ಗಝಲ್ ಗಳ ಸುಮಧುರ ಮಾಲೆ

ಗಝಲ್ ಗಳ ಸುಮಧುರ ಮಾಲೆ

ಕವನ

ಗಝಲ್ ೧

ಪ್ರಜಾಪ್ರಭುತ್ವದ ಈ ನೆಲದಲ್ಲಿ ಹೊರೆಯಾಗುತ್ತಿರುವ ಲಂಚಗಳ ನೋಡು

ಪ್ರಭುತ್ವದ ನೆಲದಲ್ಲಿಯಿಂದು ಬಳಕೆಯಾಗುತ್ತಿರುವ ಮಂಚಗಳ ನೋಡು

 

ಸ್ವಾರ್ಥಗಳಲ್ಲಿಯ ವಿಷಯಗಳಿಗಿಂದು ಹೋರಾಟವದು ಬೇಕೇನು

ನಾಯಕನ ಹುಚ್ಚಾಟಕ್ಕೆ ಬಲಿಯಾಗುತ್ತಿರುವ ಕುಂಚಗಳ ನೋಡು

 

ಒಳಗೊಳಗೆಯಿಂದು ಹೇಳಿಕೊಳ್ಳದಿದ್ದರು ಮೆತ್ತಿಕೊಂಡಿವೆ ಹೇಸಿಗೆಯು

ಸೆಣೆಸಾಟದ ಎಳೆದಾಟಕ್ಕೆ ಜೊತೆಯಾಗುತ್ತಿರುವ ಸಂಚುಗಳ ನೋಡು

 

ಸುರುಟಿರುವಂತಹ ಹೇಳಿಕೆಗಳಿಂದು ಕತ್ತಲೆಯಲ್ಲಿಯೇ ನರಳುತ್ತಲಿವೆ

ಸಾಧನೆಯಿಲ್ಲದ ಕೇರಿಗಳಿಂದ ಮಂಕಾಗುತ್ತಿರುವ ಮಿಂಚುಗಳ ನೋಡು

 

ಕಾಯಕವದುವು ಕೈಲಾಸವೆನ್ನುವುದು ಸೊರಗುತ್ತಲಿದೇ ಈಶಾ

ಜೀವಂತಿಕೆಯ ನಡುವೆಯೇ ಕಳಚುತ್ತಿರುವ ಪಂಚೆಗಳ ನೋಡು

***

ಗಝಲ್ ೨

ಪ್ರೇಮವು ಇರಲೇ ಬೇಕೆಂಬ ನಿಯಮವಿದೆಯ ಚೆಲುವೆ

ಒಲವದುವು ಸುತ್ತಲಿರಲೆಂಬ ಬಯಕೆಯಿದೆಯ ಚೆಲುವೆ

 

ಕಣ್ಣಿಗದು ಕಾಣಿಸಿದ್ದೆಲ್ಲ ಪ್ರೀತಿಯಲ್ಲ ತಿಳಿದಿದೆಯ ಚೆಲುವೆ

ಸೊಟ್ಟಗೆ ನಡೆದದ್ದೆ ಬಳುಕಾಟವಲ್ಲ ಅರಿವಿದೆಯ ಚೆಲುವೆ

 

ದಾರಿಗುಂಟವೇ ನಡೆಯುವವರನ್ನು ನೋಡಿದೆಯ ಚೆಲುವೆ

ಜೀವನದ ಓಣಿಗಳಲ್ಲಿ ಕೊಳಚೆ ನೀರು ಕಂಡಿದೆಯ ಚೆಲುವೆ

 

ದಿನವನ್ನು ದೂಡುವವರ ಹತ್ತಿರ ಸಂಬಂಧಗಳು ಬೇಕಿದೆಯ ಚೆಲುವೆ

ಚಿಂತೆಯೊಳಗಿನ ಹೂವಿನಂಥ ಮನಸ್ಸಿನಲ್ಲಿ ಶಾಂತಿಯಿದೆಯ ಚೆಲುವೆ

 

ಈಶನಲ್ಲಿಯ ದಯಾಳುತನದ ಮೆಟ್ಟಿಲುಗಳ ಏರದಾದೆಯ ಚೆಲುವೆ

ಮತ್ಸರದ ಗೂಡುಗಳಲ್ಲಿ ನಡೆದಾಡುವ ಮೋಹಿನಿಯಾದೆಯ ಚೆಲುವೆ

 

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್