ಗಂಡು ಮೆಟ್ಟಿನ ರಾಣಿ

ಗಂಡು ಮೆಟ್ಟಿನ ರಾಣಿ

ಪುಸ್ತಕದ ಲೇಖಕ/ಕವಿಯ ಹೆಸರು
ಮಂಜುನಾಥ ಕಳಸಣ್ಣವರ
ಪ್ರಕಾಶಕರು
ವಂಶಿ ಪಬ್ಲಿಕೇಷನ್ಸ್, ಬೆಂಗಳೂರು
ಪುಸ್ತಕದ ಬೆಲೆ
ರೂ. ೩೯೦.೦೦, ಮುದ್ರಣ: ೨೦೨೫

ಕಿತ್ತೂರು ಇತಿಹಾಸವನ್ನು ಕುರಿತು ಈವರೆಗೆ ಬಂದಿರುವ ಕಾದಂಬರಿಗಳನ್ನು ಗಮನಿಸಿದಾಗ, ಕಣ್ಣು ಹಾಯಿಸಿದಾಗ ಈ ಮಂಚೆ ಬಂದಿರುವುಗಳಿಗಿಂತ ಉತ್ಕೃಷ್ಟ ಮಟ್ಟದ, ವಾಸ್ತವಿಕ ಐತಿಹಾಸಿಕ ತಳಹದಿಯ ಮೂಲಕ ರಾಣಿ ಚೆನ್ನಮ್ಮಾಜಿ ಮತ್ತು ಸಮಕಾಲಿನ ಪಾತ್ರಗಳನ್ನು ಜೀವಂತವಾಗಿರಿಸುವ ಎಲ್ಲಾ ಯತ್ನಗಳು ಮಂಜುನಾಥ ಅವರಿಂದ ನಡೆದಿದೆ. ಸುಮಾರು ಏಳು ವರ್ಷಗಳ ನಿರಂತರ ಅಧ್ಯಯನ ಪ್ರವಾಸ ಕಲಿಕೆಯ ಮೂಲಕ ಗಂಡು ಮೆಟ್ಟಿನ ರಾಣಿ ದಿಟ್ಟ ಚೆನ್ನಮ್ಮನ ಗಟ್ಟಿ ಕಥೆ ಹೊರಹೊಮ್ಮಿದೆ. ಇಲ್ಲಿಯವರೆಗಿನ ಕಿತ್ತೂರು ಇತಿಹಾಸ ಸಂಶೋಧನೆಯ ಲೋಪವೆಂದರೆ ಕಿತ್ತೂರು ಎಂದರೆ ಕೇವಲ ಚೆನ್ನಮ್ಮ ಮತ್ತು ಬ್ರಿಟಿಷರ ಮಧ್ಯೆ ನಡೆದ ಕಾಳಗ ಎಂಬಂತಾಗಿರುವುದು. ಇದು ಸತ್ಯವೂ ಹೌದು ಇದಷ್ಟೇ ಎನ್ನುವುದು ಅಸತ್ಯವೂ ಹೌದು. ಇಲ್ಲಿಯವರೆಗಿನ ಸಂಶೋಧನೆಯಲ್ಲಿ ಅರಮನೆ ಮತ್ತು ಗುರುಮನೆ ಸಂಬಂಧ, ಕಿತ್ತೂರು ಸಂಸ್ಥಾನ ಮತ್ತು ಪುಣಾ ಪೇಶ್ವೆಗಳ ಕುರಿತು ಸಂಶೋಧನೆ, ಕಿತ್ತೂರು ಇತಿಹಾಸದಲ್ಲಿ ಧಾರವಾಡ ಜಿಲ್ಲಾದಿಕಾರಿ ಕಛೇರಿ ಹೆಡ್ ಕ್ಲರ್ಕ್ ಹಾವೇರಿ ವೆಂಕಟರಾವ್ ನ ಪಾತ್ರ ಕುರಿತು ವಾಸ್ತವವಾಗಿ ಬರದೇ ಇರುವುದು, ಕಿತ್ತೂರು ಸಂಸ್ಥಾನ ಜೊತೆಗೆ ಸಮಕಾಲಿನ ಸಂಸ್ಥಾನಗಳ ಸಂಬಂಧ,ಕಿತ್ತೂರು ಸಂಸ್ಥಾನದ ದಿಗ್ವಿಜಯದಲ್ಲಿ ನಿರ್ಲಕ್ಷಗೊಳಗಾದ ಸೈನಿಕರು, ಕಿತ್ತೂರು ಮತ್ತು ಪೋರ್ಚುಗೀಸರ ಸಂಬಂಧ, ಕಿತ್ತೂರು ಇತಿಹಾಸದಲ್ಲಿ ನೀಗ್ರೋ ಸೈನಿಕರು ರಾಣಿ ಚೆನ್ನಮ್ಮನ ಸೊಸೆಯಂದಿರಾದ ವೀರಮ್ಮ ಮತ್ತು ಜಾನಕೀಬಾಯಿಯ ಪಾತ್ರಗಳು ಇನ್ನು ಮುಂತಾದ ಆಯಾಮಗಳಲ್ಲಿ ಕಿತ್ತೂರಿನ ಇತಿಹಾಸದ ಕುರಿತು ಸಂಶೋಧನೆ ಆಗದೇ ಇರುವುದು ಖೇದದ ವಿಷಯ. ಅನ್ನೋದಕ್ಕಿಂತ ಐತಿಹಾಸಕ ಕಾದಂಬರಿಕಾರರು ಸಮಗ್ರ ದೃಷ್ಟಿಕೋನದ ಕೊರತೆ ಎಂದು ಹೆಳಬಹುದು. ಇವೆಲ್ಲವುಗಳಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸುವ ಕೆಲಸವನ್ನು ಮಂಜುನಾಥ್ ಕಳಸನ್ನವರ ಅವರು ಮಾಡಿದ್ದಾರೆ.

ಈ ಐತಿಹಾಸಿಕ ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಕೇಶವ ಮಾಳಗಿ ಇವರು. ಇವರು ತಮ್ಮ ಮುನ್ನುಡಿಯಲ್ಲಿ…”ಸಮಕಾಲೀನ ಲೇಖಕನೊಬ್ಬ ಏಕೆ ಐತಿಹಾಸಿಕ ವಿಷಯವನ್ನು ಆಯ್ದುಕೊಂಡು, ಕ್ರಿಯಾಶೀಲತೆಯ ಎರಕ ಹೊಯ್ದು, ವಿವಿಧ ಸ್ತರಗಳನ್ನು ಜೋಡಿಸಿ ಕಾದಂಬರಿ ಬರೆಯುತ್ತಾನೆ? ಹಾಗೆ ಮಾಡುವಾಗ ಯಾವ ಪ್ರಬಲ ಕಾಳಜಿಗಳು ಆತನನ್ನು ಆವರಿಸಿಕೊಂಡಿರುತ್ತವೆ? ಗತವನ್ನು ಶಬ್ದಾಡಂಬರವೇ ಪ್ರಧಾನವಾದ ಕಲಾತ್ಮಕತೆಯ ಚೌಕಟ್ಟಿನಲ್ಲಿ ಪುನಾರೂಪಿಸುವುದು ಹೇಗೆ ಸೃಜನಶೀಲ ಕೃತಿಯಾಗಬಲ್ಲದು? ಇಲ್ಲಿ ಲೇಖಕನೊಬ್ಬ ತೆಗೆದುಕೊಳ್ಳುವ ಸ್ವಾತಂತ್ರ್ಯವು ಒಂದೊಮ್ಮೆ ನಕಾರಾತ್ಮಕವಾಗಿದ್ದರೆ ಅದು ಬದುಕಿನ ಗತಿಶೀಲತೆಗೆ ಹಾನಿಕಾರಕವಲ್ಲವೆ? ಇತ್ಯಾದಿ ಪ್ರಶ್ನೆಗಳು ಸಾಹಿತ್ಯ ರಸಾಸ್ವಾದನೆಯಲ್ಲಿ, ವಿಮರ್ಶೆಯಲ್ಲಿ ಕೇಳಿಕೊಂಡು ಬಂದ ಹಳೆಯ ಪ್ರಶ್ನೆ.

ಸರಿಸುಮಾರು ಹದಿನೆಂಟನೆಯ ಶತಮಾನದಲ್ಲಿ ಯುರೋಪಿಯನ್ ಭಾಷೆಗಳ ಲೇಖಕರು ಇಂಥ ಪ್ರಯತ್ನಕ್ಕೆ ತೊಡಗಿದಾಗ 'ಐತಿಹಾಸಿಕ ಮಹಾ ಕಾದಂಬರಿಗಳು' ಎಂಬ ಪ್ರಕಾರದ ಶಬ್ದವನ್ನು ಟಂಕಿಸಲು ನೋಡಿದಾಗ ವಿದ್ವತ್ ವಲಯದಲ್ಲಿ ದೊಡ್ಡ ಬಿರುಗಾಳಿಯೇ ಎದ್ದಿತು. ಇದನ್ನೊಂದು ಸಾಹಿತ್ಯ ಪ್ರಕಾರವೆನ್ನಲು ಸಾಧ್ಯವಿಲ್ಲ ಎಂಬ ಪ್ರಬಲ ವಾಗ್ವಾದ ಹುಟ್ಟಿದವು. ಇದ್ದರೂ, ಬರುಬರುತ್ತ ಈ ಪ್ರಕಾರ ಜನಪ್ರಿಯತೆ ಮತ್ತು ವಿಮರ್ಶಕರ ಮಾನ್ಯತೆ ಎರಡನ್ನೂ ಪಡೆಯಿತು. ವಿಶ್ವದ ಬಹುದೊಡ್ಡ ಗತಪೂರ್ವ ಮತ್ತು ಸಮಕಾಲೀನ ಲೇಖಕರು ಈ ಪ್ರಕಾರದಲ್ಲಿ ತಮ್ಮನ್ನು ಕ್ರಿಯಾಶೀಲರಾಗಿ ತೊಡಗಿಸಿಕೊಂಡು ಮಹತ್ವದ ಕೃತಿಗಳನ್ನು ರಚಿಸಿದರು, ರಚಿಸುತ್ತಿದ್ದಾರೆ. ವಿಕ್ಟರ್ ಹ್ಯುಗೋ, ಅಲೆಕ್ಸಾಂಡರ್ ಡ್ಯೂಮಾ, ಟಾಲ್ಟಾಯ್, ದೊಸ್ತೋವಸ್ಕಿಯಿಂದ ಹಿಡಿದು ಸಲ್ಮಾನ್ ರಡ್ಡಿ, ಒರ್ಹಾನ್ ಪಮಕ್‌ರವರೆಗೆ ಈ ಕಥನ ಪರಂಪರೆಯಿದೆ. ಇಂಥ ಕಥಾನಕಗಳು ಸಮಕಾಲೀನ ಓದುಗರನ್ನು ಇತಿಹಾಸದ ಸ್ವರೂಪ, ಆ ಸ್ವರೂಪ ಪಡೆದುಕೊಳ್ಳುವಲ್ಲಿ ಉಂಟಾದ ಗಾಯ, ರಕ್ತಪಾತ, ಆಘಾತ, ಅವಮಾನ, ಸೋಲು-ಗೆಲುವು, ತ್ಯಾಗ, ಬಲಿದಾನ ಮತ್ತು ಬದುಕಿನ ಗತಿಗೆ ಬೆಸುಗೆ ಹಾಕುತ್ತವೆ.

ಗತದಲ್ಲಿ ನಡೆದ ಸಂಗತಿಯ ಲಭ್ಯ ವಿವರಗಳೊಂದಿಗೆ, ಜನರ ಸ್ಮೃತಿಯಲ್ಲಿ ವಿವಿಧ ಸ್ವರೂಪಗಳಲ್ಲಿ (ಹಾಡುಗಬ್ಬ, ಕಥೆ, ಒಡಪು, ಮೌಖಿಕ ಮಹಾಕಾವ್ಯ ಮುಂತಾಗಿ) ಉಳಿದುಬಂದ ನೆನಪುಗಳನ್ನು ಮರು ಸಂಘಟಿಸುವುದು, ಸಮಕಾಲೀನ ಸಮಾಜದಲ್ಲಿ ಸದ್ಯಕ್ಕೆ ಗೈರುಹಾಜರಾಗಿ 'ಅತಿಮುಖ್ಯ'ವೆಂದು ಕೃತಿಕಾರ ಭಾವಿಸುತ್ತಿರುವ ಸಂಗತಿಗಳನ್ನು ಮುನ್ನೆಲೆಗೆ ತರುವುದು ಕೂಡ ಈ ಬರಹಗಳ ಉದ್ದೇಶವಾಗಿರುತ್ತದೆ. ಉದಾಹರಣೆಗೆ, ಕಾಣೆಯಾಗಿರುವ ಸ್ವಾಭಿಮಾನ, ಕ್ಷಾತ್ರ, ತ್ಯಾಗ ಮನೋಭಾವ, ಕುಟುಂಬ, ತಾಯ್ಕೆಲದ ಪ್ರೀತಿ, ತರತಮಗಳ ನಡುವೆ ಕಣ್ಮರೆಯಾದ ಪ್ರೀತಿ, ಅನುರಾಗ, ನಿಷ್ಠೆ, ಎದುರಾಳಿಯನ್ನು ಕೆಚ್ಚಿನಿಂದ ಎದುರಿಸಿ ಸೋಲಿನಲ್ಲಿಯೂ ಪಡೆದ ವೀರತ್ವ ಮನುಷ್ಯನ ಮಹತ್ವಾಕಾಂಕ್ಷೆ, ಅದನ್ನು ಸಾಧಿಸುವಲ್ಲಿ ತೋರಿದ ಋಜುತ್ವ, ನೈತಿಕತೆ, ಚಾರಿತ್ರ್ಯ ಇತ್ಯಾದಿ.

ಕಥಾನಕದಲ್ಲಿ ಇತಿಹಾಸ ಭಿತ್ತಿಯಾಗಿದ್ದರೂ, ಮನುಷ್ಯನ ಅಸ್ತಿತ್ವವನ್ನು ಅಲುಗಾಡಿಸಿದ ಆ ಕಾಲದ ಸತ್ಯಗಳು ಶೋಧಿಸುವುದು ಮುಖ್ಯವಾಗಿರುತ್ತದೆ. ಮಾತ್ರವಲ್ಲ, ಮುಖ್ಯವಾಹಿನಿಯ ಇತಿಹಾಸವು ಕಡೆಗಣಿಸಿದ ದಿನನಿತ್ಯದ ಸಂಗತಿಗಳು, ಅರಸೊತ್ತಿಗೆಯನ್ನು ಹೊರತುಪಡಿಸಿ ಜನಮಾನಸವು ಬದುಕಿದ ರೀತಿನೀತಿ, ಅವರು ತೋರಿದ ಘನತೆ, ಸಹಜವೆಂಬಂತೆ ಎತ್ತಿಹಿಡಿದ ಮೌಲ್ಯಗಳು, ಒಳಿತಿನಂತೆ ಕೆಡುಕಿನ ಸ್ವರೂಪಗಳ ಹುಡುಕಾಟ ನಡೆಸುತ್ತವೆ. ಲೇಖಕ ತೆರೆದ ಮನಸ್ಸಿನವನಾಗಿದ್ದು ತನ್ನ ಆಕರಗಳನ್ನು ಹೊರತುಪಡಿಸಿ ಸೃಜನಶೀಲತೆಯೆಡೆ ವಾಲುವಾಗ ತೋರುವ ಪಕ್ವತೆ, ಅಂತಃಕರಣ, ಎಲ್ಲಕ್ಕಿಂತ ಮುಖ್ಯವಾಗಿ ತಾನು ಮತ್ತು ತಾನು ಸೃಷ್ಟಿಸುತ್ತಿರುವ ಕೃತಿಯು ಬದುಕು ಹಾಗೂ ನಿಸರ್ಗದ ಚಲನಶೀಲತೆಗಿಂತ ಹಿರಿದಾದುದೂ ಅಲ್ಲ, ಶಾಶ್ವತವೂ ಅಲ್ಲ ಎಂಬ ಒಳ ಎಚ್ಚರ ಇದ್ದವನಾದರೆ ಆ ಕೃತಿ ಸಮಕಾಲೀನ ಓದುಗನನ್ನು ಕಾಡಬಲ್ಲುದು.

ಐತಿಹಾಸಿಕ ಕಾದಂಬರಿಗಳು ಒಂದು ಬಗೆಯ ಭಾವೋದ್ವೇಗತೆ, ಸಮಕಾಲೀನತೆಯ ಬಗೆಗೆ ವಿಷಣ್ಣತೆ, ವ್ಯಾಕುಲತೆಯನ್ನು ಸೃಷ್ಟಿಸುವುದರಿಂದ ಮತ್ತು ಹಳೆಯ ಮೌಲ್ಯಗಳೇ ಶ್ರೇಷ್ಠವೆಂಬ ಮಾನಸಿಕಸ್ಥಿತಿಯನ್ನು ನಿರ್ಮಿಸುವುದರಿಂದ 'ರಾಜಕೀಯವಾಗಿ ಸಮರ್ಪಕ'ವಲ್ಲ ಎನ್ನುವ ಚರ್ಚೆಯೂ ಸಮಕಾಲೀನ ಸಮಾಜದಲ್ಲಿ ಜಾರಿಯಲ್ಲಿದೆ. ಈ ವಾಗ್ವಾದ ಐತಿಹಾಸಿಕ ಕಾದಂಬರಿಯ ಹುಟ್ಟಿನೊಂದಿಗೇ ಬಂದಿರುವಂಥದ್ದು.”