ಗಝಲ್ ಗಳ ಮೋಹಕ ಜಗತ್ತು...!
ಗಝಲ್ ೧
ಒಡಲ ಉರಿಯಲಿ ಬಲವು ಕಾಣಲು ದ್ರೌಪದಿಯ ಕರೆದೆಯಲ್ಲ ನೀನು
ಸಂಧಾನದ ಹಾದಿಯಲಿ ಸಂಗ್ರಾಮವ ಬಯಸಿ ತೆರೆಮರೆಯಲಿ ಮೆರೆದೆಯಲ್ಲ ನೀನು
ದಾಯಾದಿ ಮಾತ್ಸರ್ಯವು ನೋವಿನ ಹೊಗೆಯ ರೂಪದಲಿ ನರನಾಡಿಯಲೂ ಇಣುಕುತಿದೆಯಲ್ಲವೇ
ಕಾಯದಿ ಪ್ರತಾಪವ ತೋರೆ ಸೇಡನು ಹೊರಗೆಡಹಲು ಮುಂದಾದೆಯಲ್ಲ ನೀನು
ಹಿರಿಯನ ಮಾತಿಗೆ ಸಭೆಯಲಿ ಮನ್ನಣೆ ನೀಡುವ ಪರಿಯಲಿ ತಲೆಬಾಗಿದೆಯಂದು
ದೊರೆತನಕೆ ಕೇಡಾಗದಂತೆ ಮನಸ್ಸು ಮಿಡಿಯಲು ಒಳಗೊಳಗೆ ಕುದಿದೆಯಲ್ಲ ನೀನು
ಮಡದಿಯೊಳು ಮೃದು ವಚನಗಳನ್ನಾಡಿ ನೆನಪಿಸಿ ಕೆರಳಿಸಿ ಆಟ ಹೂಡಿದೆ
ದೇವನೊಲವ ಗಳಿಸಲು ಎತ್ತಿಕಟ್ಟಿ ಚಂದದಿ ಸಾಧಿಸಲು ಹೊರಟೆಯಲ್ಲ ನೀನು
ವಿರಾಟನ ಆಸ್ಥಾನದಿ ಒಳಗೊಳಗೆ ದಹಿಸಿದ ಬವಣೆಗಳ ರತುನಾಳು ಅರಿತಿರುವಳು
ಛಲದಂಕ ಮಲ್ಲನ ಸ್ವಾರ್ಥಕೆ ಸಿಡಿದೆದ್ದು ದೃಷ್ಟಿ ಬೀರಿದೆಯಲ್ಲ ನೀನು
-ರತ್ನಾ ಕೆ ಭಟ್ ತಲಂಜೇರಿ
***
ಗಝಲ್ ೨
ನೆನಪುಗಳು ಮನದಿಂದ ಆರಬಹುದು ಗೆಳೆಯ ಪ್ರೀತಿಸಿದ ದಿನಗಳು ಮಾಸಬಹುದೆ
ಚಿಂತೆಗಳು ಎಲ್ಲೆಂದರಲ್ಲಿ ಕಾಣಿಸಬಹುದು ಹೀಗೆಯೇ ಚಿಂತನೆಯ ರಶ್ಮಿಗಳು ಮಾಸಬಹುದೆ
ನಿಜವೆನ್ನುವ ಸಹನೆಯಲ್ಲಿಯೂ ಕೆಲವೊಮ್ಮೆ ಕೋಪವದು ಉಕ್ಕುಕ್ಕಿ ಬರುವುದಲ್ಲ ಏಕೆ
ಆತುರದೊಳು ಓಡಿದರೆ ಜಾರುವವನ ನೋವಿನ ಧ್ವನಿಯ ಮಾತುಗಳು ಮಾಸಬಹುದೆ
ವಿಚಿತ್ರವಾದರೂ ಸತ್ಯವಿದು ಎನ್ನುವವನ ತಲೆಯದು ಹೆಬ್ಬಂಡೆಯಂತೆ ಮಣಭಾರ ಹೌದೆ
ಚಿತ್ತದೊಳಗಿನ ಸತ್ವಗಳ ಅರಿಯಲಾರದೆ ಇರುವವನ ಕುಟಿಲತೆಯ ಸಾಧನೆಗಳು ಮಾಸಬಹುದೆ
ಹಚ್ಚಲಾರದ ದೀಪಗಳ ನಡುವಿನಲ್ಲಿ ಓಡಾಡುವೆನೆಂದರೆ ನಿಜವಾಗಿಯೂ ನನಗೆ ಹುಚ್ಚಲ್ಲವೆ
ಚುಚ್ಚದಿರುವ ದಿನಗಳ ಬಗ್ಗೆಯೇ ನೆನಪಿಸಿಕೊಂಡ ಮೌನದ ಹೃದಯಗಳು ಮಾಸಬಹುದೆ
ಮಹಡಿಯ ಮನೆಯಲ್ಲಿದ್ದೆ ಎನ್ನುವ ಕಲ್ಪನೆಯನ್ನೇ ಇತ್ತೀಚೆಗೆ ಮರೆತಿರುವನು ಈಶಾ
ಗೊತ್ತಿರದಂತಹ ನೆಲದ ಮೇಲೆಯೆ ಮಲಗುತ್ತಲೇ ಹೊಂಗಿರಣದ ಕನಸುಗಳು ಮಾಸಬಹುದೆ
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
