ಕ್ಷುದ್ರ ರಾಜಕೀಯ ಮತ್ತು ಬ್ಯುರಾಕ್ರಸಿ
ಆಡಿಟ್ ಅಧಿಕಾರಿ ಮಹಂತೇಶರ ಕೊಲೆ ಬರ್ಬರ. ಇದಕ್ಕೆ ನಾಗರಿಕ ಸಮಾಜದ ವಿಷಾದವಿದೆ. ಪ್ರಕರಣ ತನಿಖೆ ಹಂತದಲ್ಲಿದೆ. ಆದರೆ ಮಾಧ್ಯಮದ ಸುದ್ದಿ ಮತ್ತು ಬುದ್ಧಿಗಳು, ಇದನ್ನು ಅಧಿಕಾರಿ ಪ್ರಾಮಾಣಿಕತೆಗಾಗಿಯೇ ತೆತ್ತ ತಲೆದಂಡ ಎಂಬ ಆವೇಶ - ಸೆನ್ಸೇಷನ್ - ಸೃಷ್ಟಿಸುತ್ತಿವೆ. 'ಬ್ಯುರಾಕ್ರಸಿಯಲ್ಲಿ ಪ್ರಾಮಾಣಿಕರೆಂಬುವವರೇ ಇಲ್ಲ; ಅಕಸ್ಮಾತ್ ಇದ್ದರೆ ಅವರಿಗೆ ಉಳಿಗಾಲವಿಲ್ಲ' ಎಂಬ ಸಂದೇಶ ಇದರಿಂದ ರವಾನೆಯಾಗುತ್ತದೆ.
ನೀತಿಗೆಟ್ಟ ರಾಜಕೀಯದ ಕಪ್ಪು ಛತ್ರಿಯಡಿಯಲ್ಲಿ, ಸರಕಾರದ ಅಧಿಕಾರಿ ಮತ್ತು ಸಹಾಯಕರೆಂಬ ಬಹುತೇಕ ನೌಕರ ವರ್ಗ, 'ಮೇಕ್ ದ ಹೇ, ವೆನ್ ಸನ್ ಶೈನ್ಸ್' ಎಂಬ ಬುದ್ಧಿಮತ್ತೆ ತೊರಿಸುವುದು ಸುಳ್ಳಲ್ಲ. ಇಲ್ಲದವರು ರಿಸ್ಕ್ ಯಾಕೆ? ಎಂದು ರಾಜಿ ಮಾಡಿಕೊಂಡಾರು. ಅದೂ ಅಲ್ಲದ ಕೆಲವೇ ಕೆಲ ಮಂದಿ, ರಾಜಕೀಯ ಎಂಬ ಕ್ಷುದ್ರ ಬೇಜವಾಬ್ದಾರೀ ವರ್ಗಕ್ಕೆ, ಸಿಂಹಸ್ವಪ್ನವಾಗುವುದಿಲ; ಬದಲಿಗೆ, ಹಾಸಿಗೆಯಂಚಿನ ತಿಗಣೆಯೆನಿಸುತ್ತಾರೆ. ಹೀಗಾಗಿ ಸರಕಾರದ ಯಾವೊಬ್ಬ ಅಧಿಕಾರಿ ಮತ್ತು ನೌಕರನ ಹತ್ಯೆಗೆ ಅವರ ಪ್ರಾಮಾಣಿಕತೆಯಂತೆಯೇ ಅಪ್ರಾಮಾಣಿಕತೆಯೂ ಕಾರಣವಾಗುವ ಸಾಧ್ಯತೆಯಿರುತ್ತದೆ. ಆ ಅಪ್ರಾಮಾಣಿಕತೆಯೂ ಪರೋಕ್ಷವಾಗಿ ರಾಜಕೀಯ ಪರಿಪ್ರೇರಿತ ಮತು ಪೈಪೋಟಿಯಾಗಿರಬಹುದು. ತನಿಖೆಯಿಂದ ಸತ್ಯ ಹೊರಬರುವ ವೇಳೆಗೆ ಪ್ರಕರಣ ಮರೆತುಹೋಗಿರುತ್ತದೆ. ಇಷ್ಟಕ್ಕೂ ತನಿಖೆಯ ಪ್ರಾಮಾಣಿತೆಯೂ ಪ್ರಶ್ನಾರ್ಹವಾಗಿರಬಹುದು ಅಥವಾ ಹಾಗೆಂದು ಕೂಗೆಬ್ಬಿಸಬಹುದು. ಇದಕೇನು ಮದ್ದು?