ಕ್ಷಮೆಯಾ ಧರಿತ್ರಿ
ಧರಣಿಯ ತಾಳ್ಮೆಗೆ ಮೆಚ್ಚಿದ ಮನವಿದು
ಮರೆಯದೆ ನಿನಿಗಿದೊ ನಮನವಿದೊ
ಕರೆಯನು ನೀಡುತ ನಿನ್ನನ್ನು ಉಳಿಸಲು
ಜರಿಯದೆ ಮಾಡುವ ವಂದನೆಯೊ..
ಭಾದೆಯ ಮಾಡುತ ಮನುಜನು ನಿತ್ಯವು
ಮೇದಿನಿಯಲ್ಲಿಯೆ ಭೀಕರತೆಯು
ಕಾಯುತ ಜೀವಕೋಟಿಗೆ ಉಸಿರುಣಿಸುವ
ಪಾದಕೆ ಕೊಡಲಿಯಿಟ್ಟ ಘೋರತೆಯು..
ಉಸಿರನು ನೀಡುವ ಧರಣಿ ಮಾತೆಗೆ
ಹಸಿರನ್ನೆ ಬಗೆಯುತ ಬಸಿಯುತಿಹರು
ಕಸಿಯುತ ಸ್ವಾರ್ಥದಿ ಬಂಜರು ಮಾಡುತ
ಹೆಸರನು ಕೆಡಿಸುತ ಸುಡುತಿಹರು..
ಬಹಳದಿ ಧರೆಯೊಡಲ ಬಸಿಯುತಿರೆ
ಸಹನೆಯ ಮೂರ್ತಿಯು ಧರಿತ್ರಿಯು
ಮಹಿಮೆಯ ತೋರಿಸಿ ಸಲಹುತಿಹಳು
ಗಹನವ ಬಿಡದಿಹ ಸರಿರಾತ್ರಿಯು...
ತಾಯಿ ದೇಹವ ಜರ್ಜರಿತಗೊಳಿಸುತ
ಸಾಯಿಸುತ ಘಾಸಿಮಾಡುತಿಹರು
ಕಾಯಿಸಿ ಬೇಧಿಸಿ ಬಂಧದಿ ಬಗೆಯುತ
ನೋಯಿಸಿ ಹುಣ್ಣನು ಮಾಡುತಿಹರು..
ನಿತ್ಯ ನಿರ್ಮಲಳು ಸಸ್ಯ ಶ್ಯಾಮಲೆಯು
ತಥ್ಯ ಮಾರ್ಗದಿ ಹಸಿರು ಸಾಗಿಸುತ
ಮಿಥ್ಯ ನೋಡಿದರು ಸುಮ್ಮನಿರುವಳು
ಕೃತ್ಯಮಾಡುವ ಮಂದಿಯ ಕ್ಷಮಿಸುತ..
ದುರಾಸೆಯ ಮನುಜನ ಅಟ್ಟಹಾಸವನು
ಮೆರೆಸುತ ಕ್ಷಮಿಸುತ ಬಂದಿಹಳು
ಹರಸುವ ತಾಯಿಯ ತಾಳ್ಮೆಗೆ ಸೋತಿಹ
ವರವನು ನೀಡುವ ಸಾಗುತಿಹಳು..
ತನ್ನೊಡಲ ಬಗೆದು ಬರಿದು ಮಾಡುತ
ತನ್ನೆಯ ಕುಲಕೆ ಮುಳುವಾಗಿಹನು
ಬನ್ನಿರಿ ನೋಡಿರಿ ಮಾರಣ ಹೋಮವ
ಕನ್ನದಿ ಕಾಡಿಗೆ ಕೊಡಲಿಹಿಟ್ಟಿಹನು...
ಬುದ್ದಿಯು ಬಾರದೆ ದುಡುಕು ಮನುಜಗೆ
ಸಿದ್ಧತೆ ಮಾಡಿಯೆ ಸನ್ನದ್ಧಳಾದಳು
ಬದ್ಧತೆಯಿಂದಲೆ ಸಾಗುವ ಮಂದಿಗೆ
ಸದ್ದನು ಮಾಡದೆ ಕ್ಷಮಿಸುತಿಹಳು...
-ಅಭಿಜ್ಞಾ ಪಿ ಎಮ್ ಗೌಡ