ಗಂಗೆಯ ತಟದಲ್ಲಿ

ಗಂಗೆಯ ತಟದಲ್ಲಿ

ಕವನ

ಪಾಪ ತೊಳೆವ ಗಂಗೆಯ ತಟದಲ್ಲಿ

ಪುಣ್ಯವ ಹುಡುಕುತ್ತಾ ಹೊರಟ ಯಾತ್ರಿಕನಿಗೆ 

ಇದುವರೆಗೆ ಕಂಡಿದ್ದು- ಕಾಣದ್ದು, ಕಾಣಬಹುದಾದದ್ದು

ಏನಿರಬಹುದು ಎಂಬ ಕುತೂಹಲ. 

ಗಂಗೆ ಎಲ್ಲರ ಪಾಪ ತೊಳೆಯುವುದೇ ಆದಲ್ಲಿ

ಕಾಶಿಯಲ್ಲಿ ಪಾಪಿಗಳೇ ಇಲ್ಲವೇ?

ನನ್ನ ಸಹಜ ವಿಕ್ಷಿಪ್ತ ಪ್ರಶ್ನೆ.

ಅತ್ತೆಯನ್ನು ತೊರೆದು ಓಡಿಹೋದ ಮಾವ

ಭಿಕ್ಷುಕನಾಗಿಯೋ ಸಂತನಾಗಿಯೋ ದೊರೆಯಬಹುದೆಂಬ

ಭಾವುಕ/ ಭ್ರಾಮಕ ಕವಿ ಮನಸು.

ಸೈಕಲ್ಲು ರಿಕ್ಷಾ ತುಳಿಯುವ  ಭೈಯ್ಯಾಗಳು

ಅದು ಹೇಗೆ ಸಂತಸದಿಂದ ಇದ್ದಾರೆಂಬ ಆಶ್ಚರ್ಯ.

ಬದುಕಿನ ಇಳಿಗಾಲದಲ್ಲಿ ಕಾಶೀಯಾತ್ರೆಗೆ ಬಂದ

ಹಣ್ಣು ಹಣ್ಣು ಮುದುಕಿಯಲ್ಲಿ

ಸಾವಿಗಾಗಿ ಕಾಯ್ದಿರುವ ಶಬರಿಯ ಕಾಣುವ ಹಂಬಲ.


ಪಾಪ ಪುಣ್ಯಗಳ ಕೊಡಗಳನ್ನು ಸದಾ


ತುಂಬಿಸುತ್ತಲೇ ಇರುವ ನಾನು.


ನನ್ನ ಈ ಪದ್ಯವನ್ನೂ ಸಹ ಕಾಲ ಗರ್ಭದಲ್ಲಿ

ತೊಳೆದು ಪಾವನಗೊಳಿಸುವ  ಮೌನ- ಮಲಿನ ಗಂಗೆ ಮಾತ್ರ 

ಹರಿಯುತ್ತಲೇ ಇದ್ದಾಳೆ ನನ್ನೊಳಗೆ ಇದ್ದೂ ಇಲ್ಲದಂತೆ.

 

( ಮೊನ್ನೆ ಕಾಶಿ ಹಿಂದೂ ವಿಶ್ವ ವಿದ್ಯಾಲಯದಲ್ಲಿ ನಡೆದ ಅಂತರ್ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಹೋದಾಗ ಹೊಳೆದ ಸಾಲುಗಳು)


 

Comments