ಖಾತ್ರಿ ಕೇಳದೆ ಶಿಕ್ಷಣ ಸಾಲ: ದೊಡ್ಡ ಸುಧಾರಣೆಗೆ ಶ್ರೀಕಾರ
ಕೇಂದ್ರ ಸರಕಾರ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಯಾವುದೇ ಖಾತ್ರಿ (ಶೂರಿಟಿ) ಕೇಳದೆ ೧೦ ಲಕ್ಷದ ವರೆಗೆ ಸಾಲ ನೀಡುವ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಇದು ದೇಶದಲ್ಲಿ ಉನ್ನತ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಅತ್ಯಂತ ಅಗತ್ಯವಿದ್ದ ಬಹುದೊಡ್ಡ ಉಪಕ್ರಮ. ನಮ್ಮ ದೇಶದಲ್ಲಿ ಪ್ರತಿಭಾವಂತ ಯುವಶಕ್ತಿಗೆ ಕೊರತೆಯಿಲ್ಲ. ಆದರೆ ಅವರ ಉನ್ನತ ಶಿಕ್ಷಣಕ್ಕೆ ಸಂಪನ್ಮೂಲದ ಕೊರತೆಯಿದೆ. ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ದೊಡ್ಡ ದೊಡ್ಡ ವಿಶ್ವವಿದ್ಯಾನಿಲಯಗಳನ್ನೂ, ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳನ್ನೂ ನಿರ್ಮಿಸುತ್ತಿವೆಯಾದರೂ, ಅಲ್ಲಿ ಓದಲು ತಗಲುವ ವೆಚ್ಚವನ್ನು ಭರಿಸಲು ಸಾಧ್ಯವಾಗದ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಸಮಾಜದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರು ಬ್ಯಾಂಕ್ ಗಳಿಗೆ ಶಿಕ್ಷಣ ಸಾಲ ಕೇಳಲು ಹೋದರೆ ಶೂರಿಟಿ ನೀಡಬೇಕಾಗುತ್ತದೆ. ಅವರ ಕುಟುಂಬಕ್ಕೆ ಆ ಶಕ್ತಿ ಇರುವುದಿಲ್ಲ. ಅಂತಹವರು ಅನಿವಾರ್ಯವಾಗಿ ಉನ್ನತ ಶಿಕ್ಷಣದ ಕನಸನ್ನು ತೊರೆಯಬೇಕಾಗುತ್ತದೆ. ಸ್ಕಾಲರ್ ಶಿಪ್ ಗಳು ಇವೆಯಾದರೂ ಅವು ತೀರಾ ಪ್ರತಿಭಾವಂತರಿಗೆ ಮಾತ್ರ ಸಿಗುತ್ತವೆ ಮತ್ತು ಆ ಮೊತ್ತ ಉನ್ನತ ಶಿಕ್ಷಣದ ಅಷ್ಟೂ ಮೊತ್ತವನ್ನು ಭರಿಸುವುದಿಲ್ಲ. ಹೀಗಾಗಿ ಕೇಂದ್ರ ಸರಕಾರ ಕೇವಲ ಪ್ರತಿಭೆಯೊಂದಕ್ಕೇ ಮಣೆ ಹಾಕಿ, ವಿದ್ಯಾರ್ಥಿಗಳ ಪೋಷಕರ ಸಾಲ ತೀರಿಸುವ ಶಕ್ತಿಯನ್ನು ಪರಿಗಣಿಸದೆ ಸಾಲ ನೀಡಲು ಜಾರಿಗೆ ತರುತ್ತಿರುವ ‘ಪಿಎಂ ವಿದ್ಯಾಲಕ್ಷ್ಮಿ’ ಯೋಜನೆ ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸುಧಾರಣೆ ತರುವ ಶಕ್ತಿಯನ್ನು ಹೊಂದಿದೆ.
ಮುಂದುವರಿದ ದೇಶಗಳಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ಹಣಕಾಸಿನ ಕಾರಣಕ್ಕೆ ಉನ್ನತ ಶಿಕ್ಷಣವನ್ನು ತೊರೆಯುವ ಸನ್ನಿವೇಶ ಇಲ್ಲ. ಆದರೆ, ಭಾರತದಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದೆ. ದೇಶ ಮುಂದುವರೆಯುತ್ತಿದ್ದರೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಇವತ್ತಿಗೂ ಬಡವರ ಪರವಾಗಿಲ್ಲ. ಒಂದೆಡೆ ಎಲ್ಲವೂ ವ್ಯಾಪಾರೀಕರಣವಾಗುತ್ತಿದೆ. ಇನ್ನೊಂದೆಡೆ, ಅಗತ್ಯವಿರುವವರಿಗೆ ಸಂಪನ್ಮೂಲಗಳು ಸಿಗುವುದಿಲ್ಲ. ಈ ಕೊರತೆಯನ್ನು ಕೇಂದ್ರ ಸರಕಾರದ ಸುಲಭ ಶೈಕ್ಷಣಿಕ ಸಾಲ ನೀಗಿಸಬಹುದು. ಇದಕ್ಕಾಗಿ ಸರಕಾರ ೩,೬೦೦ ಕೋಟಿ ರೂ ಗಳಷ್ಟು ದೊಡ್ದ ಮೊತ್ತವನ್ನೇ ತೆಗೆದಿರಿಸುತ್ತಿದೆ. ಬಡ ಪ್ರತಿಭಾವಂತರಿಗೆ ಸರಿಯಾದ ಸಮಯಕ್ಕೆ ಸುಲಭವಾದ ಉನ್ನತ ಶಿಕ್ಷಣದ ಸಾಲ ಸಿಗುವಂತಾದರೆ, ಮುಂದೆ ಅವರೇ ದುಡಿದು ಅದನ್ನು ತೀರಿಸುತ್ತಾರೆ. ವ್ಯವಸ್ಥೆಯು ಪ್ರತಿಭೆಯ ಮೇಲೆ ವಿಶ್ವಾಸವಿರಿಸಿ ಪ್ರೋತ್ಸಾಹಿಸಿದರೆ ಖಂಡಿತ ಧನಾತ್ಮಕ ಪರಿಣಾಮವನ್ನು ಕಾಣಲು ಸಾಧ್ಯವಿದೆ. ಪ್ರತಿಭೆಗೆ ಬೇರೆಲ್ಲಕ್ಕಿಂತ ಹೆಚ್ಚಾಗಿ ಪ್ರೋತ್ಸಾಹ ಮತ್ತು ಮೂಲ ಸೌಕರ್ಯ ಅಗತ್ಯ. ಅದನ್ನು ದೊರಕಿಸುವುದು ವ್ಯವಸ್ಥೆಯ ಕರ್ತವ್ಯ. ಸರ್ಕಾರ ಅದನ್ನು ಮನಗಂಡು, ಶೈಕ್ಷಣಿಕ ಸಾಲವನ್ನು ಸುಲಭವಾಗಿಸುತ್ತಿರುವುದು ಅತ್ಯಂತ ಸ್ವಾಗತಾರ್ಹ.
ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೦೮-೧೧-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ