ಗಂಗಾ ಕೈ ಸುಟ್ಟುಕೊಂಡಾಗ...( ಭಾಗ 2)
ಧನ್ಯವಾಯಿತು ಬರಹ
"ಗಂಗಾ ಕೈ ಸುಟ್ಟುಕೊಂಡಾಗ" ಲೇಖನವನ್ನು ನಾನು ಬರೆದಾಗ ನನ್ನ ಮನಸ್ಸಿನಲ್ಲಿದ್ದುದು ವಿಷಾದದ ಛಾಯೆ ಮಾತ್ರ. ಇಪ್ಪತ್ತೊಂದನೇ ಶತಮಾನಕ್ಕೆ ಹೊರಟು ನಿಂತ ಈ ಕಲ್ಯಾಣ ರಾಜ್ಯದಲ್ಲಿ ಮೂಢ ನಂಬಿಕೆಯಿಂದಾಗಿ, ಗಂಗಾಳ ಕೈ, ಜೀವ ತಿನ್ನತೊಡಗಿರುವುದು ನನ್ನ ಕಾಡುತ್ತಿತ್ತು. ಜೊತೆಗೆ ಕೈಗಿಂತ ಮಿಗಿಲಾಗಿ ಅವಳ ಮನಸ್ಸನ್ನು ಸುಟ್ಟಿರುವ ಬಡತನ. ಅದರ ಫಲವಾದ ಕಡುಕಷ್ಟಗಳು ಮನಸ್ಸನ್ನು ಭಾರವಾಗಿಸಿತ್ತು.
ಆ ಲೇಖನ ಬರೆದು ಮೂರು ವಾರ ಕಳೆದಿರಬೇಕು. ಅಪ್ಪ ಮನೆಯಿಂದ ಕಾಗದ ಬರೆದರು. ಮೊದಲ ಬಾರಿಗೆ ನಾನು ನಂಬದ ಘಟನೆ ಅದರಲ್ಲಿತ್ತು. (ಇಂಗ್ಲಿಷ್ನಲ್ಲಿ 'ಇಂಡಿಯನ್ ಎಕ್ಸ್ಪ್ರೆಸ್' ಪತ್ರಿಕೆಯ 'ಕರ್ನಾಟಕ ನೋಟ್ಬುಕ್' ಅಂಕಣಕ್ಕೂ ಈ ಲೇಖನವನ್ನು ಬರೆದಿದ್ದೆ. ಅದರ ಪರಿಣಾಮವೂ ಇರಬಹುದು ನಮ್ಮ ಇಂಗ್ಲಿಷ್ ಪತ್ರಿಕೆಗಳೇ ಹೆಚ್ಚು ಪ್ರಭಾವಶಾಲಿಗಳು!) ಅದೆಂದರೆ ಪತ್ರಿಕೆಯಲ್ಲಿ ಬಂದ ಲೇಖನದ ಆಧಾರದ ಮೇಲೆ ಕೈಸುಟ್ಟುಕೊಂಡ ಗಂಗಾಳಿಗೆ ಒಂದು ಸಾವಿರ ರೂಪಾಯಿ ಪರಿಹಾರ, ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಮಂಜೂರಾಗಿತ್ತು. ಅಲ್ಲದೇ ನನ್ನ ಲೇಖನದಲ್ಲಿಅವಳ ವಿಳಾಸ ಇರದಿದ್ದರಿಂದ ಉಪತಹಶೀಲ್ದಾರರು 'ಯಾರಿವಳು' ಎಂದು ಹುಡುಕುತ್ತಾ ವಾನ್ಹಳ್ಳಿಗೆ ಬಂದರು. ಅಲ್ಲಿಂದ ಗಂಗಾಳನ್ನು ಚಿಕಿತ್ಸೆಗಾಗಿ ಸಿರ್ಸಿಗೆ ಕರೆದೊಯ್ಯಲಾಯಿತು. ಸಿರ್ಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ತಿಂಗಳು ಗಟ್ಟಲೆ ಉಳಿದ ಗಂಗಾಳ ಕೈ ಸುಮಾರಾಗಿ ಕೆಲಸ ಮಾಡುವಂತಾಗಿ ಮನೆಗೆ ಬರುವವರೆಗೆ ಖರ್ಚನ್ನು ಸರ್ಕಾರವೇ ಭರಿಸಿತು.
ಇಂದಿಗೂ ಇದು ನಂಬಲಾಗದ ಘಟನೆಯಾಗಿಯೇ ನನಗೆ ತೋರುತ್ತಿದೆ. ಬರವಣಿಗೆಯಿಂದ ಮಹಾಕ್ರಾಂತಿಯಾಗುವುದೆಂಬ ಭ್ರಮೆ ನನಗಿಲ್ಲ. ನಾವು ಬಡವರ ಬಗ್ಗೆ ರೋಚಕವಾಗಿ ಬರೆದು ಗೌರವಧನ ಸಂಪಾಧಿಸುತ್ತೇವೆ. ಆದರೆ ಅವರಿಗೇನು ಸಿಗುತ್ತದೆ ಎಂದು ಆಗಾಗ ಕೊರೆಯುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆದರೆ ... ಬರಹದ ಪರಿಣಾಮದ ಬಗ್ಗೆ ನನಗೆ ಸಿಕ್ಕಿದ ಮೊದಲ ಪುರಾವೆ ಇದು. ಒಂದು ಬರಹದ ಧನ್ಯತೆ ಪಡೆಯುವ ಪ್ರತಿಕ್ರಿಯೆಯಲ್ಲಿರುತ್ತದೆ ಎಮಬುದು ನಿಜ.
ಇದೇ ಹೊತ್ತಿಗೆ ಇನ್ನೊಂದು ಪವಾಡ ನಡೆಯಿತು. ದಕ್ಷಿಣ ಕನ್ನಡದಿಂದ ಯಾರೋ ಒಬ್ಬರು 'ಕೈ ಸುಟ್ಟುಕೊಂಡ ಗಂಗಾ' ವಾನ್ಹಳ್ಳಿ-ಸಿರ್ಸಿ-ವಿಳಾಸ ಬರೆದು ಐದು ರೂಪಾಯಿ ಮನಿಯಾರ್ಡರ್ ಕಳಿಸಿದರು. ಅದರಲ್ಲಿ ತಾನು ಬಡವ, ಆದರೂ ನಿಮ್ಮ ದುರಂತವನ್ನು ಓದಿ ಕಣ್ಣೀರು ಬಂತು, ನನ್ನ ಸಹಾಯವಾಗಿ ಐದು ರೂ. ಕಳಿಸಿದ್ದೇನೆ. ದಯವಿಟ್ಟು ಸ್ವೀಕರಿಸಿ ಎಂದು ಬರೆಯಲಾಗಿತ್ತು. ಜಗತ್ತಿನಲ್ಲಿ ಇಂಥವರೂ ಇದ್ದಾರೆ! ಸರ್ಕಾರ ಮಂಜೂರು ಮಾಡಿದ ಒಂದು ಸಾವಿರ ರೂಪಾಯಿಗಿಂತ ಈ ಅಪರಿಚಿತ ಬಂಧು ಕಳಿಸಿದ ಒಂದು ರೂಪಾಯಿ ನನಗೆ ಮಹತ್ವವಾಗಿ ಕಾಣುತ್ತದೆ. ಕಾಲ ಕೆಟ್ಟು ಹೋಯಿತು ಎನ್ನುವವರು ಕಣ್ಣು ತೆರೆಯಬೇಕಾಗಿದೆ! ಈ ಘಟನೆ ಪತ್ರಕರ್ತನಾಗಿ ನನಗೆ ರೋಮಾಂಚನವನ್ನುಂಟು ಮಾಡಿದ್ದು ಮಾತ್ರವಲ್ಲ ಊರಲ್ಲೆಲ್ಲ ಬಹಳ ಸುದ್ದಿ ಮಾಡಿತು. "ನಾನು ಏನೇನೋ ಬರೆದುಕೊಂಡಿರುತ್ತಾನೆ" ಎಂದು ಹಾಗೂ ಅದರಿಂದ ಲಾಭವಿದೆಯೆಂದು ವಾನ್ಹಳ್ಳಿಯ ಅನೇಕರಿಗೆ ಗೊತ್ತಾದದ್ದೇ ಆಗ. ಇದರ ಪರಿಣಾಮವೆಂದರೆ ವೃತ್ತಿಯಲ್ಲಿ ವೈದ್ಯರಾಗಿ ಹಳ್ಳಿಹಳ್ಳಿ ತಿರುಗುವ ಅಪ್ಪನನ್ನು ಹೋದಲ್ಲೆಲ್ಲಾ ಜನ ಈ ಬಗ್ಗೆ ಕೇಳತೊಡಗಿದರು. ಇಂದೋ ನಾಳೆಯೇ ಸಾಯಲು ತಯಾರಾಗಿದ್ದ ಹಳೇ ಮುದುಕಿಯೊಬ್ಬಳು ಅಪ್ಪನ ಬಳಿ ಹೇಳಿದಳಂತೆ 'ಡಾಕ್ಟರೇ ನಿಮ್ಮ ಮಗನನ್ನು ಒಂದು ಸಾರಿ ಇಲ್ಲಿಗೆ ಕರೆದುಕೊಂಡು ಬನ್ನಿ. ಅವ ನನ್ನ ಬಗ್ಗೂ ಬರೆದರೆ ದುಡ್ಡಾದರೂ ಸಿಕ್ಕುತ್ತಿತ್ತೇನೋ'
ಬರಹಗಾರರಿಗೆ ಇದಕ್ಕಿಂತ ಇನ್ನೇನು ಬೇಕು?