ಗಜಲ್ ಗುಲ್ಮೋಹರ್
ಗಜಲ್ ಗಳನ್ನು ಆಸ್ವಾದಿಸಬಲ್ಲ ಗಜಲ್ ಪ್ರೇಮಿಗಳಿಗಾಗಿ ಮಲ್ಲಿನಾಥ ಶಿ ತಳವಾರ ಇವರು ‘ಗಜಲ್ ಗುಲ್‍ಮೊಹರ್’ ಎಂಬ ಬಹಳ ಸೊಗಸಾದ ಕೃತಿಯನ್ನು ಹೊರತಂದಿದ್ದಾರೆ. ಆಕರ್ಷಕ ಮುಖಪುಟದ ಸುಮಾರು ೨೬೦ ಪುಟಗಳ ಈ ಪುಸ್ತಕವು ಗಜಲ್ ಪ್ರೇಮಿಗಳಿಗೆ ಖಂಡಿತಾ ಇಷ್ಟವಾಗುವ ಕೃತಿ. ಪುಸ್ತಕದ ಮುನ್ನುಡಿಯಲ್ಲಿ ಕಂಡ ಕೆಲ ಸಾಲುಗಳು ಹೀಗಿವೆ...
ಯಾವ ಪ್ರೇಮಿಯೂ ತನ್ನ ಎದೆಗಾದ ಗಾಯವು ಬೇಗ ಗುಣವಾಗಲಿ ಎಂದು ಬಯಸಲಾರ - ಆ ಮಧುರ ಯಾತನೆಯೇ ಗಜಲ್.
ಗಜಲ್, ನೋವಿನ ಜನ್ದಾಜ್ ಹೊತ್ತು ನಡೆಯುತ್ತಿರುವ ಹೃದಯವಂತ.
ಗಜಲ್, ಹೆಣ್ಣು: ಆಕೆಯ ಬಳುಕು-ಬಾಗು, ಉರ್ದು ಹೊರತುಪಡಿಸಿ ಬೇರೆ ಯಾವ ಭಾಷೆಗೂ ದಕ್ಕಿಲ್ಲ
ಗಜಲ್, ಉರ್ದು, ಅರಬ್‍ನ ಕೋಹಿನೂರು. ಬೆಳಕಿನ ಮಲೆ.
ಗಜಲ್, ಇಡೀ ಜಾಗತಿಕ ವಲಯವನ್ನೇ ಪರವಶಗೊಳಿಸುವ ಅರಬ್ ಕನ್ಯೆ, ಫರ್ಷಿಯನ್ ಚಾಂದಿನಿ.
ಗಜಲ್, ಕಾವ್ಯಪ್ರಕಾರವಲ್ಲ; ಅದು ಧ್ಯಾನಸ್ಥಿತಿ.
ಅಹಂನಿಂದ ಶ್ರೇಷ್ಠ ಗಜಲ್ ರೂಪುಗೊಳ್ಳದು.
ಗಜಲ್, ಶಬ್ದಾರ್ಥಗಳನ್ನು ಮೀರಿದ ನಿಶ್ಯಬ್ಧ ಮೌನ.
‘ಗಜಲ್ ಗುಲ್ ಮೋಹರ್’-ಈ ಕೃತಿಯುದ್ದಕ್ಕೂ ಇಂತಹ ಸಾಲುಗಳೇ! ಚಿಂತನೆ-ಕಲ್ಪನೆಗಳಿಗೆ ಮೆಟ್ಟಿಲುಗಳಾಗಿ ಆಕಾಶ ಏರಿ, ಪಾತಾಳಕ್ಕಿಳಿದು, ರೆಕ್ಕೆಗಳಾಗಿ ಭಾವದ ನಿಗೂಢ ದಿಗಂತಗಳನ್ನು ಮುಟ್ಟಿ ತಟ್ಟಿ, ಸ್ವರಗಳಾಗಿ ಹೃದಯ ತಂತಿಯ ಮೀಟಿ, ಸಾರ್ಥಕ ಭಾವದ ಬದುಕಿನಂತೆ, ಮನದ ತುಂಬಾ ಮಲ್ಲಿಗೆ, ಗುಲಾಬಿ, ಸಂಪಿಗೆ ಪರಿಮಳದ ಸಿಂಚನ ಮಾಡುತ್ತವೆ. ತಂಗಾಳಿಗೆ ನವಿರಾಗಿ ಬಳುಕಾಡುವ ಬಳ್ಳಿಯಂತೆ; ಅದು ಮಾತಿಗೆ ಸಿಗದ ಪುಳಕ; ಈ ಕೃತಿಯಲ್ಲಿ ಹೆಪ್ಪುಗಟ್ಟಿದೆ. ಚಿಂತನೆ ಚೆಲ್ಲುವರಿದಿದೆ. `ಅಂಕಣ' ಅಂಗಳದಲ್ಲಿ ಸಾಹಿತ್ಯ ಸಮೃದ್ಧವಾಗಿದೆ.
ಅರಬ್ ನೆಲದಲ್ಲಿ ಬಿತ್ತಿದ ಬೀಜ ಬೇರಿಳಿಸಿಕೊಂಡು, ನೆಲದಗುಂಟ ನಡೆದು ಭಾರತದ ಗಡಿ ದಾಟಿ, ದೆಹಲಿ, ಉತ್ತರಪ್ರದೇಶ ಮೂಲಕ ಕರ್ನಾಟಕದ ನೆತ್ತಿಯೊಳಗಿಳಿದು, ಹೈದರಾಬಾದ್ ಕರ್ನಾಟಕ ಹೃದಯಭಾಗದಲ್ಲಿ ಹೂ ಬಿಡಲು ಆರಂಭಿಸಿದ ಈ ಗಜಲ್ ಕನ್ಯೆಗೆ ಈಗ ಅರ್ಧ ಶತಮಾನದ ಹರೆಯವಷ್ಟೇ. ಎಷ್ಟೇ ವಯಸ್ಸಾದರೂ ಮೈ-ಮನದಿಂದ ಆಕೆ ಚಿರಯೌವ್ವನೆ; ಆಕೆಯ ಮೋಹಕ ನಡಿಗೆಯ ವೇಗಕ್ಕೆ, ವಯಸ್ಸಾಗುವ ನಾವೆಲ್ಲ; ಬಸ್‍ನ ವೇಗಕ್ಕೆ ಹಿಂದೆ ಹಿಂದೆ ಸರಿಯುವ ಗಿಡ-ಮರ-ವಿದ್ಯುತ್ ಕಂಬಗಳಂತೆ. ಈ ಕೃತಿಯ ಓದು, ಮೈ-ಮನಕ್ಕಾವರಿಸಿಕೊಳ್ಳುವ ನಶೆ; ಅಮಲು. ಅಧ್ಯಾತ್ಮಿಕ ಪ್ರವೇಶಕ್ಕೂ ದೊರೆಯುವ ಫೆಲೋಶಿಪ್; ಗಜಲ್ ಸ್ಪರ್ಶವೇ ಅಂತಹದ್ದು. ಪ್ರೇಮವೇ ಅದರ ಉಸಿರು. ಅದಿರದ ಸ್ಥಿತಿಯನ್ನು ಬದುಕೆನ್ನಲಾದೀತೆ?
`ಸಾಕಿ', ನನ್ನ ಅಂಗಸೌಷ್ಠವ, ಸಾಹಸದ ಉತ್ಸಾಹ ನೋಡಿ ಮೆಚ್ಚಿಕೊಳ್ಳಲಿ ಎಂದು ತಲೆ ಕೆಳಗೆ ಮಾಡಿ ನೀರಿಗೆ ಡೈ ಹೊಡೆಯುವ ವಯೋಸಹಜ ಹರೆಯದ ಹುಡುಗನಂತೆ ಮುನ್ನುಡಿ ಬರೆಯಲು ಒಪ್ಪಿಕೊಂಡೆ. ಹೊಟ್ಟೆಗೆ ಪೆಟ್ಟು ಬಿದ್ದು ಇನ್ನು ಮುಂದೆ ಡೈ ಹೊಡೆಯುವ ಸಾಹಸವೇ ಬೇಡ ಎಂಬಷ್ಟು ನೋವು; ಗಜಲ್ ಏನು ಅಂತ ಗೊತ್ತಿರದ ನನಗೆ; ಎರಡೂ ಏಕಕಾಲಕ್ಕೆ ಅನುಭವಿಸಿದ ನೋವು.
ಅಂದಹಾಗೆ, ಗಜಲ್ ಹುಟ್ಟು, ಸ್ವರೂಪ-ಸ್ವಭಾವ, ಜಾಗತಿಕವಾಗಿ ಚಾಚಿದ ಅದರ ನೆರಳು, ಆಯಾ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕತೆಯ ವಿಷಯ ವಿಭಿನ್ನತೆಯೊಂದಿಗೆ ರೂಪು ಪಡೆದ ಬಗೆ.. ಹೀಗೆ ತುಂಬಾ ವಿದ್ವತ್‍ಪೂರ್ಣವಾಗಿ ಕೃತಿಗಳನ್ನು ಪ್ರಕಟಿಸಿರುವ ಡಾ. ಮಲ್ಲಿನಾಥ್, ಈಗ ತನ್ನ ಸುತ್ತಮುತ್ತ ಇರುವ ಕವಿಗಳನ್ನು, ಅವರ ಗಜಲ್‍ಗಳ ಮೂಲಕ ಪರಿಚಯಿಸಲು ಹೊರಟಿದ್ದು ಸಹಜವೇ; ಒಂದು ದೀಪ ಮತ್ತೊಂದನ್ನು ಬೆಳಗುವಂತೆ. ಗಾಢ ರಾತ್ರಿಯೋ, ಹಿತವಾದ ಬೆಳದಿಂಗಳೋ- ಈ ಎರಡೂ ಪರಿಸರದ ಅಂದ-ಚೆಂದವಂತೂ ಹೆಚ್ಚಿಸಿ, ಓದುಗನ ಮನ ಸಂಭ್ರಮಿಸುವಂತೆ `ಗಜಲ್ ಗುಲ್‍ಮೊಹರ್' ಕೃತಿ ಮೂಡಿಬಂದಿದೆ. ಕೃಷಿಯ ವೈಶಿಷ್ಟ್ಯವನ್ನು ಹೀಗೆ ಗುರುತಿಸಬಹುದು;
೧. ಕರ್ನಾಟಕದಲ್ಲಿ ಮಾತ್ರ ೫೦-೬೦ ವರ್ಷಗಳ ಇತಿಹಾಸವಿರುವ ಗಜಲ್, ಉರ್ದು ಭಾಷೆಯ ಜೀವಂತಿಕೆಯನ್ನು ಹೆಚ್ಚಿಸಿದೆ ಹಾಗೂ ಆ ಭಾಷೆಯು ತನ್ನ ಒಡಲಲ್ಲಿ ಇಂತಹ ಸರ್ವಾಂಗಸುಂದರ ಭಾವದ ಗಜಲ್‍ನ್ನು ಗರ್ಭಧರಿಸಿಯೇ ಮೈದಳೆದುಕೊಂಡಿದೆ-ಈ ಎರಡೂ ಪರಿಕಲ್ಪನೆಗಳು, ಗಜಲ್ ಸಾಹಿತ್ಯದ ಹಿರಿಮೆ-ಹೆಗ್ಗಳಿಕೆ ಮಾತ್ರವಲ್ಲ; ಅದರ ಚಿರಂತನ ಸೌಂದರ್ಯವೂ ಹೌದು. `ಶೆಲೆಯಲ್ಲಿ ಸೆಲೆಯಾಗಿ' ಎಂದು ಅಂಬಿಕಾತನಯದತ್ತ ಹೇಳುವಂತೆ ವಿಶ್ವವ್ಯಾಪಿಯಾದ ಗಜಲ್, ಭಾರತ ಅದರಲ್ಲೂ ಕರ್ನಾಟಕದ ಹೈದ್ರಾಬಾದ್-ಕರ್ನಾಟಕದಲ್ಲಿ ಸೆಲೆಯಾಗಿ ಚಿಮ್ಮಿದ್ದು ಮಾತ್ರ, ಆ ಪ್ರದೇಶದ ಹತ್ತು ಹಲವು ಪ್ರಥಮಗಳ ಪೈಕಿ ಗಜಲ್ ಸಹ ಒಂದು. ಕೇವಲ ೫೦ ವರ್ಷದ ಹಿಂದೆ ಸಣ್ಣ ಸೆಲೆಯಾಗಿದ್ದ ಈ ಗಜಲ್, ನದಿಯಂತೆ ವಿಸ್ತಾರ, ಆಳವನ್ನು ಪಡೆದು, ಈಗ ರಭಸದಿಂದ ಹರಿಯುತ್ತಿದೆ. ಈ ಹಂತದಲ್ಲಿ, ಡಾ. ಮಲ್ಲಿನಾಥ್ ಅವರ ಈ ಕೃತಿಯು, ಅವರ ವಿಚಾರದ ಸೆಲೆಯಲ್ಲಿ ಚಿಮ್ಮಿ, ರಾಜ್ಯದಲ್ಲಿ ಅಲ್ಲಲ್ಲಿ ಕಾಣಸಿಗುವ ಒಬ್ಬೊಬ್ಬ ಗಜಲ್‍ಕಾರನ ಪರಿಚಯದೊಂದಿಗೆ ಅವರ ಗಜಲ್‍ಗಳನ್ನು ವಿಶ್ಲೇಷಿಸುತ್ತಾ, ಅದು `ಸಂಗಾತಿ' ಎಂಬ ವೆಬ್ ಸೈಟ್ ನಲ್ಲಿ ಸರಣಿ ಅಂಕಣವಾಗಿ ಹರಿಯುತ್ತಾ, ಈಗ ಕೃತಿಯ ರೂಪದಲ್ಲಿ ಓದುಗರ ಅಪಾರ ಜ್ಞಾನಸಾಗರವನ್ನು ಸೇರುತ್ತಿದೆ.
೨. ಕರ್ನಾಟಕ ನೆಲಕ್ಕೆ ಹೊಸದಾಗಿರುವ ಗಜಲ್, ಅದರ ಸಾಹಿತ್ಯದ ರಭಸ ಹಾಗೂ ಮೌಲ್ಯವನ್ನು ಪರಿಶೀಲಿಸಿದ್ದು ಮಾತ್ರವಲ್ಲ; ಕನ್ನಡ ಸಾಹಿತ್ಯದಲ್ಲಿ ಗಜಲ್ ಅಲೆಗಳ ಅಬ್ಬರ-ನಿನಾದ ಎರಡನ್ನೂ ಸಾಹಿತ್ಯಾಸಕ್ತರು ಅನುಭವಿಸುವಂತೆ ಗಜಲ್ ಕವಿಗಳ ಹಾಗೂ ಅವರ ಗಜಲ್‍ಗಳನ್ನು ಈ ಅಂಕಣ ಬರಹಗಳು ವಿಶ್ಲೇಷಿಸುತ್ತವೆ. ಗಜಲ್ ಕವಿಗಳ ಸಂಖ್ಯೆ ಇನ್ನೂ ಹೆಚ್ಚಿದ್ದು, ಸದ್ಯ, ೪೬ ಕವಿಗಳನ್ನು ಹಾಗೂ ಅವರ ಗಜಲ್‍ಗಳನ್ನು ಪರಿಚಯಿಸಿದ್ದು, ಕನ್ನಡ ಸಾಹಿತ್ಯ ಸಂಪಾದನೆ ಹಾಗೂ ಸಮೃದ್ಧಗೊಳಿಸುವ ಮಹತ್ವದ ಕಾರ್ಯದಲ್ಲಿ ಗಜಲ್ ಕುರಿತ `ಗಜಲ್ ಗುಲ್‍ಮೊಹರ್' ಕೃತಿ, ಮೊದಲ ಹೆಜ್ಜೆ ಹಾಗೂ ಮುಂದೆ ನಡೆಯುವ ಸಂಶೋಧನೆಗಳಿಗೆ ಉತ್ತಮ ಆಕರವೂ ಆಗಲಿದೆ.
೩. ಗಜಲ್ ಹಾಗೂ ಗಜಲ್‍ಕಾರರನ್ನು ಸರಣಿ ಅಂಕಣದ ಮೂಲಕ ದಾಖಲಿಸುವ ಕಳಕಳಿಯ ಪ್ರಯತ್ನವಿದು. ಗಜಲ್‍ಗಳ ಮೂಲಕ ಕವಿಯನ್ನು ಪರಿಚಯಿಸುವ ಏಕೈಕ ಉದ್ದೇಶವಿರುವುದರಿಂದ, ಇಲ್ಲಿಯ ಸರಣಿ ಅಂಕಣ ಬರಹಗಳಲ್ಲಿ ಐಕತಾನದ ಶೈಲಿ ಇರುವುದು ಸಹಜ. ಪ್ರತಿ ಕವಿಯ ಗಜಲ್‍ಗಳ ವೈಶಿಷ್ಟಗಳ ಹಿನ್ನೆಲೆಯಲ್ಲಿ ಒಂದಿಷ್ಟು ಪ್ರಸ್ತಾವನೆ, ಕವಿಯ ಪರಿಚಯ, ಗಜಲ್‍ಗಳ ವಿಶ್ಲೇಷಣೆ-ಇದಿಷ್ಟು ಪ್ರತಿ ಬರಹದ ರಚನಾ ಚೌಕಟ್ಟು.
೪. ಇದಿಷ್ಟೇ ಆಗಿದ್ದರೆ, ಈ ಕೃತಿಯು, ಕನ್ನಡ ಸಾಹಿತ್ಯ ಮಾರ್ಗದಲ್ಲಿ ತನ್ನ ವಿಭಿನ್ನತೆ, ವಿಶೇಷತೆಯನ್ನು ಕಾಯ್ದುಕೊಳ್ಳುತ್ತಿರಲಿಲ್ಲ. ರಾಸಾಯನಿಕ ಕ್ರಿಯೆಯ ವೇಗ ಹಾಗೂ ಪರಿಣಾಮಕತೆಯನ್ನು ಹೆಚ್ಚಿಸಲು ಸಹಾಯಕವಾಗುವ ವೇಗವರ್ಧಕದಂತೆ (ಕ್ಯಾಟಲಿಸ್ಟ್), ಗಜಲ್ ಸಾಮ್ರಾಟರೆಂದೇ ಖ್ಯಾತಿಯ ಗಾಲಿಬ್, ಉಮರ್ ಖಯ್ಯಾಮ, ಸಾಹಿರ್ ಲೂದ್ವಾನಿ, ಸೈಯ್ಯದ್ ಮಹಮ್ಮದ್ ಹುಸೇನಿ ಗೇಸುದರಾಜ್, ಜಲಾಲುದ್ದೀನ್ ರೂಮಿ, ಫೈಜ್ ಅಹ್ಮದ್ ಪೈಜ್..ಮುಂತಾದವರ ಗಜಲ್‍ಗಳ ಕೆಲವು ಸಾಲುಗಳು, ಬರಹದ ಆರಂಭ ಹಾಗೂ ಅಂತ್ಯವಾಗಿರುವುದು. ಈಗಿನ ಕವಿಯ ಗಜಲ್‍ಗಳ ವಿಶ್ಲೇಷಣೆ ಮಧ್ಯೆ, ಅಗತ್ಯಕ್ಕೆ ತಕ್ಕಂತೆ ಇಂತಹ ಗಜಲ್ ಸಾಮ್ರಾಟರ ಗಜಲ್ ಸಾಲುಗಳನ್ನು ಉಲ್ಲೇಖಿಸಿದ್ದು, ಅಂಕಣದ ಬರಹಮೌಲ್ಯ, ಓದಿನ ಆಕರ್ಷಣೆ, ಅಂಕಣಕಾರರ ಆಳ ಅಧ್ಯಯನದ ಸೂಚಕಗಳಾಗಿ ಗಮನ ಸೆಳೆಯುತ್ತದೆ. ಒಂದು ಅಂಕಣವನ್ನು ಹೇಗೆ ಸತ್ವಯುತವಾಗಿ, ಸಾಹಿತ್ಯಕ ಸಮೃದ್ಧವಾಗಿ, ರಚನಾ ಕೌಶಲದೊಂದಿಗೆ ಬರೆಯಬಹುದು ಎಂಬುದಕ್ಕೆ ಇಲ್ಲಿಯ ಪ್ರತಿ ಬರಹವು ಕನ್ನಡಿ ಹಿಡಿಯುತ್ತದೆ.
೫. ಎಲ್ಲಕ್ಕಿಂತ ಪ್ರಮುಖ ಅಂಶವೆಂದರೆ, ಮೊದಲ ಹಂತವಾಗಿ, ಲೇಖಕರು ಪರಿಚಯಿಸಿದ ಎಲ್ಲ ೪೬ ಕವಿಗಳ ಗಜಲ್‍ಗಳು, ಹೆಚ್ಚು-ಕಡಿಮೆ ಒಂದೇ ವಿಷಯ ವಸ್ತುವನ್ನು ಒಳಗೊಂಡ ಸಾಲುಗಳನ್ನು, ಗಜಲ್ ಸಾಮ್ರಾಟರ ಗಜಲ್‍ಗಳೊಂದಿಗೆ ಹೋಲಿಸಿ ನೋಡಲು, ಯಾವ ಮತ್ತು ಯಾರ ಸಾಲುಗಳಲ್ಲಿ ಹೆಚ್ಚು ತೀವ್ರತೆ, ತೀಕ್ಷ್ಣತೆ ಇದೆ ಎಂಬುದರ ತೌಲನಿಕ ಅಧ್ಯಯನಕ್ಕೆ ಸಹಕಾರಿಯಾಗುವ ಬರಹ ಶೈಲಿ. ಗಜಲ್ ಸಾಮ್ರಾಟರ ಪ್ರಸಿದ್ಧ ಗಜಲ್‍ಗಳು, ಸದ್ಯದ ಕವಿಗಳ ಗಜಲ್‍ಗಳು ಹೀಗೆ ಎರಡೂ ಏಕಕಾಲಕ್ಕೆ ಅಧ್ಯಯನ ವಸ್ತುಗಳಾಗಿ, ಆಯಾ ಕವಿಗಳ ಒಟ್ಟು ವ್ಯಕ್ತಿತ್ವ, ಅಭಿವ್ಯಕ್ತಿಯ ರೀತಿ, ಆಶಯಗಳು ಎಲ್ಲವೂ ಸಾಮಿಪ್ಯ ಹಾಗೂ ವಿರೋಧಾಭಾಸಗಳ ಜುಗಲ್ ಬಂಧಿಯು, ಓದನ್ನು ಸಂಭ್ರಮಿಸುವಂತೆ ಮಾಡುವುದು.
೬. ಇದಕ್ಕಿಂತಲೂ ವಿಶೇಷವೆಂದರೆ, ಗಜಲ್‍ಗಳ ಕುರಿತ ಅಂಕಣಕಾರರ ಒಳನೋಟ. ಗಜಲ್ ಎಂದರೆ, ಇದು ಗಜಲ್, ಹೀಗಿರಬೇಕು ಗಜಲ್ ಎಂದು ತಮ್ಮದೇ ರೀತಿಯಲ್ಲಿ ನೀಡಿರುವ ಉಪಮಾ ಸೌಂದರ್ಯಭರಿತ ವ್ಯಾಖ್ಯಾನಗಳು (ಗಜಲ್ ಎಂದರೆ ಕಾವ್ಯದ ಸೂಕ್ಷ್ಮರೂಪ, ಮದುತ್ವ, ಪಾರಿಜಾತಕ್ಕಿಂತಲೂ ನಾಜೂಕು, ಸಂಪಿಗೆಗಿಂತಲೂ ಸುಗಂಧ ಇತ್ಯಾದಿ), ಗಜಲ್ ಗುಣ ಸ್ವಭಾವ, ಆಶಯವಾಗಿ (ಭಾವನೆಗಳು ರೂಪು ಪಡೆಯುವುದೇ ಭಾಷೆಯ ರಂಗೋಲಿಯಿಂದ; ಉರ್ದು ಭಾಷೆಯಲ್ಲಿ ಹೃದಯವನ್ನು ಮುದುಗೊಳಿಸುವ ರಂಗು ಇದೆ ಇತ್ಯಾದಿ), ಗಜಲ್ ಸಾಮ್ರಾಟರ ಸಾಲುಗಳ ಉಲ್ಲೇಖಗಳು (ಗಜಲ್, ಹೂವಿನಂತೆ ಬಂಡೆಯೂ ಆಗಲಿದೆ, ಸಮಯದ ಧ್ವನಿ ಇದಾಗಿದೆ; ಗಜಲ್ ಖಡ್ಗವೂ ಆಗಲಿದೆ-ಕಬುಲ್ ಕಿಶೋರ್ ಇತ್ಯಾದಿ), ಅಂಕಣ ಬರಹದ ಮೌಲ್ಯ, ಆಕರ್ಷಣೆ ಹೆಚ್ಚಿ, ಮನಸ್ಸನ್ನು ಮುದಗೊಳಿಸಿ, ಓದುಗ ತನ್ನಲ್ಲಾಗುತ್ತಿರುವ ಪರಿವರ್ತನೆಯ ಅನುಭವವು ಆತನಿಗೆ ಖುಷಿ ನೀಡುತ್ತದೆ. ಬರಹದ ಭಾಷೆ ಸರಳವಾಗಿದೆ, ಆದರೆ, ಉಪಮೆಗಳಿಂದ ಸಮೃದ್ಧವಾಗಿದೆ. ಕಲ್ಪನಾ ಸೌಂದರ್ಯವು ನಳನಳಿಸಿದೆ. ಉತ್ತಮ ಸಾಹಿತ್ಯದ ಪರಿಣಾಮ ಎಂದರೆ; ಇದೇ ಅಲ್ಲವೆ?
೭. ಗಜಲ್ ಸಾಮ್ರಾಟರ ಸಾಲುಗಳಲ್ಲಿ ಬರೀ ಪ್ರೀತಿ, ಪ್ರೇಮ, ವಿರಹ, ನೋವು ಇದೆ ಎನಿಸಿ, ಗಜಲ್ ಎಂದರೆ, ಬರೀ ಪ್ರೇಮ-ವಿರಹದ ಸಾಲುಗಳು ಎಂಬ ಅಭಿಪ್ರಾಯವಿರುವುದು ಸಹಜ. ಇಲ್ಲಿ ಪರಿಚಯಿಸಿದ ಎಲ್ಲ ೪೬ ಕವಿಗಳ ಗಜಲ್‍ಗಳು, ಅಧುನಿಕತೆಯ ಉದಾಃ ಡಿಜಿಟಲ್, ವಸ್ತು ಒಳಗೊಂಡರೂ, ಮೂಲ ಅಂಶ, ಬದುಕನ್ನು ಆವರಿಸಿರುವ ಪ್ರೇಮ, ವಿರಹ, ನೋವುಗಳೇ ಆಗಿವೆ ಎಂಬುದು ಗಮನಾರ್ಹ. ಆದರೆ, ಸಾಲುಗಳ ಒಡಲಲ್ಲಿರುವ ಭಾವತೀವ್ರತೆ ಮಾತ್ರ ಗಜಲ್ ಸಾಮ್ರಾಟರ ಸಾಲುಗಳಲ್ಲಿ, ಬೆಳಕಿನ ವೇಗ ಪಡೆದಿವೆ. ವಿದ್ಯುತ್ತಿನ ಶಾಕ್ ನೀಡಿವೆ. ಕೇದಿಗೆಯ ಪರಿಮಳ ಸೂಸಿವೆ. ವಜ್ರದ ಗಟ್ಟಿತನ ತೋರಿವೆ.... ಹೀಗೆ ವಿಸ್ಮಯಗಳೇ ತುಂಬಿಕೊಂಡಿವೆ. ಈ ಭಾವಾಭಿವ್ಯಕ್ತಿಗೆ ಈ ಸಾಲುಗಳನ್ನು ಹೊರತುಪಡಿಸಿ, ಪರ್ಯಾಯ ಸಾಲುಗಳಲ್ಲಿ ಹೇಳಲು ಅಸಾಧ್ಯ ಎಂಬಷ್ಟರ ಮಟ್ಟಿಗೆ ಆ ಗಜಲ್‍ಗಳು ರಚನೆಯಾಗಿವೆ. ಅವರು ಗಜಲ್‍ಗಳನ್ನೇ ಬದುಕಿದ್ದರು ಎಂಬುದಕ್ಕೆ ಅವರ ಗಜಲ್‍ಗಳು ಸಾಕ್ಷ್ಯ ನುಡಿಯುತ್ತವೆ. ಗಜಲ್ ಕುರಿತ ಲೇಖಕರ ಆಶಯವೂ ಒಳಗೊಂಡಂತೆ, ಸಾಮ್ರಾಟರ ಗಜಲ್‍ಗಳು ಪೂರ್ಣವಾಗಿ ಅಲ್ಲದಿದ್ದರೂ, ಒಂದೆಡೆ ಓದಲು ಸಿಕ್ಕುವಂತೆ ಮಾಡಿದ್ದು, ಈ ಕೃತಿಯ ವೈಶಿಷ್ಟ್ಯ. ಹೀಗಾಗಿ, `ಗಜಲ್ ಗುಲ್‍ಮೊಹರ್' ಕೃತಿಯಲ್ಲಿ ಕೇವಲ ೪೬ ಗಜಲ್‍ಕಾರರ ಪರಿಚಯ ಮಾತ್ರವಲ್ಲ; ಗಜಲ್‍ಗಳ ಮೂಲಕ ಸಾಮ್ರಾಟರ ಪರಿಚಯವೂ ಒಳಗೊಂಡಿದೆ.