ಖೋಟಾ ನೋಟು ರಹಸ್ಯಗಳು

ಖೋಟಾ ನೋಟು ರಹಸ್ಯಗಳು

ಪುಸ್ತಕದ ಲೇಖಕ/ಕವಿಯ ಹೆಸರು
ರವಿಚಂದ್ರನ್
ಪ್ರಕಾಶಕರು
ಸರ್ವ್ ಇಂಡಿಯಾ ಭಾರತ್ ಆರ್ಟ್ಸ್ ಅಸೋಸಿಯೇಷನ್ (ರಿ.) ಹೆಬ್ಬಾಳ, ಬೆಂಗಳೂರು- ೫೬೦೦೨೪
ಪುಸ್ತಕದ ಬೆಲೆ
ರೂ. ೧೭೯.೦೦, ಮುದ್ರಣ: ೨೦೦೨

ಖೋಟಾ ನೋಟು ರಹಸ್ಯಗಳು ಎಂಬ ಈ ಪುಸ್ತಕವು ಹಳೆಯ ಪುಸ್ತಕವಾದುದರಿಂದ ಹಲವಾರು ವಿಷಯಗಳು ಸ್ವಲ್ಪ ಮಟ್ಟಿಗೆ ಈಗಿನ ಸಮಯಕ್ಕೆ ಸರಿಹೊಂದಲಾರವು. ಆದರೂ ಆಗಿನ ಸಮಯದಲ್ಲಿ ನೋಟುಗಳ ವಿಷಯ ತಿಳಿದುಕೊಳ್ಳಲು ಅನುಕೂಲಕರವಾದ ಸಂಗತಿಗಳನ್ನು ಈ ಪುಸ್ತಕ ಒಳಗೊಂಡಿದೆ. ಖೋಟಾ ನೋಟಿನ ಬಗ್ಗೆ ನಿಮಗಿರುವ ಸಮಸ್ಯೆ ಬಹೆಗರಿಸಲು ಮತ್ತು ಇದರಿಂದ ನಮ್ಮ ದೇಶಕ್ಕಾಗುವ ನಷ್ಟ, ಜನಸಾಮಾನ್ಯರಿಗಾಗುವ ಮೋಸ, ವ್ಯಾಪಾರದಲ್ಲಿ ಭಯ, ಬ್ಯಾಂಕುಗಳಲ್ಲಿ ಅನುಮಾನ, ಪೋಲೀಸರಿಗೆ ಒತ್ತಡ, ಸರ್ಕಾರಿ ನೌಕರರಿಗೆ ಪ್ರತಿಯೊಂದು ನೋಟನ್ನು ಪರೀಕ್ಷಿಸಿಕೊಳ್ಳುವ ಶಿಕ್ಷೆಯಿಂದ ತಪ್ಪಿಸುವ ಒಂದು ಸಣ್ಣ ಪ್ರಯತ್ನವೇ ಈ ಖೋಟಾ ನೋಟು ರಹಸ್ಯಗಳು. ಈ ಕೃತಿಯಲ್ಲಿ ಖೋಟಾ ನೋಟಿನ ವ್ಯವಹಾರದಲ್ಲಿ ನಡೆಯುವ ಪ್ರತಿಯೊಂದು ಹೆಜ್ಜೆಯನ್ನು ವಿವರವಾಗಿ ತೋರಿಸಿ, ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಸರಳ ಭಾಷೆಯಲ್ಲಿ ತಿಳಿಸಲಾಗಿದೆ. 

ಪುಸ್ತಕದ ವಿಷಯ ಸೂಚಿಯಲ್ಲಿ ಓದುಗರಿಗೆ ಎಚ್ಚರಿಕೆ, ಖೋಟಾ ನೋಟಿನ ಸೃಷ್ಟಿ, ದಾರಿ ತಪ್ಪುವ ಯುವ ಪೀಳಿಗೆ ಇವುಗಳನ್ನು ಮೊದಲಭಾಗದಲ್ಲೂ, ಖೋಟಾ ನೋಟಿನ ಆಕರ್ಷಣೆ, ಬದಲಾಗುವ ಬಣ್ಣ, ಉದ್ದನೆಯ ನೋಟು, ಚಿಕ್ಕ ನೋಟು, ಹತ್ತಿ ದಾರವಿರುವ ನೋಟು, ಮಂಕಾದ ಬಣ್ಣ ಹೊಂದಿರುವ ನೋಟು, ಸಾಧಾರಣ ಕಾಗದದ ಮೇಲೆ ನೋಟು ಮುದ್ರಣ, ಕಲರ್ ಝೆರಾಕ್ಸ್ ಈ ವಿಷಯಗಳನ್ನು ಎರಡನೇ ಭಾಗದಲ್ಲೂ, ಮನೆಕೆಲಸ, ಎಕ್ಸ್ ಪ್ರೆಸ್, ಕಟಿಂಗ್, ಮುಂಬೈ, ಸುಲಭವಾಗಿ ಹಣ ಗಳಿಸುವುದು, ರೋಲರ್ ಪ್ರಿಂಟಿಂಗ್ ಮಿಶಿನ್ ಮುಂತಾದ ವಿಷಯಗಳನ್ನು ಮೂರನೇ ಭಾಗದಲ್ಲೂ, ಖೋಟಾ ನೋಟಿನ ಜಾಲ, ಲೇಡಿ ಬಾಸ್, ಕೊಲೆ ಪಾತಕ ಖೋಟಾ ನೋಟು, ಕನಕಪುರದಲ್ಲಿ ಮರುಜನ್ಮ ಮುಂತಾದುವುಗಳನ್ನು ನಾಲ್ಕನೇ ಭಾಗದಲ್ಲಿ ವಿವರಿಸಲಾಗಿದೆ.

ಐದನೇ ಭಾಗದಲ್ಲಿ ಮೋಸಗಾರ ಕುಟುಂಬ ವ್ಯವಸ್ಥೆ, ಆರನೇ ಭಾಗದಲ್ಲಿ ರಹಸ್ಯ ಸಂಕೇತಗಳು, ಏಳನೇ ಭಾಗದಲ್ಲಿ ಮೋಸಗಾರರು ಬಳಸುವ ವಸ್ತುಗಳು, ಎಂಟನೇ ಭಾಗದಲ್ಲಿ ಮೋಸ ಸಿಕ್ಕಿ ಬಿದ್ದಾಗ.? ಒಂಬತ್ತನೇ ಭಾಗದಲ್ಲಿ ಖೋಟಾ ನೋಟಿನ ಸೆರೆ, ಖೋಟಾ ನೋಟಿನ ಚಲಾವಣೆ, ಹತ್ತನೇ ಭಾಗದಲ್ಲಿ ಪತ್ರಿಕೆಗಳ ಸುದ್ದಿ, ಸಂಖ್ಯೆಯೇ ಇಲ್ಲದ ಅಸಲಿ ನೋಟು ಹಾಗೂ ಹನ್ನೊಂದನೆಯ ಭಾಗದಲ್ಲಿ ೨೧ನೇ ಶತಮಾನದ ತಂತ್ರಗಳು ಇವುಗಳನ್ನು ವಿವರಿಸಲಾಗಿದೆ. ಕೊನೆಯಲ್ಲಿ ಲೇಖಕರು ಈ ಪುಸ್ತಕದ ಉದ್ದೇಶವನ್ನು ವಿವರಿಸಿದ್ದಾರೆ. ಪುಸ್ತಕದ ತುಂಬೆಲ್ಲಾ ಲೇಖನಕ್ಕೆ ಸೂಕ್ತವಾಗುವ ರೀತಿಯಲ್ಲಿ ಚಿತ್ರಗಳನ್ನು ಬಳಸಿರುವುದು ಉತ್ತಮವಾಗಿದೆ. ನೋಟಿನ ಸ್ಪಷ್ಟ ಚಿತ್ತಣ ನೀಡುವ ಉದ್ದೇಶದಿಂದ ವರ್ಣರಂಜಿತವಾಗಿ ನೋಟುಗಳನ್ನು ಮುದ್ರಿಸಲಾಗಿದೆಯಾದರೂ ಪ್ರಸ್ತುತ ಸಮಯದಲ್ಲಿ ಇಲ್ಲಿ ನೀಡಿರುವ ಹಲವಾರು ನೋಟುಗಳು ಚಲಾವಣೆಯಲ್ಲಿ ಇಲ್ಲ. ಆದರೂ ನೋಟು ಮುದ್ರಣದಲ್ಲಿನ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಬಹುದು. ಇದರ ಜೊತೆಯಲ್ಲೇ ಅಸಲಿ ಯಾವುದು, ನಕಲಿ ಯಾವುದು ಎಂಬುದನ್ನೂ ಅರಿಯಬಹುದು.

೨೫೮ ಪುಟಗಳನ್ನು ಹೊಂದಿರುವ ಸಮೃದ್ಧ ಓದಿನ ಪುಸ್ತಕವನ್ನು ಲೇಖಕರು ಗುರೂಜಿ ಶ್ರೀ ಡಿ.ಬಿ.ಜತ್ತಿಯವರು (ಡಾ.ಬಿ.ಡಿ.ಜತ್ತಿಯವರ ಪುತ್ರ) ಮತ್ತು ಸಾಯಿ ಪಲ್ಲವಿಯವರಿಗೆ ಸಮರ್ಪಣೆ ಮಾಡಿದ್ದಾರೆ. ಅಪರಾಧ ನಿರ್ಮೂಲನೆಗಾಗಿ ಈ ಪುಸ್ತಕವನ್ನು ಹೊರ ತಂದಿದ್ದಾರೆ ಎಂದು ಲೇಖಕರಾದ ರವಿಚಂದ್ರನ್ ಅವರು ಹೇಳಿಕೊಂದಿದ್ದಾರೆ.