ಖಾದಿ ಬಟ್ಟೆಯಲ್ಲಿ ಮುದ್ರಿತ ಗಾಂಧೀಜಿ ಅಂಚೆಚೀಟಿ ನೋಡಿರುವಿರಾ?

ಖಾದಿ ಬಟ್ಟೆಯಲ್ಲಿ ಮುದ್ರಿತ ಗಾಂಧೀಜಿ ಅಂಚೆಚೀಟಿ ನೋಡಿರುವಿರಾ?

ಮಾನವನಾಗಿ ಹುಟ್ಟಿದ ಮೇಲೆ ಹವ್ಯಾಸಗಳು ಇರುವುದು ಸಹಜ. ಕೆಲವರಿಗೆ ಕ್ರೀಡೆ, ಇನ್ನು ಕೆಲವರಿಗೆ ಪ್ರವಾಸ, ಹಾಗೇ ಓದು, ನಾಣ್ಯಗಳ ಸಂಗ್ರಹ, ಛಾಯಾಗ್ರಹಣ, ಚಾರಣ ಹೀಗೆ ಹತ್ತು ಹಲವಾರು ಹವ್ಯಾಸಗಳನ್ನು ಬೆಳೆಸಿಕೊಂಡು ಅದನ್ನು ಪೋಷಿಸಿ ತಮ್ಮನ್ನು ತಾವೇ ಮರೆಯುವವರು ಇದ್ದಾರೆ. ಇದೆಲ್ಲಾ ಮನಸ್ಸಿಗೆ ಮುದ ನೀಡುವ ಹವ್ಯಾಸಗಳಾದರೆ ಕೆಲವು ಅತ್ಯಂತ ಅಪಾಯಕಾರೀ ಹವ್ಯಾಸಗಳಿವೆ. ಮದ್ಯಪಾನ, ಧೂಮಪಾನ ಹಾಗೆಯೇ ಮೊಬೈಲ್‌ನಲ್ಲಿ ಅಪಾಯಕಾರೀ ಆಟಗಳನ್ನು ಆಡುವುದು. ಇವೆಲ್ಲ ಹಣದ ಜೊತೆಗೆ ನೆಮ್ಮದಿಯನ್ನೂ ಕಳೆದುಕೊಳ್ಳುವ ಹವ್ಯಾಸಗಳು. ಇವುಗಳಿಂದ ಆದಷ್ಟು ದೂರವಿರುವುದು ಒಳಿತು.
ನಾನೀಗ ಹೇಳ ಬಯಸಿರುವುದು ಹವ್ಯಾಸಗಳ ರಾಜ ಎಂದೇ ಖ್ಯಾತಿ ಪಡೆದಿರುವ ಅಂಚೆಚೀಟಿ (ಪೋಸ್ಟಲ್ ಸ್ಟ್ಯಾಂಪ್) ಸಂಗ್ರಹದ ಬಗ್ಗೆ. ಕೆಲವು ವರ್ಷಗಳ ಹಿಂದೆ, ಅಂದರೆ ಮೊಬೈಲ್ ಬಳಕೆ ಸಾಂಕ್ರಾಮಿಕ ಆಗುವ ಮೊದಲು ಪ್ರತಿಯೊಬ್ಬರಿಗೆ ಕಾಗದ ಬರೆಯುವ ಅಭ್ಯಾಸವಿತ್ತು. ಆದರೆ ದೂರ ಸಂಪರ್ಕಗಳು ಹತ್ತಿರವಾಗುತ್ತಿದ್ದಂತೆ ಈ ಅಭ್ಯಾಸ ಬಿಟ್ಟೇ ಹೋಯಿತು. ಈಗಂತೂ ವೈಯಕ್ತಿಕ ಪತ್ರ ಬರೆಯುವವರು ಇಲ್ಲವೇ ಇಲ್ಲ. ಪುಸ್ತಕ, ನೋಟೀಸು ಮತ್ತು ಆಹ್ವಾನ ಪತ್ರಿಕೆಗಳನ್ನು ಕಳಿಸುವುದಕ್ಕಷ್ಟೇ ಅಂಚೆಯನ್ನು ಬಳಸುವಂತೆ ಆಗಿದೆ. ಆದರೂ ಈ ಅಂಚೆಚೀಟಿಯ ಹವ್ಯಾಸ ಬಹಳ ಆಸಕ್ತಿದಾಯಕ. ಪ್ರಪಂಚದಾದ್ಯಂತ ಈ ಹವ್ಯಾಸವನ್ನು ಹೊಂದಿರುವವರು ಸಿಗುತ್ತಾರೆ. ವಿದೇಶಗಳಲ್ಲಿಯ ಅಂಚೆಚೀಟಿಗಳು ಸೊಗಸಾಗಿಯೂ ವಿಭಿನ್ನವಾಗಿಯೂ ಇರುತ್ತವೆ. ನಮ್ಮ ದೇಶದ ಅಂಚೆ ಚೀಟಿಗಳು ಬಹಳಷ್ಟು ಮಾಹಿತಿ ಪೂರ್ಣ ಮತ್ತು ವಿಭಿನ್ನವಾಗಿ ತರುವ ಪ್ರಯತ್ನ ನಡೆದಿದೆ. 
ಈ ಒಂದು ವಿಭಿನ್ನ ಸೇರ್ಪಡೆಯೆಂದರೆ ೨೦೧೧ರಲ್ಲಿ ಬಿಡುಗಡೆಯಾದ ಖಾದಿ ಬಟ್ಟೆಯ ಮೇಲೆ ಮುದ್ರಿತವಾದ ಮಹಾತ್ಮಾ ಗಾಂಧೀಜಿಯವರ ಅಂಚೆ ಚೀಟಿ. ಇಂಡಿಪೆಕ್ಸ್-೨೦೧೧ರ ಸಂದರ್ಭದಲ್ಲಿ ಬಿಡುಗಡೆಯಾದ ವಿಭಿನ್ನ ಅಂಚೆ ಚೀಟಿ ಇದು. ನೂರು ರೂಪಾಯಿ ಮುಖ ಬೆಲೆಯ ಈ ಅಂಚೆಚೀಟಿಯ ಅಳತೆ ೩೯ ಮಿ.ಮೀ * ೩೯ ಮಿ.ಮೀ. ಈ ಅಂಚೆ ಚೀಟಿಯು ಹೊಂದಿರುವ ಹೊದಿಕೆಯು ಈ ಚೀಟಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಇಡೀ ಸೆಟ್‌ಗೆ ರೂ.೨೫೦.೦೦ ಬೆಲೆ ಇದೆ. ಈಗಾಗಲೇ ಸುಮಾರು ೯ ವರ್ಷಗಳು ಕಳೆದಿರುವುದರಿಂದ ಇದರ ಮೌಲ್ಯ ಸಂಗ್ರಾಹಕರ ಬಳಿ ಹೆಚ್ಚಾಗುತ್ತಾ ಸಾಗುತ್ತಿದೆ. ಈ ಅಂಚೆ ಚೀಟಿಯಲ್ಲಿ ಗಾಂಧೀಜಿಯವರ ಚಿತ್ರ ಮತ್ತು ಚರಕ ಮುದ್ರಿತವಾಗಿದೆ. 'ಬಿ ಟ್ರೂ' ಎಂದು ಮಹಾತ್ಮಾ ಗಾಂಧೀಜಿಯವರ ಸಹಿಯೂ ಮುದ್ರಿತವಾಗಿದೆ. ೧೯೪೭ರ ಎಪ್ರಿಲ್ ೨೭ರ ಹರಿಜನ ಪತ್ರಿಕೆಯಲ್ಲಿ ಗಾಂಧೀಜಿಯವರು ಬರೆದ ನುಡಿಗಳನ್ನೂ ಈ ಅಂಚೆಚೀಟಿ ಜೊತೆಗೆ ಮುದ್ರಿಸಲಾಗಿದೆ. 
ಈಗಲೂ ಅಂಚೆಚೀಟಿ ಸಂಗ್ರಾಹಕರಾಗುವ ಹವ್ಯಾಸವನ್ನು ಬೆಳೆಸಬಹುದಾಗಿದೆ. ಸ್ವಲ್ಪ ದುಬಾರಿ ಎಂದು ಅನಿಸಿದರೂ ನೀವು ಹಲವಾರು ಮಂದಿ ಸಂಗ್ರಾಹಕರ ಜೊತೆ ಸಂಪರ್ಕ ಸಾಧಿಸಿದ ನಂತರ ನಿಮಗೆ ವಿನಿಮಯ ಅವಕಾಶ ದೊರೆಯುತ್ತದೆ. ಹಾಗೆಯೇ ಅಂಚೆ ಇಲಾಖೆಯ ಫಿಲಾಟೆಲಿ ಕ್ಲಬ್ ಸದಸ್ಯರಾದರೆ ನಿಮ್ಮ ಸದಸ್ಯತ್ವದ ಮೊತ್ತದ ಅಂಚೆ ಚೀಟಿಗಳು ನಿಮ್ಮ ಮನೆ ಬಾಗಿಲಿಗೇ ರವಾನೆಯಾಗುತ್ತವೆ. ಈಗಲೇ ಈ ಹವ್ಯಾಸ ಬೆಳೆಸಿಕೊಳ್ಳಿರಿ.