ಗಂಧವತಿ ಪೃಥ್ವಿ ( ಕವನ )

ಗಂಧವತಿ ಪೃಥ್ವಿ ( ಕವನ )

ಕವನ

 


ನಾನೆಲ್ಲಿಗೆ ಹೋಗುತ್ತಿದ್ದೇನೆ


ಹತ್ತಿಗೂ ಹಗುರಾಗಿ ನೀರಂತೆ ಸಲಿಲವಾಗಿ


ಮನಬಂದಂತೆ ನುಗ್ಗುತ್ತಿದ್ಧೇನೆ


ತೇಲುತ್ತ ಹಾರುತ್ತ ಈಜುತ್ತ


ಹಿಂದೆ ಬೀಳ್ಕೊಡುವವರಿಲ್ಲ


ಮುಂದೆ ಸ್ವಾಗತಿಸುವವರಿಲ್ಲ


ಹಸಿವು ನೀರಡಿಕೆಗಳಿಲ್ಲ


ರಾಗ ದ್ವೇಷಗಳಿಲ್ಲ ನರ್ತನ ಸಂಗೀತಗಳಿಲ್ಲ


ಗೊತ್ತು ಗುರಿಗಳಿಲ್ಲ


ಲೋಕದ ಕಟ್ಟುಪಾಡುಗಳಿಲ್ಲ


ಒಂದೂ ಅರ್ಥವಾಗುತ್ತಿಲ್ಲ


ನೀರಿಗೆ ಸಿಕ್ಕ ತರಗೆಲೆಯಂತೆ


ತೇಲಿ ಹೋಗುತ್ತಿದ್ದೇನೆ


ಹೊದಂತೆ ಹೋಗಲಿ ಗುರಿಯಿಲ್ಲದ ಪಯಣ


 


ಕೆಂಪು ಕಡುಗೆಂಪು ಹಸಿರು ಅರಿಷಿಣ ಕಿತ್ತಲೆ


ನೇರಳ ನೀಲ ವಿಧವಿಧದ ದಟ್ಟ ವರ್ಣಗಳು


ಕವಿದಿವೆ ಕಣ್ಮುಂದೆ ಪರದೆಯೋ


ಆವರಣವೋ ನೀರೋ ಗಾಳಿಯೋ


ಪರದೆ ಸರಿಯುತ್ತಿಲ್ಲ ಕೊರೆವ ಚಳಿಯಿಲ್ಲ


ಬಿಸಿಲ ಧಗೆಯಿಲ್ಲ ಊಳಿಡುತ್ತಿದೆ ಗಾಳಿ


ಸಾಗುತ್ತಿದ್ದೇನೆ ಮನೋವೇಗದಲಿ


ಪರಿಧಿಯೇ ಇಲ್ಲದ ಪರಿಧಿಯೆಡೆಗೆ


ಗೋಚರಿಸದ ಅಗೋಚರದೆಡೆಗೆ


 


ಏನಿದು ಇಲ್ಲಿ ?


ಬರಿ ತೆಲೆಬುರುಡೆಗಳ ರಾಶಿ


ಹರಡಿ ಬಿದ್ದಿವೆ ಪರ್ವತ ರಾಶಿಯಂತೆ


ಅನಂತ ವ್ಯೋಮದೆಡೆಗೆ !


ಗರುಡ ಸರ್ಪಗಳ ರಾಶಿ ಪೇರಿಸಿದಂತೆ


ಬರಬೇಕಿದೆಯೊಬ್ಬ ಜೀಮೂತ ವಾಹನ


ಮೂಳೆಗಳ ರಾಶಿಗೆ ಜೀವ ತರಲು


ರಕ್ತ ಮಾಂಸಗಳ ದುರ್ಗಂಧವಿಲ್ಲ


ರಣ ಹದ್ದುಗಳ ಗುಂಪಿಲ್ಲ


ನಮ್ಮ ಪೂರ್ವಜರವಂತೂ ಅಲ್ಲವೇ ಅಲ್ಲ


ನಾವು ಮೃತರನ್ನು ಹೂಳಿದ್ದೆವು


ಇಲ್ಲವೆ ಅಂತ್ಯಸಂಸ್ಕಾರ ಮಾಡಿದ್ದೆವು


ಎಲ್ಲಿಂದ ಬಂದವೀ ಮೂಳೆ ತಲೆಬುರುಡೆಗಳು


ಇದೊಂದು ಬೇರೆಯದೇ ಆದ ಲೋಕವೆ?


ಇದವರ ಅಂತ್ಯ ಸಂಸ್ಕಾತರ ರೀತಿಯೆ?


ಸಾಗುತ್ತಿದ್ದೇನೆ ಮೂಳೆಗಳ ರಾಶಿಯಲ್ಲಿ


ಯಾವ ಅಡೆತಡೆಯಿಲ್ಲ ಗಂಧ ಗಾಳಿಯ


ಸುಳಿವಿಲ್ಲ ಎಷ್ಟೆಂದು ನೋಡುವುದು?


ಮೂಳೆ ತಲೆಬುರುಡೆಗಳ ರಾಶಿ !


ಎಣಿಸುವುದು ತಲೆ ಬುರುಡೆಗಳ ಸಾಲು


ಸಾಕು ಈ ನಿರ್ಜೀವ


ಅವಶೇಷಗಳ ಮಧ್ಯದ ಪಯಣ


 


ವಿಶಾಲ ನೀಲ ನಭ ಹಾರುತಿಹೆ


ಹಕ್ಕಿಯಂತೆ ರೆಕ್ಕೆ ಪುಕ್ಕ ಗರಿಗಳಿಲ್ಲದೆ


ಎಲ್ಲಿ ತ್ರಿಶಂಕು ಅವನ ಅರಮನೆ ?


ಎಲ್ಲಿ ಇಂದ್ರನ ಲೋಕ ಇಂದ್ರ ವರುಣ


ಅಗ್ನಿ ಪವನರು ಎಂದ್ರನರಸಿ ಶಚಿದೇವಿ ?


ರಂಭೆ ಊರ್ವಸಿ ಮೇನಕೆ


ತಿಲೋತ್ತಮೆಯರೆಲ್ಲಿ? ಇಂದ್ರನ


ಐರಾವತ ಕಾಮಧೇನು ಕಲ್ಪವೃಕ್ಷಗಳೆಲ್ಲಿ ?


ಕಿನ್ನರ ಕಿಂಪುರುಷ ಅಷ್ಟ ದಿಕ್ಪಾಲಕರೆಲ್ಲಿ?


ಜಗದ ಸೃಷ್ಟಿಕರ್ತರಾದ ಸೃಷ್ಟಿ


ಪೋಷಕ ಲಯಕರ್ತ ತ್ರಿಮೂರ್ತಿಗಳೆಲ್ಲಿ ?


ಸಹಸ್ರಾಕ್ಷನಾಸ್ಥಾನದ ಋಷಿ ಮುನಿಗಳೆಲ್ಲಿ ?


ಮುಕ್ಕೋಟಿ ದೇವಾನು ದೇವತೆಗಳೆಲ್ಲಿ?


ಆದಿ ಶೇಷನೆಲ್ಲಿ ಮಂದಾರ ಪರ್ವತವೆಲ್ಲಿ?


ಒಬ್ಬರ ಸುಳಿವೂ ಇಲ್ಲ ಇವೆಲ್ಲ


ಮಾನವ ಕಲ್ಪನೆಯ ಸೃಷ್ಟಿಗಳೆ ? ಇಲ್ಲ


ಮನುಕುಲದ  ಶೋಷಣೆಯ ಹುನ್ನಾರಗಳೆ?


 


ಹಾರುತಿರುವೆ ವಿಹಂಗಮ ಅಂತರೀಕ್ಷದಲಿ


ಆನಂತ ವಿಸ್ತಾರ ಸಾದೃಶ್ಯ ನೋಟ!


ಸುತ್ತ ಮುತ್ತ ಅಸಂಖ್ಯ ತಾರಾಗಣ


ತಿರುಗುತಿವೆ ತಮ್ಮದೆ ಅಕ್ಷದ ಸುತ್ತ


ಯಾವ ಸೂರ್ಯರಿಗಾಧೀನರಾಗಿ ?


ಎಚಷ್ಟೊಂದು ಸೂರ್ಯ ಮಂಡಲ ?


ಗ್ರಹ ತಾರೆ ನಿಹಾರಿಕೆ ಕ್ಷೀರಪಥಗಳು ?


ವಿಧ ವಿಧದ ವರ್ಣಗಳ ನಕ್ಷತ್ರ ಲೋಕ


ದೃಷ್ಟಿ ಹರಿದಲ್ಲೆಲ್ಲ ನೀಲ ದಿಗಂತ


ಆದಿ ಅಂತ್ಯಗಳಿಲ್ಲದನಂತ


ಎಷ್ಟು ಜ್ಯೋತಿರ್ವರ್ಷಗಳ ಕಾಲ


ಸಂಚರಿಸಿದರೂ ಮುಗಿಯದನಂತ ದಿಗಂತ


ಎಲ್ಲಿ ನೋಡಿದರಲ್ಲಿ ಬೆಳಕೇ ಬೆಳಕು !


 


ಏನಿದು ? ಭಯಂಕರ ಭೀಭತ್ಸ್ಯ


ಕತ್ತಲೆಯ ಕುಹರ


ಏನಿದರ ಸೆಳವು ಎಂತಹ ಗಮ್ಯ !


ಎಷ್ಟು ಸೂರ್ಯ್ರರನ್ನು ನಕ್ಷತ್ರ ಲೋಕಗಳನು


ನುಂಗಿ ನೊಣೆಯುತಿದೆ


ಏನಿದೆ ಕತ್ತಲೆಯ ಕುಹರದಾಳದಲಿ ?


ನುಗ್ಗುತ್ತಿದ್ದೇನೆ ಜಿಂಯೋ ಎಂದು


ಜೀಂಯ್ಗುಡುವ ಕತ್ತಲಂತರಾಳಕೆ


ಮುಗಿಯಲೊಲ್ಲದ ದಾರಿ


ತೀರಲೊಲ್ಲದ ಪಯಣ ತಿಳಿಯದು


ಕಾಣದು ಅನುಭವವಾಗದು ಕತ್ತಲಂತರಾಳ !


 


ವಿಶಾಲ ಬಯಲು ಹುಲ್ಲುಗಾವಲು


ನಿರ್ಜನ ಮರಭೂಮಿಗಳು


ಅಂಬರದೆತ್ತರ ಬೆಳೆದ ಬೃಹತ್ ಕಾನನಗಳು


ಸ್ವೇಚ್ಛೆಯಾಗಿ ಹಾರುತಿಹ ಖಗಗಳು


ವಿಹರಿಸುವ ಮೃಗಗಳು


ಜುಳು ಜುಳು ನಿನಾದ ಗೈಯುತಿರುವ


ಝರಿ ತೊರೆ ಹಳ್ಳ ನದಿಗಳು


ಹೂವಿಂದ ಹೂವಿಗೆ ಹಾರುತಿರುವ


ದುಂಬಿ ಮರಿದುಂಬಿಗಳು


ಸುಂದರ ಬೆಳಗು ಸಂಜೆಗಳು


ಬೆಳದಿಂಗಳ ರಾತ್ರಿಗಳು


ಕಾರಿರುಳಿನಲೂ ಹೊಳೆವ


ಚುಕ್ಕಿ ನಕ್ಷತ್ರಗಳ ವಿಹಂಗಮ ನೋಟ


ಇರುಳಿಗೂ ಸೌಂದರ್ಯವಿದೆ


ಎಂದು ಸಾರುವ ಲೋಕ


 


ನಭೋ ಮಂಡಲಕೆ ತಲೆ ಎತ್ತಿ ನಿಂತ


ಶ್ವೇತ ವಸನವನ್ಹೊದ್ದ


ಬೃಹತ್ ಹಿಮಗಿರಿ ಶಿಖರ ಪರ್ವತಗಳ


ಸಾಲು ಸಾಲು ಹಿಮಾಲಯ ಎವರೆಷ್ಟಗಳೂ


ಇಲ್ಲಿ ಸಣ್ಣ ಸಣ್ಣ ದಿನ್ನೆಗಳು


ಮಾನಸ ಸರೋವರವೂ ಸಣ್ಣಾತಿ ಸಣ್ಣ ತೆರೆ


 


ಕಾಣದ ಕೇಳದ ಕೊನೆಯಿಲ್ಲದ


ಬೆಳೆದು ನಿಂತ ವಿಧ ವಿಧದ


ಹಣ್ಣಿನ ತೋಟಗಳು ತೊನೆಯುವ ತೆನೆಗಳ


ಭತ್ತದ ಗದ್ದೆಗಳು ಗೋದಿಯ ಹೊಲಗಳು


ಕೋಟೆ ಕೊತ್ತಲಗಳು ಬೀಡು ಏನಾಶ್ಚರ್ಯ !


ಜನಗಳ ಸುಳಿವಿಲ್ಲ ಹಸಿವು


ಬಾಯಾರಿಕೆಗಳಿರದ ಭಾವನೆಗಳೆ


ಸುಳಿಯದ ಕೆರಳದ ಬರಿ ಸಂತೃಪ್ತ


ಭಾವಗಳನು ತರುವ ಇದೆಂತಹ ಲೋಕ?


ಎಲ್ಲಿರುವರೆಮ್ಮ ಪಿತ ಪ್ರಪಿತಾಮಹರು ?


ಮಾತೆ ಮಾತಾ ಮಹಿಗಳು


ಅವರಿರುವ ಲೋಕಗಳೆಲ್ಲಿ ?


 


ಪಂಚೇಂದ್ರಿಯಗಳ ಅನುಭವಕೆ ದಕ್ಕದ


ಅರಿಷಡ್ವರ್ಗಗಳು ಪ್ರಕಟಗೊಳ್ಳದ


ಇವೆಂತಹ ಲೋಕಗಳು? ಹಿಂಗದ ದಾಹ


ತೀರದೆ ಹಸಿವೆ ರಾಗ ದ್ವೇಷಗಳ ನರಕ


ಅದೇನೇ ಇರಲಿ ತನು ಮನಕೆ


ಹೃದಯಕೆ ಮುದ ನೀಡುವ" ಗಂಧವತಿ ಪೃಥ್ವಿ"


ಯೇ ಮೇಲು ಅವಳದೇ


ನಿಜವಾದ ಜೀವಂತ ಲೋಕ


 


ಅವಸಾನವಾದವರ ನೆನಪಿರಲಿ


ಇತಿಹಾಸವಾದವರ ಸ್ಮೃತಿಯಿರಲಿ


ಬಾಳ ಮಾರ್ಗದರ್ಶಕರಾಗಿ ಭವಿಷ್ಯಕೆ


ಅಡಿಗಲ್ಲುಗಳಾಗಿ ಇಳಿದು ಬರುತ್ತೇನೆ


ಅವಾಸ್ತವದಿಂ ವಾಸ್ತವದಿಳೆಗೆ


ಅರೆಮಬ್ಬು ಅರೆಎಚ್ಚರಾವಸ್ತೆ


ಆಷಾಡದ ಕುಳಿರ್ಗಾಳಿ ಮೈದೂರಿ


ಕೊಳ್ಳುತ್ತೇನೆ ಹೊದಿಕೆಯೊಳಗೆ ಇವೆಲ್ಲ


ಎಂಥ ಕನಸುಗಳುಯಾಕೆ ಬೀಳುತ್ತವೆ ?


ಅವಾಸ್ತವಕೆಳೆದೊಯ್ಯುತ್ತವೆ ಇವೆಲ್ಲ


ವಿಕ್ಷಿಪ್ತ ಮನೋ ಭಾವಗಳೆ?


 


ಕೂಗುವ ಕೋಳಿ ನಲಿವ ಹಕ್ಕಿಗಳು


ಕತ್ತಲೆಯ ಹೊದಿಕೆ ಸರಿಸಿ ಏರುತಲಿರುವ


' ಅರುಣೋದಯ ' ಭಾಸ್ಕರನ ಆಗಮನ


ಎಚ್ಚರವಾಗಿ ತೆರೆದು ಕೊಳ್ಳುತ್ತೇನೆ


ವಾಸ್ತವದ ಬದುಕಿಗೆ ದೈನಂದಿನ


ಚಟುವಟಿಕೆಗಳಿಗೆ ಬಾಳಿಗೆ ಗೋಳಿಗೆ


ಮತ್ತೊಂದು ದಿನದ ಹೋರಾಟಕ್ಕೆ


 


 

Comments