ಖಾಲಿ ಹೊಟ್ಟೆಯಲ್ಲಿ ದಿನಾಲೂ ಬ್ರೆಡ್ ತಿನ್ನ ಬೇಡಿ !

ರೋಗಿಗಳಿಗೆ ನೀಡಲಾಗುವ ಆಹಾರ ಎಂದೇ ಪ್ರಸಿದ್ದಿ ಪಡೆದುಕೊಂಡಿದ್ದ ಈ ಬಿಳಿ ಬಣ್ಣದ ಬ್ರೆಡ್, ಈಗ ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಆದರೆ, ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ. ದಿನಾ ಬ್ರೆಡ್ ತಿನ್ನುವವರ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಲಿವರ್ಗೆ ಅಪಾಯ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಮೊದಲೆಲ್ಲಾ ಸರ್ಕಾರದ ಆಸ್ಪತ್ರೆಗೆ ಹೋದರೆ, ರೋಗಿಗಳಿಗೆ ಬೆಳಗಿನ ಜಾವದ ಟೀ ಅಥವಾ ಕಾಫಿ ಜೊತೆ ಸೇವಿಸಲು ಬ್ರೆಡ್ ನೀಡುತ್ತಿದ್ದರು. ಹೀಗಾಗಿ ನಮ್ಮಲ್ಲಿ ಹೆಚ್ಚಿನವರು ಅಂದು ಬ್ರೆಡ್ ಅನ್ನು ರೋಗಿಗಳು ತಿನ್ನುವ ಆಹಾರ ಎಂದೇ ಪರಿಗಣಿಸುತ್ತಿದ್ದರು. ಈಗ ಕಾಲ ಬದಲಾಗಿದೆ. ಬೆಳಗ್ಗೆ ಎದ್ದು ಊಟ-ತಿಂಡಿ ಮಾಡುವಷ್ಟು ಸಮಯವಾಗಲಿ- ವ್ಯವಧಾನವಾಗಲಿ ಯಾರಲ್ಲೂ ಇಲ್ಲ. (ಮುಖ್ಯವಾಗಿ ಸಿಟಿ ಲೈಫ್ನಲ್ಲಿ ಜೀವನ ನಡೆಸುವ ಜನರಲ್ಲಿ) ಆದಷ್ಟು ಸುಲಭವಾಗಿ ರೆಡಿ ಮಾಡಿಕೊಳ್ಳಬಹುದಾದ ಆಹಾರಗಳಿಗೆ ಅಥವಾ ರೆಡಿಮೇಡ್ ಆಗಿ ಸಿಗುವ ಆಹಾರಗಳಿಗೆ ಹೆಚ್ಚಿನ ಪ್ರಾಶಸ್ತ್ರ ಕೊಡುತ್ತಾರೆ. ಅದರಲ್ಲೂ ಬೇಕರಿಯಲ್ಲಿ ಸಿಗುವ ಮೈದಾದ ಬ್ರೆಡ್ ಎಂಬುದು ಪ್ರತಿಯೊಬ್ಬರ ಜೀವನದ ಒಂದು ಭಾಗವಾಗಿಬಿಟ್ಟಿದೆ. ಬೆಳಗ್ಗಿನ ಟೀ-ಕಾಫಿ ಜೊತೆಗೆ ಅಥವಾ ಸಂಜೆಯ ಸ್ನಾಕ್ಸ್ ಜೊತೆಗೆ ಕೂಡ ಕೆಲವರು ಬ್ರೆಡ್ ಅನ್ನು ಸೇವನೆ ಮಾಡುತ್ತಾರೆ. ಅದರಲ್ಲೂ ನಗರದ ಜನರು ಬೆಳಗಿನ ಸಮಯ ಉಳಿಸುವ ಸಲುವಾಗಿ, ಬ್ರೆಡ್ ಗೆ ಸ್ವಲ್ಪ ಜಾಮ್ ಹಾಕಿ ತಿನ್ನುವುದು ಅಥವಾ ಬಟರ್ ಹಾಕಿ ತಿನ್ನುವುದು ಅಥವಾ ಬ್ರೆಡ್ ಟೋಸ್ಟ್ ಮಾಡಿ ಸೇವನೆ ಮಾಡುತ್ತಾರೆ. ಇನ್ನೂ ಕೆಲವರು ಮಧ್ಯಾಹ್ನದ ಊಟಕ್ಕೂ ಕೂಡ ಬ್ರೆಡ್ ಅನ್ನೇ ತೆಗೆದುಕೊಂಡು ಹೋಗುವವರು ಕೂಡ ಇದ್ದಾರೆ.
ಖಾಲಿ ಹೊಟ್ಟೆಗೆ ಬ್ರೆಡ್ ತಿನ್ನಬೇಡಿ:- ನಮ್ಮಲ್ಲಿ ಬೆಳಗಿನ ಉಪಾಹಾರಕ್ಕೆ ಅಥವಾ ಬ್ರೇಕ್ಫಾಸ್ಟ್ಗೆ ಟೀ-ಕಾಫಿ ಜೊತೆಗೆ ಬ್ರೆಡ್ ಸೇವನೆ ಮಾಡುವ ಅಭ್ಯಾಸ ಹೆಚ್ಚಿನವರಲ್ಲಿದೆ. ಆದರೆ ಮೈದಾದಿಂದ ಮಾಡಿರುವ ಬ್ರೆಡ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ. ಅದರಲ್ಲೂ ಖಾಲಿ ಹೊಟ್ಟೆಗೆ ಬ್ರೆಡ್ ತಿನ್ನುವುದು ಆರೋಗ್ಯಕ್ಕೆ ತುಂಬಾನೇ ಹಾನಿಕಾರಕವಾಗಿದೆ ಯಾಕೆಂದ್ರೆ ಬ್ರೆಡ್ ನಿಂದ ಆರೋಗ್ಯಕ್ಕೆ ಯಾವುದೇ ರೀತಿಯ ಪೋಷಕಾಂಶಗಳು ಸಿಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯ.
ಪ್ರತಿದಿನ ಬ್ರೆಡ್ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ ಎನ್ನುತ್ತಾರೆ. ಪ್ರಮುಖವಾಗಿ ಅಜೀರ್ಣ-ಮಲಬದ್ಧತೆ ಹಾಗೂ ಗ್ಯಾಸ್ಟ್ರಿಕ್ ನಂತಹ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಲ್ಲದೇ ದೇಹದ ಪ್ರಮುಖ ಅಂಗವಾದ ಲಿವರ್ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಈಗಾಗಲೇ ಹೇಳಿದ ಹಾಗೆ ಬ್ರೆಡ್ನಲ್ಲಿ ಯಾವುದೇ ರೀತಿಯ ಪೋಷಕಾಂಶಗಳು ಕಂಡು ಬರುವುದಿಲ್ಲ ಹಾಗೂ ದೇಹಕ್ಕೆ ಅಗತ್ಯವಾಗಿ ಬೇಕಾಗುವ ನಾರಿನಾಂಶದ ಪ್ರಮಾಣ ಸ್ವಲ್ಪನೂ ಕೂಡ ಕಂಡು ಬರುವುದಿಲ್ಲ. ಈ ಕಾರಣದಿಂದಾಗಿ, ಇದು ಜೀರ್ಣಕಾರಿ ಸಮಸ್ಯೆಗಳಿಗೂ ಕಾರಣ ವಾಗಬಹುದು. ಹೀಗಾಗಿ ವಾರದಲ್ಲಿ ಮೂರು-ನಾಲ್ಕು ಬಾರಿ ಖಾಲಿ ಹೊಟ್ಟೆಗೆ ಬ್ರೆಡ್ ತಿನ್ನುವ ಅಭ್ಯಾಸ ಮಾಡಿಕೊಂಡವರಿಗೆ ಈ ರೀತಿಯ ಸಮಸ್ಯೆಗಳು ಕಟ್ಟಿಟ್ಟಬುತ್ತಿ ಎನ್ನುತ್ತಾರೆ.
ಆರೋಗ್ಯ ತಜ್ಞರ ಪ್ರಕಾರ, ಸಂಸ್ಕರಿಸಿದ ಹಿಟ್ಟು, ಸಕ್ಕರೆ ಮತ್ತು ಸಂರಕ್ಷಕಗಳು ಬ್ರೆಡ್ನಲ್ಲಿ, ವಿಶೇಷವಾಗಿ ಬಿಳಿ ಬ್ರೆಡ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಕ್ಯಾಲ್ಸಿಯಂ ಪ್ರೊಪಿಯೊನೇಟ್, ಸೋಡಿಯಂ ಸ್ಪಿಯರಾಯ್ಸ್ ಲ್ಯಾಕ್ಟೇಟ್ನಂತಹ ರಾಸಾಯನಿಕಗಳನ್ನು ಇದಕ್ಕೆ ಸೇರಿಸಲಾಗುತ್ತದೆ. ಇದಲ್ಲದೆ, ಈ ಬ್ರೆಡ್ನಲ್ಲಿರುವ ಫೈಬರ್ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಸಂಸ್ಕರಿಸಿದ ಹಿಟ್ಟು ದೇಹದಲ್ಲಿ ತ್ವರಿತವಾಗಿ ಗ್ಲಕೋಸ್ ಆಗಿ ಬದಲಾಗುತ್ತದೆ. ಇದು ಇನ್ಸುಲಿನ್ ಅನ್ನು ಹೆಚ್ಚಿಸುತ್ತದೆ ಮತ್ತು ದೇಹವು ಕೊಬ್ಬನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ. ಈ ಕೊಬ್ಬು ಕ್ರಮೇಣ ಯಕೃತ್ತಿನಲ್ಲಿ ಸಂಗ್ರಹವಾಗಬಹುದು. ಇದು ನಂತರ ಕೊಬ್ಬಿನ ಯಕೃತ್ತಿಗೆ ಕಾರಣವಾಗ ಬಹುದು. ಬ್ರೆಡ್ ಹೆಚ್ಚಿನ ಪ್ರಮಾಣದಲ್ಲಿ ಗ್ಲೂಕೋಸ್ ಸೂಚ್ಯಾಂಕ ಹೊಂದಿರುತ್ತದೆ. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
AIIMSನ ಹಿರಿಯ ಗ್ಯಾಸ್ಪೋಎಂಟರಾಲಜಿಸ್ಟ್ ಡಾ. ಸೌರಭ್ ಹೇಳುವ ಪ್ರಕಾರ, ಮೈದಾದಿಂದ ಮಾಡಿರುವ ಬ್ರೆಡ್ ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೆಟ್ಗಳನ್ನು ಹೊಂದಿರುತ್ತದೆ. ೨೦೨೦ರ ಪಬ್ಮೆಡ್ ಅಧ್ಯಯನವು ಸಂಸ್ಕರಿಸಿದ ಕಾರ್ಬೋ ಹೈಡ್ರೆಟ್ಗಳ ಹೆಚ್ಚಿನ ಸೇವನೆಯು ಕೊಬ್ಬಿನ ಯಕೃತ್ತಿಗೆ ಕಾರಣವಾಗಬಹುದು ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಹೀಗಾಗಿ ಬಿಳಿ ಬ್ರೆಡ್ ಸಂಸ್ಕರಿಸಿದ ಹಿಟ್ಟನ್ನು ಹೊಂದಿರುತ್ತದೆ. ಇದು ತ್ವರಿತವಾಗಿ ಗ್ಲೂಕೋಸ್ ಆಗಿ ಬದಲಾಗುತ್ತದೆ, ಇದು ಇನ್ಸುಲಿನ್ ಪ್ರತಿರೋಧ ಮತ್ತು ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಕೂಡ ಬಿಳಿ ಬ್ರೆಡ್ ಅಂದರೆ ಮೈದಾ ಬಳಸಿ ಮಾಡಿರುವ ಬ್ರೆಡ್ ಅನ್ನು ಸೇವನೆ ಮಾಡುವ ಅಭ್ಯಾಸದಿಂದ ದೂರವಿರಬೇಕು.
ವೈದ್ಯರು ಹೇಳುವಂತೆ ನೀವು ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಿದ ಆಹಾರವನ್ನು ಸೇವಿಸಿದರೆ, ಅದು ಕೊಬ್ಬಿನ ಯಕೃತ್ತನ್ನು ಪ್ರಚೋದಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬ್ರೆಡ್ ಸೇವನೆಯನ್ನು ಕಡಿಮೆ ಮಾಡಿ ಮತ್ತು ನಿಮ್ಮ ಆಹಾರದಲ್ಲಿ ಧಾನ್ಯಗಳು, ತಾಜಾ ಹಣ್ಣುಗಳು, ಹಸಿರು ತರಕಾರಿಗಳನ್ನು ಸೇರಿಸಿ. ಅಲ್ಲದೆ, ಪ್ರತಿದಿನ ೩೦ ನಿಮಿಷಗಳ ಕಾಲ ವಾಕಿಂಗ್ ಜಾಗಿಂಗ್ ಮತ್ತು ವ್ಯಾಯಾಮ ಮಾಡುವ ಅಭ್ಯಾಸ ಇಟ್ಟುಕೊಳ್ಳಿ. ಇದರ ಜೊತೆಗೆ, ಪ್ರತಿದಿನ ೬-೮ ಗ್ಲಾಸ್ ನೀರು ಕುಡಿಯಿರಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ