ಗಂಗಾವತಿ ಭಾಷೆ
ಆತ್ಮೀಯ ಸಂಪದಿಗರಿಗೆ ನಮಸ್ಕಾರಗಳು,ನನ್ನ ಜೀವನದಲ್ಲಿ ನಡೆದ ಮತ್ತೊಂದು ಹಾಸ್ಯ ಪ್ರಸಂಗವನ್ನು ನನ್ನ ಎರಡನೇ ಲೇಖನ ರೂಪದಲ್ಲಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಮೊದಲನೇ ಲೇಖನದ ಹಾಗೆ ಇದೂ ಕೂಡಾ ಹಾಸ್ಯ ಕಥಾ ವಸ್ತು. ಅದಕ್ಕೆ ಕೊಟ್ಟ ಪ್ರತಿಕ್ರಿಯೆ ಹಾಗೆ ಇದಕ್ಕೂ ಕೂಡಾ ತಮ್ಮ ಸಲಹೆ ಸೂಚನೆಗಳಿಗೆ ಸ್ವಾಗತ.
ಕೊಪ್ಪಳ ಜಿಲ್ಲೆ ಕರ್ನಾಟಕದಲ್ಲಿಯೇ ಹಿಂದುಳಿದ ಜಿಲ್ಲೆಗಳಲ್ಲಿ ಒಂದು.ಆದರೂ ಈ ಜಿಲ್ಲೆಯ ಗಂಗಾವತಿ ಮಾತ್ರ ಭತ್ತದ ಕಣಜ.ಇಲ್ಲಿಯ ಅಕ್ಕಿ ತುಂಬಾ ವಿಶೇಷ, ಹೊರದೇಶಕ್ಕೂ ಇಲ್ಲಿಯ ಅಕ್ಕಿ ರಫ್ತಾಗುವುದು.ಸರಿ ಸುಮಾರು 20 ವರ್ಷಗಳ ಹಿಂದೆ ಈ ಮೈನಿಂಗ್ ಪ್ರಭಾವ ಅಷ್ಟು ಇಲ್ಲದ ಸಮಯದಲ್ಲಿ ಗಂಗಾವತಿ ಕರ್ನಾಟಕದ ಅತ್ಯಂತ ಶ್ರೀಮಂತ ತಾಲೂಕುಗಳಲ್ಲಿ ಒಂದು. ಆ ಊರಿಗೆ ಪ್ಯಾಡಿಸಿಟಿ [ ಭತ್ತದ ಕಣಜ ] ಅಂತ ಒಂದು ಅನ್ವರ್ಥಕ ಹೆಸರು ಕೂಡಾ ಇದೆ. ಇಲ್ಲಿಯೇ ಶ್ರೀ ಮಾಂತಗೊಂಡ ಮೂಕಪ್ಪ ಪ್ರೌಢ ಶಾಲೆಯಲ್ಲಿ ನಾನು , ಪಾಂಡು ಹೈಸ್ಕೂಲು ಓದಿರುವುದರಿಂದ ಇಲ್ಲಿ ನಮ್ಮದು ದೊಡ್ಡ ಗೆಳೆಯರ ಸಮೂಹವೇ ಇದೆ. ಇತ್ತೀಚೆಗೆ ಗಂಗಾವತಿ ತುಂಬಾ ಪ್ರಖ್ಯಾತವಾಗಿರುವುದು ಗಂಗಾವತಿ ಬೀಚಿ ಅಂತಾನೆ ಪ್ರಚಲಿತವಾಗಿರುವ ಶೀ ಗಂಗಾವತಿ ಪ್ರಾಣೇಶ ಅವರಿಂದ.
ಅವರ ಬಂಡವಾಳವೇ ಮಾತು . ಗಂಗಾವತಿ ಭಾಷೆಯ ವಿಶೇಷ ಅಂತಹದ್ದು . ಅಲ್ಲಿಯ ಜನರು ಅಷ್ಟೊಂದು ಸರಸೀ ಮಾತುಗಾರರು . ಮಾತು ಒರಟಾದರೂ ಅದರ ಧಾಟಿ ಎಲ್ಲರಿಗೂ ನಗು ಬರಿಸುವಂತಹದ್ದು . ಆ ಮಾತಿನಲ್ಲಿ ವಿಡಂಬನಾ ಹಾಸ್ಯ ಇರುವುದು ಸರ್ವೇ ಸಾಮಾನ್ಯ .
ದೊಡ್ಡ ಗೆಳೆಯರ ಸಮೂಹ,ಜೊತೆಗೆ ಹೈಸ್ಕೂಲ್ ಅಲ್ಲಿಯೇ ಓದಿರುವುದರಿಂದ, ಅಲ್ಲದೇ ಕುಕನೂರಿನಲ್ಲಿ ಡಿಪ್ಲಮೊ ಓದುವಾಗಲೂ ನಮ್ಮ ಮನೆ ಕೂಡಾ ಗಂಗಾವತಿಯಲ್ಲೇ ಇದ್ದುದರಿಂದ ನಾವು ಗಂಗಾವತಿಯಲ್ಲಿ ಬೆಳೆದದ್ದು ಹೆಚ್ಚು. ಹಾಗೂ ಆ ಊರಿನ ಮೇಲೆ ತುಂಬಾ ಅಭಿಮಾನ. ಊರಿಂದ ಬಂದಾಗಲೊಮ್ಮೆ ಗಂಗಾವತಿ ಊರು ಪ್ರವೇಶವಾಗುತ್ತಿದ್ದ ಹಾಗೆ ಬಸ್ಸಿನಲ್ಲಿ ನಾನು ಪಾಂಡು ಎಲ್ಲಿ ಕೂತಿದ್ದರೂ ಒಬ್ಬರಿಗೊಬ್ಬರು ಮುಖ ನೋಡಿಕೊಂಡು ಸಂಪೂರ್ಣ ಸಂತಸ ಪಡುತ್ತಿದ್ದೆವು. ನಮಗೆ ಆ ಊರಿನ ಮೇಲೆ ಆ ಊರಿನ ಭಾಷೆಯ ಮೇಲೆ ಇಂದಿಗೂ ಅಷ್ಟೊಂದು ಅಭಿಮಾನ. ಯಾಕೆಂದರೆ ಪಾಂಡು ಕೂಡಾ ಹೈಸ್ಕೂಲು ಓದಿದ್ದು ಅಲ್ಲಿಯೇ ಮತ್ತು ಡಿಪ್ಲಮೊ ಕೂಡಾ ನನ್ನ ರೂಂಮೆಟ್ ಮತ್ತು ಕ್ಲಾಸ್ ಮೆಟ್.
ಡಿಪ್ಲಮೊ ಎಲ್ಲ ಮುಗಿದ ಮೇಲೆ ಇಬ್ಬರಿಗೂ ಬೆಂಗಳೂರಿನ ಬಿ ಇ ಎಲ್ ನಲ್ಲಿ ಅಪ್ರೆಂಟಿಸ್ ಟ್ರೇನಿಂಗ್ ಆರ್ಡರ್ ಬಂದಿತ್ತು. ಆಗಲೇ ನಾವು ರಾಜಧಾನಿಗೆ ಮೊದಲು ಕಾಲಿಟ್ಟದ್ದು . ಅಲ್ಲಿಯ ಮೆದು ಭಾಷೆ ನಮಗೆ ಒಂದು ರೀತಿ ನುಂಗಲಾರದ ತುತ್ತಾಗಿತ್ತು . ಹಾಗೂ
ಕರ್ನಾಟಕದ ಬೇರೆ ಬೇರೆ ಕಡೆಯಿಂದ ಬಂದಿದ್ದ ಅಲ್ಲಿಯ ಸಹಪಾಠಿಗಳು ಸಹಜವಾಗಿಯೇ ಮೊದ ಮೊದಲು ನಮ್ಮ ಭಾಷೆಗೆ ಸ್ವಲ್ಪ ಹೆಚ್ಚಾಗಿಯೇ ನಗುತ್ತಿದ್ದರು .
ಈ ಸಮಯದಲ್ಲಿ ಅಪ್ರೆಂಟಿಸ್ ಪ್ರಾರಂಭದಲ್ಲಿ ಒಂದು ವಾರದ ವರೆಗೆ ಯಾವುದೇ ಕೆಲಸಗಳು ಇರುವುದಿಲ್ಲ . ಒಂದು ದೊಡ್ಡ ಟ್ರೇನಿಂಗ್ ಹಾಲ್, ಅದರಲ್ಲಿ ಎ.ಸಿ ಯ ತಣ್ಣನೆ ಗಾಳಿ ದೊಡ್ಡನೆಯ ವೈಟ್ ಬೋರ್ಡ್ ಅದರಲ್ಲಿ ಪ್ರೆಸೆಂಟೇಶನ್ ಗೆ ಅನುಕೂಲವಾಗುವ ಹಾಗೆ ಕಂಪ್ಯೂಟರ್ ನ ಸೆಟ್, ಚಿಕ್ಕ ಚಿಕ್ಕ ಸ್ಪೀಕರ್ ಗಳು ಅಲ್ಲಲ್ಲಿ ಗೋಡೆಗೆ ನೇತುಹಾಕಿದ್ದಾರೆ. ಕೆಂಪನೆಯ ಖುರ್ಚಿ ಅದರ ಜೊತೆಗೆ ಸರಿಸಬಲ್ಲ ಪುಸ್ತಕವನ್ನು ಇಡಬಲ್ಲ ಒಂದು ಚಿಕ್ಕ ಮಣಿ. ಇಂತಹದ್ದನ್ನೆಲ್ಲ ಕೇವಲ ಸಿನಿಮಾದಲ್ಲಿಯೇ ನೋಡಿದ್ದ ನಾವು ಅದನ್ನು ಮೊದಲ ದಿನ ನೋಡಿ ದಂಗು ಬಡಿದು ಬಾಯಿ ಬಾಯಿ ಬಿಟ್ಟು ನೋಡಿದ್ದೇ ನೋಡಿದ್ದು .
ಅದರಲ್ಲಿ ನಮ್ಮ ಮೊದಲ ಆರು ದಿನಗಳು ಸಂಪೂರ್ಣ ಟೆಕ್ನಿಕಲ್ ಸಬ್ಜೆಕ್ಟ್ ಮತ್ತು ಕಂಪನಿಗಳ ಬಗ್ಗೆ ಎಲ್ಲಾ ಕ್ಲಾಸ್ ಗಳು ಇದ್ದವು . ಆ ವಾರದ ಕೊನೆಯ ದಿನದ ವಿಷಯ. " ಸುರಕ್ಷತೆ " [ಸೇಫ್ಟಿ]. ಸುಮಾರು ಬೆಳಿಗ್ಗೆಯಿಂದ ಮಧ್ಯಾಹ್ನ 4.00 ಘಂಟೆಯ ವರೆಗೂ ಕನಿಷ್ಟ ಎಂದರೆ , ಐದಾರು ಕ್ಲಾಸ್ ಗಳು ಬರೀ ಸೇಫ್ಟಿ ಬಗ್ಗೆನೇ ಕೇಳಿದ್ದೆವು . ಕಡೆಯ ಅವಧಿ ನಮ್ಮ ವಿದ್ಯಾರ್ಥಿಗಳ ಸರದಿ . ಯಾರಾದರೂ ವಿದ್ಯಾರ್ಥಿಗಳು ಹೀಗೇ ಸೇಫ್ಟಿ ಬಗ್ಗೆ ಮಾತಾಡೋದಾದರೆ ಮಾತಾಡಬಹುದು ಅಂತ ಹೇಳಿದರು . ಹೀಗೇ ಒಬ್ಬೊಬ್ಬರು ಒಂದೊಂದು ರೀತಿ ಸುರಕ್ಷೆ ಹಾಗೆ , ಹೀಗೆ ಅಂತ ಎಲ್ಲ ಸುಮಾರು ಹದಿನೈದು ಇಪ್ಪತ್ತು ಮಂದಿ ಮಾತಾಡಿದರು . ಕೊನೆಯ ಬೆಂಚಿನಲ್ಲಿ ಕೈ ಎತ್ತಿ ನಾನು ಮಾತಾಡ್ತೀನಿ ಅಂತ ಪಾಂಡು ಹೇಳಿದ್ದನ್ನು ನೋಡಿ "ಹಾಂ ನೀವು ಮಾತಾಡಿ"ಎಂದರು. ಆಗ ಪಾಂಡು ಮಾತಾಡಿದ್ದು ಒಂದೇ ವಾಕ್ಯ .
" ಸರ್ರ , ನಮ್ಮ ಗಂಗಾವತಿ ಭಾಷ್ಯಾಗ ಒಂದೇ ಮಾತು ಹೇಳಬೇಕು ಅಂದ್ರ, ತಟುಗು ಮೈಮೇಲೆ ಖಬುರು ಇಟ್ಕಂಡು ಕೆಲ್ಸ ಮಾಡ್ಬೇಕು ನೋಡ್ರೀ ಸರ್ರ!!!!...."
ಎಂದಾಗ, ಇಡೀ ಕ್ಲಾಸ್ ಮುಳಿಗಿದ್ದು ನಗೆಯ ಬುಗ್ಗೆಯಲ್ಲಿ.
Comments
ಎಂ ವೀ ಪ್ರಹ್ಲಾದ್ ಅವ್ರೆ..