ಗಝಲುಗಳ ಸುತ್ತ...
೧.
ಮೂಡದಿಹ ಭಾವನೆಗೆ ಕತ್ತಲು ಕವಿಯಿತೇ ಗೆಳತಿ
ಕಾಣದಿಹ ಪ್ರೀತಿಗೆ ಮನವು ಒಡೆಯಿತೇ ಗೆಳತಿ
ಬಳಿಯಿರಲು ಒಲವುಗಳು ಹಾಡದೆ ಹೋದವು ಏಕೆ
ಚಳಿಯಿರಲು ತನುವೊಳಗೆ ಹೃದಯ ಮುರುಟಿತೇ ಗೆಳತಿ
ಮೋಹದೊಳು ಕೈಹಿಡಿದ ವಸ್ತುಗಳೆಲ್ಲ ನಿಜವಲ್ಲ ತಿಳಿಯು
ಕೆಂಪನೆಯ ತುಟಿಗಳು ಮತ್ತೆ ಒಣಗಿತೇ ಗೆಳತಿ
ಚಂಚಲತೆಯ ನಡುವೆಯೆ ಒಪ್ಪದಿಹ ಮಾತುಗಳು ಹಲವು
ಕಡುಕೆಂಪು ಗುಲಾಬಿಯ ಪಕಳೆಗಳು ಉದುರಿತೇ ಗೆಳತಿ
ಮಾತಿಲ್ಲದ ಕತೆಗಳನು ಹೇಳುತ ಸಾಗಿಹನೇ ಈಶ
ಮೌನಿಗಳ ಜೊತೆಯಲ್ಲಿ ಸವಿಯು ಕರಗಿತೇ ಗೆಳತಿ
***
೨.
ಅದುವೆ ರಾಗ ಇದುವೆ ತಾಳ ನಿನ್ನ ಬಯಸಿ ಕೊರಗಿದೆ
ಚೈತ್ರದುದಯ ನಂದಿತಿಂದು ಮೌನ ಅರಸಿ ಕೊರಗಿದೆ
ದೂರದಾರಿ ಸೇರಿಯಿಂದು ನಮ್ಮನೆಲ್ಲಿ ಸೆಳೆವುದೊ
ಜಲವು ಬತ್ತಿ ಬುವಿಯು ಒಣಗಿ ತಂಪ ವರೆಸಿ ಕೊರಗಿದೆ
ಮರದ ಎಲೆಯು ಉದುರಿ ಕೆಳಗೆ ಸದ್ದು ಏಕೆ ಆಗಿದೆ
ಬೆಂಕಿ ಹತ್ತಿ ಉರಿಯುವಾಗ ಜ್ವಾಲೆ ಧರಿಸಿ ಕೊರಗಿದೆ
ಹತ್ತು ಹಲವು ಜೀವದೊಲವು ಎತ್ತ ಸುತ್ತ ಹೋದವೊ
ಬಯಲ ತುಂಬ ಹಸಿರ ಸಿರಿಯು ಒಲವ ಸರಿಸಿ ಕೊರಗಿದೆ
ಬಾನಿನೊಳಗೆ ಚಂದ್ರ ಬಂದ ದೂರ ಸರಿದ ಈಶನು
ಕನಸಿನೊಳಗೆ ನನಸು ಬರದೆ ಸವಿಯ ಮರೆಸಿ ಕೊರಗಿದೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ