ಗಂಡಿಗೊಂದು ಹೆಣ್ಣು ಮತ್ತು ರಗಳೆ !

ಗಂಡಿಗೊಂದು ಹೆಣ್ಣು ಮತ್ತು ರಗಳೆ !

ಕವನ

ಗಂಡಿಗೊಂದು ಹೆಣ್ಣು ಮತ್ತು ರಗಳೆ 
                                     - ವಿದ್ಯಾಶಂಕರ್ ಹರಪನಹಳ್ಳಿ
                                        ಟುಲೂಸ್, ಫ್ರಾನ್ಸ್
(ಸುದ್ದಿ : ಹವ್ಯಕರಲ್ಲಿ  ಮತ್ತು ಬ್ರಾಹ್ಮಣರಲ್ಲಿ  ಮದುವೆಗೆ ಹೆಣ್ಣಿನ ಕೊರತೆ)
 
ನಮ್ಮ ಅಜ್ಜಿಯ ಜನಪದ ಕತೆಗಳಲ್ಲಿ,
ಯಾವಾಗಲು ಇರುತ್ತಿದ್ದ  ಒಬ್ಬ ಕಠಾರಿವೀರ
ಕುದುರೆ ಓಡಿಸುತ, ಒಬ್ಬಳನೆ ಚದುರೆಯ ಪ್ರೀತಿಸುತಾ
ಸುಂದರ ಸೊಗಸುಗಾರ ಕುದುರೆ ಸವಾರ...
ಬಾಯಿಬಿಟ್ಟು ಕೇಳುತಿದ್ದರು ನಮ್ಮ ಸೀತಾ, ವನಿತಾ ಗೀತಾ...
ಎಲ್ಲಾ ಕಾಲಕ್ಕೂ ಎಲ್ಲಾ ಅಮ್ಮಿಯರಿಗು ಬೇಕು
ಅದೇ ಸುಂದರ ಸೊಗಸುಗಾರ ರಾಜಕುಮಾರ
ಈಗೆಲ್ಲಾ  ಅಜ್ಜಿ ಕತೆಗಳ ರಾಜಕುಮಾರರೆಲ್ಲ
ಸಾಫ್ಟ್‌ವೇರ್  ತುಂಡುಗಳಾದಂತೆ ನನ್ನ ಗುಮಾನಿ
ಅನುಮಾನವಿದ್ದರೆ ಹುಡುಗಿಯರನ್ನು ಕೇಳಿ ಸ್ವಾಮಿ
 
ಅಮೇರಿಕಾ ವೀಸಾವಿದ್ದವನು ಪಾಶುಪತಾಸ್ತ್ರ ಪಡೆದಂತೆ
ವಿದೇಶಕ್ಕೆ ಹೋಗಿ ಮರಳಿ ಬಂದವನು
ಸ್ವರ್ಗಾರೋಹಣ ಮಾಡಿ ಮರಳಿ ಬಂದಂತೆ
ಮರಳಿ ಬರದೇ ಇದ್ದವನು, ಭೂಪತಿ ಗಂಡಂತೆ!
ಅತಲ, ವಿತಳ, ಪಾತಾಳದಲ್ಲಿ ಹುಡುಕಿದರೂ
ನಮ್ಮ ಪೂಜಾರಿ, ರೈತ, ಮೇಸ್ಟ್ರಿಗೆ ಹೆಣ್ಣು ಸಿಕ್ಕೊಲ್ಲ!
ಕಾರಣ ನಿಮಗೇ ಗೊತ್ತಲ್ಲ...
 
ಎಲ್ಲಾ ಅಮ್ಮಿಗಳದು  ಒಂದೇ ಹರಕೆ
ಸಿಗಲಿ ನಮಗೆ ಸಾಫ್ಟ್‌ವೇರ್ ಅಪ್ಪಿಯೊಂದು
ಹುಟ್ಟಲಿ ನಮ್ ಹೊಟ್ಟೆಲಿ ಸಾಫ್ಟ್‌ವೇರ್ ತುಂಡೊಂದು!
ಈ ತನಕ ಕಾಡಿದ ಗಂಡುಜಾತಿಯ ಬಗ್ಗೆ
ಹೀಗೂ ಇರಬಹುದೇ... ಸೇಡಿನ ನಂಜು?
 
                    - ೨ -


ಧರ್ಮ ಕಟ್ಟಲೆ ಮೀರಲಾರದ ಪುಕ್ಕಲ ಮಾಣಿ
ನೋಡಲಾರನೇಕೆ ಧರ್ಮ ಬೇಲಿಯ ಜಿಗಿದಿಂದು?
ಅಪ್ಪಣೆ ಕೊಡಿಸಬೇಕಾದ ನಮ್ಮ ಜಗದ್ಗುರು
ಎಲ್ಲಿ ಹೋದರು ಎಂದು ಹೊಡುಕಿದರೆ..
ಅವರು... ದೈವಾಂಶ ಸಂಭೂತರು
ಗೊಸಂತತಿಯ ಸಂರಕ್ಷಣೆಯಲ್ಲಿ ತಲ್ಲಿನರು!
 

Comments