ಗಝಲ್ ಗಳ ಸುಂದರ ಲೋಕ...

ಗಝಲ್ ಗಳ ಸುಂದರ ಲೋಕ...

ಕವನ

೧.

ಸರಕಾರಗಳು ಜನ ಸಾಮಾನ್ಯರಿಗೆ ಜಾಲಿಮರ ಆಗಬಾರದು ಶಿವನೆ

ಅಧಿಕಾರಿಗಳು ಕೆಲಸ ಬಿಟ್ಟು ಏಸಿಯೊಳಗೆ ಕೂರಬಾರದು ಶಿವನೆ

 

ಪ್ರಜಾಪ್ರಭುತ್ವ ಇರುವುದು ಯಾಕಾಗಿಯೋ ಈ ದೇಶದೊಳಗೆ ನಾನರಿಯೆ

ಸಂವಿಧಾನವ ಬಿಟ್ಟು ತಮ್ಮದೇ ಸ್ವಾರ್ಥಗಳ ನಾಡಿನಲ್ಲಿ ಹೇರಬಾರದು ಶಿವನೆ

 

ಹಕ್ಕುಗಳ ಬಗ್ಗೆ ಧ್ವನಿಯೆತ್ತುವರ ಗಂಟಲ ನಾಳವನ್ನೇ ಸೀಳುತಿಹರು ಏಕೆ

ಬ್ರಿಟಿಷ್‌ರ ಆಳ್ವಿಕೆಯ ಮತ್ತೊಮ್ಮೆ ನಮ್ಮವರು ನಮಗೆ ಕೊಡಬಾರದು ಶಿವನೆ

 

ತಪ್ಪುಗಳ ನಡೆಗಳು ಕೆಲವೊಮ್ಮೆ ರಾಷ್ಟ್ರವ ಅಧೋಗತಿಗೆ ತಳ್ಳುತ್ತವೆ ನೋಡು

ಮೇಲೆ ಕುಳಿತವ ನಿಷ್ಠನಾಗಿರದೆ ನೆಲವನು ಬೇರೆಯವರಿಗೆ ಮಾರಬಾರದು ಶಿವನೆ

 

ಬಡಜನರ ಒಳಗಿನ ಗೋಳನ್ನು ಯಾರು ಕೇಳುವರೆಂದು ಪ್ರಶ್ನಿಸುತ್ತಿರುವೆ ಈಶಾ

ಕಡೂ ಬಡತನದ ಜೀವಗಳನ್ನು ಗೌರವಿಸದವರಿಗೆ ನಾವು ಓಟು ಹಾಕಬಾರದು ಶಿವನೆ

***

ಗಝಲ್ ೨

ಕನಸು ಮೂಡಿ ನನಸು ಚಿಗುರೆ ಎಲ್ಲಿ ಇರುವೆ ಕೋಮಲೆ

ಮನದ ಸುತ್ತ ನೀನೆ ಸೇರೆ ಮೆಲ್ಲ ಬರುವೆ ಕೋಮಲೆ

 

ನಿತ್ಯ ನೇಮ ನಡತೆಯಿರಲು ಮಿಥ್ಯ ಪದವಿ ಏತಕೆ

ಒಲುಮೆ ಸುರಿಯೆ ತನುವು ಅರಳೆ ಮಾತೆ ಗುರುವೆ ಕೋಮಲೆ

 

ಭಾವ ಬಿಂದು ಒಂದು ಆಗೆ ಕಷ್ಟವೇಕೆ ಎಂದಿಗು

ಚೆಂದದಿಂದ ಪ್ರೀತಿ ಹೊಮ್ಮೆ ಪ್ರೇಮ ಸುರುವೆ ಕೋಮಲೆ

 

ಬಾನ ಬಯಲ ತಾರೆ ಚೆಂದ ಚಂದ್ರನೊಲುಮೆ ಬಾಗಿದೆ

ಹಸಿರು ಕಂಡ ನೆಲದ ಸವಿಗೆ ಚಿಲುಮೆ ಹೊರುವೆ ಕೋಮಲೆ

 

ಚಿಂತೆಯಿರದ ಹೃದಯದೊಳಗೆ ಕಾಂತಿ ತುಂಬೆ ಈಶಾ

ಕುಸುಮದೊಳಗೆ ಮೋಹ ಕಂಡೆ ತನುವ ತರುವೆ ಕೋಮಲೆ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್