ಖುಶವಂತ್ ಸಿಂಗ್ ಪ್ರಾತಿನಿಧಿಕ ಕಥೆಗಳು

ಖುಶವಂತ್ ಸಿಂಗ್ ಪ್ರಾತಿನಿಧಿಕ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಖುಶವಂತ ಸಿಂಗ್, ಕನ್ನಡಕ್ಕೆ: ಡಿ.ಎನ್.ಶ್ರೀನಾಥ್
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ.೭೫.೦೦, ಮುದ್ರಣ: ಎಪ್ರಿಲ್ ೨೦೧೮

ಖ್ಯಾತ ಲೇಖಕರಾದ ಖುಶವಂತ್ ಸಿಂಗ್ ಅವರ ಹತ್ತು ಕಥೆಗಳನ್ನು ಕನ್ನಡಕ್ಕೆ ತಂದಿದ್ದಾರೆ ಪ್ರಸಿದ್ಧ ಅನುವಾದಕರಾದ ಡಿ.ಎನ್.ಶ್ರೀನಾಥ್ ಅವರು. ಪುಸ್ತಕದಲ್ಲಿ ಯಾವುದೇ ಮುನ್ನುಡಿಗಳಿಲ್ಲ. ಮೂಲ ಲೇಖಕರ ಹಾಗೂ ಅನುವಾದಕರ ಬಗ್ಗೆ ಕೊಂಚ ಮಾಹಿತಿಗಳಿವೆ. ಪುಸ್ತಕದಲ್ಲಿ ೧೦ ಸಣ್ಣ ಕಥೆಗಳಿವೆ. ವಿಷ್ಣು ಚಿಹ್ನೆ, ಸರ್ ಮೋಹನಲಾಲರೂ ಅವರ ಆಂಗ್ಲ ಪ್ರೇಮವೂ..., ಲಂಡನ್ ನಲ್ಲಿ ಒಂದು ಪ್ರೇಮ ಪ್ರಸಂಗ, ಕಪ್ಪು ಮಲ್ಲಿಗೆ, ಅಜ್ಜಿ, ಬ್ರಹ್ಮ -ವಾಕ್ಯ, ರೇಪ್, ರಸಿಕ, ಸ್ವರ್ಗ ಮತ್ತು ಮರಣೋಪರಾಂತ ಎಂಬ ಕಥೆಗಳಿವೆ.

ಪುಟ್ಟ ಪುಟ್ಟ ಕಥೆಗಳು ಖುಶವಂತ್ ಸಿಂಗರ ಎಂದಿನಂತೆ ಕೊಂಚ ಪೋಲಿತನ, ಕಚಗುಳಿತನ ಹಾಗೂ ಭಾವನಾತ್ಮಕತೆಯನ್ನು ಹೊಂದಿವೆ. ನಾನಿಲ್ಲಿ ‘ಅಜ್ಜಿ’ ಕಥೆಯ ಒಂದೆರಡು ಸಾಲುಗಳನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಬಯಸುತ್ತೇನೆ.

“ಎಲ್ಲರ ಅಜ್ಜಿಯಂತೆ ನನ್ನ ಅಜ್ಜಿಯೂ ವೃದ್ಧೆಯಾಗಿದ್ದರು. ಕಳೆದ ಇಪ್ಪತ್ತು ವರ್ಷಗಳಿಂದ ಸುಕ್ಕುಗಟ್ಟಿದ್ದ ಮುಖದ ಅವರು ವೃದ್ಧೆಯಂತೆಯೇ ಇದ್ದರು. ಜನರ ಬಾಯಿಯಿಂದಲೇ ಅವರು ಒಂದು ಕಾಲದಲ್ಲಿ ಯುವತಿಯಾಗಿದ್ದು, ತುಂಬಾ ಸುಂದರಿಯಾಗಿದ್ದರು ಎಂದು ಕೇಳುತ್ತಿದ್ದೇನೆ. ಅವರಿಗೆ ಓರ್ವ ಪತಿಯೂ ಇದ್ದರೆಂಬುದನ್ನು ಕೇಳಿದ್ದೇನೆ. ಆದರೆ ನಾನಂತೂ ನಂಬುವುದು ಅಸಾಧ್ಯವಾಗಿತ್ತು. ನನ್ನ ಅಜ್ಜನ ಭಾವಚಿತ್ರವನ್ನು ವರಾಂಡದಲ್ಲಿನ ಮೆಂಟಲ್ -ಪೀಸ್ ನ ಮೇಲೆ ತೂಗು ಹಾಕಲಾಗಿತ್ತು. ಅವರು ದೊಡ್ಡ ಪೇಟಾ ಮತ್ತು ಸಡಿಲ ಉಡುಪುಗಳನ್ನು ಧರಿಸಿದ್ದರು. ಅವರ ಶ್ವೇತ ನೀಳ ಗಡ್ಡ ಅವರ ಎದೆಯನ್ನು ಮುಟ್ಟುತ್ತಿತ್ತು. ಅವರು ಸುಮಾರು ನೂರು ವರ್ಷದವರಂತೆ ಕಾಣಿಸುತ್ತಿದ್ದರು. ಅವರಿಗೆ ಹೆಂಡತಿ-ಮಕ್ಕಳೂ ಇರಬಹುದೆಂದು ಅನಿಸುತ್ತಿರಲಿಲ್ಲ. ಅವರು ಸಾವಿರಾರು ಮೊಮ್ಮಕ್ಕಳ ಅಜ್ಜನಂತೆ ಕಾಣಿಸುತ್ತಿದ್ದರು. ನಮ್ಮ ಅಜ್ಜಿಯು ಸುಂದರಿ ಮತ್ತು ಪ್ರಾಯಸ್ಥಳಾಗಿದ್ದಳೆಂಬ ಕಲ್ಪನೆಯೇ ಉದ್ರೇಕಿಸುವಂತಿತ್ತು.

ಅಜ್ಜಿ ನಮಗೆ ಸಾಮಾನ್ಯವಾಗಿ, ಅವರು ಬಾಲ್ಯದಲ್ಲಿ ಎಂಥೆಂಥಾ ಆಟಗಳನ್ನು ಆಡುತ್ತಿದ್ದರೆಂಬ ಬಗ್ಗೆ ಹೇಳುತ್ತಿದ್ದರು. ಕೇಳಲು ಅವು ಅಸಂಬಂಧವಾಗಿ ತೋರುತ್ತಿದ್ದವು. ಅವರಂತಹ ವೃದ್ಧ ಮಹಿಳೆಗೆ ಅದು ಶೋಭೆ ತರುವಂತಹದ್ದಾಗಿರಲಿಲ್ಲ. ನಮಗಂತೂ ಅವೆಲ್ಲಾ ಕಥೆಗಳಂತೆ ಕಾಲ್ಪನಿಕವೆಂದೇ ತೋರುತ್ತಿತ್ತು.

ಕುಳ್ಳಗಿನ, ದಢೂತಿ ಮತ್ತು ಸ್ವಲ್ಪ ಬಾಗಿದ ಅಜ್ಜಿಯನ್ನೇ ನಾನು ಸದಾ ನೋಡಿದೆವು. ಅವರ ಮುಖ ವಕ್ರ-ವಕ್ರ, ಸುಕ್ಕುಗಟ್ಟಿದ ರೇಖೆಗಳಿಂದ ಅವೃತಗೊಂಡಿತ್ತು. ನಮಗಂತೂ ಅವರು ಸದಾಕಾಲದಿಂದಲೂ ಹೀಗೆಯೇ ಇದ್ದಿರಬೇಕು ಅನ್ನಿಸುತ್ತಿತ್ತು. ಅವರೆಷ್ಟು ವೃದ್ಧರಾಗಿದ್ದರೆಂದರೆ, ಇನ್ನು ಮತ್ತೆ ವೃದ್ಧರಾಗಲು ಸಾಧ್ಯವಿರಲಿಲ್ಲ. ನಾವು ಅವರನ್ನು ಇಪ್ಪತ್ತು ವರ್ಷಗಳಿಂದಲೂ ಹೀಗೇ ಇರುವುದನ್ನು ನೋಡುತ್ತಿದ್ದೆವು. ಸುಂದರವಾಗಿದ್ದರೆ? ಇಲ್ಲ -ಇಲ್ಲ, ಎಂದೂ ಸುಂದರವಾಗಿರಲಿಲ್ಲ. ಆದರೆ ಅವರು ತುಂಬಾ ಪ್ರಿಯರಾಗಿದ್ದರು..." ಹೀಗೆ ಕಥೆ ಮುಂದುವರೆಯುತ್ತದೆ. ಮತ್ತೆ ಮುಂದಕ್ಕೆ ಓದಬೇಕೆಂಬ ಆಸೆ ಹುಟ್ಟಿಸುತ್ತದೆ. ಕನ್ನಡದ ಅನುವಾದವೂ ಬಹಳ ಸೊಗಸಾಗಿರುವುದರಿಂದ ಪುಸ್ತಕ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.

೨೦೦೭ರಲ್ಲಿ ಮೊದಲ ಮುದ್ರಣ ಕಂಡ ಈ ಪುಸ್ತಕವು ೨೦೧೮ರಲ್ಲಿ ಮರುಮುದ್ರಣವಾಗಿ ಬಂದಿದೆ. ಖುಶವಂತ್ ಸಿಂಗರ ಸಣ್ಣ ಕಥೆಗಳನ್ನು ಓದಲು ಬಯಸುವವರು ಇದನ್ನು ಓದಬಹುದು. ಸುಮಾರು ನೂರು ಪುಟಗಳ ಪುಸ್ತಕವಾದುದರಿಂದ ಓದಲು ಹೆಚ್ಚು ಸಮಯವೇನೂ ಹಿಡಿಯಲಾರದು.