ಗಂಭೀರ ವಾಸ್ತವತೆಯಲ್ಲಿ ಸೃಜನಶೀಲತೆಯನ್ನು ಮೂಡಿಸಿದ `ಟಕ್ ಟಿಕ್ ಪೆನ್ನು'
ವಾಸ್ತವತೆಯನ್ನೇ ಗಂಭೀರವಾಗಿ ಬಿಂಬಿಸುವ ಸೃಜನಶೀಲ ಕಥೆಗಳ ಗುಚ್ಛ, `ಟಕ್ ಟಿಕ್ ಪೆನ್ನು' ಕಥೆಗಾರ, ವಿಮರ್ಶಕ ನರೇಂದ್ರ ಪೈ ಅವರ ಮೊದಲ ಕಥಾ ಸಂಕಲನವೆಂದರೆ ಆಶ್ಚರ್ಯವಾಗದಿರಲಾರದು. ಕಥೆಗಾರರಾಗಿ ಗಮನ ಸೆಳೆದಿರುವ ನರೇಂದ್ರ ಪೈಯವರ ಸುಮಾರು ಕಥೆಗಳು ಇಷ್ಟರವರೆಗೆ ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಕಥಾಲೋಕದಲ್ಲಿ ಯಾರನ್ನೂ ಅನುಕರಿಸದೆ ತಮ್ಮದೇ ಆದ ಶೈಲಿಯಲ್ಲಿ ಕಥೆಗಳನ್ನು ಬರೆಯುವ ಇವರ ಕಥೆಗಳ ಸನ್ನಿವೇಶಗಳು, ಪಾತ್ರ ಚಿತ್ರಣಗಳು ಓದುಗರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುವುದಲ್ಲದೆ, ಘಟನೆಗಳು, ಪಾತ್ರಗಳು ನಮ್ಮ ಮನೆಯ ಅಥವಾ ನಮ್ಮ ನೆರೆ ಕರೆಯಲ್ಲೆಲ್ಲೋ ನಡೆದಷ್ಟು ವಾಸ್ತವಕ್ಕೆ ಹತ್ತಿರವಾಗಿ ಮನಸ್ಸಿನಾಳಕ್ಕೆ ಇಳಿಯುತ್ತವೆ. ಕಥೆಗಳನ್ನು ಓದಿದ ನಂತರವೂ ಇವು ನಮ್ಮ ಮನಸ್ಸಿನಲ್ಲಿಯೇ ಗುಯ್ಂ ಗುಟ್ಟುತ್ತಿರುತ್ತವೆ.
ಒಂದು ಕೃತಿ ಓದುಗನನ್ನು ಚಿಂತನೆಗೆ ಹಚ್ಚಿ, ಸ್ವಲ್ಪ ಮಟ್ಟಿಗಾದರೂ ಅವನಲ್ಲಿ ಬದಲಾವಣೆಯನ್ನು ಉಂಟು ಮಾಡಿದರೆ ಲೇಖಕನಿಗೆ ಅದಕ್ಕಿಂತಲೂ ಹೆಚ್ಚಿನ ಪ್ರಾಶಸ್ತ್ಯ ಬೇಕಾಗಿಲ್ಲ. ಕಥಾಸಂಕಲನವನ್ನು ಓದುವಾಗ ಕೆಲವೊಮ್ಮೆ ಇದು ಕಾದಂಬರಿಯೆ? ಅನ್ನುವ ಭ್ರಮೆಯನ್ನು ಹುಟ್ಟಿಸುತ್ತದೆ. ಇಲ್ಲಿ ಪುನರಾವರ್ತನೆಯಾಗುವ ಮಾಯ, ಅನಿತಾ, ಅಮ್ಮಿ ಪಾತ್ರಗಳು ಮತ್ತು ಒಂದು ಕಥೆಯಿಂದ ಇನ್ನೊಂದು ಕಥೆಗಿರುವ ಕೊಂಡಿ ಕಾದಂಬರಿ ಓದಿದಂತೆ ಅನಿಸದಿರಲಾರದು. `ಅಗಮ್ಯ' ಕಥೆಯ ಮಾಯ `ಕಳೆದು ಹೋದವನು' ಕಥೆಯಲ್ಲಿಯೂ ಬರುತ್ತಾಳೆ. ಅದೇ ರೀತಿ `ಹುಲಿ ಮತ್ತು ದನದ ಕಥೆ'ಯ ಕಳೆದು ಹೊದ ಅಮ್ಮಿ, `ದೂರ ಸಂಬಂಧಿ'ಯ ಸಾಯಿರಾಳಾಗಿ ಸಿಗುತ್ತಾಳೆ. ಇದು ಕಥೆಗಾರನ ಜಾಣ್ಮೆಯನ್ನು ಬಿಂಬಿಸುತ್ತದೆ. ಈ ಕಥಾಸಂಕಲನದಲ್ಲಿರುವ ಕಥೆಗಳು ಒಂದಕ್ಕಿಂತ ಒಂದು ಭಿನ್ನವಾಗಿ ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಗಿವೆ. ಸಂಕಲನದ ಮೊದಲ ಕಥೆ `ದಿನದಿನಾ ಅನುದಿನ' ದಿನ ನಿತ್ಯ ಜಂಜಡಗಳ ನಡುವೆ ಸಾಗುವ ಬದುಕಿನ ಮುಖವನ್ನು ಎತ್ತಿ ತೋರಿಸುತ್ತದೆ. `ಅಗಮ್ಯ' ಕಥೆಯಲ್ಲಿ ಬರುವ ಮಾಯ ಕೊನೆಗೂ ಮದುವೆಗೆ ಒಪ್ಪುಗೆ ನೀಡುತ್ತಾಳಾದರೂ, ಆ ಮದುವೆ ಮುರಿದು ಬಿದ್ದಾಗ ತನ್ನ ಮನಸ್ಸನ್ನು ಬಿಚ್ಚಿಟ್ಟವನಿಗೂ ಹೃದಯವನ್ನು ನೀಡಲಾರದೆ ಪ್ರೀತಿ ಅಗಮ್ಯವಾಗಿಯೇ ಉಳಿಯುವಂತಾಗುತ್ತದೆ. `ಕಳೆದು ಹೋದವನು' ಒಂದು ಹೊಸತನದ ಕಥೆ ಅಂದರೆ ಅತಿಶಯೋಕ್ತಿಯಾಗಲಾರದು.
ಒಬ್ಬ ಬುದ್ಧಿಮಾಂದ್ಯ ಮಗುವಿನ ಮುಗ್ಧತೆ, ಮಾಯಾಳ ಪಾತ್ರ, ಎಂತಹ ಗಟ್ಟಿ ಮನಸ್ಸಿನವರನ್ನು ಒಮ್ಮೆಗೆ ಹೃದಯ ಕಲಕುವಂತೆ ಮಾಡುತ್ತದೆ. ಮನಸ್ಸಿಗೆ ಶಾಂತಿಯನ್ನು ಹುಡುಕಿಕೊಂಡು ದೇವಾಸ್ಥಾನಕ್ಕೆ ಬರುವ ನಾಯಕ, ರೈಲಿನಲ್ಲಿ ನಾಯಕನಿಗೆ ಸಮಾಧಾನವನ್ನು ನೀಡುವ `ನನ್', ಬಾಬುವಿನಂತಹ ನೂರಾರು ಮಕ್ಕಳಿಗೆ ಬೋಧಿಸುವ ಸ್ವಾಮೀಜಿ ಇವರುಗಳ ನಡುವೆ ಬಾಬುವನ್ನು ನೆನಪಿಸಿಕೊಳ್ಳುತ್ತಲೇ ಇರುತ್ತದೆ. ಮದುವೆಯಾಗಿ ಮಗುವಿನ ಜೊತೆಗೆ ಗಂಡನನ್ನು ಬಿಟ್ಟು ಬರುವ ಅನಿತಾ, ಗಂಡ ಪದ್ಮನಾಭ ಸತ್ತ ಅನಂತರ ಅವನ ಒಂದು ಪೈಸೆ ಕೂಡಾ ಅವಳಿಗೆ ಸಿಗದಾಗುತ್ತದೆ. ಇಲ್ಲಿ ಲೌಕಿಕ ಮತ್ತು ಭಾವನಾತ್ಮಕ ವ್ಯಕ್ತಿತ್ವಗಳ `ಮುಖಾಮುಖಿ'ಯ ಜೊತೆಗೆ ಮದುವೆ, ಸಂಬಂಧಗಳೆನ್ನುವ ಸೂಕ್ಷ್ಮ ವಿಚಾರಗಳನ್ನು ಬಿಚ್ಚಿಡುವ ಕಥನಕ `ಮುಖಾಮುಖಿ'. `ಚಿಟ್ಟೆ' ಕಥೆಯಲ್ಲಿ ಇನ್ನೊಬ್ಬಳನ್ನು ಇಟ್ಟುಕೊಂಡಿರುವ ತಂದೆ, ತಾಯಿಯ ಅಸಹಾಯಕತೆಯನ್ನು ಸೂಕ್ಷ್ಮವಾಗಿ ಗಮನಿಸುವ ಮಗ, ಮುಂದೊಮ್ಮೆ ತನ್ನ ತಂಗಿಯೇ ಅಂತಹ ಪರಿಸ್ಥಿತಿಯನ್ನು ನಿರ್ಮಿಸುವಾಗ ನಿರ್ದಯಿಯಾಗುತ್ತಾನೆ. ಮಗುವಿನ ಮನಸ್ಥಿತಿಯನ್ನು ಅರಿತಿರುವ ನಾಯಕ ತಾನು ಅನುಭವಿಸಿದ ನೋವು ಮಗು ಅಮ್ಮಿಗೆ ಆಗಬಾರದೆಂದು ಅವಳಿಗೆ ತೋರಿಸುವ ಪ್ರೀತಿ ಓದುಗನನ್ನು ಮನಸ್ಸಿನಾಳಕ್ಕೆ ಇಳಿಸಿಕೊಳ್ಳುತ್ತದೆ. ಸಂಕಲನದ ಇನ್ನೊಂದು ಉತ್ತಮ ಕಥೆ `ಪುರುಷಾರ್ಥ'. ಮಾನವ ಜೀವನದ ಮುಖ್ಯ ಸಾಧ್ಯತೆಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳೆನ್ನುವ ಪುರುಷಾರ್ಥಗಳನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ರಜನಿ, ಜಲೀಲರ ನಡುವಿನ ಸಂಬಂಧ ಕೋಮು ಗಲಭೆಗೆ ನಾಂದಿಯಾಗಿ, ನಾಯಕನಿಗೆ ಜಲೀಲನ ತಂದೆ ಅವನನ್ನು ಮನೆಗೆ ವಾಪಾಸು ಹೋಗುವಂತೆ ಹೇಳುತ್ತಾರೆ. ಆಗ ಅವರ ಪ್ರೀತಿಯಿಂದ ಅವಮಾನಿತನಾಗಿ ಮನೆಗೆ ಬರುತ್ತಾನೆ. ಕೋಮು ಸೌಹಾರ್ದತೆಯನ್ನು ಪರೋಕ್ಷವಾಗಿ ಬಿಚ್ಚಿಡುವ ಕಥೆ ಮೆಲುಕು ಹಾಕುವಂತಿದೆ. `ಟಕ್ ಟಿಕ್ ಪೆನ್ನು' ಶೀರ್ಷಿಕೆಯ ಕಥೆ ಬಾಲ್ಯದಲ್ಲಿ ತನ್ನ ಒಡನಾಡಿಯಾಗಿದ್ದ ಸುಜಾತ ಅನಾಥವಾಗಿ ಬಿದ್ದಿದ್ದ ಟಕ್ ಟಿಕ್ ಪೆನ್ನನ್ನು ಕದಿಯುತ್ತಾಳೆ. ಅಲ್ಲಿಯವರೆಗೆ ಅದರ ನೆನೆಪಿರದ ಹುಡುಗ ಅದನ್ನು ಶಾಲೆಯಲ್ಲಿ ಅವಳ ಕೈಯಲ್ಲಿ ಕಂಡಾಗ ಕಿತ್ತುಕೊಳ್ಳುತ್ತಾನೆ. ಅವಳ ಅಸಹಾಯಕ ನೋಟವೇ ಮುಂದೆ ಆ ಹುಡುಗ ವಯಸ್ಸಿಗೆ ಬಂದಾಗ ಕಾಣದೆ ಹೋದ ಸತ್ಯಗಳು ಕಾಣಿಸಿಕೊಂಡು ಗಾಬರಿ ಹುಟ್ಟಿಸುತ್ತದೆ. ಅಂತೆ ಕಂತೆಗಳ ನಡುವೆ ಸುಜಾತಳನ್ನು ಅಪಾರ್ಥ ಮಾಡಿಕೊಳ್ಳುವ ಜನ, ಅವಳ ಸಾವಿನ ಅನಂತರ ಬೇರಯೇ ಆಡಿಕೊಳ್ಳುತ್ತಾರೆ. ಅವಳ ಸಾವಿನ ಪಶ್ಚತ್ತಾಪ ಒಮ್ಮೆ ತುಟಿಯ ಮೇಲೆ `ತ್ಚು' ಸದ್ದು ಹೊರಡಿಸದಿರಲಾರದು. `ಹುಲಿ ದನದ ಕಥೆ' ಊರಿಗೆ ಹುಲಿಯೊಂದು ಬಂದಿದೆಯೆನ್ನುವ ವದಂತಿಯೊಂದಿಗೆ ಕುತೂಹಲ ಕೆರಳಿಸುವ ಕಥೆ. ಅದು ಮಾಡುವ ರಾದ್ಧಾಂತವನ್ನು ಬೆದರು ಕಣ್ಣುಗಳಿಂದ ನೋಡುವಂತೆ ಮಾಡುತ್ತದೆ.
ಗಾದೆ ಮಾತಿನಂತೆ `ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು' ಅನ್ನುತ್ತೇವೆ. ಆದರೆ ಈ ಕಥೆಯಲ್ಲಿ ಮಗಳನ್ನು ಕಳೆದುಕೊಳ್ಳುವ, ಉತ್ತರ-ದಕ್ಷಿಣದಂತಿರುವ ದಂಪತಿಗಳು ಕೊನೆಗೂ ಅವಳನ್ನು ಹುಡುಕುವಲ್ಲಿ ವಿಫಲರಾಗುತ್ತಾರೆ. ಸಂಕಲನದ ಕೊನೆಯ ಕಥೆ, ನರೇಂದ್ರ ಪೈ ಅವರ ಇತರ ಕಥೆಗಳಿಗಿಂತ ತುಸು ಭಿನ್ನವಾದ ಕಥೆ. ಬೇಕಲ ಕೋಟೆಯ ಜಾರುವ ಬಂಡೆಗಳು, ಅವುಗಳ ಮೇಲೆ ಅಲೆಗಳ ಹೊಡೆತ, ಮರಳ ರಾಶಿಯ ಮೇಲೆ ಅಲೆಗಳ ನೀರಿನಗೆ ಹೆದರುವ ವಿಚಿತ್ರ ಮನುಷ್ಯ, ಇಂತಹ ಸುಂದರ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ನಾಪತ್ತೆಯಾದ ತನ್ನ ಭಾವನೇ ಆ ವಿಚಿತ್ರ ವ್ಯಕ್ತಿಯೋ ಏನೋ ಎಂದು ತಿಳಿಯುವ ಮಧುಕರ, ಭಾವ ತಮ್ಮ ಸಂಸಾರಕ್ಕಾಗಿ ಮಾಡಿದ ಉಪಕಾರ, ವ್ಯವಸ್ಥೆಗಳನ್ನು ನೆನೆಪು ಮಾಡಿಕೊಳ್ಳುತ್ತಾನೆ. ಕುಪ್ಪುಸ್ವಾಮಿಯ ಮನೆಗೆ ಹೋದಾಗ ಅಲ್ಲಿ ಅವನ ಸಾಕುಮಗಳು ಸಾಯಿರಾನಲ್ಲಿ ಕಳೆದು ಹೋದ ತನ್ನ ಮಗಳನ್ನು ಕಾಣುತ್ತಾನೆ. ಕಥಾಸಂಕಲನದ ಮನಸ್ಸಿನಲ್ಲಿ ಉಳಿಯುವ ಒಂಬತ್ತು ಕಥೆಗಳು ರಾಘವೇಂದ್ರ ಪ್ರಕಾಶನ, ಅಂಕೋಲಾದ ಮೂಲಕ ಪ್ರಕಟಗೊಂಡಿದ್ದು, `ಅಪಾರ' ಅವರ ಮುಖಚಿತ್ರ, ಪುಸ್ತಕಕ್ಕೆ ಇನ್ನಷ್ಟು ಮೆರುಗನ್ನು ನೀಡಿದೆ. ಒಟ್ಟಿನಲ್ಲಿ ನರೇಂದ್ರ ಪೈ ಅವರ ಲೇಖನಿಯಿಂದ ಹೊರ ಬಂದ ಈ ಸೃಜನಶೀಲ ಕಥೆಗಳು ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ.