ಗಂಡಭೇರುಂಡ- ಎರಡು ತಲೆ ಪಕ್ಷಿಯ ರಹಸ್ಯ ಗೊತ್ತೇ?
ಸ್ನೇಹಿತರೇ, ಕರ್ನಾಟಕ ಸರ್ಕಾರದ ಅಧಿಕೃತ ಲಾಂಛನವನ್ನು ನೀವೆಲ್ಲರೂ ನೋಡಿದ್ದೀರಾ ಅಲ್ವಾ ಎರಡು ತಲೆಯ ಹದ್ದಿನ ರೂಪದ ಈ ಪಕ್ಷಿ ನೋಡೋದಕ್ಕೆ ತುಂಬಾ ಬಲಿಷ್ಠವಾಗಿ ಹಾಗೂ ವಿಚಿತ್ರವಾಗಿ ಕೂಡ ಕಾಣುತ್ತೆ ಅದನ್ನು ಗಂಡಭೇರುಂಡ ಅಂತ ಕರಿಯುತ್ತಾರೆ. ಇಷ್ಟಕ್ಕೂ ಈ ಎರಡು ತಲೆಯ ಪಕ್ಷಿ ನಿಜಕ್ಕೂ ಇರೋದಕ್ಕೆ ಸಾಧ್ಯನಾ? ಇಂತಹ ವಿಚಿತ್ರ ಪಕ್ಷಿಯ ಕಲ್ಪನೆ ಬಂದಿದ್ದಾದರೂ ಹೇಗೆ? ಹೋಗಲಿ ಇಂತಹ ಒಂದು ಪಕ್ಷಿ ಕರ್ನಾಟಕ ಸರ್ಕಾರದ ಲಾಂಛನ ಹೇಗಾಯ್ತು? ಇಂತಹ ಸಾಕಷ್ಟು ಪ್ರಶ್ನೆಗಳು ನಮ್ಮ ತಲೆಯಲ್ಲಿ ಒಮ್ಮೆಯಾದರೂ ಗಿರಕಿ ಹೊಡೆದಿರುತ್ತೆ ಅದಕ್ಕೆ ಈ ಗಂಡಭೇರುಂಡದ ಹಿಂದಿರುವ ಆಸಕ್ತಿಕರ ಕಥೆಯನ್ನು ಇಲ್ಲಿ ತಿಳಿಯುವ ಪ್ರಯತ್ನ ಮಾಡೋಣ.
ಗಂಡಭೇರುಂಡ ಪಕ್ಷಿಯ ಚರಿತ್ರೆಯನ್ನು ತಿಳಿಯೋದಕ್ಕೂ ಮುನ್ನ ಈ ಕಾಲ್ಪನಿಕ ಪಕ್ಷಿಯ ಹಿಂದಿರುವ ಪೌರಾಣಿಕ ಕಥೆ ಏನೆಂಬುದನ್ನು ನೋಡೋಣ. ಕೆಲವರು ಈ ಪಕ್ಷಿಯನ್ನು ಮಹಾವಿಷ್ಣುವಿನ ಅವತಾರ ಅಂತ ನಂಬಿದ್ದಾರೆ ಯಾಕೆಂದರೆ ಅಸುರರಾಜ ಹಿರಣ್ಯಕಶಿಪುವನ್ನು ಕೊಂದ ನಂತರ ನರಸಿಂಹ ಅವತಾರಿ ಶ್ರೀವಿಷ್ಣುವಿನ ಕೋಪ ಕಡಿಮೆಯಾಗಲಿಲ್ಲವಂತೆ ಆತನ ಕೋಪವನ್ನು ಶಮನಗೊಳಿಸೋದಕ್ಕೆ ಅಂತಲೇ ಶಿವ ಶರಭೇಶ್ವರನ ರೂಪ ತಾಳಿ ಬಂದನಂತೆ, ಈ ವೇಳೆ ಭಯಂಕರ ಶರಭ ರೂಪಿ ಶಿವನನ್ನು ಹೆದುರಿಸಲು ಮುಂದಾದ ವಿಷ್ಣು ಈ ಗಂಡಭೇರುಂಡನ ರೂಪವನ್ನು ತಾಳಿದ ಅನ್ನುತ್ತೆ ಮಾರ್ಕಂಡೇಯ ಪುರಾಣ. ಗಂಡಭೇರುಂಡದ ಸೃಷ್ಟಿಯ ಹಿಂದಿನ ಈ ಪೌರಾಣಿಕ ಕಥೆ ಅದೇನೇ ಇರಲಿ.
ನೋಡೋದಕ್ಕೆ ಈ ಪಕ್ಷಿ ತುಂಬಾನೇ ವಿಚಿತ್ರವಾಗಿದೆ ಎರಡು ತಲೆಗಳನ್ನು ಹೊಂದಿರೋದು ಒಂದು ವಿಶೇಷ ಆದರೆ ತನ್ನ ಎರಡು ಕೊಕ್ಕು ಹಾಗೂ ಕಾಲುಗಳಲ್ಲಿ ನಾಲ್ಕು ಆನೆಗಳನ್ನು ಹಿಡಿದಿರುವುದು ಮತ್ತೊಂದು ವಿಶೇಷ .
ಕೆಳದಿಯ ಪ್ರಾಚೀನ ರಾಮೇಶ್ವರ ದೇಗುಲದ ಚಾವಣಿಯಲ್ಲಿ ಈ ಗಂಡಭೇರುಂಡದ ವಿಶೇಷ ಶಿಲ್ಪಕಲೆ ಇರೋದನ್ನ ನಾವು ಕಾಣಬಹುದು, ಶಿಲ್ಪಶಾಸ್ತ್ರದಲ್ಲಿ ತುಂಬಾನೇ ಮಹತ್ವ ಪಡೆದಿರೋ ಗಂಡಭೇರುಂಡ ರಾಮೇಶ್ವರ ದೇಗುಲ ಮಾತ್ರವಲ್ಲ ಬೇಲೂರು ಚೆನ್ನಕೇಶವ ದೇವಾಲಯದಿಂದ ಹಿಡಿದು ದೇಶದ ಹಲವು ಪ್ರಾಚೀನ ಮಂದಿರಗಳಲ್ಲಿ ಅಲಂಕಾರಿಕ ಭಾಗವಾಗಿ ಬಳಸಲ್ಪಟ್ಟಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಈ ವಿಚಿತ್ರ ಪಕ್ಷಿಯ ರೂಪದ ಹಿಂದೆ ಅತ್ಯಾದ್ಬುತವಾದ ಸಾಂಕೇತಿಕ ಅರ್ಥ ಕೂಡ ಇದೆ ಇಷ್ಟಕ್ಕೂ ರಾಜ್ಯದ ಯಾವೆಲ್ಲಾ ದೇವಾಲಯಗಳಲ್ಲಿ ಈ ಪಕ್ಷಿಯ ಶಿಲ್ಪ ಕಾಣಸಿಗುತ್ತೆ ಇದರ ಇತಿಹಾಸ ಏನು ಎಂಬುದನ್ನು ನೋಡೋಣ.
ಈ ಗಂಡಭೇರುಂಡ ಪಕ್ಷಿಗೆ ಮೊಟ್ಟ ಮೊದಲ ಬಾರಿಗೆ ಮಾನವರೂಪ ನೀಡಿದ್ದು ಚಾಲುಕ್ಯರು ಅವರ ಅವಧಿಯಲ್ಲಿ ಬಳ್ಳಿಗಾವಿಯ ಕೇದಾರೇಶ್ವರ ದೇವಾಲಯದಲ್ಲಿ ಬೃಹತ್ ಮಾನವಾಕೃತಿಯ ಗಂಡಭೇರುಂಡವನ್ನು ಕೆತ್ತಲಾಯಿತು, ಭಕ್ತನೊಬ್ಬ ತನ್ನ ಕೈಯಲ್ಲಿ ಹಿಡಿದು ನಿಂತಿರುವ ಈ ಬೃಹತ್ ಶಿಲ್ಪವನ್ನು ಅಲ್ಲಿನ ಸ್ಥಳೀಯರು ಗಂಡಭೇರುಂಡೇಶ್ವರ ಅಂತ ಕರೆಯುತ್ತಾರೆ. ಹಾಗೆ ನೋಡಿದರೆ ಕರ್ನಾಟಕದ ಚಾಲುಕ್ಯರ ಕಲ್ಪನೆಯಲ್ಲಿ ಅರಳಿದ ಮೊದಲ ಗಂಡಭೇರುಂಡೇಶ್ವರ ಶಿಲ್ಪಕಲೆ ಇದು. ಇದು ಕೆತ್ತಲ್ಪಟ್ಟಿದ್ದು ಶಕವರ್ಷ 1047ರ ಸುಮಾರಿಗೆ ಅಂತಾರೆ ಇತಿಹಾಸಕಾರರು. ಚಾಲುಕ್ಯರ ನಂತರ ಹೊಯ್ಸಳರು ಕೂಡ ಗಂಡಭೇರುಂಡೇಶ್ವರನನ್ನು ತಮ್ಮ ಶಿಲ್ಪಕಲೆಯಲ್ಲಿ ಬಳಸುತ್ತಾರೆ ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿರೋ ಪ್ರಾಣಿಗಳ ಆಹಾರದ ಸರಪಳಿಯಲ್ಲಿ ಗಂಡಭೇರುಂಡವನ್ನು ಮೇಲಿನ ಸ್ಥರದಲ್ಲಿ ಚಿತ್ರಿಸಲಾಗಿದೆ, ಜಿಂಕೆಯನ್ನು ಹೆಬ್ಬಾವು , ಹೆಬ್ಬಾವನ್ನು ಮೇಲೆತ್ತಿರೋ ಆನೆ, ಆನೆಯ ಮೇಲೆ ದಾಳಿ ನೆಡೆಸುತ್ತಾ ಇರೋ ಸಿಂಹ ಅದೇ ವೇಳೆ ಗಂಡಭೇರುಂಡ ಒಂದು ಸಿಂಹವನ್ನು ಕುಕ್ಕಿ ತಿನ್ನುತ್ತಿರೋ ಹಾಗೆ ಆ ಶಿಲ್ಪವನ್ನು ರೂಪಿಸಿದ್ದಾರೆ.
ಹೀಗೇ ಈ ಕಾಲ್ಪನಿಕ ಪಕ್ಷಿಯನ್ನು ಶಿಲ್ಪಕಲೆಯಲ್ಲಿ ಬಳಸಿದ್ದು ಮಾತ್ರವಲ್ಲ ವಿಜಯನಗರ ಅರಸರು ಮತ್ತು ಮೈಸೂರಿನ ಒಡೆಯರು ಗಂಡಭೇರುಂಡವನ್ನು ತಮ್ಮ ನಾಣ್ಯಗಳಲ್ಲಿ ಮುದ್ರಿಸೋಕೆ ಶುರು ಮಾಡಿದ್ರು. ವಿಜಯನಗರದ ಅರಸ ಶ್ರೀಕೃಷ್ಣದೇವರಾಯನ ಸಹೋದರ ಅಚ್ಯುತರಾಯ 1529-1542ರ ನಡುವಿನ ಅವಧಿಯಲ್ಲಿ ವಿಜಯನಗರ ಸಾಮ್ರಾಜ್ಯದ ಶಕ್ತಿ ಹಾಗೂ ಸಾಮರ್ಥ್ಯದ ಸಂಕೇತವಾಗಿ ಗಂಡಭೇರುಂಡದ ಚಿಹ್ನೆಯುಳ್ಳ ಚಿನ್ನದ ನಾಣ್ಯವನ್ನು ಮುದ್ರಿಸುತ್ತಾನೆ ಅವತ್ತಿಗೆ ವಿಜಯನಗರ ಸಾಮ್ರಾಜ್ಯದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಶತ್ರು ಸಾಮ್ರಾಜ್ಯಗಳಿದ್ದವು ಗೋಲ್ಕೊಂಡ , ಗುಲ್ಬರ್ಗ, ಬೀದರ್, ಹಾಗೂ ಅಹಮದನಗರದ ಸುಲ್ತಾನರು ವಿಜಯನಗರದ ಮೇಲೆ ಹದ್ದಿನ ಕಣ್ಣು ಇಟ್ಟಿದ್ರು , ಆದ್ರೂ ಕೂಡ ಈ ನಾಲ್ವರು ಶತ್ರುಗಳಿಗೆ ಸೆಡ್ಡು ಹೊಡೆದು ಸಮೃದ್ಧವಾಗಿ ಹಾಗೂ ಸದೃಢವಾಗಿ ಬೆಳೆದಿದ್ದ ವಿಜಯನಗರವನ್ನು ನಾಲ್ಕು ಆನೆಗಳನ್ನು ಕಚ್ಚು ಹಿಡಿದ ಗಂಡುಭೇರುಂಡಕ್ಕೆ ಹೋಲಿಸಿದ್ದ ಅಚ್ಯುತರಾಯ ಇದೇ ಕಾರಣಕ್ಕೆ ಗಂಡಭೇರುಂಡವನ್ನು ಅಚ್ಯುತರಾಯ ತನ್ನ ನಾಣ್ಯಗಳಲ್ಲಿ ಮುದ್ರಿಸಿದ್ದ.
ವಿಜಯನಗರ ಸಾಮ್ರಾಜ್ಯದ ನಂತರ ಮೈಸೂರು ಒಡೆಯರ ಸಂಸ್ಥಾನದಲ್ಲಿ ಗಂಡಭೇರುಂಡವನ್ನು ತಮ್ಮ ಲಾಂಛನವಾಗಿ ಬಳಸುವ ಪರಂಪರೆ ಶುರುವಾಯಿತು ಸುಮಾರು 16ನೇ ಶತಮಾನದ ಮಧ್ಯಭಾಗದಲ್ಲಿ ಮೈಸೂರು ಸಂಸ್ಥಾನದಲ್ಲಿ ಗಂಡಭೇರುಂಡದ ಚಿಹ್ನೆಯ ಬಳಕೆ ಶುರುವಾಯಿತು ಅಂತಾರೆ ಇತಿಹಾಸಕಾರ ನಂಜರಾಜ ಅರಸ್. ಮೈಸೂರು ಅರಸರಾಗಿದ್ದ ಯದುರಾಯರು ಮೊದಲ ಬಾರಿಗೆ ಗಂಡಭೇರುಂಡವಿದ್ದ ಧ್ವಜವನ್ನು ತಮ್ಮ ವಿಜಯಯಾತ್ರೆಯಲ್ಲಿ ಬಳಸಿದ್ದರು ಆ ನಂತರ ಗಂಡಭೇರುಂಡದ ಚಿತ್ರವಿದ್ದ ಕೆಂಪು ಬಾವುಟ ಮೈಸೂರಿನ ರಾಜ್ಯಧ್ವಜವಾಗಿ ಬಳಕೆಯಾಗೋದಕ್ಕೆ ಶುರುವಾಯಿತು "ಸತ್ಯಮೇವೋ ಭವರಮ್ಯಹಂ" ಅನ್ನೋ ಧ್ಯೇಯವಾಕ್ಯವನ್ನು ಹೊಂದಿದ್ದ ರಾಜ್ಯಧ್ವಜ ಸತ್ಯ ಹಾಗೂ ಧರ್ಮದ ಸಂಕೇತವಾಗಿ ರಾರಾಜಿಸತೊಡಗಿತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಕೂಡ 1956ರವರೆಗೂ ಗಂಡಭೇರುಂಡ ಮೈಸೂರು ರಾಜ್ಯದ ಲಾಂಛನವಾಗಿಯೇ ಬಳಕೆಯಾಯ್ತು , 1973ರಲ್ಲಿ ನಮ್ಮ ರಾಜ್ಯ ಕರ್ನಾಟಕ ಅಂತ ಹೆಸರು ಪಡೆದ ನಂತರವು ರಾಜ್ಯ ಲಾಂಛನದಲ್ಲಿ ಯಾವ ಬದಾಲಾವಣೆನೂ ಆಗಲಿಲ್ಲ. ಇವತ್ತಿಗೂ ಕೂಡ ಗಂಡಭೇರುಂಡ ಕರ್ನಾಟಕದ ಹೆಮ್ಮೆ ಹಾಗೂ ಘನತೆಯ ಸಂಕೇತವಾಗಿ ರಾರಾಜಿಸುತ್ತಿದೆ ಮತ್ತು ಬಳಕೆ ಕೂಡ ಆಗ್ತಾ ಇದೆ.
ಮೊದಲ ಚಿತ್ರದಲ್ಲಿ ಗಂಡಭೇರುಂಡ ಪಕ್ಷಿ, ಎರಡನೇ ಚಿತ್ರ ಕರ್ನಾಟಕ ಸರಕಾರದ ಲಾಂಭನ
ಚಿತ್ರ ಕೃಪೆ: ಇಂಟರ್ನೆಟ್ ತಾಣ
(ಮಾಹಿತಿ ಸಂಗ್ರಹ)