ಖಗೋಳ ವಿಜ್ಞಾನದ ಗೂಗಲ್ -ಹಬಲ್

ಖಗೋಳ ವಿಜ್ಞಾನದ ಗೂಗಲ್ -ಹಬಲ್

ವಿಶ್ವದ ನಿಗೂಢತೆಯನ್ನು ಹಾಗೂ ಮಾಹಿತಿಯನ್ನು ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟ ಹೆಗ್ಗಳಿಕೆ ಒಂದು ದೂರದರ್ಶಕಕ್ಕಿದೆ. ಅದೇ ‘ಹಬಲ್ ದೂರದರ್ಶಕ' . ಖ್ಯಾತ ಖಗೋಳ ವಿಜ್ಞಾನಿ ಎಡ್ವಿನ್ ಹಬಲ್ (Edwin Hubble) ಅವರ ನೆನಪಿಗಾಗಿ ಈ ದೂರದರ್ಶಕಕ್ಕೆ ‘ಹಬಲ್ ದೂರದರ್ಶಕ' ಎಂದು ಹೆಸರಿಸಲಾಗಿದೆ. 

ಇದು ಅಂತರಿಕ್ಷದಲ್ಲಿ ಸ್ಥಾಪಿತಗೊಂಡಿರುವ ಒಂದು ದೂರದರ್ಶಕ. ಇದನ್ನು ೧೯೯೦ರಲ್ಲಿ ಭೂಕಕ್ಷೆಗೆ ಹಾರಿ ಬಿಡಲಾಯಿತು. ಇಂದಿಗೂ ಇದು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರ ವೀಕ್ಷಣಾ ಕಿಟಕಿಯೇ (Operture) ಸುಮಾರು ೨.೪ ಮೀಟರ್ (೭.೯ ಅಡಿ) ವ್ಯಾಸವನ್ನು ಹೊಂದಿದೆ. ಇದರ ಒಟ್ಟು ಭಾರ ೧೧,೧೧೦ ಕಿಲೋ ಗ್ರಾಂಗಳು. ಇದು ಭೂಮಿಯ ಮೇಲಿನ ವಾತಾವರಣದಲ್ಲಿ ೫೯೯ ಕಿ.ಮೀ. ಎತ್ತರದಲ್ಲಿ ಭೂಮಿಯನ್ನು ಪರಿಭ್ರಮಿಸುತ್ತಿದೆ. ಇದರ ಕಕ್ಷಾವೇಗ ಪ್ರತಿ ಸೆಕೆಂಡಿಗೆ ೭೫೦೦ ಮೀ. (ಪ್ರತಿ ಸೆಕೆಂಡಿಗೆ ಏಳುವರೇ ಕಿಲೋಮೀಟರ್) ಇದು ಭೂಮಿಯನ್ನು ಒಂದು ಪೂರ್ಣ ಸುತ್ತನ್ನು ಸುತ್ತಲು ತೆಗೆದುಕೊಳ್ಳುವ ಸಮಯ ಕೇವಲ ೯೬ ನಿಮಿಷಗಳು.

ಹಬಲ್ ದೂರದರ್ಶಕದ ಹಿನ್ನಲೆ: ಹರ್ಮನ್ ಓ ಬರ್ತ್, ರಾಬರ್ಟ್ ಗೋಡಾರ್ಡ್ ಮತ್ತು ಕಾನ್ಸಟಂಟಿನ್ ತ್ಸಿಯೋಲ್ ಕೋವಸ್ಕೀ ಈ ಮೂರು ಜನ ಖಗೋಳ ವಿಜ್ಞಾನಿಗಳನ್ನು ‘ಆಧುನಿಕ ರಾಕೆಟ್ ಪಿತಾಮಹರು' ಎಂದು ಸ್ಮರಿಸಲಾಗುತ್ತದೆ. ೧೯೨೩ರಲ್ಲೇ ಹರ್ಮನ್ ಓಬರ್ತ್ ತನ್ನ ‘ದಿ ರಾಕೆಟ್ ಇನ್ ಟು ಪ್ಲಾನೆಟ್ ಸ್ಪೇಸ್' ಕೃತಿಯಲ್ಲಿ, ದೂರದರ್ಶಕವನ್ನು ಭೂ ಕಕ್ಷೆಯಲ್ಲಿ ಸ್ಥಾಪಿಸುವುದರ ಮಹತ್ವವನ್ನು ಸವಿಸ್ತಾರವಾಗಿ ವಿವರಿಸಿದ್ದಾನೆ. ೧೯೪೬ರಲ್ಲಿ ಲೈಮನ್ ಸ್ಪೈಜರ್ ತನ್ನ ಪುಸ್ತಕದಲ್ಲಿ, ಭೂ ಕಕ್ಷೆಯಲ್ಲಿರುವ ದೂರದರ್ಶಕಗಳು ಭೂಮಿಯ ಮೇಲಿನ ದೂರದರ್ಶಕಗಳಿಗಿಂತಲೂ ಹೇಗೆ ಅತ್ಯುತ್ತಮ ಎಂಬುದನ್ನು ಸಮರ್ಥಕವಾಗಿ ವಿವರಿಸಿದ್ದಾನೆ.

ಭೂಮಿಯ ಮೇಲೆ ವಾಯುಮಂಡಲ ಇರುವುದರಿಂದ ನಕ್ಷತ್ರಗಳಿಂದ ಬರುವ ಬೆಳಕು ವಕ್ರೀಭವನಗೊಳ್ಳುತ್ತದೆ. ಹೀಗಾಗಿ ಬೆಳಕಿನ ಸ್ಥಾನ ಪಲ್ಲಟದಿಂದ ನಕ್ಷತ್ರಗಳ ಅಥವಾ ಚಿತ್ರಣಗಳ ನಿಖರವಾದ ಮಾಹಿತಿ ಕಷ್ಟವಾಗುತ್ತದೆ. ಇದರಿಂದಾಗಿ ವಾಯುಮಂಡಲದ ಎತ್ತರವನ್ನು ಮೀರಿ ದೂರದರ್ಶಕಗಳನ್ನು ಬಳಸುವುದರಿಂದ ಸ್ಪಷ್ಟ ಚಿತ್ರಣ ಹಾಗೂ ನಿಖರ ಮಾಹಿತಿಗಳು ದೊರೆಯುತ್ತವೆ.

ಅಮೇರಿಕಾದ ನಾಸಾದ ಖಗೋಳ ವಿಜ್ಞಾನಿಗಳು ೧೯೬೨ರಲ್ಲೇ ಅಂತರಿಕ್ಷ ದೂರದರ್ಶಕದ ಸ್ಥಾಪನೆಯ ಬಗ್ಗೆ ಸವಿವರವಾದ ವರದಿಯನ್ನು ಸರ್ಕಾರಕ್ಕೆ ನೀಡಿದ್ದರು. ಇದರ ಪರಿಣಾಮವಾಗಿ ೧೯೬೬ರಲ್ಲಿ ‘ಆರ್ಬಿಟಿಂಗ್ ಆಸ್ಟ್ರೋನಾಮಿಕಲ್ ಅಬ್ಸರ್ ವೇಟರಿ' ಎಂಬ ಅಂತರಿಕ್ಷ ಖಗೋಳ ದೂರದರ್ಶಕವನ್ನು ಭೂ ಕಕ್ಷೆಯಲ್ಲಿ ಸ್ಥಾಪಿಸಲಾಯಿತು. ಇದರ ಬ್ಯಾಟರಿಯ ವೈಫಲ್ಯದಿಂದಾಗಿ ಮೂರು ದಿನಗಳಲ್ಲೇ ಈ ಯೋಜನೆ ವಿಫಲಗೊಂಡಿತು. ಸೋಲಿನಿಂದ ಧೃತಿಗೆಡದ ವಿಜ್ಞಾನಿಗಳು ಇದೇ ಹೆಸರಿನ ಎರಡನೇ ಯೋಜನೆಯನ್ನು (O.A.O-2) ಕಾರ್ಯಗತಗೊಳಿಸಿದರು. ಈ ದೂರದರ್ಶಕ ೧೯೬೮ರಿಂದ ೧೯೭೨ರವರೆಗೆ ಸಮರ್ಥವಾಗಿ ಕಾರ್ಯನಿರ್ವಹಿಸಿತು. ಈ ಯೋಜನೆ ‘ಅಂತರಿಕ್ಷ ದೂರದರ್ಶಕ'ದ ಮಹತ್ವವನ್ನು ಮನದಟ್ಟು ಮಾಡಿಕೊಟ್ಟಿತು.

೧೯೭೨ರ ನಂತರ ಪುನಃ ಖಗೋಳ ದೂರದರ್ಶಕವಿಲ್ಲದೆ ಅಂತರಿಕ್ಷ ಭಣಗುಟ್ಟತೊಡಗಿತು. ಆಗ ಪ್ರಾರಂಭವಾದದ್ದೇ ‘ಹಬಲ್ ದೂರದರ್ಶಕ' ಯೋಜನೆ. ಇದರ ಸಂಪೂರ್ಣ ಹೊಣೆಗಾರಿಕೆಯನ್ನು ನಾಸಾ ಹೊತ್ತುಕೊಂಡಿತು. ಇದರ ತಯಾರಿಕೆ ಮತ್ತು ಸಂಪೂರ್ಣ ಜವಾಬ್ದಾರಿಯನ್ನು ಅಮೇರಿಕಾದ ‘ಮಾರ್ಷಲ್ ಸ್ಪೇಸ್ ಫ್ಲೈಟ್ ಸೆಂಟರ್' ಸಂಸ್ಥೆಗೆ ವಹಿಸಿಕೊಡಲಾಯಿತು. ಇದರ ಹಾರಾಟ ಮತ್ತು ನಿರ್ವಹಣೆಯನ್ನು ‘ಗೋಡಾರ್ಡ್ ಸ್ಪೇಸ್ ಫ್ಲೈಟ್ ಸೆಂಟರ್ ಗೆ ನಿರ್ದೇಶನ ಮಾಡಲಾಯಿತು. ದೂರದರ್ಶಕ ಮತ್ತು ಅದರ ದರ್ಪಣದ ತಯಾರಿಕೆಯನ್ನು ಅಮೇರಿಕಾದ ‘ಪರ್ಕಿನ್ ಎಲ್ಮರ್' ಕಂಪೆನಿಗೆ ವಹಿಸಿಕೊಡಲಾಯಿತು. ಈ ದೂರದರ್ಶಕಕ್ಕೆ ಬೇಕಾದ ೩ ಅಡಿ ವ್ಯಾಸದ ದರ್ಪಣವನ್ನು ತಯಾರಿಸಲು ಸಂಸ್ಥೆಗೆ ೨ ವರ್ಷಗಳು ಬೇಕಾಯಿತು.

ಹಬಲ್ ಖಗೋಳ ದೂರದರ್ಶಕ ಅಂತರಿಕ್ಷ ಸ್ಥಾಪನೆ: ಈ ಯೋಜನೆಗೆ ಅಮೇರಿಕಾ ಸರಕಾರ ಹಣ ಪೂರೈಕೆ ಮಾಡಿತು. ಅಲ್ಲದೆ ಇದರ ಕಾರ್ಯಯೋಜನೆಯ ದಿನವನ್ನು ೧೯೮೩ರಲ್ಲಿ ನಿಗದಿಗೊಳಿಸಲಾಯಿತು. ಅನೇಕ ತಾಂತ್ರಿಕ ಕಾರಣಗಳಿಂದ, ಆರ್ಥಿಕ ಸಮಸ್ಯೆಗಳಿಂದ ಮತ್ತು ಮುಖ್ಯವಾಗಿ ಚ್ಯಾಲೆಂಜರ್ ನೌಕೆಯ ದುರಂತಗಳಿಂದಾಗಿ ಈ ಯೋಜನೆಯನ್ನು ಮುಂದೂಡಲಾಯಿತು. 

ಆದರೆ ಈ ಯೋಜನೆಗೆ ಮುಹೂರ್ತ ಕೂಡಿ ಬಂದದ್ದು ೧೯೯೦ರ ಎಪ್ರಿಲ್ ೨೪ರಂದು. ಇದನ್ನು ಹಾರಿ ಬಿಟ್ಟ ಮೇಲೆ ದರ್ಪಣದಲ್ಲಿ ದೋಷ ಕಂಡು ಬಂತು. ಇದರಿಂದಾಗಿ ಇದರ ಕಾರ್ಯಕ್ಷಮತೆ ಪರಿಪೂರ್ಣಗೊಳ್ಳಲಿಲ್ಲ. ೧೯೯೩ರಲ್ಲಿ ಮತ್ತೊಂದು ಹಾರಾಟ ನಡೆಸಿ ಈ ದೂರದರ್ಶಕವನ್ನು ದುರಸ್ತಿಗೊಳಿಸಿ, ಇತರೆ ಪರಿಕರಗಳನ್ನು ಅಳವಡಿಸಿ ಇದನ್ನು ಮೇಲ್ದರ್ಜೆಗೆ ಏರಿಸಲಾಯಿತು. ಇದರ ಐದನೇ ದುರಸ್ತಿಯನ್ನು ೨೦೦೯ರಲ್ಲಿ ನಡೆಸಲಾಗಿದ್ದು, ಕೊಲಂಬಿಯಾ ನೌಕೆಯ ದುರಂತದಿಂದಾಗಿ ಇದನ್ನು ಗೌಪ್ಯವಾಗಿ ಇಡಲಾಯಿತು. ಇದರ ಕಾರ್ಯಾವಧಿಯನ್ನು ೨೦೧೪ರವರೆಗೆ ನಿರೀಕ್ಷಿಸಲಾಗಿತ್ತಾದರೂ ಈಗಲೂ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಇದರ ಕಾರ್ಯವನ್ನು ಬೂಸ್ಟ್ ಮಾಡಲು ‘ಜೇಮ್ಸ್ ವೆಬ್ ಸ್ಪೈಸ್ ಟೆಲಿಸ್ಕೋಪ್' ಅನ್ನು ೨೦೧೮ರಲ್ಲಿ ಹಾರಿಸಲಾಯಿತು. 

ಹಬಲ್ ದೂರದರ್ಶಕದ ಸಾಧನೆಗಳು:

* ನಕ್ಷತ್ರಗಳ ಹಾಗೂ ಗ್ಯಾಲಕ್ಷಿಗಳ ನಡುವಿನ ದೂರದ ಕರಾರುವಾಕ್ ಅಳತೆ.

* ಈ ಇಡೀ ವಿಶ್ವ ಹುಟ್ಟಿದ ಕಾಲಮಾನದ ವಿವರಗಳು.

* ಅನೇಕ ಸೂಪರ್ ನೋವಾಗಳ ಗುರುತಿಸುವಿಕೆ.

* ಗ್ಯಾಲಕ್ಸಿಗಳ ಗರ್ಭದಲ್ಲಿರುವ ಕಪ್ಪು ರಂಧ್ರಗಳ ಪತ್ತೆ.

* ೧೯೯೪ರಲ್ಲಿ ಷೂಮೇಕರ್ ಲೇವಿ ಧೂಮಕೇತು ಗುರು ಗ್ರಹಕ್ಕೆ ಅಪ್ಪಳಿಸುವ ಭವಿಷ್ಯ ನುಡಿದದ್ದೇ ಈ ಹಬಲ್ ದೂರದರ್ಶಕ.

* ಓರಿಯನ್ ನೆಬುಲಾದಲ್ಲಿ ಗ್ರಹೀಯ ತಟ್ಟೆಗಳ ಪರಿಭ್ರಮಣೆಯ ಪತ್ತೆ.

* ಸೂರ್ಯ ಮತ್ತು ಸೂರ್ಯದಂತಹ ಇತರೆ ನಕ್ಷತ್ರಗಳ ಸುತ್ತಲೂ ಇರಬಹುದಾದ ಗ್ರಹಗಳ ಪತ್ತೆ.

* ಫ್ಲೂಟೋ ಗ್ರಹದಿಂದಾಚೆ ಇರುವ ಆಕಾಶಕಾಯಗಳ ಅಧ್ಯಯನ.

* ಹಲವು ಬಿಲಿಯನ್ ಬೆಳಕಿನ ವರ್ಷಗಳ ದೂರದಲ್ಲಿರುವ ಗ್ಯಾಲಕ್ಸಿಗಳ ಚಿತ್ರಣ.

ಈ ಹಬಲ್ ದೂರದರ್ಶಕದ ಸಾಧನೆಗಳು ಇಷ್ಟೇ ಎಂದು ಪಟ್ಟಿ ಮಾಡಲು ಸಾಧ್ಯವಿಲ್ಲ. ಈ ದೂರದರ್ಶನದ ವಿಶೇಷತೆಯೆಂದರೆ ಯಾವುದೇ ರಾಷ್ಟ್ರಗಳು ಇದರ ಪ್ರಯೋಜನವನ್ನು ಪಡೆಯಬಹುದು. ಇದೊಂದು ‘ರಾಷ್ಟ್ರಾತೀತ ದೂರದರ್ಶಕ' ಎನ್ನಬಹುದು. ಹಬಲ್ ದೂರದರ್ಶಕದ ಯೋಜನಾ ವೆಚ್ಚ ಎಷ್ಟು ಗೊತ್ತೇ? ೧.೧೭೫ ಬಿಲಿಯನ್ ಡಾಲರ್ ಗಳು ( ಹನ್ನೊಂದು ಕೋಟಿ ಎಪ್ಪತ್ತೈದು ಲಕ್ಷ ಅಮೇರಿಕನ್ ದಾಲರ್ ಗಳು). ಅಂದ ಹಾಗೆ ೨೦೨೦ರ ಎಪ್ರಿಲ್ ೨೪ರಂದು ‘ಹಬಲ್ ದೂರದರ್ಶಕ' ತನ್ನ ೩೦ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. 

-ಕೆ. ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ