ಕ್ಷೌರ ಸುಖದೊಳಗೆಲ್ಲ ಮರೆತಿಹನು ಎನ್ನದಿರಿ.....
ಊರಿಂದ ಊರಿಗೆ ವರ್ಗವಾಗುವ ಉದ್ಯೋಗದಲ್ಲಿರುವವರಿಗೆ ಪ್ರತಿ ವರ್ಗಾವರ್ಗಿಯಲ್ಲೂ ಹೊಸ ಊರಲ್ಲಿ ಮನೆ ಹುಡುಕುವುದು, ಮಕ್ಕಳಿಗೆ ಆ ಊರಿನ ಪ್ರಖ್ಯಾತ ಸ್ಕೂಲಲ್ಲಿ ಸೀಟು ಗಿಟ್ಟಿಸುವುದು, ರೇಷನ್ ಕಾರ್ಡು-ಗ್ಯಾಸ್ ಕನೆಕ್ಷನ್-ಟೆಲಿಫೋನ್ ವರ್ಗಾವಣೆ ಮಾಡಿಸಿಕೊಳ್ಳುವುದು ಹೀಗೆ ಸಾಲು ಸಾಲು ಕೆಲಸಗಳ ಕ್ಯೂ ಇರುತ್ತದೆ. ಹೆಚ್ಚು ನೀರು ಬೆರಸದೇ ಸಮಯಕ್ಕೆ ಸರಿಯಾಗಿ ಹಾಲು ತಂದುಕೊಡುವವನನ್ನು ಹುಡುಕುವುದು ಸದ್ಯ kmf ನಂದಿನಿಯ ಕೃಪೆಯಿಂದಾಗಿ ತಪ್ಪಿದೆ. ಶುದ್ಧೀಕರಿಸಿದ ದಿನಸಿ ಪದಾರ್ಥ ಸಿಕ್ಕುವ ಅಂಗಡಿ, ಕಲೆಬೆರಕೆಯಾಗದ ಪೆಟ್ರೋಲು ಸಿಗುವ ಬಂಕು ಸ್ವಂತ ಅನುಭವದಿಂದ ಹುಡುಕಿಕೊಳ್ಳಬೇಕಾದ ಆತ್ಯಂತಿಕ ಸತ್ಯಗಳು!
ಆದರೆ ನೀವು ಏನೇ ಹೇಳಿ, ಆಗ ಬಾ ಈಗ ಬಾ, ಹೋಗಿ ಬಾ ಮತ್ತೆ ಬಾ, ಅಂತ ಚಪ್ಪಲಿ ಸವೆಸದ ಟೇಲರು, ಬಟ್ಟೆ ಇಸ್ತ್ರಿ ಮಾಡಿ ಕೊಡಲು ಸತಾಯಿಸದ ದೋಭಿ, ನಮ್ಮ ಅನುಕೂಲಕ್ಕೆ ತಕ್ಕಂತೆ ಕೂದಲು ಕತ್ತರಿಸಿ ಹೇನಾಗದಂತೆ, ಸೆಖೆ ಆಗದಂತೆ ಕಾಯುವ ನಾಪಿತ ಹೊಸ ಊರಲ್ಲಿ ಥಟ್ಟಂತ ಸಿಗುವುದು ದುರ್ಲಭ! ವರ್ಷವೊಂದಕ್ಕೆ ಹೆಚ್ಚೆಂದರೆ ಮೂರು ಜೊತೆ ಬಟ್ಟೆ ಹೊಲಿಸುವ ನಾನು ಹಬ್ಬ-ಹರಿದಿನಗಳಿಗೆ, ಅಪ್ಪನ ತಿಥಿಗೆ ತವರಿಗೆ ಹೋಗಲೇ ಬೇಕಿರುವುದರಿಂದ ನನ್ನ ಬಾಲ್ಯಕಾಲದ ಸಿಂಪಿಗನನ್ನೇ ಇವತ್ತಿಗೂ ನನ್ನ ಅಚ್ಚುಮೆಚ್ಚಿನ ಡ್ರೆಸ್ ಮೇಕರ್ ಆಗಿ ಕಂಡುಕೊಂಡಿದ್ದೇನೆ. ಹೊಸ ಫ್ಯಾಷನ್ನುಗಳನ್ನು ನನ್ನ ಮೇಲೆ ಪ್ರಯೋಗಿಸದೇ ನನಗಿಷ್ಟವಾಗುವ ನನ್ನದೇ ಅಳತೆಗೆ ಅವನು ಬಟ್ಟೆ ಹೊಲಿದು ಕೊಡುತ್ತಾನೆ. ಈ ಹಬ್ಬಕ್ಕೆ ಹೋದಾಗ ಹೊಲಿಯಲು ಹಾಕಿದ ಬಟ್ಟೆಗಳನ್ನು ಮುಂದಿನ ಹಬ್ಬಕ್ಕೆ ಹೋದಾಗ ತಪ್ಪದೇ ರೆಡಿಮಾಡಿ ಕೊಡುತ್ತಿರುವ ಅವನನ್ನು ನಾನು ವಿಲಂಬಿಸಿ ಪ್ರಸ್ತಾಪಿಸುವ ಅಗತ್ಯವಿಲ್ಲವೇ ಇಲ್ಲ. ಅಲ್ಲದೇ ಹೆಜ್ಜೆಗೊಂದು ರೆಡಿಮೇಡ್ ಗಾರ್ಮೆಂಟುಗಳು ಸಿಕ್ಕುವಾಗ ಬೇಕಾದ ಬಟ್ಟೆ ಸಿಕ್ಕುವುದು ಕಷ್ಟವೇನೂ ಅಲ್ಲ. ಆದರೆ ಇಸ್ತ್ರಿ ಅಂಗಡಿಗೆ ಸ್ಕೂಟರು ಓಡಿಸಿ, ಓಡಿಸಿ ಕಡೆಗೆ ನಾನೇ ಇಸ್ತ್ರಿ ಮಾಡಿಕೊಳ್ಳುವುದನ್ನು ಕಲಿತ ಕತೆಯೇ ಬೇರೆ. ಮೊದಲೆಲ್ಲ ಪ್ಯಾಂಟಿನ ಗೆರೆಗಳನ್ನು ಜೋಡಿಸಿ ಇಸ್ತ್ರಿ ಉಜ್ಜುವುದು, ಐರನ್ ಆದ ಶರ್ಟುಗಳನ್ನು ವಾರ್ಡ್‌ರೋಬಿನಲ್ಲಿ ಇಡುವ ಹದಕ್ಕೆ ನೀಟಾಗಿ ಮಡಿಸುವುದು ಬರುತ್ತಿರಲಿಲ್ಲ. ದಿನಕಳೆದ ಹಾಗೆ- ನನ್ನ ಕೈಗಳೂ ಕುಶಲಗೊಂಡಿವೆ ಅಥವ ನನ್ನ ಮೂತಿಗೆ ತಕ್ಕ ಇಸ್ತ್ರಿಗೆ ನಾನೇ ಒಗ್ಗಿಹೋಗಿದ್ದೇನೆ. ಆದರೆ ಏನು ಮಾಡೋದು? ಎರಡು ತಿಂಗಳಿಗೊಮ್ಮೆ ‘ಪಟ್ಟಾಭಿಷೇಕ’ಕ್ಕಾಗಿ ನಾಪಿತನನ್ನರಸಿ ತವರಿಗೆ ಓಡುವುದು ಸಾಧ್ಯವಿಲ್ಲದ ಸಂಗತಿ. ಅದರ ಜೊತೆಗೇ ಫ್ರೆಂಚ್ ದಾಡಿಯ ಮುಖದ ನನಗೆ ನಿತ್ಯ ಮುಖಕ್ಷೌರವು ಅತ್ಯಗತ್ಯವಾಗಿರುವುದರಿಂದ ನನ್ನ ಕೈಗಳೀಗಾಗಲೇ ಆ ಕೆಲಸದಲ್ಲಿ ಪಳಗಿವೆಯಾದರೂ ಹದಿನೈದು ದಿನಗಳಿಗೊಮ್ಮೆಯಾದರೂ ಆ ದಾಡಿಯನ್ನು ಟ್ರಿಮ್ ಮಾಡುವುದು ನಾಪಿತನಿಂದ ಮಾತ್ರ ಸಾಧ್ಯ. ಹಾಗಾಗಿ ನಾಪಿತನ ಅವಲಂಬನೆ ಅನಿವಾರ್ಯವೂ ಅಪೇಕ್ಷಣೀಯವೂ ಆದ ಸಂಗತಿಯಾಗಿದೆ ಎಂಬುದನ್ನು ಓದುಗ ಮಹಾಪ್ರಭುವಿನಲ್ಲಿ ಬಿನ್ನವಿಸುತ್ತೇನೆ.
ಕಳೆದ ವಾರ ಆಫೀಸಿನ ಕೆಲಸಕ್ಕೆಂದು ರಾಜಧಾನಿಗೆ ಓಡಲೇಬೇಕಾದ ತುರ್ತೊಂದು ಎದುರಾಯಿತು. ಆಡಿಟ್ಟಿನವರು ನಮ್ಮ ಬ್ರಾಂಚಿಗಿರುವ ಮಿತಿ ಮೀರಿ ನಾವು ಖರ್ಚುಗಳನ್ನು ಮಾಡಿದ್ದೇವೆಂದು ತಗಾದೆ ತೆಗೆದು ಕೊಕ್ಕೆಗೆ ಸಿಲುಕಿಸಿದ್ದರಿಂದ ಆ ಕೊಕ್ಕೆಯಿಂದ ನಮ್ಮನ್ನಿಳಿಸುವ ತಾಕತ್ತು ಮೇಲಾಫೀಸಿನ ‘ರಾಟಿಫಿಕೇಷನ್’ ಎಂಬ ಮಂತ್ರದಿಂದ ಮಾತ್ರ ಸಾಧ್ಯವಿದ್ದುದರಿಂದ ಖರ್ಚುಹೆಚ್ಚಾಗಿರುವ ಬಾಬಿನ ಕಡತಗಳನ್ನೆಲ್ಲ ಮೇಲು ಸಹಿಮಾಡಿಸಿ ತರುವ ಜವಾಬ್ದಾರಿಯ ದರ್ದು ನನ್ನ ಮೇಲೆಯೇ ಬಿತ್ತು. ಬ್ರಾಂಚಾಫೀಸಿನ ಹಣಕಾಸು,ಇತರೆ ಖರ್ಚುವೆಚ್ಚಗಳ ಉಸ್ತುವಾರಿಯೂ ನನ್ನದೇ ಆಗಿರುವುದರಿಂದ ಈಗ ಆ ಖರ್ಚುಗಳ ಹಿಂಬರಹ-ಮುಂಬರಹ ಇತ್ಯಾದಿ ಇತ್ಯಾದಿ ನನ್ನ ನೈತಿಕ ಜವಾಬ್ದಾರಿಯೇ ಆಗಿ ಬದಲಾಯಿತು. ಇಬ್ಬರು ಅಧಿಕಾರಿಗಳ ಸಹಿ ಮಾತ್ರವೇ ಬಾಕಿ ಇರುವಂತೆ ಇಡೀ ಕಡತಗಳನ್ನು ಪುನರವಲೋಕಿಸಿ ಸಿದ್ಧಗೊಳಿಸಿಕೊಂಡು ರಾಜಧಾನಿಯ ಆಫೀಸಿಗೆ ಬಿಜಯಂಗೈದೆ. ಬಟ್ಟೆ ಬರೆ ಶೇವಿಂಗ್ ಕಿಟ್ ಇತ್ಯಾದಿ ಲೌಕಿಕದ ವಸ್ತುಗಳನ್ನು ನಿರಾಕರಿಸಿದೆ, ಏಕೆಂದರೆ ಅವತ್ತೇ ಹಿಂದಿರುಗಿಬಿಡುತ್ತೇನೆಂಬ ಅಮಿತ ವಿಶ್ವಾಸ ನನ್ನೊಳಗೆ ತುಂಬಿ ತುಳುಕುತ್ತಿತ್ತು.
ವಿಧಿ ಲಿಖಿತ ತಪ್ಪಿಸಿಕೊಂಡವರುಂಟೇ? ನನ್ನ ದುರದೃಷ್ಟಕ್ಕೆ ಆ ದಿನ ಬೆಳಗ್ಗೆಯೇ ನಾನು ಹೊತ್ತು ತಂದ ಕಡತಗಳಿಗೆ ತಮ್ಮ ಸಹಿಯಿಂದ ಮುಕ್ತಿ ನೀಡಬೇಕಿದ್ದ ಅಧಿಕಾರಿಯೇ ಸ್ನಾನ ಮಾಡುವಾಗ ಬಿದ್ದು-ಏಕೆ ಬಿದ್ದರು? ಶರೀರದ ಹತೋಟಿ ತಪ್ಪಿತೆ? ಅಥವ ಮನಸ್ಸಿನ ಹತೋಟಿ ತಪ್ಪಿತೆ?ಹಿಂದಿನ ದಿನದ ಪಾರ್ಟಿಯ ಹ್ಯಾಂಗೋವರು ಇಳಿದಿರಲಿಲ್ಲವೇ?-ಏನೋ ಗೊತ್ತಿಲ್ಲ ಅಂತೂ-ಆಸ್ಪತ್ರೆ ಸೇರಿದ ಸುದ್ದಿ ನಾನು ಆ ಆಫೀಸು ತಲುಪಿದ ಮೇಲಷ್ಟೇ ಬ್ರೇಕಿಂಗ್ ನ್ಯೂಸ್ ಆಗಿ ನನ್ನನ್ನಪ್ಪಳಿಸಿತು. ಅವರ ಬದಲು ನಿಯುಕ್ತರಾಗುವ ಅಧಿಕಾರಿಗೆ ಇನ್ನೂ ಕಛೇರಿ ಆದೇಶ ತಲುಪಿ ಹಾಗೆ ನಿಯುಕ್ತರಾದವರು ಅದನ್ನೊಪ್ಪಿಕೊಂಡು ನಾನು ತಂದಿರುವ ಕಡತ ಪರಿಶೀಲಿಸಿ ಸಹಿ ಹಾಕಿಕೊಡುತ್ತಾರೆಂಬ ವಿಶ್ವಾಸ ಕ್ಷೀಣಿಸಿತು. ಏಕೆಂದರೆ ಅರೆಕಾಲಿಕವಾಗಿ ಹುದ್ದೆಗೆ ನಿಯುಕ್ತರಾದವರು ದೈನಿಕದ ಕೆಲಸಗಳನ್ನು ಪೂರೈಸುತ್ತಾರೇ ವಿನಾ ತಮಗಿರುವ ಅಧಿಕಾರವನ್ನು ಬಳಸಿಕೊಂಡು, ಮಿತಿ ಮೀರಿ ವರ್ತಿಸಿದ ಕೆಳಗಿನವರನ್ನೆಂದೂ ಕಾಪಾಡುವ ವಿಶಾಲತೆ ಮೆರೆಯುವುದಿಲ್ಲ. ಏಕೆಂದರೆ ಹೆಡ್ಡಾಫೀಸನ್ನು ಆಡಿಟ್ ಮಾಡುವವರೂ ಇಂಥದನ್ನೆಲ್ಲ ಕೂಲಂಕುಶವಾಗಿ ಪರಿಶೀಲಿಸುತ್ತಾರೆ. ವಿಷಯಾಂತರವಾಗುತ್ತಿದೆ ಅನ್ನಿಸಿತೆ. ಸ್ವಲ್ಪ ಇರಿ.
ಅಂತೂ ಕಡತಗಳಿಗೆ ಸಹಿ ಬೀಳಲು ಮೂರು ನಾಕು ದಿನಗಳ ಕನಿಷ್ಠ ಸಮಯ ಬೇಕೇ ಬೇಕೆಂಬುದು ಶೃತವಾಯಿತು. ಬಿಟ್ಟು ಹೋಗೋಣವೆಂದರೆ ತುರ್ತು. ಮೂಲ ದಾಖಲೆಗಳೇ ಮಿಸ್ಸಾದರೆ? ಇಲ್ಲ ಅಲ್ಲೇ ಇದ್ದು ಕೆಲಸ ಮುಗಿಸಿಕೊಂಡು ಬನ್ನಿ ಎಂಬ ಫರ್ಮಾನು ಬ್ರಾಂಚಾಫೀಸಿಂದ ಮೊಬೈಲಿನಲ್ಲೆ ಬಂತು. ಈಗಾಗಲೇ ತಮ್ಮಲ್ಲಿ ನಿವೇದಿಸಿಕೊಂಡಂತೆ ಬಟ್ಟೆ ಬರೆ ಶೇವಿಂಗ್ ಕಿಟ್ ಇತ್ಯಾದಿ ಏನೂ ಇಲ್ಲದೆ ಬಂದಿದ್ದ ನನಗೆ ರಾಜಧಾನಿಯಲ್ಲಿರುವ ಇಲಾಖೆಯ ಅತಿಥಿಗೃಹದಲ್ಲಿ ವಾಸ್ತವ್ಯದ ಏರ್ಪಾಟಾದರೆ ಕ್ಯಾಂಟೀನೆಂಬ ಕಲ್ಪವೃಕ್ಷ ಹೊಟ್ಟೆಯ ಕುಶಲೋಪರಿ ನೋಡಿಕೊಳ್ಳುವುದಕ್ಕೆ ನಿಯುಕ್ತವಾಯಿತು. ರಾಜಧಾನಿಗೆ ಕಛೇರಿ ಕೆಲಸಕ್ಕಾಗಿ ಭೇಟಿ ಕೊಡುವ ನೌಕರರಿಗೆ ಸಿಗುವ ನಿತ್ಯಭತ್ಯೆ ಹೆಚ್ಚಾಗಿರುವುದರಿಂದ ಒಳುಡುಪು ಸೇರಿದಂತೆ ಒಂದು ಜೊತೆ ಬಟ್ಟೆ ಜೊತೆಗೆ ಪೇಸ್ಟು, ಬ್ರಷ್,ಟವೆಲ್ ಇತ್ಯಾದಿ ಖರೀದಿಸುವುದು ನಷ್ಟವೆಂದೇನೂ ಅನಿಸಲಿಲ್ಲ. ಆದರೆ ಕಪ್ಪುಬಿಳಿಮಿಶ್ರಿತ ತರಚು ಗಡ್ಡಕ್ಕಂತೂ ಒಂದು ದಾರಿ ತೋರಿಸುವುದು ಅನಿವಾರ್ಯವಾಯಿತು. ಸರಿ ನಾಪಿತನಂಗಡಿ ಹುಡುಕಿಕೊಂಡು ಹೊರಟೆ.
ಬೀದಿಗೆರಡರಂತೆ ಬೀದಿ, ಬೀದಿಗಳಲ್ಲಿ ಬ್ಯೂಟಿ ಪಾರ್ಲರುಗಳೆಂಬ ಬೋರ್ಡುಗಳು ನೇತಾಡುತ್ತಿದ್ದರೂ ಅವುಗಳ ಕೆಳಗೆ ಲೇಡೀಸ್ ಓನ್ಲಿ ಅಂತಿರುತ್ತಿದ್ದ ಒಕ್ಕಣಿಕೆಗಳು ನನ್ನ ಪ್ರಯತ್ನವನ್ನು ಹಿಮ್ಮೆಟ್ಟಿಸುತ್ತಲೇ ಹೋದರೂ ಅಂತೂ ‘ಮೆನ್ಸ್ ಪಾರ್ಲರ್’ ಅನ್ನುವ ಬೋರ್ಡು ಕಂಡೊಡನೆ ಇನ್ನೇನು ಸ್ವರ್ಗ ಇಲ್ಲಿಯೇ ಸಿಕ್ಕಿತೆನ್ನಿಸಿತು. ಗಾಜಿನ ಬಾಗಿಲು ಸರಿಸಿ ಒಳಹೊಕ್ಕಾಗ ಅದು ಸಂಪೂರ್ಣ ಹವಾನಿಯಂತ್ರಿತ ಪುರುಷ ಕ್ಷೌರ ಕೇಂದ್ರವೆಂದು ಮನದಟ್ಟಾಯಿತು. ಅಲ್ಲಿ ಕರ್ತವ್ಯದ ಮೇಲಿದ್ದ ನಾಲ್ಕೈದು ಮಂದಿ ನಾಪಿತರೆಲ್ಲರೂ ಸಮವಸ್ತ್ರಗಳಿಂದ ಕಂಗೊಳಿಸುತ್ತಿದ್ದುದನ್ನೂ ಅವರ ಹೇರ್ ಸ್ಟೈಲ್‌ಗಳು ಒಬ್ಬೊಬ್ಬ ಸಿನಿಮಾ ತಾರೆಯರಂತಿದ್ದುದನ್ನೂ ಕಂಡು ವಿಸ್ಮಿತನಾದೆ. ಮತ್ತು ನಾನು ಒಳಹೋದ ಕೂಡಲೇ ನನ್ನನ್ನು ತಂಪುಪಾನೀಯದ ಬಾಟಲಿನೊಂದಿಗೆ ಸ್ವಾಗತಿಸಿ ನನ್ನ ಟೋಕನ್ ನಂಬರು ಯಾವುದೆಂದೂ ಅಲ್ಲಿ ಲೆಡ್ಜರುಗಳ ಮುಂದೆ ಕೂತಿದ್ದ ವ್ಯಕ್ತಿ ಕೇಳಿತು. ತಿರುಗುವ ಕುರ್ಚಿಗಳಲ್ಲಿ ವಿರಾಜಮಾನರಾಗಿ ಹಿತವಾದ ಮೆದು ಸಂಗೀತದ ಜೊತೆಗೆ ಕೇಶ ವಿನ್ಯಾಸಗೊಳಿಸಿಕೊಳ್ಳುತ್ತಿದವರೆಲ್ಲ ಸ್ವರ್ಗಸುಖದಲ್ಲಿ ಮೈ ಮರೆತಿರುವವರಂತೆ ಕಾಣುತ್ತಿದ್ದರು. ಕಣ್ಣು ಬಾಯಿ ಬಿಡುತ್ತ ನಿಂತ ನನ್ನನ್ನು ಹೊಸಬನಿರಬಹುದೆಂದು ಪತ್ತೆಹಚ್ಚಿದ ಆ ವ್ಯಕ್ತಿ ಐಡಿ ಪ್ರೂಫ್ ಮತ್ತು ಫೋಟೋ ಕೇಳಿತು. ಅರರೆ! ಇದೇನಿದೀ ವಿಚಿತ್ರ? ಫೈಬರ್ ಕೇಂದ್ರಗಳಲ್ಲಾದರೆ ಅಪರಾಧ ತಡೆಗೆ ಮುಂಜಾಗರೂಕ ಕ್ರಮ ಅನಿವಾರ್ಯ. ನಾಪಿತನಂಗಡಿಯಲ್ಲೇಕೆ ಇಂಥ ಅವಿವೇಕ? ಅವನು ವಿವರಿಸಿದ: ‘ನಿಮ್ಮ ಫೋಟೋ ಕಂಪ್ಯೂಟರಿಗೆ ಫೀಡ್ ಮಾಡಿ ನಿಮ್ಮ ಮುಖಕ್ಕೊಪ್ಪುವ ಆಧುನಿಕ ಕೇಶ ವಿನ್ಯಾಸ ಮಾಡಲಾಗುವುದರಿಂದ ಅದು ಅನಿವಾರ್ಯ. ಅಲ್ಲದೇ ಯಾವ ಯಾವ ಊರಿನ ಯಾವ ಯಾವ ವಿಳಾಸದವರು ನಮ್ಮ ಅಂಗಡಿಗೆ ಬಂದು ತಮ್ಮ ಮುಖ ಮುಸುಡಿಗಳನ್ನು ವಿನ್ಯಾಸಮಾಡಿಸಿಕೊಂಡರೆಂಬ ಅಂಕಿಅಂಶಕ್ಕಾಗಿ ಐಡಿ ಕಡ್ಡಾಯ’ ಅಂಬುದನ್ನು ಮನದಟ್ಟು ಮಾಡಿದ. ಹಾಗೆ ವಿವರಿಸುತ್ತಿದ್ದವನು ನನ್ನನ್ನು ಗಮನವಿಟ್ಟು ನೋಡಿ ‘ಅರೆ, ಇದೇನಿದು ಸಾರ್! ನೀವಿಲ್ಲಿ? ನಿಮ್ಮ ತಂದೆ ತೀರಿಕೊಂಡಾಗ ನಾನೇ ನಿಮ್ಮ ಕೇಶ ಮುಂಡನ ಮಾಡಿದ್ದು. ನಿಮ್ಮೂರಿನ ಮಾಡ್ರನ್ ಹೇರ್ ಡ್ರೆಸೆಸ್‌ನ ಪಾಪಯ್ಯನವರ ಮೊಮ್ಮಗ ನಾನು’ ಅಂತ ಪರಿಚಯಿಸಿಕೊಂಡ.
ಕುಶಲ ವಿಚಾರಿಸಿ ತಾನಿಲ್ಲೇ ಹೇರ್ ಸ್ಟೈಲ್‌ನಲ್ಲಿ ಡಿಪ್ಲಮೋ ಮಾಡುತ್ತಿರುವುದಾಗಿಯೂ ಈ ಅಂಗಡಿ ಒಂದು ಡೀಮ್ಡ್ ವಿವಿಯ ಪ್ರಯೋಗ ಶಾಲೆಯೆಂದೂ ವಿವರಿಸಿದ. ಕಣ್ಣು ಬಾಯಿ ಬಿಟ್ಟುಕೊಂಡು ಸಲೂನಿನ ಗೋಡೆಗಳ ತುಂಬೆಲ್ಲ ಕಂಗೊಳಿಸುತ್ತಿದ್ದ ಕತ್ರಿನಾ, ರಾಖಿಸಾವಂತರ ಆಳೆತ್ತರದ ಚಿತ್ರಗಳ ಜೊತೆಜೊತೆಗೇ ಸೈಫ್, ಹೃತಿಕ್ ಮುಂತಾದವರ ಹೊಸ ಕೇಶವಿನ್ಯಾಸದ ಚಿತ್ರಗಳ ಜೊತೆಗೇ ಘಜನಿಯ ಅಮೀರ್ ನಗುತ್ತ ನಿಂತಿದ್ದನ್ನು ನೋಡುತ್ತ ನಿಂತೆ. ಪ್ರತಿ ಗಿರಾಕಿಯ ಸೇವೆ ಮುಗಿದೊಡನೆಯೇ ಅವನಿಗೆ ಹೊದಿಸಿದ ಮೇಲ್ವಸ್ತ್ರ, ಬಳಸಿದ ಬ್ಲೇಡುಗಳನ್ನು ಬದಲಿಸಿ ಸ್ಟೆರಲೈಸ್ ಆದ ಕತ್ತರಿ, ರೇಜರು, ಬಾಚಣಿಗೆಗಳನ್ನು ಬಳಸಲಾಗುತ್ತಿದ್ದದ್ದನ್ನೂ ಗಮನಿಸಿದೆ.
ನನ್ನ ಸರದಿ ಬಂದು ಅಂತೂ ಇಂತೂ ಹೈಟೆಕ್ ಕ್ಷೌರ ಸುಖದ ಅನುಭವಕ್ಕಾಗಿ ತಿರುಗು ಕುರ್ಚಿಯೇರಿ ಕೂತು ಕಣ್ಣು ಮುಚ್ಚಿದೊಡನೆಯೇ ನಮ್ಮೂರಿನ ನಾಪಿತನಂಗಡಿ ನೆನಪಾಯಿತು.
ನಮ್ಮೂರಿನಲ್ಲಿ ಇದ್ದದ್ದು ಕಾಳಿ ಪಾಪಯ್ಯ ಬ್ರದರ್ಸ್ ಮಾಲೀಕತ್ವದ ಮಾಡ್ರನ್ ಹೇರ್ ಕಟಿಂಗ್ ಸಲೂನ್ ಒಂದೇ! ಅದೂ ಬಸ್‌ಸ್ಟಾಂಡ್ ಪಕ್ಕದ ಪುಟ್ಟ ಪೆಟ್ಟಿಗೆ ಅಂಗಡಿಯಲ್ಲಿ. ಇದ್ದ ಎರಡು ಕುರ್ಚಿಗಳಲ್ಲಿ ಒಂದು ತಿರುಗು ಕುರ್ಚಿ, ಕ್ಯೂನಲ್ಲಿರುವವರಿಗೆ ಒಂದು ಕಾಲು ಕುಂಟುವ ಬೆಂಚು, ಸಮಯ ಕಳೆಯಲು ಸಿನಿಮಾ ಜಾಹೀರಾತು ಇರುವ ಪತ್ರಿಕೆ. ಎದುರು ಬದುರು ಗೋಡೆಗೆ ತಾಗಿಸಿದ ಕನ್ನಡಿಗಳಲ್ಲಿ ಒಂದು ಇದ್ದಲ್ಲೇ ಸೀಳು ಬಿಟ್ಟಿತ್ತು. ಲೈಫ್‌ಬಾಯ್ ಸೋಪಿನ ನೊರೆಯಲ್ಲೆ ಉಳ್ಳವರ ಇಲ್ಲದವರ ಗಡ್ಡಗಳು ಕೆರೆಯಲ್ಪಡುತ್ತಿದ್ದವು. ರೇಜರುಗಳು ಗೊತ್ತಿಲ್ಲದ ಕಾಲದಲ್ಲಿ ಪ್ರತಿ ಹೆರತಕ್ಕೂ ಕನ್ನಡಿ ಮುಂದಿನ ಸಾಣೆಕಲ್ಲಿನಲ್ಲಿ ಮಸೆದ ಕತ್ತಿ ರೆಡಿಯಾಗುತ್ತಿತ್ತು. ನಾವು ಹುಡುಗರಿಗಂತು ಹೆಚ್ಚು ಉದ್ದವಿರದ ಹಾಗೆ ಸದಾ ಸಮ್ಮರ್ ಕಟ್ ಮಾಡುವಂತೆ ಹಿರಿಯರು ಹೇಳಿರುತ್ತಿದ್ದರು. ಕಿವಿಯಿಂದ ಮೇಲಕ್ಕೆ ದಾರ ಕಟ್ಟಿದಂತೆ ಮೆಷಿನ್ ಹೊಡೆದು ನೆತ್ತಿಯ ಮೇಲೆ ಚೂರು ಕೂದಲು ಬಿಟ್ಟರೆ ನಮ್ಮ ಕಟಿಂಗ್ ಮುಗಿಯುತ್ತಿತ್ತು. ಮತ್ತೆ ಆರು ತಿಂಗಳು ಅತ್ತ ಸುಳಿಯಬಾರದಲ್ಲ! ಹೇಳಲು ಮರೆತಿದ್ದೆ, ಕಾಳಿ ಪಾಪಯ್ಯ ಇಬ್ಬರೂ ಅಣ್ಣತಮ್ಮಂದಿರು. ಕಾಳಿ ಸದಾ ಸ್ಯಾಕ್ಸೊಫೋನ್ ಅಭ್ಯಾಸ ಮಾಡುತ್ತಲೇ ಇರುತ್ತಿದ್ದರೆ ಪಾಪಯ್ಯ ಕೇಶ ಶೃಂಗಾರ ನಿರತನಾಗಿರುತ್ತಿದ್ದ. ಬಿಡುವು ಸಿಕ್ಕಾಗ ಕಾಳಿಗೆ ಡೋಲಿನಲ್ಲಿ ಸಾಥ್ ನೀಡುತ್ತಿದ್ದ. ಯಾವಾಗಲೂ ಕುಡಿದೇ ಇರುತ್ತಿದ್ದ ಪಾಪಯ್ಯ ಎಂಥ ಮತ್ತಿನಲ್ಲಿದ್ದರೂ ಕೆಲಸದಲ್ಲಿ ಮಾತ್ರ ಜಾಗರೂಕನಾಗಿರುತ್ತಿದ್ದ. ಉಳಿದಂತೆ ಕೊಳೆಯಾದ ಮೇಲ್ವಸ್ತ್ರ ಬದಲಾಯಿಸಲು, ಕೆಳಗೆಲ್ಲ ಬಿದ್ದು ಹರಡಿ ಹೋಗಿರುತ್ತಿದ್ದ ಕೂದಲನ್ನೆತ್ತಿ ಜತನವಾಗಿಡಲು, ಬಕೆಟ್ಟಿನ ನೀರು ಖಾಲಿಯಾದ ಕೂಡಲೇ ತುಂಬಿಸುವುದು, ಕತ್ತಿ ಮಸೆದು ಕೊಡುವುದು ಮುಂತಾದ ಕೆಲಸಗಳಲ್ಲಿ ಅವರ ತಂದೆ ಕಳಸಯ್ಯ ಬ್ಯುಸಿಯಾಗಿರುತ್ತಿದ್ದ. ನಮ್ಮೂರಿನ ಎಲ್ಲ ಮದುವೆ ಮುಂಜಿಗಳಲ್ಲಿ ಈ ಸಹೋದರರದೇ ವಾದ್ಯ ಸಂಗೀತ. ಕಳಸಯ್ಯ ಶೃತಿ ಪೆಟ್ಟಿಗೆ ಮೀಟುತ್ತಲೋ ತಾಳ ಬಾರಿಸುತ್ತಲೋ ಮಕ್ಕಳ ಕಛೇರಿಗೆ ನೆರವಾಗುತ್ತಿದ್ದ. ಎಷ್ಟೋ ಜನ ಅವರ ಸೇವೆ ಪಡೆದೂ ದುಡ್ಡು ಕೊಡುತ್ತಲೇ ಇರಲಿಲ್ಲ. ಆದರೂ ಆ ಸೋದರರು ಪ್ರತಿಯಾಡದೇ ತಮ್ಮ ಕರ್ತವ್ಯದಲ್ಲಿ ನಿರತರಾಗುತ್ತಿದ್ದರು. ಪ್ರತಿ ಮನೆಯಿಂದ ವರ್ಷಕ್ಕೊಮ್ಮೆ ಎರಡೋ ಮೂರೋ ಪಲ್ಲ ರಾಗಿಯೋ ದಪ್ಪ ಭತ್ತವೋ ಅವರ ಪಾಲಾಗುತ್ತಿತ್ತು, ಅಷ್ಟೆ! ಬಹುತೇಕ ಎಲ್ಲ ಜಾತಿ ಜನಾಂಗದವರೂ ಮಾಡ್ರನ್ ಹೇರ್ ಕಟಿಂಗ್ ಸಲೂನಿನ ಗಿರಾಕಿಗಳಾಗಿದ್ದವರೇ. ಕೆಲವು ಲಿಂಗಾಯಿತರು ಮಾತ್ರ ಭಂಡಾರಿ ಚನ್ನಬಸಣ್ಣನಿಗೇ ಕಾಯುತ್ತಿದ್ದರು. ಅವನೋ ಅಪರೂಪಕ್ಕೆ ಊರಿಗೆ ಬಂದರೂ ರಿಪಿರಿಪಿ ಮಾಡುತ್ತಲೇ ಹಲವು ಜಗಳ ಕದನಗಳಿಗೆ ಕಾರಣನಾಗುತ್ತಿದ್ದ. ಕಳಸಯ್ಯನ ಮಕ್ಕಳು ಮಾತ್ರ ಎಲ್ಲರೊಂದಿಗೆ ಹಾಂ ಹೂಂ ಅನ್ನುತ್ತಿದ್ದರೆ ವಿನಾ ಅವರು ಪಕ್ಷಪಾತ ಮಾಡಿದವರಲ್ಲವೇ ಅಲ್ಲ. ನಾವು ಹುಡುಗರಿಗಂತೂ ಪಾಪಯ್ಯ ಸದಾ ಉಪದೇಶ ಮಾಡುತ್ತಲೇ ಇರುತ್ತಿದ್ದ. ತೆಲುಗು ಮಿಶ್ರಿತ ಕನ್ನಡದಲ್ಲಿ ‘ಅಪ್ಪ ಅಮ್ಮ ದೇವರು ಕನಪ್ಪಾ, ದೊಡ್ಡವರು ಚಪ್ಪಿದ್ದು ಕೇಳ್ಬೇಕು’ಅಂತ ಕಟಿಂಗ್‌ಗೆ ಬಂದ ಹುಡುಗರಿಗೆ ಹೇಳುತ್ತಲೇ ಇರುತ್ತಿದ್ದ.
ಊರಿನ ದೊಡ್ಡ ಮನುಷ್ಯರಿಗೆ , ಪುಢಾರಿಗಳಿಗೆ ಅವರು ಬಂದ ಕೂಡಲೇ ಕಾಯಿಸದೇ ಹೆರೆದು ಕಳಿಸಿಬಿಡುತ್ತಿದ್ದ. ಕ್ಯೂನಲ್ಲಿ ಕಾಯುತ್ತಲೇ ಇರುತ್ತಿದ್ದ ಸಾಮಾನ್ಯರು ಅವನ ಈ ರೀತಿಯನ್ನು ಪ್ರಶ್ನಿಸಿದರೆ ‘ಕೆಟ್ಟ ಮನುಷ್ಯರ ಸಾವಾಸ ಹೆಚ್ಚು ಹೊತ್ತು ಮಾಡ್ಬಾರದೂ ಸೋಮಿ, ಅದಿಕ್ಕೇ ಬೇಗ ಕಳ್ಸಿಬಿಡ್ತೀನಿ’ ಅನ್ನೋನು. ಮೆಷಿನ್ ಓಡಿಸುವಾಗ ಕತ್ತು ಹೊರಳಿಸಿದರೆ, ಕೂದಲು ಬೆನ್ನ ಮೇಲೆ ಬಿದ್ದು ಕಚಗುಳಿ ಇಟ್ಟಂತಾಗಿ ನಾವು ಮೈನಡುಗಿಸಿದರೆ ಪಾಪಯ್ಯ ಬಯ್ಯೋನು. ಮೆಷಿನ್ ಚರ್ಮ ಕೆತ್ತಿಬಿಟ್ಟರೆ ಅನ್ನುವ ಚಿಂತೆ ಅವನಿಗಿತ್ತೇ ಹೊರತೂ ಅವನೆಂದೂ ಬೇಕೆಂತಲೇ ಸತಾಯಿಸುತ್ತಿರಲಿಲ್ಲ. ಅವನ ಮಗ ಪತ್ತಂ ನಮ್ಮ ಜೊತೆಯವನೇ. ಕ್ಲಾಸಲ್ಲಿ ಚುರುಕಾಗಿರುತ್ತಿದ್ದ ಅವನು ಯಾವತ್ತೂ ಸಲೂನಿನಲ್ಲಿ ಕಂಡವನೇ ಅಲ್ಲ. ನೀಲಿ ಹಾಕಿದ ಬಿಳಿ ಬಟ್ಟೆ, ನೊಸಲಲ್ಲಿ ವಿಭೂತಿಯಿಟ್ಟುಕೊಂಡೇ ಬರುತ್ತಿದ್ದ ಅವನ ಹೆಸರು ಪ್ರೀತಂ ಅನ್ನುವುದರ ತದ್ಭವ ರೂಪ ಅಂತ ನಮಗೆ ಮೇಸ್ಟ್ರಾಗಿದ್ದ ಅಪ್ಪ ಹೇಳುತ್ತಿದ್ದರು. ಪತ್ತಂ ಸರ್ಕಾರದ ಆಫೀಸಲ್ಲಿ ಜವಾನನಾಗಬೇಕೆಂಬ ಆಸೆ ಪಾಪಯ್ಯನದು. ಅದಕ್ಕೇ ಅವನು ಮಗನನ್ನೆಂದೂ ಅಂಗಡಿಗೆ ಸೇರಿಸುತ್ತಿರಲಿಲ್ಲ. ಅಪರೂಪಕ್ಕೆ ಪಾಪಯ್ಯ ಇಲ್ಲದ ದಿನ ಕಾಳಿ ಕಟಿಂಗ್ ಮಾಡಿದರೆ ಅವನು ಹದವಾಗಿ ನಮ್ಮ ತಲೆ ತಟ್ಟಿ ನೆತ್ತಿಯ ಕೂದಲೆಳೆದು ನೆಟಿಗೆ ತೆಗೆಯುತ್ತಿದ್ದ. ಕಿವಿ, ಕತ್ತುಗಳನ್ನು ತಿರುಗಿಸಿ ಲಟಲಟ ನೆಟಿಗೆ ಮುರಿಯುತ್ತಿದ್ದ. ಬಾಟಲಿಯ ನೀರನ್ನು ಪುಸಕ್ಕನೆ ಒತ್ತಿ ಕೂದಲಿಗೆ ಸಿಂಪಡಿಸಿ ಹಣಿಗೆಯಲ್ಲಿ ಬಲವಾಗಿ ಬಾಚುತ್ತಿದ್ದ. ಅವನು ಸಂಗೀತ ಅಭ್ಯಾಸ ಮಾಡದ ದಿನಗಳಲ್ಲಿ ಮಾತ್ರ ಈ ಸೇವೆ ಸಾರ್ವಜನಿಕರಿಗೆ ದೊರೆಯುತ್ತಿತ್ತು. ಉಳಿದಂತೆ ಅವನು ಸ್ಯಾಕ್ಸೊಫೋನಿನಲ್ಲಿ ಆಡು ಪಾಂಬೆ, ನಲಿದಾಡು ಪಾಂಬೆ ಅಂತ ನುಡಿಸುತ್ತಲೇ ಇರೋನು.
ಪಾಪಯ್ಯನ ಮಗ ಪತ್ತಂ ಯಾವುದೋ ಸರ್ಕಾರಿ ಕಛೇರಿಯಲ್ಲಿ ಪ್ಯೂನಾಗಿ ಸೇರಿಕೊಂಡ ಮೇಲೆ ಅವರ ಅಂಗಡಿ ಮುಚ್ಚಿ ಹೋಯಿತು. ಕಳಸಯ್ಯನೂ ಕಾಳಿಯೂ ತೀರಿಕೊಂಡು ಪಾಪಯ್ಯ ಹಾಸಿಗೆ ಹಿಡಿದಿದ್ದಾನೆಂದು ಅರಳಿಕಟ್ಟೆಯಲ್ಲಿ ಮಾತಿಗೆ ಕೂತಾಗ ಕೇಳಿದ್ದೆಷ್ಟೋ ಅಷ್ಟೇ. ಕಳೆದೆರಡು ವರ್ಷದ ಹಿಂದೆ ಅಪ್ಪ ತೀರಿಕೊಂಡಾಗ ಸಂಚಯನದ ದಿನ ಅಸ್ತಿವಿಸರ್ಜನೆಗೆ ಅಂತ ಸೋಂಪುರಕ್ಕೆ ಹೋಗಿದ್ದಾಗ ಪತ್ತಂ ನದಿ ದಡಕ್ಕೇ ಬಂದು ಅಪ್ಪನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದ. ಅಲ್ಲಿ ಅವರ ಜಮೀನು ಇದೆ. ಹಳೆ ಸ್ನೇಹಿತ. ಜೊತೆಗೆ ಓದಿದವನೆಂಬ ಸಲುಗೆ ತೋರಿಸಿ ಅವನಿಗೂ ಮೇಸ್ಟ್ರಾಗಿದ್ದ ಅಪ್ಪನ ಗುಣಗಾನ ಮಾಡಿದ್ದ. ನನ್ನ ಮಕ್ಕಳು ಮರಿ ಮನೆ ಉದ್ಯೋಗಗಳ ಬಗ್ಗೆ ಮೆಚ್ಚುಗೆಯ ಮಾತಾಡಿದ್ದಲ್ಲದೇ ಎಷ್ಟು ಹೇಳಿದರೂ ಕೇಳದೇ ಅವನ ಮಗ ಓದದೇ ಕುಲ ಕಸುಬು ಮಾಡಲು ಹಟಹಿಡಿದು ರಾಜಧಾನಿಯಲ್ಲೆಲ್ಲೋ ಕಸುಬು ಕಲಿಯುತ್ತಿರುವುದನ್ನು ಹೇಳಿದ್ದ ನೆನಪು ಸುಳಿಯಿತು.
ಮೊಬೈಲು ರಿಂಗಣಿಸಿತು. ಕೇಶ ಶೃಂಗಾರವೂ ಒಂದು ವಿದ್ಯೆಯೇ ಅಲ್ಲವೇನು? ಜಾಗತಿಕವಾಗಿ ಎಲ್ಲ ಕ್ಷೇತ್ರಗಳಲ್ಲೂ ಆಧುನಿಕ ಮಾರ್ಪಾಡುಗಳಾಗುತ್ತಿರುವಾಗ ಪತ್ತಂನ ಮಗ ರಾಜಧಾನಿಯಲ್ಲಿರುವ ಮೆನ್ಸ್ ಬ್ಯೂಟಿ ಪಾರ್ಲರಿನ ತರಹದ್ದೇ ಸಲೂನನ್ನು ನಮ್ಮ ಊರಲ್ಲೂ ತೆರೆದರೆ ತಪ್ಪೇನು? ಅಂದುಕೊಳ್ಳುತ್ತ ರಿಂಗಣಿಸಿದ ಮೊಬೈಲ್ ಗಮನಿಸಿದೆ. ನನ್ನ ಕಡತಗಳಿಗೆ ಸಹಿಹಾಕಬೇಕಾದ ಹಿರಿಯ ಅಧಿಕಾರಿ ಕೂಡಲೇ ತಮ್ಮನ್ನು ಕಾಣುವಂತೆ ವಿನಂತಿಸುತ್ತಿದ್ದರು. ಎದುರಿಗಿದ್ದ ಕನ್ನಡಿಯಲ್ಲಿ ಬೇರೆ ಯಾರೋ ಕಂಡಂತಾಗಿ ಬೆಚ್ಚಿಬಿದ್ದು ಪ್ರತಿಬಿಂಬ ಗಮನಿಸಿ ನೋಡಿದೆ. ಪಾಪಯ್ಯನ ಮೊಮ್ಮಗ ನನ್ನ ಕೇಶವಿನ್ಯಾಸ ಬದಲಿಸಿ ಮುಖಕ್ಕೆ ಏನೇನೋ ಪೂಸಿ ಹಬೆ ಹಿಡಿದು ನನ್ನನ್ನು ಹತ್ತು ವರ್ಷ ಕಿರಿಯನನ್ನಾಗಿಸಿದ್ದ. ಎಷ್ಟು ಒತ್ತಾಯ ಮಾಡಿದರೂ ದುಡ್ಡು ತೆಗೆದುಕೊಳ್ಳದೇ ‘ನಿಮ್ಮ ವಿಶಸ್ ನನ್ನ ಮೇಲಿರಲಿ, ಅಂಕಲ್’ ಅಂದವನಿಂದ ಬೀಳ್ಕೊಂಡು ಅತಿಥಿ ಗೃಹದತ್ತ ಮೆಲ್ಲನೆ ಹೆಜ್ಜೆ ಹಾಕಿದೆ, ಕ್ಷೌರ ಸುಖದೊಳಗೆನ್ನ ಇರವನ್ನೇ ಮರೆಸಿದ ಅವನನ್ನು ಹರಸುತ್ತ!
ಋಣ : ಕನ್ನಡಪ್ರಭ ಭಾನುವಾರದ ಸಾಪ್ತಾಹಿಕ ಪ್ರಭ (೨೫.೦೪.೨೦೧೦)