ಖಗೋಳಶಾಸ್ತ್ರದ ಆಧುನಿಕತೆಗೆ ದಾರಿದೀಪ! (ಭಾಗ 3)

ಖಗೋಳಶಾಸ್ತ್ರದ ಆಧುನಿಕತೆಗೆ ದಾರಿದೀಪ! (ಭಾಗ 3)

ಪ್ರಾಯಶಃ ಇಬ್ನ್ ಅಲ್-ಹೈಥಮ್ ಜಗತ್ತಿಗೆ ನೀಡಿದ ಅತ್ಯಂತ ಮಹತ್ವದ ಕೊಡುಗೆಯೆಂದರೆ ಒಂದು ಸಿದ್ಧಾಂತವನ್ನು ಪರೀಕ್ಷಿಸಲು ಪುನರಾವರ್ತಿತ ಪ್ರಯೋಗಗಳನ್ನು ನಡೆಸುವ ಕ್ರಮಬದ್ಧ ವಿಧಾನವಾಗಿದೆ; ಇದು ನಮಗೆ ತಿಳಿದಿರುವಂತೆ ವೈಜ್ಞಾನಿಕ ವಿಧಾನವಾದ - Scientific Method - ಎಂದು ಹೊಸನಾಮ ಪಡೆಯಿತು. ಅವರು ತಮ್ಮ ಸಂಶೋಧನೆಯಲ್ಲಿ, “ವಿಜ್ಞಾನಿಗಳ ಬರಹಗಳನ್ನು ಅಧ್ಯಯನಿಸುವ ವ್ಯಕ್ತಿಯ ಕರ್ತವ್ಯ, ಸತ್ಯವನ್ನು ಕಲಿಯುವುದು ಅವನ ಗುರಿಯಾಗಿದ್ದರೆ, ಅವನು ಓದುವ ಎಲ್ಲದಕ್ಕೂ ತನ್ನನ್ನು ತಾನು ಬೆರ್ಪಡಿಸಿ ಗಾಢ ಅಧ್ಯಯನ ನಡೆಸಿ... ಅದನ್ನು ವಿಮರ್ಶಿಸುವುದು ಅತ್ಯಗತ್ಯವಾಗಿದೆ" ಎಂದು ಹೇಳಿದರು. ಒಬ್ಬ ತಮ್ಮ ವಿಮರ್ಶಾತ್ಮಕ ಅಧ್ಯಾಯನವನ್ನು ನೆರವೇರಿಸುವಾಗ ತಮ್ಮನ್ನು ತಾವು ಅನುಮಾನಿಸಬೇಕು; ಇದರಿಂದ ಒಬ್ಬ ಪೂರ್ವಾಗ್ರಹ ಅಥವಾ ಮೃದುತ್ವಕ್ಕೆ ಬೀಳುವುದನ್ನು ತಪ್ಪಿಸಬಹುದು ಎಂದು ಹೇಳಿಕೊಟ್ಟರು.

ಆ ಕಾಲದಲ್ಲಿ - ಅರ್ಥಾತ್ ಸುವರ್ಣ ಯುಗದ ಆರಂಭದಿಂದ ನವೋದಯದ ಆರಂಭದವರೆಗೆ - ಇಸ್ಲಾಮಿಕ್ ಸಾಮ್ರಾಜ್ಯದ (ಅಬ್ಬಾಸಿಯ) ಸುತ್ತಲೂ ಅನೇಕ ವಿಶ್ವವಿದ್ಯಾನಿಲಯಗಳು, ಮದರಸಾಗಳು, ಪ್ರಯೋಗಶಾಲೆಗಳು, ಖಗೋಳ ಸಮೀಕ್ಷಾಮಂದಿರಗಳು, ಮತ್ತು ಶಾಲೆಗಳನ್ನು ನಿರ್ಮಿಸಲಾಯಿತು. 859 A.Dಯ ಸುತ್ತ ಮೊರಾಕೊದ ಫೆಜ್‌ನಲ್ಲಿ ಮೊದಲ ವಿಶ್ವವಿದ್ಯಾಲಯವನ್ನು ನಿರ್ಮಿಸಲಾಯಿತು. ಇದು ಒಬ್ಬ ಧನಿಕನ ಮಗಳಾದ ಫಾತಿಮಾ ಅಲ್-ಫಿಹ್ರಿಯಿಂದ ಕಲ್ಪಿಸಲ್ಪಟ್ಟು ಪ್ರಾರಂಭಗೊಂಡಿತು. ಖಗೋಳಶಾಸ್ತ್ರ, ಗಣಿತ ಮತ್ತು ತತ್ತ್ವಶಾಸ್ತ್ರವನ್ನು ಅಧ್ಯಯನಿಸಲು ಕ್ರಿಶ್ಚಿಯನ್ ಮತ್ತು ಯಹೂದಿ ವಿಜ್ಞಾನಿಗಳು ಸೇರಿದಂತೆ ಪ್ರಪಂಚದಾದ್ಯಂತದ ವಿದ್ವಾಂಸರು ಅಲ್ಲಿಗೆ ತಮ್ಮ ಪಯಣವನ್ನು ಬೆಳೆಸಿದರು.

ಈ ಸಮಯದಲ್ಲಿ ಅನೇಕ ಶಾಲೆಗಳು ಮತ್ತು ಮಸೀದಿಗಳನ್ನು ಮುಸ್ಲಿಂ ಮಹಿಳೆಯರು ನೋಡಿಕೊಳ್ಳುತ್ತಿದ್ದರು ಮತ್ತು ನಿರ್ವಹಿಸುತ್ತಿದ್ದು ಗಮನಾರ್ಹ! ಅವರು ಸ್ವತಃ ಸಾಹಿತ್ಯದಿಂದ ಗಣಿತದವರೆಗಿನ ವಿಷಯಗಳಲ್ಲಿ ಶಿಕ್ಷಣ ಪಡೆದರು. ಇಲ್ಲಿಯೇ Algebra ಪರಿಪೂರ್ಣತೆ ಹೊಂದಿತು ಎಂದು ವಿಶ್ವಕೋಶದಲ್ಲಿ ದಾಖಲಾಗಿದೆ!

ಆಸ್ಟ್ರೋಲೇಬ್ (Astrolabe) ಎಂದು ಕರೆಯಲ್ಪಡುವ ಅತ್ಯಂತ ಪ್ರಸಿದ್ಧ ಖಗೋಳ ಸಾಧನಗಳಲ್ಲಿ ಒಂದನ್ನು ಗ್ರೀಕ್ ಚಿಂತಕ ಹಿಪ್ಪರ್ಕಸ್ ರಚಿಸಿದ್ದರು. ಆದರೆ ಮುಸ್ಲಿಂ ವಿಜ್ಞಾನಿಗಳು, ವಿಶೇಷವಾಗಿ ಮಹಿಳೆಯರು ಇದನ್ನು ಪರಿಪೂರ್ಣಗೊಳಿಸಿದ್ದು ಶ್ಲಾಘನೀಯ! ಸಿರಿಯಾ ದೇಶದ ತಜ್ಞೆ 'ಮರಿಯಮ್ ಅಲ್-ಅಸ್ಟ್ರುಲಾಬಿ' 10 ನೇ ಶತಮಾನದಲ್ಲಿ ಆಸ್ಟ್ರೋಲ್ಯಾಬ್ ತಯಾರಕರಾಗಿದ್ದರು. ಗಗನದಲ್ಲಿರುವ ಆಕಾಶಕಾಯಗಳ ಎತ್ತರವನ್ನು ಲೆಕ್ಕಹಾಕುವ ಈ ಉಪಕರಣಗಳನ್ನು ತಯಾರಿಸುವ ಕಲೆಯನ್ನು ಪರಿಪೂರ್ಣಗೊಳಿಸಲು ಅವರು ಸುಪ್ರಸಿದ್ಧರಾಗಿದ್ದರು. ಆಕೆಯ ಗೌರವಾರ್ಥವಾಗಿ- ಖಗೋಳಶಾಸ್ತ್ರಜ್ಞ ಹೆನ್ರಿ ಇ. ಹಾಲ್ಟ್ ಅವರು 1990 ರಲ್ಲಿ ಮುಖ್ಯ ಬೆಲ್ಟ್ ಕ್ಷುದ್ರಗ್ರಹವನ್ನು 'ಮರೀಯಂ' ಎಂಬ ಶುಭನಾಮದಿಂದ ನಾಮಕರಣಗೊಳಿಸಿದರು.

ಇವುಗಳು ಸಾವಿರಾರು ವರ್ಷಗಳಿಂದ ಮುಸ್ಲಿಂ ಖಗೋಳಶಾಸ್ತ್ರಜ್ಞರು, ತತ್ವಜ್ಞಾನಿಗಳು ಮತ್ತು ವಿಜ್ಞಾನಿಗಳು ಮಾಡಿದ ಕೆಲವು ಕೊಡುಗೆಗಳ ಸಂಕ್ಷೀಪ್ತ ಅವಲೋಕನವಾಗಿದೆ. ಕಳೆದ ವರ್ಷವಷ್ಟೇ ಕತಾರ್‌ನ ವಿಜ್ಞಾನಿಗಳು 'ಕತಾರ್ ಎಕ್ಸೋಪ್ಲಾನೆಟ್ ಸರ್ವೇ (Qatar Exoplanet Survey)ಯಲ್ಲಿ ಇತರ ನಕ್ಷತ್ರಗಳ ಸುತ್ತ ಸುತ್ತುತ್ತಿರುವ ಮೂರು ಹೊಸ ಗ್ರಹಗಳ ಆವಿಷ್ಕಾರವನ್ನು ಘೋಷಿಸಿದರು.

ನಕ್ಷತ್ರಗಳ ಪ್ರಜ್ವಲತೆ ಸ್ವತಃ ಇತಿಹಾಸವನ್ನು ಒಳಗೊಂಡಿದೆ; ಅವುಗಳ ಕಥೆಯು ಬಾಹ್ಯಾಕಾಶದಲ್ಲಿ ಪಯಣಿಸಲು, ಮತ್ತು ನಮ್ಮ ಕಣ್ಣುಗಳಿಗೆ ಮತ್ತು ನಮ್ಮ ದೂರದರ್ಶಕಗಳಿಗೆ ತಲುಪಲು ಕೆಲವು ಸಂದರ್ಭಗಳಲ್ಲಿ ಹತ್ತಾರು ಸಾವಿರ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಒಂದು ಸಹಸ್ರಮಾನದ ನಂತರ, ಸುಮಾರು 200 ನಕ್ಷತ್ರಗಳು ಈ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆ ನೀಡಿದ ಖಗೋಳಶಾಸ್ತ್ರಜ್ಞರ ಅರೇಬಿಕ್ ಹೆಸರುಗಳನ್ನು ಹೊಂದಿವೆ. ಚಂದ್ರನ ಮೇಲ್ಮೈಯಲ್ಲಿ - ಆಧುನಿಕ ವಿಜ್ಞಾನ ಮತ್ತು ಖಗೋಳಶಾಸ್ತ್ರಕ್ಕೆ ದಾರಿಮಾಡಿಕೊಟ್ಟ - ಮುಸ್ಲಿಂ ಖಗೋಳಶಾಸ್ತ್ರಜ್ಞರ ಹೆಸರಿನ ಇಪ್ಪತ್ತನಾಲ್ಕು ಬಾಂಬುಕುಳಿ (Craters) ಗಳಿವೆ!

* * *

(ಮುಕ್ತಾಯ) 

-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ