ್ತಾರೆ ಸ್ವಾಮಿ. ಆಹ್ಹಾ.., ಎಂತಹ ಮುಖ್ಯಮಂತ್ರಿ ಸಿಕ್ಕಿದ್ದಾರಪ್ಪ ಕರ್ನಾಟಕಕ್ಕೆ. ಜುಲೈ 29ರ ಮಧ್ಯರಾತ್ರಿ ಸುಪ್ರಿಂಕೋರ್ಟ್ ಕದ ತೆಗೆದು ಅರ್ಜಿ ಪರಿಶೀಲನೆ ನೆಡೆಸುತ್ತದೆ. ಕೊನೆಗೆ ಜುಲೈ 30ರ ಬೆಳಗಿನ ಜಾವ ಭಾರತೀಯ ಸರ್ವೋಚ್ಚ ನ್ಯಾಯಾಲಯ, ಭಾರತೀಯರೆಲ್ಲ ಹೆಮ್ಮೆ ಪಡುವಂತಹ ತೀರ್ಪು ನೀಡುತ್ತದೆ. ಯಾಕೂಬ್ ನನ್ನು ಗಲ್ಲಿಗೇರಿಸುವಂತೆ ನಿರ್ದೇಶನ ನೀಡುತ್ತದೆ. ಕೊನೆಗೂ ರಕ್ತಪಿಪಾಸು, ಮುಂಬೈ ದಾಳಿಯ ಕಿಂಗ್ ಪಿನ್ ನ ಉಸಿರನ್ನು, ಭಾರತದ ಕಾನೂನಿನ ಕುಣಿಕೆ ನಿಲ್ಲಿಸು ಮೂಲಕ ಭಯೋತ್ಪಾದಕರಿಗೆ ಸ್ಪಷ್ಟ ಸಂದೇಶ ರವಾನೆಯಾಗುತ್ತದೆ.
       ವಿಪರ್ಯಾಸವೆಂದರೆ ಯಾಕೂಬ್ ಸಾವಿನೊಂದಿಗೆ ನಮ್ಮ ಕೆಲವು ರಾಜಕೀಯನಾಯಕರ, ಸುದ್ದಿಮಾದ್ಯಮದವರ ಕೆಟ್ಟ ಮನಸ್ಥಿತಿ ಬೆತ್ತಲಾಗಿದೆ. ಅತ್ತ ಯಾಕೂಬ್ ನನ್ನು ಗಲ್ಲಿಗೆ ಹಾಕುತ್ತಿದ್ದಂತೆಯೇ ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಇವರುಗಳ ಮನಸ್ಥಿತಿ ಬೆತ್ತಲಾಗುತ್ತ ಹೋಯಿತು. ಯಾಕೂಬ್ ಅಮಾಯಕ ಎನ್ನುವುದು ಕಾಂಗ್ರೆಸ್ಸ್ ನಾಯಕ ಶಶಿ ತರೂರ್ ವಾದವಾದರೆ, ಯಾಕೂಬ್ ನನ್ನು ಗಲ್ಲಿಗೆ ಹಾಕುವುದರಲ್ಲಿ ಸರ್ಕಾರ ಆತುರ ತೋರಿದೆಯೆಂಬುದು ಇನ್ನೊಬ್ಬ ಕಾಂಗ್ರೆಸ್ಸ್ ನಾಯಕ ದಿಗ್ವಿಜಯ ಸಿಂಗ್ ಅಂಬೋಣ. ಯಾಕೂಬ್ ಗೆ ಹೆಂಡತಿ ಮಕ್ಕಳಿದ್ದಾರೆ ಅದ್ದರಿಂದ ಅವನನ್ನು ಕ್ಷಮಿಸಬೇಕೆಂಬುದು ಇನ್ನು ಕೆಲ ನಾಯಕರ ಅಭಿಪ್ರಾಯ. ಟೈಮ್ಸ್ ಆಫ್ ಇಂಡಿಯಾ ಎಂಬ ನೈತಿಕತೆ ಇಲ್ಲದ ಪತ್ರಿಕೆಯಂತು ತನ್ನ ಜುಲೈ 30ರ ಪತ್ರಿಕೆಯನ್ನು ಯಾಕೂಬ್ನನು ನಿರಪರಾಧಿ ಎಂದು ಬಿಂಬಿಸುವ ವ್ಯರ್ಥ ಪ್ರಯತ್ನಕ್ಕೆ ಮೀಸಲಿಡುತ್ತದೆ.ರಾಜ್ಯದ ರೈತರು ದಿನ ಬೆಳಗಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಒಂದು ಸಾಲೂ ಗೀಚದ ಗೌರಿ ಲಂಕೇಶ್ ಎಂಬ ಟ್ಯಾಬ್ಲ್ಲಾಯ್ಡ್ ಪತ್ರಿಕೆಯ ಸಂಪಾದಕಿ, ಭಾರತೀಯ ಕಾನೂನು ಒಬ್ಬನನ್ನು ಕೊಲೆ ಮಾಡಿ ಅದರ ಪಾಲನ್ನು ನಮಗೆ ಹಂಚುತ್ತಿದೆ, ನನಗದರ ಪಾಲು ಬೇಡವೆಂದು ಬಾಯಿಗೆ ಬಂದಂತೆ ಟ್ವಿಟರ್ನಲ್ಲಿ ಗೀಚುತ್ತಾರೆ. ಅಲ್ಲಾ ಇವರಲ್ಲಿ ಯಾರಿಗಾದರು ಕನಿಷ್ಠ ಮಾನ-ಮರ್ಯಾದೆಯಿದೆಯೇ ..? ಯಾಕೂಬ್ ನನ್ನು ಮೊನ್ನೆ ಹಿಡಿದು ನಿನ್ನೆ ಗಲ್ಲಿಗೇರಿಸಿಲ್ಲ ಸ್ವಾಮಿ. 22ವರ್ಷಗಳ ಸುಧೀರ್ಘ ವಿಚಾರಣೆ ನೆಡೆಸಿ ,ವಿಚಾರಣೆಯ ಪ್ರತಿ ಹಂತದಲ್ಲೂ ಮುಂಬೈ ದಾಳಿಯಲ್ಲಿ ಯಾಕೂಬ್ ಪಾತ್ರವಿದೆ ಎಂದು ಧೃಡಪಟ್ಟ ಮೇಲೆಯೇ ಶಿಕ್ಷೆ ವಿಧಿಸಿದ್ದು. ಯಾಕೂಬ್ ನಿಗೆ ಮಾತ್ರ ಹೆಂಡತಿ ಮಕ್ಕಳಿದ್ದದ್ದೇ? ಮುಂಬೈ ದಾಳಿಯಲ್ಲಿ ಸತ್ತವರೇನು ಭಿಕಾರಿಗಳಾಗಿದ್ದರೇ ?ಮಡಿದ 257ಮಂದಿಗೂ ಕುಟಂಬವಿತ್ತು ಸ್ವಾಮಿ. ಇನ್ನು ಭಾರತೀಯ ನ್ಯಾಯಾಂಗ ನಿಂಧನೆ ಮಾಡಿದ , ಕನಿಷ್ಠ ಕಾನೂನಿನ ಅರಿವುಯಿಲ್ಲದ ಗೌರಿ ಲಂಕೇಶ್ ಬಗ್ಗೆ ಮಾತನಾಡದಿರುವುದೆ ಒಳಿತು. ಯಾಕೂಬ್ ಮುಸ್ಲಿಂ ಆದ್ದರಿಂದ ಅವನನ್ನು ಗಲ್ಲಿಗೆ ಹಾಕಲಾಗಿದೆ ಎನ್ನುವವರು, ಹಿಂದೊಮ್ಮೆ ತಾವೇ ಭಯೋತ್ಪಾದನೆಗೆ ಧರ್ಮವಿಲ್ಲವೆಂದು ಬೊಗಳಿದ್ದನ್ನು ನೆನಪಿಸಿಕೊಂಡರೆ ಒಳ್ಳೆಯದು. ಇಲ್ಲಿ ಆಶ್ಚರ್ಯವಾಗುವುದು ಕೆಲ ಕಾಂಗ್ರೆಸ್ಸ್ ನಾಯಕರುಗಳ, ಮುಸ್ಲಿಂ ಬಾಂಧವರನ್ನು ದತ್ತು ತೆಗೆದುಕೊಂಡಿರುವಂತಹ ವರ್ತನೆ. ಇವರ ಈ ವರ್ತನೆ ಪ್ರತಿಯೊಬ್ಬ ದೇಶಭಕ್ತ ಮುಸಲ್ಮಾನನಿಗೆ ಇರುಸು-ಮುರುಸು ಉಂಟುಮಾಡುತ್ತಿದೆ. ಇವರ ಓಟ್ ಬ್ಯಾಂಕ್ ರಾಜಕಾರಣಕ್ಕೆ ಭಯೋತ್ಪಾಕರನ್ನು ಬೆಂಬಲಿಸುವುದು ಎಷ್ಟು ಸರಿ ? ಕಾಂಗ್ರೆಸ್ಸ್ ನಾಯಕರ ಈ ಧೋರಣೆ ನಿಲ್ಲದಿದ್ದಲ್ಲಿ ಪಕ್ಷ ಇತಿಹಾಸದ ಪುಟ ಸೇರುವುದು ಖಂಡಿತ.
          ಇದೆಲ್ಲದರ ಮಧ್ಯೆ ಖುಷಿಕೊಟ್ಟದ್ದು ಮಾತ್ರ ಕೆಲ ದೇಶ ಪ್ರೇಮಿ ಮುಸ್ಲಿಂರ ಸಂದೇಶಗಳು. ಶಶಿ ತರೂರ್ ರ ಟ್ವಿಟ್ ಗೆ ಪ್ರತಿಕ್ರಿಯಿಸಿದ ಅಹ್ಮದ್ ಉಪುಕಾರ್ ಎಂಬ ಮುಸ್ಲಿಂ ಭಾಂದವ, ಪಾತಕಿ ಯಾವ ಧರ್ಮದವನೇ ಆಗಲಿ ಅವನಿಗೆ ಶಿಕ್ಷೆಯಾಗಲೇ ಬೇಕು ಸುಪ್ರಿಂಕೋರ್ಟ್ ತೀರ್ಪು ಸ್ವಾಗತಾರ್ಹ ಎಂದು ಟ್ವಿಟಿಸುತ್ತಾರೆ. ಮಹ್ಮದ್ ಅಬ್ದುಲ್ಲಾ ಹೇಳುತ್ತಾರೆ, ನಮಗೆ ಸ್ಫೂರ್ತಿ ಮತ್ತು ಹೆಮ್ಮೆ ಅಬ್ದುಲ್ ಕಲಾಂ ಅವರೆ ಹೊರತು ಪಾತಕಿ ಯಾಕೂಬ್ ಅಲ್ಲ, ದಯಮಾಡಿ ಅವನನ್ನು ಮುಸ್ಲಿಂ ಎನ್ನಬೇಡಿ ಅವನನ್ನು ಭಯೋತ್ಪಾದಕ ಎನ್ನಿ ಎನ್ನುತ್ತಾರೆ. ಪಾಕಿಸ್ತಾನ ಇದುವರೆವಿಗೂ ಭಾರತದ ಕೂದಲನ್ನು ಕೊಂಕಿಸಲು ಸಾಧ್ಯವಾಗಿಲ್ಲವೆಂದರೆ ಅದಕ್ಕೆ ಇಂತಹ ದೇಶಭಕ್ತ ಮುಸ್ಲಿಂ ಬಾಂಧವರು ಕೂಡ ಒಂದು ರೀತಿ ಕಾರಣ. ಅಭಿಮಾನವಿರಲಿ ಅಂತಹ ಮುಸಲ್ಮಾನರ ಬಗ್ಗೆ ಹಾಗೆ ಧಿಕ್ಕ್ಕಾರವಿರಲಿ ಯಾಕೂಬ್ ನಂತಹ ದೇಶ ದ್ರೋಹಿಗಳಿಗೆ.
       ಅದೇನೆ ಇರಲಿ, ಭಾರತೀಯ ಸರ್ವೋಚ್ಚ ನ್ಯಾಯಾಲಯ ಯಾಕೂಬ್ ನನ್ನು ನೇಣುಹಾಕುವ ಮೂಲಕ ಭಯೋತ್ಪಾದಕರಿಗೆ ಸ್ಪಷ್ಟ ಸಂದೇಶ ರವಾನಿಸಿದೆ. ಅಗಲಿದ ಮಹಾನ್ ಚೇತನ ಅಬ್ದುಲ್ ಕಲಾಂರನ್ನು ನೆನೆಯುತ್ತ, ಪಕ್ಷ ಮತ್ತು ಧರ್ಮ ಭೇಧಗಳನ್ನು ಮರೆತು ಭಯೋತ್ಪಾದನೆ ಮತ್ತು ಭಯೋತ್ಪಾದಕರ ವಿರುದ್ಧ ಸಮರ ಸಾರೋಣ.

ಮೇರಾ ಭಾರತ್ ಮಹಾನ್
ಅರ್ಜುನ್ ದೇವಾಲದಕೆರೆ

Comments

Submitted by ಗಣೇಶ Tue, 08/18/2015 - 00:40

ಪಾರ್ಥರೆ, ನಿಮ್ಮಿಂದ ನಾನು ಈ ತರಹದ ಲೇಖನ ನಿರೀಕ್ಷಿಸಿರಲಿಲ್ಲ! ನೂರಾರು ಕತೆ, ಲೇಖನ ಬರೆದಿರುವ ತಾವು ಮನುವಾದಿ, ಜಾತಿವಾದಿ, ಮೂಲಭೂತವಾದಿ, ಮೂಲದೆವ್ವವಾದಿ, ಹಿಂದೂವಾದಿ....ವಾದಿ...ವಾದಿ..ತರಹ ವಾದಿಸಿದ್ದೀರಿ. ನಿಮ್ಮ ಯೋಚನೆಗಳು ಜಡ್ಡು ಹಿಡಿದಿವೆ! ಜನರನ್ನು ಓದುಗರನ್ನು ೧೮ನೇ ಶತಮಾನಕ್ಕೆ ಕೊಂಡುಹೋಗುತ್ತಿದ್ದೀರಿ..ಜೀವವನ್ನು ಸೃಷ್ಠಿಸಲು ಸಾಧ್ಯವಿಲ್ಲ ಎಂದಮೇಲೆ ತೆಗೆಯುವ ಹಕ್ಕೂ ಇಲ್ಲ...
-ಪ್ರಗತಿಪರ, ಚಿಂತಕ ಗಣೇಶ.
******************************
(ಹಲವಾರು ಟಿ.ವಿ ಚ್ಯಾನಲ್‌ಗಳು ಇವೆ. ಮುಂದಿನ ಚರ್ಚೆಯಲ್ಲಿ ಪ್ರಗತಿಪರ ಚಿಂತಕನಾದ ನನ್ನನ್ನೂ ಸೇರಿಸಿದರೆ, ಸ್ಟೈಲಾಗಿ ಕುಳಿತು, ಬಾಯಿಗೆ ಬಂದದ್ದು ಒದರಿ, ಸರಕಾರದಿಂದ ಏನಾದರೂ ಸೈಟು, ಗೀಟು, ಪ್ರಶಸ್ತಿ....ಗಿಟ್ಟಿಸುತ್ತೇನೆ. ನೀವು ಹೀಗೇ ಬೈದುಕೊಂಡು ಇರಿ.)

Submitted by ಗಣೇಶ Tue, 08/18/2015 - 00:47

In reply to by ಗಣೇಶ

:) :) ಅವಸರದಲ್ಲಿ ತಪ್ಪಾಯಿತು! ಲೇಖನ ಬರೆದವರು ನಮ್ಮ ಪಾರ್ಥಸಾರಥಿ ಅಂದುಕೊಂಡೆ.:)
ಲೇಖನ ಚೆನ್ನಾಗಿದೆ.
ಒಂದು ತಿಂಗಳು ಗಲ್ಲು ಶಿಕ್ಷೆ ಬೇಡ ಎಂದು ವಾದಿಸುವವರನ್ನು ಗಡಿಯಲ್ಲಿರುವ ಸೈನಿಕರ ಸೇವೆ ಮಾಡಲು ಕಳುಹಿಸಬೇಕು. ಇನ್ನೊಂದು ತಿಂಗಳು ನಕ್ಸಲ್ ಪೀಡಿತ ಪ್ರದೇಶದಲ್ಲಿ ವಾಸಿಸಲು ಬಿಡಬೇಕು.

Submitted by kavinagaraj Wed, 08/19/2015 - 09:11

ತಾನು ಮಾಡಿದ್ದ ತಪ್ಪು ಎಂಬ ಭಾವನೆ ಮೂಡಿರುವ ಸಾಧ್ಯತೆ ಕಡಿಮೆಯೆಂದು ಅನ್ನಿಸುತ್ತದೆ. ಗಲ್ಲಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸೋತ ಬಗ್ಗೆ ಹತಾಶೆಯಿರಬಹುದು.