ಗಝಲ್ ಗಳು ಮೂರು ; ನೋಟಗಳು ನೂರಾರು !
೧.
ಜೀವ ನವ್ಯ ಹೆತ್ತ ಕಾವ್ಯ
ಭಾವ ಸುಪ್ತ ಸುತ್ತ ಕಾವ್ಯ
ಕಾಯ ಕಾಯ್ವ ಕಿಚ್ಚು ಬೇಕೆ
ಮಾಯ ಮೋಹ ಇತ್ತ ಕಾವ್ಯ
ದಾಹ ತುಂಬಿ ಹರ್ಷ ಬಿತ್ತು
ದೇಹ ನೇಹ ಹೊತ್ತ ಕಾವ್ಯ
ಬೇವ ಬಲ್ಲೆ ಚಿತ್ತ ಎಲ್ಲೆ
ಕಾವ ಬಿಲ್ಲ ಕಿತ್ತ ಕಾವ್ಯ
ಹಸ್ತ ನುಂಗಿ ಹೋಗೆ ಈಶ
ಸುಸ್ತು ತಾಸು ಅತ್ತ ಕಾವ್ಯ
.***
೨.
ಚರಂಡಿಯ ನೀರಿನಂತೆ ಬದುಕ ಬೇಡವೆಂದು ಹೇಳುವುದು ಹೇಗೆ
ವಿಶಾಲ ಮನದಲ್ಲಿಯೇ ಸವಿಯುತಿರುಯೆಂದು ಕೇಳುವುದು ಹೇಗೆ
ಧನಿಕರ ನೋಡಿ ಅವರಂತೆ ನಾನಾಗುವೆಯೆಂದರೆ ನಡೆದೀತೆ
ಚಾಪೆಯಿದ್ದಷ್ಟೇ ಕಾಲುಗಳ ಚಾಚೆಂದು ಬೇಡುವುದು ಹೇಗೆ
ಜಾತ್ರೆಯಲ್ಲಿನ ನೋಟವನ್ನು ಹೃದಯದಲಿರಿಸಿ ನಡೆಮುಂದೆ
ಜೀವನದೊಳಗಿನ ಗುಣದಲ್ಲಿನ ನಡತೆಗಳ ಕಾಣುವುದು ಹೇಗೆ
ಗರಡಿ ಮನೆಯಲ್ಲಿನ ಮಣ್ಣಿನಲ್ಲಿ ತುಂಬಿಹುದು ಆರೋಗ್ಯವು
ಮನೆವಿಚಾರವ ತನುವುಗಳಲ್ಲಿ ಬಿಟ್ಟು ಹೋಗುವುದು ಹೇಗೆ
ನಿಯತ್ತುಗಳ ನಡುವೆ ಮೋಹಗಳ ತುಂಬಿದೆಯಾ ಈಶಾ
ಒಲವಿಂದು ಸುಟ್ಟ ಮೇಲೆ ಕೈಹಿಡಿದು ಬಾಳುವುದು ಹೇಗೆ
***
೩.
ಮುನಿಸಿ ಹೋದೆಯಾ ಹೊಸಿಲ ದಾಟಿ ಬಹುದೂರ ನನ್ನವಳೆ
ಕನಸಿನೊಳಗಿನ ನನಸಲ್ಲಿ ಸರಿದೆಯಾ ಕ್ಷಣದೂರ ನನ್ನವಳೆ
ಒಣಗಿರುವ ಯಾವುದೇ ವಸ್ತುಗಳೆಂದೂ ಹಳಸುವುದಿಲ್ಲ ಏಕೆ
ನನ್ನೊಲವಿನ ಸಾಂಗತ್ಯವನ್ನು ಸ್ವೀಕರಿಸದೆ ಮಧುದೂರ ನನ್ನವಳೆ
ಬದುಕು ಬಿರುಗಾಳಿಯಲೆಗೆ ಸಿಲುಕಿದರೂ ನೀ ಕಾಯಲಿಲ್ಲವಲ್ಲ
ಒಡಲೊಳಗೆ ಚೆಲುವಾಸೆ ಜೊತೆಗಿದ್ದರೂ ಸವಿದೂರ ನನ್ನವಳೆ
ಬದುಕೆನ್ನುವ ಕತ್ತಲೆಯ ಕೋಟೆಯೊಳಗೆ ತಣ್ಣಗೆ ಮಲಗಿರುವೆಯಲ್ಲ
ಬತ್ತಿರುವ ಕಣ್ಣೊಳಗಿನ ಸತ್ತಿರುವ ಬಸಿರೊಂದಿಗೆ ಖುಷಿದೂರ ನನ್ನವಳೆ
ಹುಚ್ಚುತನಗಳ ಬಯಕೆಯು ಚಿಗುರಿದವು ಮಡಿಲೊಳಗೆ ಈಶಾ
ಕಚ್ಚದಿಹ ವಾತ್ಸಲ್ಯ ಪಥದೊಳಗೆ ಬರುವೆಯಾ ವಸಿದೂರ ನನ್ನವಳೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
