ಖದೀಜಾ
“ನೀವು ಇಸ್ಲಾಂ ಧರ್ಮದ ಕುರಿತು ಹಲವಾರು ಕಥೆ ಮತ್ತು ಕಾದಂಬರಿಗಳನ್ನು ಓದಿರಬಹುದು. ಅವೆಲ್ಲವನ್ನು ಬರೆದಿರುವುದು ಇಸ್ಲಾಂ ಧರ್ಮದ ಕುರಿತು. ಆದರೆ ಈ ‘ಖದೀಜಾ’ ಕಾದಂಬರಿ ಇಸ್ಲಾಂ ಕುರಿತಾಗಿ ಅಲ್ಲ; ಒಬ್ಬಳು ಮಾನವತಾವಾದಿ, ಹೃದಯವಂತಿಕೆಯುಳ್ಳವರ ಕುರಿತ ಐತಿಹಾಸಿಕ ಕಾದಂಬರಿ. ಈ ಕಾದಂಬರಿ ಸಂಪೂರ್ಣವಾಗಿ 1400 ವರ್ಷಗಳ ಹಿಂದೆ ಅಂದರೆ, ಪ್ರವಾದಿ ಮುಹಮ್ಮದ್ ಪೈಗಂಬರ ಮತ್ತು ಅವರ ಧರ್ಮಪತ್ನಿ ಖದೀಜಾರ ಜೀವನದಲ್ಲಿ ನಡೆದ ಘಟನಾವಳಿಗಳ ಕುರಿತಾದ್ದು. ಒಂದು ಧರ್ಮ ಗ್ರಂಥವನ್ನು ಓದಿ ನನ್ನದೇ ಆದ ದೃಷ್ಟಿಕೋನದಲ್ಲಿ ಬರೆದ ಕೃತಿಯಿದು. ಇದನ್ನೊಂದು ಧಾರ್ಮಿಕ ಗ್ರಂಥವಾಗಿ ನೋಡದೇ, ಸಾಹಿತ್ಯಕ ಪುಸ್ತಕವಾಗಿ ಓದಿದರೆ ಹೆಚ್ಚು ಆಪ್ತವಾಗುತ್ತದೆ.” ಎನ್ನುತ್ತಾರೆ ‘ಖದೀಜಾ’ ಎಂಬ ಐತಿಹಾಸಿಕ ಕಾದಂಬರಿಯ ಲೇಖಕರಾದ ಸಿ ವಿ ವಿರೂಪಾಕ್ಷ.
‘ಖದೀಜಾ’ ಕಾದಂಬರಿಗೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಜ್ಯೋತಿ ಬೀಳಗಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳ ಸಾರ ಇಲ್ಲಿದೆ..."ವೀರಲೋಕ ಸಂಸ್ಥೆಯು ಉತ್ತರ ಕರ್ನಾಟಕದ ಲೇಖಕರ ಕನಸುಗಳಿಗೆ ಜೀವ ತುಂಬುವ ಉದ್ದೇಶದಿಂದ 2023ರಲ್ಲಿ 'ಉತ್ತರ ಪರ್ವ' ಎನ್ನುವಂಥ ವಿಶೇಷ ಯೋಜನೆಯೊಂದನ್ನು ರೂಪಿಸಿಕೊಂಡಿತ್ತು. ವೀರಲೋಕದ ಈ ಯೋಜನೆಗೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸುಮಾರು ನೂರಕ್ಕಿಂತ ಹೆಚ್ಚು ಬರಹಗಾರರು ತಮ್ಮ ತಮ್ಮ ಕೃತಿಗಳನ್ನು ಕಳುಹಿಸಿದ್ದರು. ವೀರಲೋಕದ ಪ್ರತಿಷ್ಠಿತ ಉತ್ತರ ಪರ್ವಕ್ಕೆ ಬಂದಿದ್ದ ನೂರಾರು ಕೃತಿಗಳನ್ನು ಕನ್ನಡದ ಶ್ರೇಷ್ಠ ಬರಹಗಾರರಾದ 'ರಾಗಂ' ಎಂದೇ ಖ್ಯಾತರಾದ 'ರಾಜಶೇಖರ ಮಠಪತಿ' ಹಾಗೂ 'ವೀರಕಪುತ್ರ ಎಂ. ಶ್ರೀನಿವಾಸ' ಅವರ ತಂಡವು ಲೇಖಕರ ಕೃತಿಗಳ ಗುಣಮಟ್ಟ ಹಾಗೂ ಬರವಣಿಗೆಯ ಶೈಲಿಯನ್ನು ಗುರುತಿಸಿ ಅಂತಿಮ ಹಂತದಲ್ಲಿ ಪ್ರಕಟಿಸಲು ಯೋಗ್ಯವಾದಂತಹ, ಕಥಾಸಂಕಲನ, ಕಾದಂಬರಿ, ನಾಟಕ, ಕವನ ಸಂಕಲನ ಸೇರಿದಂತೆ ಟಾಪ್ 10 ಬರಹಗಾರರ ಕೃತಿಗಳನ್ನು ಆಯ್ಕೆ ಮಾಡಿದೆ.
ಕರ್ನಾಟಕದ ಪ್ರಮುಖ ಪ್ರಕಾಶನ ಸಂಸ್ಥೆ ವೀರಲೋಕ ಮಹತ್ವದ "ಉತ್ತರ ಪರ್ವ" ಯೋಜನೆಗೆ ಬಂದಿದ್ದ ನೂರಾರು ಕೃತಿಗಳಲ್ಲಿ ಪ್ರಕಟಣೆಗೆ ಆಯ್ಕೆಯಾದ ಅತ್ಯುತ್ತಮ ಹತ್ತು ಕೃತಿಗಳಲ್ಲಿ ಸಿ.ವಿ. ವಿರುಪಾಕ್ಷ ಎಂತಲೇ ನನಗೆ ಪರಿಚಿತರಾದ ವಿರುಪಾಕ್ಷಗೌಡ ವೀರಭದ್ರಗೌಡ ಚನ್ನಮಲ್ಲನಗೌಡ್ರ ಅವರ ಕಾದಂಬರಿ ಕೂಡ ಒಂದು. ಇವರ ಈ ಕಾದಂಬರಿಯ ಭಿತ್ತಿ ಅದೆಷ್ಟು ವಿಶಾಲವಾಗಿದೆಯೆಂದರೆ, ಇದರ ಸಂರಚನೆ ಅದೆಂಥ ಸೂಕ್ಷ್ಮ ಒಳನೆಯ್ದೆಗಳಿಂದ ಕೂಡಿದೆಯೆಂದರೆ ಇದನ್ನು ಕೆಲವೇ ಮಾತುಗಳಲ್ಲಿ ವಿವರಿಸುವುದಂತೂ ಸಾಧ್ಯವೇ ಇಲ್ಲ. ಮನುಷ್ಯನ ಹೊರಜಗತ್ತು ಮತ್ತು ಒಳ ಜಗತ್ತು ಪರಸ್ಪರ ಸಂವಾದಿಸುವಂತೆ ತೋರುವ, ಮನುಷ್ಯ ಸಾಮರ್ಥ್ಯವನ್ನು ಅಸ್ತಿತ್ವವಾದಿ ನೆಲೆಯಲ್ಲಿ ಪರಿಶೋಧಿಸುವ ಈ ಕಾದಂಬರಿಯಲ್ಲಿ ನಮ್ಮ ಯಾವುದೇ ನಿರ್ದಿಷ್ಟ ಪುರಾಣಕಥನವಿಲ್ಲ. ನಿಜ, ಯಾಕೆಂದರೆ...
ಈ ಕಾದಂಬರಿ ನಮ್ಮನ್ನು ಸುಮಾರು 1400 ವರ್ಷಗಳ ಹಿಂದಿನ ಪ್ರಾಚೀನ ಸೌದಿ ಅರೇಬಿಯಾದ ಮಕ್ಕಾ, ಮದೀನಾ ಮತ್ತು ಸಿರಿಯಾ ಪಟ್ಟಣಗಳ ವಾತಾವರಣಕ್ಕೆ ಕರೆದೊಯ್ಯುತ್ತದೆ. ಇಲ್ಲಿ, ನಾವು ಪ್ರವಾದಿ ಮುಹಮ್ಮದ್ ಮತ್ತು ಅವರ ಧರ್ಮಪತ್ನಿ ಖದೀಜಾರ ಅಪೂರ್ವ ಜೀವನಯಾನವನ್ನು ಅನುಭವಿಸುತ್ತೇವೆ. ಈ ಕಥನವು ಕೇವಲ ಐತಿಹಾಸಿಕ ದಾಖಲೆಗಳ ಸಂಗ್ರಹ ಮಾತ್ರವಲ್ಲ, ಬದಲಾಗಿ ಅದು ನಂಬಿಕೆ, ಪ್ರೇಮ, ತ್ಯಾಗ ಮತ್ತು ದೃಢಸಂಕಲ್ಪಗಳ ಗಾಢವಾದ ಮಾನವೀಯ ಬಂಧನಗಳನ್ನು ಚಿತ್ರಿಸುತ್ತದೆ.
ಪ್ರವಾದಿಯವರು ಮತ್ತು ಖದೀಜಾರ ಜೀವನವನ್ನು ಅವರ ಬಾಲ್ಯದಿಂದ ಹಿಡಿದು ಅವರು ಧರ್ಮವನ್ನು ಸ್ಥಾಪಿಸುವ ತನಕದ ಪಯಣವನ್ನು ಈ ಕಾದಂಬರಿಯು ವಿವರಿಸುತ್ತದೆ. ಅವರ ನೈತಿಕ ನಡವಳಿಕೆ, ಧರ್ಮದ ಸಂಕೇತಗಳು ಮತ್ತು ಸಮಾಜದಲ್ಲಿ ಅವರ ಪಾತ್ರವು ಈ ಕಾದಂಬರಿಯ ಮೂಲಕ ಸಶಕ್ತವಾಗಿ ವ್ಯಕ್ತಪಡಿಸಲ್ಪಟ್ಟಿದೆ. ಖದೀಜಾರ ಸ್ವಾವಲಂಬಿ ವೃತ್ತಿಜೀವನ ಮತ್ತು ಅವರು ತೋರಿದ ದೃಢ ನಿಲುವುಗಳು ಅನೇಕ ಮಹಿಳೆಯರಿಗೆ ಪೇರಣೆಯ ಮೂಲವಾಗಿದೆ. ಈ ಕಾದಂಬರಿಯು ನಮ್ಮನ್ನು ಅವರ ವೈಯಕ್ತಿಕ ಜೀವನದ ಅಂತರಿಕ ಆಯಾಮಗಳ ಮೂಲಕ ನಡೆಸುತ್ತಾ, ನಮ್ಮನ್ನು ಅವರ ಜೀವನದ ಪ್ರತಿ ಕ್ಷಣದಲ್ಲಿಯೂ ಹೆಚ್ಚು ಆಳವಾದ ಮಾನವೀಯ ಸಂವೇದನೆಯನ್ನು ಅನುಭವಿಸುವಂತೆ ಮಾಡುತ್ತದೆ. ಈ ಪಠ್ಯ ಓದುಗರನ್ನು ಕೇವಲ ಐತಿಹಾಸಿಕ ಸಂಗತಿಗಳ ಅರಿವಿನಲ್ಲಿ ಮಾತ್ರ ಬಿಡದೆ. ಅದರ ಜೊತೆಗೆ ಮಾನವೀಯ ಭಾವನೆಗಳು ಮತ್ತು ಧಾರ್ಮಿಕ ನಂಬಿಕೆಗಳ ಆಳವಾದ ಸಂವೇದನೆಯನ್ನು ಕೂಡ ಕಲಿಸುತ್ತದೆ.
"ಖದೀಜಾ' ತನ್ನ ವಿವರಗಳ ಸಮೃದ್ಧಿಯಿಂದ, ಪ್ರಾಮಾಣಿಕ ಪಾತ್ರಸೃಷ್ಟಿಯಿಂದ, ಮುಖ್ಯ ಪಾತ್ರಗಳ ಮನೋವೇದಕ ಕಥನಗಳಿಂದ ಆದ್ವಿತೀಯ ಪರಿಣಾಮವನ್ನು ಉಂಟುಮಾಡುವ ಕಾದಂಬರಿ. ಇದರಲ್ಲಿ ಶಾಂತಿಯ ಕಾಲದಲ್ಲಿ ಹೇಗೋ ಹಾಗೆ ಉತ್ಕಾಂತಿಯ ಕಾಲದಲ್ಲಿ ಕೂಡ ಒಂದು ಸಮುದಾಯವನ್ನು ಸಮಗ್ರವಾಗಿ ಕಟ್ಟಿಕೊಡುವ ಪ್ರಯತ್ನದ ಜೊತೆಗೆ ಮನುಷ್ಯನ ನೋವಿಗೂ, ಸಾಹಸಕ್ಕೂ ಧ್ವನಿ ನೀಡುವ ಹಂಬಲವಿದೆ. ಭಾಷೆಯಲ್ಲಿ, ನಿರೂಪಣೆಯಲ್ಲಿ, ವಿವರಗಳ ಸಾಂದ್ರತೆಯಲ್ಲಿ ಸ್ವಲ್ಪಮಟ್ಟಿಗೆ ನಮ್ಮ ಜೀವನಕ್ಕೆ ಹತ್ತಿರವೆನಿಸುವ ಈ ಕಾದಂಬರಿಯಲ್ಲಿ ಪ್ರಯೋಗಶೀಲತೆಯ ಸೆಳಕುಗಳಿವೆ: ನಂಬಲಸಾಧ್ಯವಾದ ಕತೆಗಳಿವೆ; ಪೌರಾಣಿಕ ವಲಯದ ಜೊತೆ ಮನುಷ್ಯನ ಐಹಿಕ ಭಾವನೆಗಳನ್ನು ಬೆಸೆಯುವ ಜಾಣ್ಮಯಿದೆ. ಇಂಥ ಅಪರೂಪದ ಕೃತಿಯನ್ನು ನೀಡಿರುವ ಸಿ.ವಿ. ವಿರುಪಾಕ್ಷ ಅವರು ನಿಜಕ್ಕೂ ಅಭಿನಂದನಾರ್ಹರು.” ೧೮೦ ಪುಟಗಳ ಈ ಐತಿಹಾಸಿಕ ಕಾದಂಬರಿಯನ್ನು ಓದುವಾಗ ನಿಮಗೆ ಇತಿಹಾಸದ ಪುಟಗಳು ಕಣ್ಣ ಮುಂದೆ ಹಾದು ಹೋದಂತೆ ಭಾಸವಾಗುವುದರಲ್ಲಿ ಸಂಶಯವಿಲ್ಲ.