ಖಲೀಲ್ ಗಿಬ್ರಾನ್ ಕಥೆಗಳು

ಈಗಾಗಲೇ ನೀವು ಖಲೀಲ್ ಗಿಬ್ರಾನ್ ಅವರ ಒಂದು ಸಣ್ಣ ಕಥೆಯನ್ನು ‘ಸಂಪದ’ದಲ್ಲಿ ಓದಿರುವಿರಿ. ಅವರ ಕಿರು ಕಥೆಯಲ್ಲಿ ಅಡಗಿದ ಗೂಡಾರ್ಥವನ್ನು ಅರ್ಥೈಸಿದವನೇ ಬುದ್ಧಿವಂತ. ಇಲ್ಲಿ ಇನ್ನೆರಡು ಪುಟ್ಟ ಪುಟ್ಟ ಕಥೆಗಳಿವೆ. ಓದುವ ಖುಷಿ ನಿಮ್ಮದಾಗಲಿ..
***
ಗಾಳಿ ಹುಂಜ
ಗಾಳಿ ಬೀಸುವ ದಿಕ್ಕನ್ನು ಸೂಚಿಸುವ ಗಾಳಿ ಹುಂಜ ಒಂದು ದಿನ ಗಾಳಿಗೆ ಹೀಗೆ ಹೇಳಿತು: “ನಿನ್ನನ್ನು ಕಂಡರೆ ನನಗೆ ಜಿಗುಪ್ಸೆಯಾಗುತ್ತದೆ. ತುಂಬಾ ಬೇಸರ ಉಂಟಾಗುತ್ತದೆ. ಸುಂಯ್ ಎಂದು ಬೀಸುತ್ತಾ ತಲೆ ನೋವು ತರ್ತೀಯಾ, ಹಾಡಿದ್ದೇ ಹಾಡು ಕಿಸಬಾಯಿ ದಾಸನ ತರಹ ಒಂದೇ ಸಮನೆ ಯಾಕೆ ಬೀಸ್ತೀಯಾ?, ನೀನು ಎಲ್ಲಾದರೂ ದೂರ ಹೋಗಿ ಬೀಸಬಾರದೇ? ನನ್ನ ಮುಖದ ಮೇಲೆಯೇ ಬೀಸಬೇಕಾ? “
ಗಾಳಿ ಇದಕ್ಕೆ ಏನೂ ಉತ್ತರ ಕೊಡುವ ಗೋಜಿಗೆ ಹೋಗಲಿಲ್ಲ. ಬದಲಾಗಿ, ಅದು ಆಕಾಶದ ಮಧ್ಯೆ ನಿಂತು ಗಹಗಹಿಸಿ ನಕ್ಕು ಬಿಟ್ಟಿತು.
***
ಸೌಂದರ್ಯ ಮತ್ತು ಕುರೂಪ
ಒಂದು ದಿನ ಸೌಂದರ್ಯ ಮತ್ತು ಕುರೂಪ ಸಮುದ್ರ ದಡದಲ್ಲಿ ಪರಸ್ಪರ ಮುಖಾಮುಖಿಯಾದರು. ಇಬ್ಬರಲ್ಲೂ ಮಾತುಕತೆಯಾಯಿತು;
“ನಾವಿಬ್ಬರೂ ಸಮುದ್ರದಲ್ಲಿ ಸ್ನಾನ ಮಾಡೋಣವೇ?”
ಸರಿ, ಎಂದು ಪರಸ್ಪರರು ತಮ್ಮ ತಮ್ಮ ಉಡುಪುಗಳನ್ನು ದಡದಲ್ಲಿ ಕಳಚಿಟ್ಟು ಸ್ನಾನಕ್ಕೆ ನೀರಿಗೆ ಇಳಿದರು. ಬಹಳ ಸಮಯ ನೀರಿನಾಟವಾಡುತ್ತಾ ಇದ್ದ ಈರ್ವರಿಗೂ ಸಮಯ ಸರಿದದ್ದೇ ತಿಳಿಯಲಿಲ್ಲ. ಕುರೂಪ ಮೊದಲು ನೀರಿನಿಂದ ಎದ್ದು ಮೇಲೆ ದಡಕ್ಕೆ ಬಂದನು. ಮೇಲೆ ಬಂದವನು ಸೌಂದರ್ಯದ ಉಡುಪು ಧರಿಸಿ ತನ್ನ ಪಾಡಿಗೆ ತಾನು ಹೊರಟು ಹೋದ.
ಕುರೂಪ ಹೋದ ಬಳಿಕವೂ ಸ್ವಲ್ಪ ಸಮಯ ಈಜಿದ ನಂತರ ಸೌಂದರ್ಯಕ್ಕೂ ಈಜಾಡಿದ್ದು ಸಾಕು ಎಂದು ನೀರಿನಿಂದ ಹೊರ ಬಂದು ನೋಡುವಾಗ ದಡದಲ್ಲಿ ಕಳಚಿಟ್ಟಿದ್ದ ಉಡುಪು ಮಾಯವಾಗಿತ್ತು. ಬೆತ್ತಲೆಯಾಗಿ ದಡದಲ್ಲಿ ನಿಲ್ಲಲು ಮುಜುಗರವಾಗಿ ಸೌಂದರ್ಯಕ್ಕೆ ಕುರೂಪದ ಉಡುಪನ್ನೇ ಅನಿವಾರ್ಯವಾಗಿ ಧರಿಸಬೇಕಾಗಿ ಬಂತು.
ಇದರಿಂದ ಏನಾಗಿದೆ ಎಂದರೆ ಇವತ್ತಿಗೂ ಪುರುಷರು ಮತ್ತು ಸ್ತ್ರೀಯರು ತಾನು ಕುರೂಪಿ, ತಾನು ಸುಂದರಿ ಎಂದು ಪರಸ್ಪರ ತಪ್ಪಾಗಿ ತಿಳಿದುಕೊಳ್ಳುತ್ತಾರೆ.
ಆದಾಗ್ಯೂ ಕೆಲ ಮಂದಿ ಸುಂದರಿಯ ಮುಖವನ್ನು ಅವಲೋಕಿಸಿದವರು, ಇವರಿಗೆ ಅವರ ಉಡುಪುಗಳ ಪರಿವೆಯೇ ಇಲ್ಲ, ಉಡುಪನ್ನು ಲೆಕ್ಕಿಸದೇ ಸೌಂದರ್ಯದ ಮುಖಾವಲೋಕನ ಮಾಡಿದರು ಈ ಮಂದಿ.
ಇನ್ನು ಕೆಲವರು ಇದ್ದಾರೆ, ಅವರು ಕುರೂಪನ ಪರಿಚಯ ಉಳ್ಳವರು. ಕುರೂಪನ ಮುಖಾವಲೋಕನ ಮಾಡಿದವರು. ತಾನು ಧರಿಸಿದ ಸೌಂದರ್ಯಳ ಉಡುಪಿನಿಂದ ತನ್ನ ಕುರೂಪವನ್ನು ಈ ಮಂದಿಯ ನೋಟದಿಂದ ಮರೆಮಾಚುವುದು ಕುರೂಪನಿಗೆ ಸಾಧ್ಯವಾಗಲಿಲ್ಲ.
***
(ಕಸ್ತೂರಿ - ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ