ಗಂಧರ್ವ ಕನ್ಯೆ

ಗಂಧರ್ವ ಕನ್ಯೆ

ಬರಹ

ತುಂಟ ಕಂಗಳ ತೇಜಸ್ವಿ
ದಣಿವರಿಯದ ತಪಸ್ವಿ
ಸತ್ಯದ ಹಠವಾದಿ
ನಮ್ಮ ಮಂತ್ರವಾದಿ
ಪುಟ್ಟ ಹೆಂಗಸಿನ
ಬಾಯಿ ಚಿಕ್ಕದು
ಮಾತು ದೊಡ್ಡದು
"ಯಾರು ನೀವು
ಇಲ್ಲೇಕೆ ಬಂದದ್ದು ?"
'ತಲೆಹರಟೆ ನಿನಗೇಕೆ
ಬೇಕು, ಬೇಡದ್ದು '
ಅಮ್ಮನ ಕೆಂಗಣ್ಣಿಗೆ
ಮುಖ ಚಿಕ್ಕದಾಗಿ
ಕಣ್ತುಂಬಾ ಮುತ್ತು
ರತ್ನ ಇಳಿದವೇ? ಇಲ್ಲ,
ಹುಸಿಗೋಪ, ಕಳ್ಳ ಅಳು
'ಹೋ' ಎಂಬ ತೊದಿರಾಗ
ನೆಲದ ಮೇಲೆ ಹೊರಳಾಟ
ನ್ಯಾಯಕಾಗಿ ಹೋರಾಟ
ಎಲ್ಲಿಯವರೆಗೆ?,
ಅಮ್ಮನ ಮಡಿಲೇರುವವರೆಗೆ .

ಕೆಳಗೆ ಬಿದ್ದರೆ
'ಅಯ್ಯೋ' ಎಂಬುದ್ಗಾರಕೆ
ಮಾತ್ರ ಅಳು
ಇಲ್ಲದಿರೆ
ಕೈಯೊರಸಿ ಕಣ್ಮಿಟುಕಿಸಿ
ನಡೆಯುತ್ತಾಳೆ
ಗಂಧರ್ವ ಕನ್ಯೆ

ಅಮ್ಮನ ಕಣ್ಣೊರೆಸಿ
ಸಾಂತ್ವನವೀವ ತಾಯಿ
ಅಪ್ಪನ ದಣಿವಿಳಿಸಿ
ನಗಿಸುವ ಸಿಪಾಯಿ
ಹಾಲಿನವನ
ಪೇಪರಿನವನ ಪ್ರೇಯಸಿ
ನಮಗೆ ಮಾತ್ರ
ಪುಟ್ಟ ರಾಕ್ಷಸಿ
ಮನೆಯ ಆತ್ಮ ಚೈತನ್ಯ
ಅನುಪಮ ಸೌಂದರ್ಯ
ರಸಪ್ರೇಮ ಅನನ್ಯ
ಸಾಕೆನಗೆ ಇವಳ ಸಖ್ಯ