ಗಂಗಾ ಕೈ ಸುಟ್ಟುಕೊಂಡಾಗ (ಭಾಗ 1)

Submitted by nvanalli on Thu, 02/16/2017 - 11:40

ಗಂಗಾ, ಅವಳ ಗಂಡ, ಎರಡು ಮಕ್ಕಳ ಸಂಸಾರ ಅವರದ್ದು. ಅವರು ಕರಿಒಕ್ಕಲು ಜನ. ಅಂದರೆ ಉತ್ತರ ಕನ್ನಡದ ಕಾಡು ಮಾನವರು. ಕಪ್ಪು ಜನ. ನಾಡಿನ ಆಕರ್ಷಣೆಗಳಿಂದ ಆದಷ್ಟು ದೂರವಿರುವುದೇ ಇವರಿಗೆ ಚೆನ್ನ. ಮಲೆನಾಡಿನ ಘಟ್ಟಗಳಲ್ಲಿ ಅಲ್ಲೊಂದು ಇಲ್ಲೊಂದು ಇವರ ಕೇರಿಗಳು. ಹತ್ತಾರು ಪುಟ್ಟ ಪುಟ್ಟ ಗುಡಿಸಲುಗಳು. ಜೇನು ಕೊಯ್ದು, ಬುಟ್ಟಿ ಹೆಣೆದು, ಹೊಟ್ಟೆ ತುಂಬದಿದ್ದರೆ ಕೂಲಿ ಮಾಡುವ ಜನ. ಇಂದು ಊಟಕ್ಕಿದ್ದರೆ ನಾಳಿನ ಚಿಂತೆಯನ್ನೇ ಮಾಡುವುದಿಲ್ಲ. ಅಷ್ಟರ ಮಟ್ಟಿಗೆ ವರ್ತಮಾನ ಕಾಲದಲ್ಲೇ ಬದುಕುವ ಜನರು!
 
ಅಂದು ರಾತ್ರಿ ಊಟವಾದ ಮೇಲೆ ಛಳಿಕಾಯಿಸಲೆಂದು ಅವಳ ಗಂಡ ಗುಡಿಸಲ ಹೊರಗೆ ಬೆಂಕಿ ಹಿತ್ತಿಸಿದ. ಮಕ್ಕಳು ಬೆಂಕಿಯ ಸುತ್ತ ಆಡಿದವು. ಒಳಕೆಲಸಗಳನ್ನೆಲ್ಲ ಮುಗಿಸಿ ಹೊರ ಬಂದ ಹೆಂಡತಿಯೂ ಛಳಿ ಕಾಯಿಸಲು ಕುಳಿತಳು. ಉರಿಯೆದ್ದಂತೆ ಛಳಿ ಓಡಿತು.
 
ಅವರು ಆರಾಮವಾಗಿ ಊರ ಸುದ್ದಿಗಳನ್ನೆಲ್ಲ ಹರಟುತ್ತಿದ್ದರು. ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಿದ್ದರು. ಆಗ ಆಕಸ್ಮಿಕವಾಗಿ ಕುಂಟೆಯೊಂದು ಹೊರಳಿತು. ಅವಳ ಸೀರೆಗೆ ಬೆಂಕಿ ತಗಲಿತು. ಅದೇ ಮೊದಲ ಬಾರಿಗೆ ಯಾರೋ ಕೊಟ್ಟ ಹಳೇ ವಾಯಿಲ್ ಸೀರೆಯನ್ನು ಸುತ್ತಿಕೊಂಡಿದ್ದಳು ಗಂಗಾ. ಬೆಂಕಿ ತಗುಲಿ ಸೀರೆ ಕರಗಿತು. ಮೊಣಕೈಗೆ ಗಟ್ಟಿಯಾಗಿ ಅಂಟಿಕೊಂಡಿತು. 
 
ಗಂಗಾ ಉರಿ ತಡೆಯಲಾಗದೇ ಗೋಳಾಡಿದಳು. ಪಾಪ! ಗಂಡ ಮನೆಯಲ್ಲಿದ್ದ ಎಣ್ಣೆಯನ್ನೆಲ್ಲಾ ತಂದು ಹಚ್ಚಿದ. ಕಂಚಿಗದ್ದೆಯಲ್ಲಿ ಒಳ್ಳೇ ಹಳ್ಳಿ ಔಷಧಿ ಕೊಡುತ್ತಾರೆಂದು ಯಾರೋ ಹೇಳಿದ್ದ ನೆನೆಪು. ಬೆಳಿಗ್ಗೆ ಎದ್ದವನೇ ಕಂಚಿಗದ್ದೆಗೆ ಹೋಗಿ ಮದ್ದು ತಂದ. 
 
ಆ ಬೆಳಿಗ್ಗೆ ಕೇರಿಯವರೆಲ್ಲಾ ಬಂದರು. "ಅಯ್ಯೋ ಪಾಪ" ಎಂದು ಬಾಯ್ತುಂಬ ಕನಿಕರ ವ್ಯಕ್ತಪಡಿಸಿದರು. "ಸಾಗವಾನಿ ಎಣ್ಣೆ ಹಚ್ಚು" ಎಂದು ಒಬ್ಬಳ ಸಲಹೆ. "ಮಂಡೆ ಕಸದ ಎಣ್ಣೆ ಹಚ್ಚು" ಎಂಬ ಸಲಹೆ ಮತ್ತೊಬ್ಬಳದು. ಹೆಂಚಿನ ಕರಿಯನ್ನು ಎಣ್ಣೆಯಲ್ಲಿ ಕಾಯಿಸಿ ಹಚ್ಚುವುದು "ಪೇಟೆಂಟ್" ಮದ್ದು ಎಂದು ಯಾರೋ ಹೇಳಿದರು. ಹೀಗೆ ಬಂದವರೆಲ್ಲಾ ಉದಾರವಾಗಿ ನಾನಾ ದಾರಿ ಹೇಳಿದರು. ಎಲ್ಲಾ ಎಣ್ಣೆಗಳಿಂದ ಬೇಗ ಗುಣವಾದೀತೆಂದು ನಂಬಿ ಗಂಗಾ, ಭಕ್ತಿಯಿಂದ ಜನ ಹೇಳಿದ್ದನ್ನೆಲ್ಲಾ ಮಾಡಿದಳು. ಒಂದೊಂದು ಮದ್ದನ್ನು ಪ್ರಯೋಗಿಸಿದ ಮೇಲೂ ಸುಟ್ಟಗಾಯವ ತೊಳೆದು ಶುದ್ಧ ಮಾಡಿ ಇನ್ನೊಂದು ಹಚ್ಚಿದಳು!
 
ಅವಳ ಗ್ರಹಚಾರಕ್ಕೆ ಗಾಯ ಮಾಯಲಿಲ್ಲ. ಇನ್ನೂ ಆಳವಾಯ್ತು. ಅಗಲ ಆಗುತ್ತಾ ಹೋಯಿತು. ಉರಿಯ ಜೊತೆಗೆ ತುರಿಕೆ ಶುರುವಾಯ್ತು. ಸುಟ್ಟಲ್ಲಿ ಕೀವಾಗಿ ಹರಿಯತೊಡಗಿತು. ಅವಳು  ಹೌಹಾರಿದಳು. ಗಂಡ ಸಮಾಧಾನ ಮಾಡಿದ - "ಹೆದರಬೇಡ. ಗುಣವಾಗುತ್ತದೆ. ಮತ್ತೆ ಈಗ ಆಸ್ಪತ್ರೆಗೆ ಹೋಗಲು ನಮ್ಮ ಬಳಿ ದುಡ್ಡೆಲ್ಲಿದೆ?" ಗಂಡನ ಕಷ್ಟ ಅರಿತ ಅವಳು ನೋವನ್ನು ತಡೆದುಕೊಂಡು ಮೌನದಲ್ಲಿ ಅತ್ತಳು. ದೇವರ ಮೇಲೆ ಭಾರ ಹಾಕಿ ಮಲಗಿದಳು. 
 
ಆದರೆ... ಆ ದೇವರಿಗೆ ಇವಳ ಕಷ್ಟ ಅರ್ಥವಾಗಲೇ ಇಲ್ಲ. ಗಂಗಾಳ ಕೈ ಬಾತು ಮರದ ಕೊರಡಿನಂತಾಯ್ತು. ಜ್ವರ ಬಂದು ಅವಳು ಮೇಲೇಳದಾದಳು. ಗಾಯ ಕೊಳೆತು ವಾಸನೆಯಾಗಿ ಸುತ್ತ ಯಾರು ಬರದಂತಾಯಿತು. ಆಗ ಮಾತ್ರ ಗಂಡ ಹೆದರಿದ. ಕಂಬಳಿಯಲ್ಲಿ ಸುತ್ತಿಕೊಂಡು ಇನ್ನಿಬ್ಬರ ಸಹಾಯದಿಂದ ಮೂರು ಮೈಲಿ ದೂರದ ಆಸ್ಪತ್ರೆಗೆ ಹೊತ್ತುಕೊಂಡು ಬಂದ. 
 
ಇನ್ನೆರಡು ದಿನ ಬಿಟ್ಟರೆ ಸತ್ತೇ ಹೋಗುತ್ತಿದ್ದ ಅವಳು ನಾನು ಕಂಡಾಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಳು. ಗಾಯ ಎಷ್ಟು ತೀವ್ರವಾಗಿತ್ತೆಂದರೆ ಎಲುಬು ಕಾಣುತ್ತಿತ್ತು. ಮೊದಲಿನಂತೆ ಅವಳು ಕೂಲಿಗೆ ಹೋಗುವಂತಾಗಲು ಇನ್ನೂ ಎರಡು ತಿಂಗಳಾದರೂ ಬೇಕೆಂದು ಡಾಕ್ಟರರು ಹೇಳಿದರು. ಅವಳನ್ನು ಮಾತನಾಡಿಸಿದೆ. ಅವಳ ಗೋಳು ನೋಡುವಾಗ    ಜಗತ್ತಿನಲ್ಲಿ ಕಷ್ಟ ಬಂದವರಿಗೇ ಮತ್ತೆ ಮತ್ತೆ ಬರುವುದೇನೋ ಎನ್ನಿಸಿ ಬೇಸರವಾಗುತ್ತದೆ. ಅವಳಿಗೆ ಇಬ್ಬರು ಹೆಣ್ಣು ಮಕ್ಕಳು. ಶಾಲೆ ಇಲ್ಲದವರು. ಹೊಸ ಲಂಗ ಕಾಣದ ಕೂಸುಗಳು. ಒಬ್ಬ ಮಗನಿದ್ದ. ಹಿಂದಿನ ವರ್ಷ ಬಾವಿಗೆ ಬಿದ್ದು ಸತ್ತೋದ! ಈಗ ಅವಳಿಗೆ ಡಾಕ್ಟರರ ಬಿಲ್ಲನ್ನು ಹೇಗೆ ತೀರಿಸುವುದೆಂಬ ಸಂಕಟವೇ ಸುಟ್ಟ ಗಾಯಕ್ಕಿಂತ ಹೆಚ್ಚಾಗಿ ಬಾಧಿಸುತ್ತಿರುವಂತಿದೆ!
 
ದಿನಾ ಆಸ್ಪತ್ರೆಗೆ ನಡೆದು ಬರುವ ಅವಳಿಗೆ ಸಣ್ಣ ಮಗಳು ಸಂಗಾತಿ. " ಗಂಡನೇ ನಿನ್ನ ಜೊತೆ ಯಾಕೆ ಬರಬಾರದು?" ನನ್ನ ಪ್ರಶ್ನೆ. ನಿಜ, ಅವನಿಗೆ ಹೆಂಡತಿಯ ಮೇಲೆ ಪ್ರೀತಿ - ಕಾಳಜಿ ಕಡಿಮೆಯೇನಲ್ಲ. ಆದರೆ ಅವನು ಕೂಲಿಗೆ ಹೋಗದೆ ಇವಳ ಜೊತೆಗೆ ಆಸ್ಪತ್ರೆಗೆ ಬಂದರೆ ರಾತ್ರಿ ಗುಡಿಸಲಲ್ಲಿ ಊಟಕ್ಕಿರುವುದಿಲ್ಲ.!
 
ಇದು ಈ ಪ್ರದೇಶದಲ್ಲಿರುವ ಅಜಾÐನ ಹಾಗೂ ಬಡತನದ ವಿರಾಟ್ ಸ್ವರೂಪದ ಒಂದು ಚಿಕ್ಕ ಉದಾಹರಣೆ ಮಾತ್ರ. ಅಂತೂ ಈ ಹೊತ್ತಿಗೆ ಗಂಗಾ ಗುಣವಾಗಿರಬಹುದು. ಅದರೆ ದೇಶದ ಉದ್ದಗಲಕ್ಕೆ ಯಾವ್ಯಾವ ಕೇರಿಗಳಲ್ಲಿ ಎಷ್ಟು ಗಂಗಾ ಇದ್ದಾರೋ ಯಾರಿಗೆ ಗೊತ್ತು?