ಗಂಡ ಹೆಂಡಿರ ಜಗಳ (ಮುಂದುವರೆದುದು)
ಮದುವೆಯಾದ ಹೊಸದರಲ್ಲಿ ನಮ್ಮ ಸಂಸಾರ ಹೂಡಿಸಿಕೊಡಲು ನನ್ನಮ್ಮ ನನ್ನಪ್ಪನೊಡನೆ ಬಂದಿದ್ದಳು. ನಾಲ್ಕು ದಿನ ಮುಳ್ಳಿನ ಮೇಲಿದ್ದಂತೆ ಇದ್ದು ಹೊರಟ ನನ್ನಪ್ಪನಂತೂ ಹೊರಡುವ ಗಳಿಗೆಯಲ್ಲಿ ಏಕಾಂತದಲ್ಲಿ ನನ್ನ ಕೈಹಿಡಿದು ಬಿಸುಸುಯ್ದರು. "ಕೋಟೆ ಆಂಜನೇಯ ನಿನ್ನನ್ನು ಕಾಪಾಡಲಿ" ಎಂದಷ್ಟೆ ಚುಟುಕಾಗಿ ಹಾರೈಸಿದರು.
ಮುಂಜಾನೆ ಅವರನ್ನು ಬಸ್ ಹತ್ತಿಸಿ ಬರುವಾಗ "ಮಗು, ನಿನ್ನ ಮನೆಯ ಪಕ್ಕದ ಸೈಟಿನಲ್ಲಿ ಬೆಳೆದಿರುವ ಹಾಳು ಎಕ್ಕದ ಗಿಡಗಳನ್ನು ಬೇರುಸಹಿತ ಕೀಳಿಸಿಬಿಡು." ಎಂದು ಒಗಟಿನಂಥ ಮಾತನ್ನಾಡಿದ್ದರು. ನನ್ನಪ್ಪನೇ ಹಾಗೆ! ಎಂದೂ ಒಗಟಿನಂಥ, ಆದರೆ ಅರ್ಥವಂತಿಕೆಯ ಮಾತುಗಳು. ಅದರರ್ಥ ಯೋಚಿಸುತ್ತ ಮನೆಗೆ ವಾಪಸು ಬಂದಾಗ ಇವಳು ಬಾಗಿಲಲ್ಲೇ ಎದುರುಗೊಂಡು "ರೀ, ಇವತ್ತು ನಿಮಗೆ ಇಷ್ಟವಾದ ಪತ್ರಡೆ. ಬೇಗ ಕೈಕಾಲು ತೊಳೆದುಕೊಂಡು ಬನ್ನಿ" ಅಂದಳು. ಪತ್ರಡೆ ನನಗೂ ನನ್ನಪ್ಪನಿಗೂ ಇಷ್ಟವೇ! ಆದರೆ ಅದರ ತುಂಡೊಂದನ್ನು ಮುರಿದು ಬಾಯಿಗಿಟ್ಟಿದ್ದೇ ತಡ, ನನ್ನಪ್ಪನ ಒಗಟು ಒಡೆಯಿತು. ಒಗಟು ಒಡೆದ ಆನಂದಕ್ಕಿಂತ, ಎದುರಲ್ಲೇ ನಿಂತು ಸೊಂಟಕ್ಕೆ ಕೈಯಿಟ್ಟು ಹೆಮ್ಮೆಯ ನಗೆ ಬೀರುತ್ತಿದ್ದವಳ ಕಣ್ಣುತಪ್ಪಿಸಿ, ಪತ್ರಡೆಯನ್ನು ಅದು ಸೇರಿಸಬೇಕಿದ್ದಲ್ಲಿಗೆ ಸೇರಿಸಿ, ಸುಳ್ಳೇ ಅದರ ಗುಣಗಾನ ಮಾಡುವಲ್ಲಿಗೆ ಸಾಕುಸಾಕಾಯಿತು. ಅವಳಿಗೆ ತಿಳಿಯದಂತೆ ಅಂದಿನ ಫಲಾಹಾರವನ್ನು ಹೋಟೆಲಿನಲ್ಲಿಯೇ ತೀರಿಸಿ, ಎಲ್ಲ ಗುಟ್ಟುಗಳ ಶ್ರಾದ್ಧ ಮಾಡಿದವನಂತೆ ಮೀಸೆಯ ಮರೆಯಲ್ಲೇ ಮುಗುಳ್ನಕ್ಕೆ.
ಆದರೆ ಮರುಮುಂಜಾನೆ ನನ್ನ ಗುಟ್ಟು ರಟ್ಟಾದದ್ದು ನಮ್ಮ ಮನೆ ಬೆಕ್ಕು ಪಿಲ್ಲಿಯಿಂದ. ಹಿಂದಿನ ದಿನದಂದು ನಾನು ನನ್ನ ಮಡದಿಯ ಕಣ್ಣು ತಪ್ಪಿಸಿ ಹಿತ್ತಿಲ ಕನ್ಸರ್‌ವೆನ್ಸಿಗೆ ಎಸೆದಿದ್ದ ಪತ್ರಡೆಯ ಪೀಸುಗಳನ್ನು ಅವಗಳ ಆಕಾರ, ಬಣ್ಣ ಮತ್ತು ವಾಸನೆಯ ಮೇರೆಗೆ ಕೊಳೆತ ಹೆಗ್ಗಣದ ಮಾಂಸವೆಂದು ಆಸೆಯಿಂದ ಕಚ್ಚಿತಂದ ಪಿಲ್ಲಿ ಅವುಗಳನ್ನು ಮನೆಯ ವೆರಾಂಡಾದ ಮೂಲೆಯಲ್ಲಿ ಗೂರಾಡಿ ನಿರಾಶೆಯಿಂದ ಹಾಗೇ ಚೆಲ್ಲಿ ಹೋಗಿತ್ತು!! ಪಾಪ!! ನಂತರದ ರಾದ್ಧಾಂತ ಮತ್ತು ಅದು ತೀಡಿದ ’ಗಂಧ’ ಅದನ್ನು ವರ್ಣಿಸಿದ ಕವಿಯ ಘ್ರಾಣೇಂದ್ರಿಯಕ್ಕೇ ಪ್ರೀತಿ!!!
ಪತ್ರಡೆಯಂತೆ ನನ್ನ ನೆಚ್ಚಿನ ತಿಂಡಿ ತೊಗರಿನುಚ್ಚಿನುಂಡೆ. ಆದರೆ ನನ್ನ ನಾಲಿಗೆಯ ಸೀಕ್ರೆಟ್ಟನ್ನು ಒಮ್ಮೆ ನನ್ನವಳಿಗೆ ಬಿಟ್ಟುಕೊಟ್ಟಮೇಲೆ, ಮತ್ತೆ ಅದರ ತಂಟೆಗೆ ಬರೆಬೇಡವೆಂದು ಹೇಳುವುದಾದರೂ ಹೇಗೆ? ಎಷ್ಟೋ ಬಾರಿ ಪ್ಲಾಸ್ಟಿಕ್ ಚೀಲವೊಂದನ್ನು ದೊಗಲೆ ಜುಬ್ಬಾದ ಜೇಬಲ್ಲಿಟ್ಟುಕೊಂಡು, ಇವಳು ಕಾಫಿಯನ್ನೋ, ನೀರನ್ನೋ ತರಲು ಅಡುಗೆಮನೆಗೆ ಹೋದಾಗ, ವಾಪಸು ಬರುವಷ್ಟರಲ್ಲಿ ಚಮತ್ಕಾರವೆಂಬಂತೆ ಬಲವಂತವಾಗಿ ನುಂಗಿದ್ದನ್ನು ಚೀಲಕ್ಕೆ ಕಕ್ಕಿ ಪುನ: ಜುಬ್ಬಾದ ಜೇಬಿಗೆ ಸೇರಿಸಿ ಕಾಲೇಜಿನ ಬದಿಯ ಸಾಮಾಜಿಕ ಅರಣ್ಯದಲ್ಲಿ dispose ಮಾಡಿದ್ದುಂಟು. ( ಇದು Intellectual Property Right. ಯಾರೂ ಇದನ್ನು ನಕಲು ಮಾಡಿ ಕೋರ್ಟು ಕಛೇರಿ ಮೆಟ್ಟಿಲು ಹತ್ತಬೇಡಿ ಎಚ್ಚರಿಕೆ!!) ಈ ಗುಟ್ಟು ರಟ್ಟಾಯ್ತೋ ಎಂಬಂತೆ ನನ್ನ ಮನದನ್ನೆ RAWದ ಗುಪ್ತಚರಳಂತೆ ನನ್ನ ಹಿಂದು ಮುಂದು ತಿರುಗುತ್ತ, ಕಾಲೇಜಿಗೆ ನಾನು ಕೊಂಡೊಯ್ಯುವ ಬಗಲುಚೀಲವನ್ನು ಯಾವುಯಾವುದೋ ನೆಪದಲ್ಲಿ ತಲಾಶು ಮಾಡಿದ್ದುಂಟು
(ಮುಂದುವರೆಯುವುದು)