ಖಲೀಲ್ ಗಿಬ್ರಾನ್ ಕಥೆ : ಹುಡುಕಾಟ
ಖಲೀಲ್ ಗಿಬ್ರಾನ್ (೧೮೮೩-೧೯೩೧) ಓರ್ವ ಲೆಬನೀಸ್ ಅಮೇರಿಕನ್ ಲೇಖಕ, ಕವಿ ಹಾಗೂ ಕಥೆಗಾರ. ಅವರು ಬರೆದ ಕಥೆಗಳು ಬಹಳಷ್ಟು ಒಳ ಅರ್ಥಗಳನ್ನು ಹೊಂದಿರುತ್ತದೆ. ಒಮ್ಮೆ ಓದುವಾಗ ಒಂದು ಅರ್ಥ ನೀಡಿದರೆ, ಮತ್ತೊಮ್ಮೆ ಓದುವಾಗ ಬೇರೆಯೇ ಅರ್ಥ ಕೊಡುತ್ತದೆ. ಈ ಕಾರಣಗಳಿಂದಲೇ ಗಿಬ್ರಾನ್ ಅವರನ್ನು ಜನರು ತತ್ವಜ್ಞಾನಿ ಎಂದು ಕರೆಯುತ್ತಿದ್ದರು. ಆದರೆ ಈ ಪದವಿಯನ್ನು ಅವರು ಸದಾ ಕಾಲ ನಿರಾಕರಿಸುತ್ತಾ ಬಂದರು. ಅವರು ಬರೆದ ‘ದಿ ಪ್ರೊಪೆಟ್' (The Prophet) ಎಂಬ ಪುಸ್ತಕವು ೧೯೨೩ ರಲ್ಲಿ ಪ್ರಕಟವಾಗಿ ಬಹಳ ಖ್ಯಾತಿ ಪಡೆಯಿತು. ಸುಮಾರು ೧೦೦ ಭಾಷೆಗಳಿಗೆ ಭಾಷಾಂತರವಾದ ಪುಸ್ತಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗಿಬ್ರಾನ್ ಓರ್ವ ಉತ್ತಮ ಚಿತ್ರ ಕಲಾವಿದರೂ ಆಗಿದ್ದರು.
ಖಲೀಲ್ ಗಿಬ್ರಾನ್ ಅವರ ಒಂದು ಕಿರು ಕಥೆಯನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಒಮ್ಮೆ ಓದಿ, ಮತ್ತೊಮ್ಮೆ ಓದಿ. ವಿಭಿನ್ನ ಅನುಭವ ನಿಮ್ಮದಾಗುವುದು.
ಹುಡುಕಾಟ
ಒಂದು ಸಾವಿರ ವರ್ಷಗಳಷ್ಟು ಹಿಂದೆ, ಲೆಬನಾನ್ ಬಯಲು ಸೀಮೆಯಲ್ಲಿ ಇಬ್ಬರು ತತ್ವಶಾಸ್ತ್ರಜ್ಞರು ಭೇಟಿಯಾದರು.
ಒಬ್ಬ ಇನ್ನೊಬ್ಬನನ್ನು ಕೇಳಿದ ‘ಯಾವ ಕಡೆ ಸವಾರಿ?’ ಮೊದಲ ದಾರ್ಶನಿಕನ ಉತ್ತರ ‘ಇಲ್ಲೇ ಎಲ್ಲೋ ಬೆಟ್ಟ ಸಾಲಿನಲ್ಲಿ ಯೌವನದ ಚಿಲುಮೆ ಇದೆ ಅಂತ ತಿಳಿಯಿತು. ಅದನ್ನು ಹುಡುಕುತ್ತಾ ಬೆಟ್ಟದ ತಪ್ಪಲಿಗೆ ಹೋಗುತ್ತಿದ್ದೇನೆ. ಆ ಕಾರಂಜಿ ಸೂರ್ಯನತ್ತ ಅರಳಿಕೊಂಡಿದೆಯಂತೆ. ಅದ್ಸರಿ, ನೀವೆತ್ತ ಹೊರಟಿರಿ?'
ಎರಡನೆಯ ದಾರ್ಶನಿಕ : ‘ನಾನೇ.. ನಾನು ಮೃತ್ಯುವಿನ ರಹಸ್ಯವನ್ನು ಹುಡುಕುತ್ತಾ ಇದೀನಿ".
ಅವರಿಬ್ಬರಲ್ಲೇ ಪರಸ್ಪರರ ತತ್ವಜ್ಞಾನದ ಬಗ್ಗೆ ಸಂಶಯ ಉಂಟಾಯಿತು. ಇಬ್ಬರೂ ‘ನಿನಗೇನೂ ತಿಳಿಯದು. ನಿನ್ನದು ಅರ್ದಂಬರ್ಧ ತಿಳುವಳಿಕೆ" ಎಂದು ಆರೋಪಿಸಿದರು.
‘ನಿನಗೆ ವಿಜ್ಞಾನ ತಿಳಿಯಿತು. ನಿನ್ನದು ಅರೆಬರೆ ಜ್ಞಾನ ನೀನು ಆಧ್ಯಾತ್ಮಿಕ ಕುರುಡ' ಎಂದು ಕೂಗಾಡಿದರು.
ಹೀಗೆ ಇಬ್ಬರು ದಾರ್ಶನಿಕರೂ ‘ನಿನಗೇನೂ ತಿಳಿಯದು' ಬೊಬ್ಬೆ ಹಾಕುತ್ತಿದ್ದಾಗ ಅಲ್ಲಿಗೊಬ್ಬ ಆಗಂತುಕ ಆಗಮಿಸಿದ. ಅವನು ಹಳ್ಳಿಯವನು. ಹಳ್ಳಿಯ ಜನರು ಅವನನ್ನು ‘ಪೆದ್ದ ಗುಂಡ ಮುಟ್ಠಾಳ’ ಎಂದು ಕರೆಯುತ್ತಿದ್ದರು. ಇಬ್ಬರು ತತ್ವಜ್ಞಾನಿಗಳು ಬಿಸಿ ಬಿಸಿ ವಾಗ್ವಾದದಲ್ಲಿ ತೊಡಗಿರುವುದನ್ನು ಕಂಡು ಆ ಪೆದ್ದ ಗುಂಡ ಅಲ್ಲೇ ನಿಂತು ಅವರ ಮಾತುಗಳನ್ನು ಕೇಳಿಸಿಕೊಂಡ.
ಅನಂತರ ಅವನು ಅವರ ಹತ್ತಿರ ಹೋಗಿ ಹೇಳಿದ ‘ಮಹಾಶಯರೇ, ನಿಮ್ಮ ವಾದಗಳನ್ನು ಕೇಳಿದ ನಂತರ ನನಗೆ ಅನಿಸುತ್ತದೆ, ನೀವಿಬ್ಬರೂ ತತ್ವಶಾಸ್ತ್ರದ ಒಂದೇ ಪಂಥಕ್ಕೆ ಸೇರಿದವರೆಂದು. ನೀವಿಬ್ಬರೂ ಮಾತನಾಡುವುದು ಒಂದೇ ವಿಷಯದ ಕುರಿತು. ಆದರೆ ಬೇರೆ ಬೇರೆ ಪದಗಳಲ್ಲಿ ಮಾತನಾಡಿಕೊಂಡಿರುವಿರಿ. ನಿಮ್ಮಲ್ಲಿ ಒಬ್ಬರು ಯೌವನದ ಚಿಲುಮೆಯನ್ನು ಹುಡುಕುತ್ತಿದ್ದೀರಿ. ಮತ್ತೊಬ್ಬರು ಮೃತ್ಯುವಿನ ರಹಸ್ಯ ಶೋಧಿಸುತ್ತಿದ್ದೀರಿ. ವಾಸ್ತವದಲ್ಲಿ ನೋಡಿದರೆ ಅವೆರಡೂ ಒಂದೇ. ಒಂದಾಗಿ ಅವು ನಿಮ್ಮೊಳಗೇ ಇವೆ.’
ಇಷ್ಟು ಹೇಳಿದವನೇ, ‘ನಮಸ್ಕಾರ ಪಂಡಿತರೇ, ನಾನಿನ್ನು ಬರ್ತೇನೆ’ ಎಂದು ನಗುನಗುತ್ತಾ ಅಲ್ಲಿಂದ ಹೊರಟು ಹೋದ.
ಇಬ್ಬರೂ ತತ್ವಜ್ಞಾನಿಗಳು ಮುಖ ಮುಖ ನೋಡಿಕೊಂಡರು. ಇಬ್ಬರೂ ನಸುನಕ್ಕರು. ಒಬ್ಬ ಹೇಳಿದ ‘ ಈಗ ನಾವು ಒಟ್ಟಿಗೆ ನಡೆಯುತ್ತಾ ಜೊತೆಯಾಗಿ ಹುಡುಕೋಣ. ಅಲ್ವೇ, ಏನಂತೀಯಾ?’
(ಆಧಾರ)