ಖಲೀಫಾ ಮತ್ತು ಅಹ್ಮದ್
ಬಾಗ್ದಾದನ್ನು ಆಳಿದ ಸುಪ್ರಸಿದ್ದ ಖಲೀಫರಲ್ಲಿ ಮುತ್ಸಿತ್-ಬಿಲ್ಲಾ ಒಬ್ಬ. ಯಥಾಪ್ರಕಾರ ಒಂದು ದಿನ ತನ್ನ ಆಪ್ತ ಗೆಳೆಯ ಅಮ್ದಸ್ ಜೊತೆ ನಗರದ ಬೀದಿಗಳಲ್ಲಿ ಸುತ್ತಾಡಲು ಶುರು ಮಾಡಿದರು. ಅವರಿಗೆ ಸುಸ್ತಾದಾಗ, ಒಂದು ಭವ್ಯ ಬಂಗಲೆ ಮತ್ತು ಸುಂದರ ಉದ್ಯಾನದ ಎದುರಿದ್ದ ಮನೆಯ ಜಗಲಿಯಲ್ಲಿ ಕುಳಿತರು.
ಆಗ ಅಲ್ಲಿ ಹಾದುಹೋಗುತ್ತಿದ್ದ ಇಬ್ಬರು ಸೇವಕರು ಮಾತಾಡಿಕೊಳ್ಳುವುದು ಕೇಳಿಸಿತು, “ಇವತ್ತು ನಮ್ಮ ಮಾಲೀಕ ರಾತ್ರಿ ಊಟ ಮಾಡೋದಿಲ್ಲ. ಯಾಕೆಂದರೆ, ಯಾರೂ ಅತಿಥಿಗಳು ಬಂದಿಲ್ಲ." ಅದನ್ನು ಕೇಳಿದ ಅಹ್ಮದ್ ಆ ಸೇವಕರಿಗೆ ಹೇಳಿದ, “ನಿಮ್ಮ ಮಾಲೀಕರಿಗೆ ನಾವಿಬ್ಬರು ನಗರಕ್ಕೆ ದೂರ ದೇಶದಿಂದ ಬಂದಿರುವ ವರ್ತಕರು ಎಂದು ತಿಳಿಸಿ.”
ಇಬ್ಬರು ಸೇವಕರೂ ಧಾವಿಸಿ ಹೋಗಿ ಮಾಲೀಕನಿಗೆ ವಿಷಯ ತಿಳಿಸಿದರು. ನಂತರ ಮರಳಿ ಬಂದು ಇವರಿಬ್ಬರನ್ನೂ ಆದರದಿಂದ ಸ್ವಾಗತಿಸಿದರು. ಮಾಲೀಕ ಅತಿಥಿಗಳನ್ನು ಭೋಜನಕ್ಕೆ ಕೂರಿಸಿದ. ಅಷ್ಟರಲ್ಲಿ ಖಲೀಫಾ ಕೋಪದಿಂದ ಅಬ್ಬರಿಸುತ್ತಾ ಮಾಲೀಕನನ್ನು ಕೇಳಿದ, "ಯಾರು ನೀನು? ನಿಜ ಹೇಳು”
ಮಾಲೀಕ ಮುಗುಳ್ನಗುತ್ತಾ ಉತ್ತರಿಸಿದ, “ಮಹನೀಯರೇ, ನಾನು ಅಹ್ಮದ್. ತಾವು ಯಾರೆಂದು ತಿಳಿಸುವಿರಾ? ಒಮ್ಮೆಲೇ ನೀವು ಕೋಪ ಮಾಡಿಕೊಳ್ಳಲು ಕಾರಣವೇನೆಂದು ತಿಳಿಸುವಿರಾ?” ಆಗ ಖಲೀಫನ ಪರಿಚಯವನ್ನು ಅಮ್ದಸ್ ತಿಳಿಸಿದ. ತಕ್ಷಣವೇ ಖಲೀಫನಿಗೆ ಮಾಲೀಕ ಅಹ್ಮದ್ ಮಂಡಿಯೂರಿ ನಮಸ್ಕರಿಸಿದ. “ಮಾನ್ಯ ಖಲೀಫರೇ, ಈ ಪಾಮರನ ಮನೆಗೆ ತಾವು ಬಂದದ್ದು ನನ್ನ ಭಾಗ್ಯ. ಭೋಜನದಲ್ಲಿ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ" ಎಂದು ವಿನಯದಿಂದ ಭಿನ್ನವಿಸಿದ.
ಈಗ ಖಲೀಫಾ ಪ್ರಶ್ನಿಸಿದ, “ನಿನ್ನ ಭೋಜನ ಅತ್ಯುತ್ತಮವಾಗಿತ್ತು. ಆದರೆ, ನಿನ್ನ ಮೇಲಂಗಿಯಲ್ಲಿ ನನ್ನ ದಿವಂಗತ ತಂದೆಯ ಲಾಂಛನವಿದೆ. ನಿನಗೆ ಅದು ಯಾವಾಗ ಸಿಕ್ಕಿತು? ಅರಮನೆಯಲ್ಲಿ ಇರಬೇಕಾದ ಈ ಮೇಲಂಗಿ ಇಲ್ಲಿಗೆ ಹೇಗೆ ಬಂತು?"
ಅಹ್ಮದ್ ದೀರ್ಘವಾಗಿ ಉಸಿರೆಳೆದುಕೊಂಡು ತನ್ನ ಕತೆ ಹೇಳಲು ಶುರು ಮಾಡಿದ: “ಮಾನ್ಯ ಖಲೀಫರೇ, ನಾನು ಹೆಸರುವಾಸಿ ಕುಟುಂಬದಲ್ಲಿ ಹುಟ್ಟಿದವನು. ನನ್ನ ತಂದೆಯವರು ಬಾಗ್ದಾದಿನ ಸುಪ್ರಸಿದ್ದ ವರ್ತಕರು. ಅವರಿಗೆ ಹಲವಾರು ಮಳಿಗೆಗಳಿದ್ದವು. ನಾನು ಯಾವುದಕ್ಕೂ ಕೊರತೆಯಿಲ್ಲದೆ, ಸುಖಸಂಪತ್ತಿನಲ್ಲೇ ಬೆಳೆದೆ.
ಅದೊಂದು ದಿನ ನಾನು ಮಳಿಗೆಯಲ್ಲಿದ್ದಾಗ ಯುವತಿಯೊಬ್ಬಳು ಬಂದು, ತಾವು ಅಹ್ಮದ್ ಹೌದೇನು? ಎಂದು ಕೇಳಿದಳು. ಅವಳನ್ನು ನೋಡಿ ನನ್ನ ಉಸಿರೇ ನಿಂತು ಹೋಯಿತು; ಅವಳು ಅಂತಹ ರೂಪವತಿ! ನಾನು ಸುಧಾರಿಸಿಕೊಂಡು, "ಹೌದು, ನಾನೇ ಅಹ್ಮದ್” ಎಂದು ಉತ್ತರಿಸಿದೆ. ಅವಳು ನನ್ನೆದುರು ಕುಳಿತು ಹೇಳಿದಳು, "ಮಾನ್ಯರೇ, ನನಗೆ ಮುನ್ನೂರು ಚಿನ್ನದ ನಾಣ್ಯಗಳು ಬೇಕಾಗಿವೆ. ನಿಮ್ಮ ಸಿಬ್ಬಂದಿಗೆ ಅವನ್ನು ಎಣಿಸಲು ಹೇಳಿ."
ನಾನು ನನ್ನ ಸಿಬ್ಬಂದಿಯತ್ತ ತಿರುಗಿ ತಲೆಯಲ್ಲಾಡಿಸಿದೆ. ಆತ ಮರುಮಾತಾಡದೆ ನಾಣ್ಯಗಳನ್ನು ಎಣಿಸಿ ಅವಳಿಗಿತ್ತ. ಅವಳು ಏನೂ ಮಾತಾಡದೇ ಹಣ ಒಯ್ದಳು. ಈ ವೆಚ್ಚವನ್ನು ಯಾರ ಹೆಸರಿಗೆ ಲೆಕ್ಕ ಬರೆಯಬೇಕೆಂದು ಸಿಬ್ಬಂದಿ ಕೇಳಿದ. ನಮ್ಮ ದೇವತೆಯ ಹೆಸರಿಗೆ ಲೆಕ್ಕ ಬರೆಯಬೇಕೆಂದೆ. ಆತ ತಕ್ಷಣವೇ ಅವಳ ಬೆನ್ನು ಹತ್ತಿ ಹೋದ. ಸ್ವಲ್ಪ ಹೊತ್ತಿನ ನಂತರ, ಅವನು ವಾಪಾಸು ಬಂದ; ಅವನ ಉಡುಪು ಅಲ್ಲಲ್ಲಿ ಹರಿದಿತ್ತು; ಅವನ ಮೈಯಲ್ಲಿ ಹಲವು ಗಾಯಗಳಿದ್ದವು. ನನಗೆ ಆಘಾತವಾಯಿತು. ಆದರೆ ನಾನು ಏನೂ ಮಾತಾಡಲಿಲ್ಲ.
ಮರುದಿನ ಅವಳು ಪುನಃ ನನ್ನ ಮಳಿಗೆಗೆ ಬಂದು, ಐನೂರು ಚಿನ್ನದ ನಾಣ್ಯಗಳನ್ನು ಕೇಳಿದಳು. ನಾನು ಹೇಳಿದೆ, “ಖಂಡಿತ ಕೊಡ್ತೇನೆ. ಈ ಮಳಿಗೆಯೇ ನಿನ್ನದು ಅಂದುಕೋ. ಇಲ್ಲಿಂದ ಏನು ಬೇಕಾದರೂ ತೆಗೆದುಕೋ." ಆ ದಿನವೂ ಅವಳು ಚಿನ್ನದ ನಾಣ್ಯಗಳನ್ನು ಮೌನವಾಗಿ ಒಯ್ದಳು. ಮರುದಿನವೂ ಹಾಗೆಯೇ ಆಯಿತು. ಅವತ್ತು ನಾನು ಗುಟ್ಟಾಗಿ ಅವಳನ್ನು ಹಿಂಬಾಲಿಸಿದೆ. ಅವಳು ಅರಮನೆಯೊಳಗೆ ಹೋದದ್ದನ್ನು ನೋಡಿದೆ.
ನಾನು ಮನೆಗೆ ಬಂದು ನನ್ನ ತಾಯಿಗೆ ಎಲ್ಲ ಸಂಗತಿ ತಿಳಿಸಿದೆ; ಆ ಸುರಸುಂದರಿಯನ್ನು ನಾನು ಪ್ರೀತಿಸುತ್ತೇನೆಂದೂ ಹೇಳಿದೆ. ಅವಳು ನನ್ನನ್ನು ಎಚ್ಚರಿಸಿದಳು, “ಮಗನೇ, ಮೂರ್ಖನಾಗ ಬೇಡ. ನೀನು ಚಂದ್ರ ಬೇಕೆಂದು ಆಶೆ ಪಡುತ್ತಿರುವೆ; ಅದು ಸಿಗೋದಿಲ್ಲ. ನೀನು ಒಪ್ಪಿದರೆ, ಈ ನಗರದ ರೂಪವತಿ ಯುವತಿಯೊಂದಿಗೆ ನಿನ್ನ ಮದುವೆ ಮಾಡುತ್ತೇನೆ.”
ಆದರೆ ನನಗೆ ಅವಳೇ ಬೇಕಾಗಿದ್ದಳು. ಮರುದಿನ ನನ್ನ ಮಳಿಗೆಯಲ್ಲಿ ಚಿಂತಾಕ್ರಾಂತನಾಗಿ ಕುಳಿತಿದ್ದೆ. ಆಗ ನನ್ನ ತಂದೆಯ ಸ್ನೇಹಿತರೊಬ್ಬರು ಬಂದರು. ಅವರಿಗೆ ಎಲ್ಲ ಸಂಗತಿಯನ್ನೂ ತಿಳಿಸಿದೆ. ಅವರು ಹೇಳಿದರು, “ನನಗೆ ಅರಮನೆಯ ದರ್ಜಿಯೊಬ್ಬ ಗೊತ್ತು. ಅವನಿಗೆ ಕೈತುಂಬ ಹಣ ಕೊಡು; ನಿನ್ನ ಮನದಾಶೆ ಪೂರೈಸಿಕೋ." ಮರುದಿನ ಆ ದರ್ಜಿಯ ಅಂಗಡಿಗೆ ಹೋಗಿ ಒಂದು ಉಡುಪು ಖರೀದಿಸಿ, ಹತ್ತು ಚಿನ್ನದ ನಾಣ್ಯ ಕೊಟ್ಟೆ. ಅವನಿಗೆ ಗೊಂದಲವಾಯಿತು. ನಾನು ನನ್ನೆಲ್ಲ ಕತೆ ತಿಳಿಸಿದೆ. “ಓ, ನೀನು ಮೆಚ್ಚಿರುವ ಯುವತಿ ಕೋಕಿ. ಗುಲಾಮಿಯಾದ ಅವಳು ತನ್ನ ಹಾಡುಗಾರಿಕೆಯಿಂದ ಖಲೀಫನನ್ನು ಖುಷಿಪಡಿಸುವವಳು” ಎಂದ.
ಆಗ ಅಲ್ಲಿಗೊಬ್ಬ ಸೇವಕ ಬಂದ. ಅವನು ಕೋಕಿಯ ಮನೆಯಲ್ಲಿ ಕೆಲಸ ಮಾಡುವವನು ಎಂದು ದರ್ಜಿ ತಿಳಿಸಿದ. ಅವನೊಂದು ಉಡುಪು ಆಯ್ಕೆ ಮಾಡಿದ. ಅದನ್ನು ನಾನೇ ಅವನಿಗೆ ಕೊಡಿಸಿದೆ. ಆಗ ಅವನು ನೀವು ಇಬ್ನ್ ಅಹ್ಮದ್ ಅವರಲ್ಲವೇ? ಎಂದು ಕೇಳಿದ. ನಿನಗೆ ನನ್ನ ಹೆಸರು ಹೇಗೆ ಗೊತ್ತೆಂದು ಕೇಳಿದೆ. ಆತ ತುಂಟನಗು ನಗುತ್ತಾ ಹೇಳಿದ, "ನನ್ನ ಮಾಲೀಕಳು ಯಾವಾಗಲೂ ನಿಮ್ಮ ನೆನಪು ಮಾಡಿಕೊಳ್ತಾ ಇರ್ತಾಳೆ. ಅವಳನ್ನು ಭೇಟಿಯಾಗಲು ನಿಮಗೆ ಸಹಾಯ ಮಾಡ್ತೇನೆ.”
ಹಾಗೆಂದ ಸೇವಕ ಫಕ್ಕನೆ ಅಲ್ಲಿಂದ ಹೊರಟು ಹೋದ. ಸ್ವಲ್ಪ ಹೊತ್ತಿನಲ್ಲೇ ಅವನು ಅಲ್ಲಿಗೆ ವಾಪಾಸು ಬಂದ. ಅವನ ಕೈಯಲ್ಲಿ ರಾಜಲಾಂಛನವಿದ್ದ ಮೇಲಂಗಿ ಇತ್ತು. ಇದನ್ನು ಧರಿಸಿದವರಿಗೆ ಮಾತ್ರ ಅರಮನೆಯೊಳಗೆ ಪ್ರವೇಶ ಎಂದವನು ತಿಳಿಸಿದ. ನನ್ನನ್ನೊಂದು ಹಾಲುಗಲ್ಲಿನ ದ್ವಾರದೆದುರು ತಲಪಿಸಿ, ಅದು ಕೋಕಿಯ ಮನೆಗೆ ತೆರೆದುಕೊಳ್ಳುತ್ತದೆ ಎಂದು ಹೇಳಿದ.
ಯಾವಾಗಲೂ ಎಚ್ಚರದಿಂದಿರುವ ನಾನು ಈ ಅವಕಾಶ ತಪ್ಪಿಸಿಕೊಳ್ಳಬಾರದು ಎಂದು ನಿರ್ಧರಿಸಿ ಹಾಲುಗಲ್ಲಿನ ದ್ವಾರದೊಳಗೆ ಹೋದೆ. ಅದೊಂದು ಪಡಸಾಲೆಗೆ ತೆರೆದು ಕೊಂಡಿತು. ನಾನು ಅಲ್ಲಿದ್ದ ಮೊದಲ ಕೋಣೆಯೊಳಗೆ ಹೋದಾಗ ಗೌರವಾರ್ಹ ಮಹಿಳೆಯೊಬ್ಬಳು ಎದುರಾದಳು. ಅವಳು ಕಿರಿಚಲಿಲ್ಲ. ಬದಲಾಗಿ, “ಓ, ಇಬ್ನ್ ಅಹ್ಮದ್! ನನ್ನ ತಂಗಿ ನಿನ್ನನ್ನು ಬಹಳ ಪ್ರೀತಿಸುತ್ತಾಳೆ. ಅವಳು ನಿನ್ನ ದೃಢಮನಸ್ಸು ಮತ್ತು ನೇರವಂತಿಕೆಯನ್ನು ಪರೀಕ್ಷಿಸಿದ್ದಾಳೆ. ನೀನು ನನ್ನ ಕೋಣೆಗೆ ಬಂದದ್ದು ಒಳ್ಳೆಯದಾಯಿತು. ಅವಳ ಬಗ್ಗೆ ನಿನ್ನ ಭಾವನೆಗಳೇನು?” ಎಂದು ಪ್ರಶ್ನಿಸಿದಳು. "ನಾನು ಅವಳನ್ನು ಮದುವೆಯಾಗಲು ಬಯಸುತ್ತೇನೆ. ಅದಕ್ಕಾಗಿಯೇ ನಾನು ಇಲ್ಲಿಯ ವರೆಗೆ ಬರುವ ಧೈರ್ಯ ಮಾಡಿದೆ" ಎಂದು ಉತ್ತರಿಸಿದೆ.
ಅನಂತರ ಅವಳು ಕೋಕಿಗೆ ಬರಹೇಳಿದಳು. ಕೋಕಿ ತಕ್ಷಣವೇ ಅಲ್ಲಿಗೆ ಬಂದಳು. ಆಗ, ಖಲೀಫಾರ ಆಗಮನವನ್ನು ಸೇವಕರು ಘೋಷಿಸಿದರು. ಅಕ್ಕತಂಗಿಯರು ನನ್ನನ್ನೊಂದು ಪೆಟ್ಟಿಗೆಯಲ್ಲಿ ಅಡಗಿಸಿಟ್ಟರು. ಕೋಣೆಯೊಳಗೆ ಬಂದ ಖಲೀಫ್ ಹೇಳಿದರು, “ಕೋಕಿ, ನೀನು ಹಾಡೋದನ್ನು ಕೇಳಿ ಬಹಳ ಸಮಯವಾಯಿತು. ಈಗೊಂದು ಹಾಡನ್ನು ಹಾಡು.” ಕೋಕಿ ಪ್ರೇಮಗೀತೆ ಹಾಡಲು ಶುರುವಿಟ್ಟಳು. ಆ ದಿನ ಪ್ರೇಮಭಾವದಲ್ಲಿ ಮುಳುಗಿದ್ದ ಕೋಕಿ ಅದ್ಭುತವಾಗಿ ಹಾಡಿದಳು. ಅವಳ ಹಾಡು ಖಲೀಫರನ್ನು ಭಾರೀ ಖುಷಿ ಪಡಿಸಿತು.
ಹಾಡು ಕೇಳಿ ತಲೆದೂಗಿದ ಖಲೀಫರು, ಕೋಕಿ ಏನು ಉಡುಗೊರೆ ಕೇಳಿದರೂ ಕೊಡುತ್ತೇನೆಂದರು. ಮಂಡಿಯೂರಿ ವಂದಿಸಿದ ಕೋಕಿ ತನಗೇನೂ ಬೇಡವೆಂದಳು. ಖಲೀಫ ಒತ್ತಾಯಿಸಿದಾಗ, “ಓ ನನ್ನ ಒಡೆಯಾ, ನನ್ನನ್ನು ಈ ಗುಲಾಮಗಿರಿಯಿಂದ ಬಿಡುಗಡೆ ಮಾಡಿ; ಈ ಕೋಣೆಯಲ್ಲಿರುವ ಎಲ್ಲವನ್ನೂ ನನಗೆ ದಯಪಾಲಿಸಿ” ಎಂದಳು. ಖಲೀಫ ಸಮ್ಮತಿಸಿದರು. ಮರುದಿನ, ನಾನು ಅವಿತಿದ್ದ ಪೆಟ್ಟಿಗೆ ಸಹಿತ, ಆ ಕೋಣೆಯಲ್ಲಿದ್ದ ಎಲ್ಲವನ್ನೂ ನನ್ನ ಮನೆಗೆ ತರಲಾಯಿತು. ಅನಂತರ ನಾನು ಕೋಕಿಯನ್ನು ಮದುವೆಯಾದೆ. ಆಗಿನಿಂದ ನೀವು ನೋಡಿದ ರಾಜಲಾಂಛನದ ಮೇಲಂಗಿ ನನ್ನ ಬಳಿಯೇ ಇದೆ.”
ಇಬ್ನ್ ಅಹ್ಮದನ ಕತೆಯನ್ನೆಲ್ಲ ಕೇಳಿದ ಮುತ್ಸಿತ್-ಬಿಲ್ಲಾ ಖಲೀಫ ಆತನನ್ನು ಮೆಚ್ಚುಗೆಯಿಂದ ಅಪ್ಪಿಕೊಂಡರು. ಅನಂತರ ಖಲೀಫರ ಆಪ್ತರಲ್ಲಿ ಒಬ್ಬನಾಗಿ ಇಬ್ನ್ ಅಹ್ಮದ್ ಬಾಳಿದ.